ಕೆರೆಕಟ್ಟೆ ಬಳಿ ಮತ್ತೊಂದು ಕಾಡಾನೆ ಪ್ರತ್ಯಕ್ಷ,ಮತ್ತೆ ಆತಂಕದಲ್ಲಿ ಗ್ರಾಮಸ್ಥರು
* ಭಲೇಕಡಿ ಗ್ರಾಮದ ಹುಲ್ಗಾರ್ಬೈಲ್ನಲ್ಲಿ ಆನೆ ಓಡಾಟದ ಕುರುಹು
* ಕಾಡಾನೆ ದಾಳಿಗೆ 15 ದಿನಗಳ ಹಿಂದಷ್ಟೇ ಇಬ್ಬರು ಬಲಿಯಾಗಿದ್ದರು
NAMMMUR EXPRESS NEWS
ಶೃಂಗೇರಿ: ತಾಲೂಕಿನ ಕೆರೆಕಟ್ಟೆ ಗ್ರಾ ಪಂ ವ್ಯಾಪ್ತಿಯ ಕೆರೆಗದ್ದೆ ಗ್ರಾಮದಲ್ಲಿ ಕಳೆದ ಹದಿನೈದು ದಿನಗಳ ಹಿಂದಷ್ಟೇ ಕಾಡಾನೆ ದಾಳಿ ಮಾಡಿ ಇಬ್ಬರು ರೈತರು ಬಲಿಯಾದ ಘಟನೆ ಮಾಸುವ ಮುನ್ನವೇ ಅದೇ ಗ್ರಾಮದ ಸಮೀಪದ ಗ್ರಾಮವಾದ ಭಲೇಕಡಿಯ ಹುಲ್ಗಾರ್ಬೈಲ್ ಎಂಬಲ್ಲಿ ಭಾಸ್ಕರ್ಗೌಡ ಎಂಬುವರ ಮನೆಯ ಸಮೀಪ ಕಾಡಾನೆಯೊಂದು ಬಂದು ಓಡಾಡಿದ ಕುರುಹು ಪತ್ತೆಯಾಗಿದೆ.
ನಿನ್ನೆ ತಡರಾತ್ರಿ ಸುಮಾರಿಗೆ ಬಂದ ಕಾಡಾನೆಯು ಬೈನೇಮರವೊಂದನ್ನು ಕೆಡವಿದ್ದು ಆ ಮರವು ವಿದ್ಯುತ್ ಕಂಬದ ಮೇಲೆ ಬಿದ್ದು ಕಂಬವು ತುಂಡಾಗಿದೆ.ನಂತರ ಕಾಡಿನೊಳಗೆ ಆನೆ ಸಾಗಿದ್ದು ಈ ಕುರುಹುಗಳು ಪತ್ತೆಯಾಗಿದೆ. ಇದರಿಂದ ಅಲ್ಲಿನ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ.
ಭಲೇಕಡಿ,ಹುಲ್ಗಾರ್ಬೈಲ್ನಿಂದ ಸುಮಾರು 7 ಕಿ.ಮೀ ದೂರ ಕಾಡಿನ ಹಾದಿಯಲ್ಲಿ ಸಾಗಿ ಶಾಲೆ,ಕೆಲಸ ಕಾರ್ಯಗಳಿಗೆ ವಿದ್ಯಾರ್ಥಿಗಳು,ಸಾರ್ವಜನಿಕರು,ಮಹಿಳೆಯರು ದಿನವೂ ಓಡಾಡುತ್ತಾರೆ ಹೀಗಿರುವಾಗಿ ಕಾಡಾನೆ ಓಡಾಟದ ಸುದ್ದಿ ಅಲ್ಲಿನ ಜನರನ್ನು ಆತಂಕಕ್ಕೀಡು ಮಾಡಿದೆ.
ಕಾಡಾನೆ ಓಡಾಟದ ಮಾಹಿತ ತಿಳಿದ ತಕ್ಷಣ ಸ್ಥಳೀಯರು ಅರಣ್ಯ ಇಲಾಖೆಗೆ ಹಾಗೂ ಡಿಎಫ್ಓ ಗೆ ಮಾಹಿತಿ ನೀಡಿದ್ದು,ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಬಂದು ಪರಿಶೀಲಿಸಿದ್ದಾರೆ.
* 15 ದಿನಗಳ ಹಿಂದೆ ಇಬ್ಬರನ್ನು ಬಲಿ ಪಡೆದಿದ್ದ ಕಾಡಾನೆ
ಕೆರೆಕಟ್ಟೆ ಗ್ರಾ ಪಂ ವ್ಯಾಪ್ತಿರ ಕೆರೆಗದ್ದೆ ಗ್ರಾಮದಲ್ಲಿ ಕಳೆದ 15 ದಿನಗಳ ಹಿಂದಷ್ಟೇ ಕಾಡಿನೆಯೊಂದು ದಾಳಿ ಮಾಡಿ ಇಬ್ಬರು ರೈತರನ್ನು ಬಲಿ ಪಡೆದಿತ್ತು,ಇದರಿಂದ ತೀವ್ರ ಆಕ್ರೋಶಗೊಂಡ ಗ್ರಾಮಸ್ಥರು ಸರ್ಕಾರ,ಅರಣ್ಯ ಇಲಾಖೆಯ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿ ಮೃತದೇಹ ಎತ್ತದೇ ಪ್ರತಿಭಟನೆ ನಡೆಸಿದ್ದರು ಹಾಗೂ ಸ್ಥಳಕ್ಕೆ ಅರಣ್ಯ ಸಚಿವರು ಬರುವಂತೆ ಪಟ್ಟು ಹಿಡಿದಿದ್ದರು. ನಂತರ ಸ್ಥಳಕ್ಕೆ ಬಂದ ಡಿಸಿ,ಎಸ್ಪಿ ಸಾರ್ವಜನಿಕರಿಂದ ತೀವ್ರ ವಿರೋಧ ಎದುರಿಸಿದರು.ನಂತರ ಸ್ಥಳಕ್ಕೆ ಬಂದ ಶಾಸಕ ಟಿ ಡಿ ರಾಜೇಗೌಡ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು,ಸಂತ್ರಸ್ತರಿಗೆ ಸೂಕ್ತ ಪರಿಹಾರದ ಭರವಸೆ ನೀಡಿ ಮತ್ತು ನ.17 ರಂದು ಜನಸಂಪರ್ಕ ಸಭೆ ನಡೆಸೋದಾಗಿ ತಿಳಿಸಿ ಪ್ರತಿಭಟನಾಕಾರರ ಮನವೊಲಿಸುವಲ್ಲಿ ಯಶಸ್ವಿಯಾಗಿ ಪ್ರತಿಭಟನೆ ಕೈಬಿಡಲಾಗಿತ್ತು. ನಂತರ ಸಂತ್ರಸ್ತರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ ಜೆ ಜಾರ್ಜ್ ಭೇಟಿ ನೀಡಿ ಸಾಂತ್ವನ ಹೇಳಿ ತಲಾ 5 ಲಕ್ಷ ರೂ.ಗಳ ವೈಯಕ್ತಿಕ ಪರಿಹಾರ ನೀಡಿ,ಸೂಕ್ತ ಪರಿಹಾರಕ್ಕಾಗಿ ಸರ್ಕಾರದ ಮಟ್ಟದಲ್ಲಿ ಚರ್ಚಿಸೋದಾಗಿ ಭರವಸೆ ನೀಡಿದ್ದರು. ನಂತರ ಕುದುರೆಮುಖ ರಾಷ್ಟ್ರೀಯ ಉದ್ಯಾನವ ಪುನರ್ವಸತಿ ಹೋರಾಟ ಸಮಿತಿಯು ಸಂಸದ ಕೋಟಾ ಶ್ರೀನಿವಾಸ ಪೂಜಾರಿ,ಕಾರ್ಕಳ ಶಾಸಕ ಸುನಿಲ್ ಕುಮಾರ್,ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ,ಅರಣ್ಯ ಸಚಿವ ಈಶ್ವರ್ ಖಂಡ್ರೆ ಹಾಗೂ ಕಂದಾಯ ಸಚಿವ ಕೃಷ್ಣಭೈರೇಗೌಡರನ್ನು ಭೇಟಿ ಮಾಡಿ 2005 ರ ಪುನರ್ವಸತಿ ಆದೇಶವನ್ನು ಪುನರ್ ಪರಿಶೀಲಿಸಿ ಪ್ರಸ್ತುತ ಇರುವ ಮಾನದಂಡದಲ್ಲಿ ಪರಿಹಾರ ನೀಡಿ,ಅಷ್ಟೂ ಕುಟುಂಬಗಳನ್ನು ಒಂದೇ ಸರಿ ಸ್ಥಳಾಂತರಿಸುವ ಬಗ್ಗೆ ಮನವಿ ಮಾಡಿತ್ತು.ಪದೇ ಪದೇ ಕಾಡು ಪ್ರಾಣಿಗಳ ಹಾವಳಿಯಿಂದ ಕಂಗೆಟ್ಟಿರುವ ಜನರು ಶಾಶ್ವತ ಸೂಕ್ತ ಪರಿಹಾರಕ್ಕಾಗಿ ಎದುರುನೋಡುತ್ತಿದ್ದಾರೆ.








