ಶ್ರೀರಾಮನಿಂದ ಪೂಜಿಸಲ್ಪಟ್ಟ ಕಾರಣಗಿರಿ ವಿನಾಯಕ!
ಭಕ್ತರ ಕೋರಿಕೆ ಪೂರೈಸುವ ಗಣೇಶ
ರಾಮನು ಸೀತೆಯನ್ನು ಹುಡುಕುತ್ತಾ ಇಲ್ಲಿ ಬಂದಿದ್ದ ಎಂಬ ಪ್ರತೀತಿ ಇದೆ…
ಕಾರಣಗಿರಿ ಸಿದ್ಧಿ ವಿನಾಯಕ ದೇವಾಲಯವು ಕರ್ನಾಟಕದ ಅತ್ಯಂತ ಪುರಾತನ ಗಣಪತಿ ದೇವಾಲಯಗಳಲ್ಲಿ ಅಗ್ರಗಣ್ಯವಾಗಿದೆ. ಇದೊಂದು ಕಾರಣಿಕ ಕ್ಷೇತ್ರವಾಗಿದೆ. ಭಕ್ತಾದಿಗಳ ಕೋರಿಕೆಯನ್ನು ಶೀಘ್ರದಲ್ಲೆ ನೆರವೇರಿಸುವ ಕಾರಣದಿಂದ ಇಲ್ಲಿನ ಗಣೇಶನಿಗೆ ಸಿದ್ಧಿ ವಿನಾಯಕ ಎಂಬ ಹೆಸರಿದೆ. ಈ ಸಿದ್ಧಿ ವಿನಾಯಕನಿಗು ತ್ರೇತಾಯುಗಕ್ಕೂ ಸಂಬಂಧವಿದೆ. ಹಿಂದೆ ಅಗಸ್ತ್ಯ ಮುನಿಗಳು ಇಲ್ಲಿ ಬಹಳ ದಿನಗಳ ಕಾಲ ನೆಲೆನಿಂತು, ಪುಷ್ಕರಣಿಯಲ್ಲಿದ್ದ ವಿನಾಯಕನನ್ನು ದಡದ ಮೇಲೆ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಿದ್ದರು.ಹಲವು ವರ್ಷಗಳ ಬಳಿಕ ವಿನಾಯಕನಿಗೆ ದೇವಾಲಯ ನಿರ್ಮಾಣವಾಯಿತು. ಅಗಸ್ತ್ಯ ಮುನಿಗಳು ಪೂಜೆ ಸಲ್ಲಿಸುತ್ತಿದ್ದ ಪುಷ್ಕರಣಿ ಅಗಸ್ತ್ಯ ತೀರ್ಥ ಎಂಬ ಹೆಸರು ಪಡೆದುಕೊಂಡಿತು.
ಒಮ್ಮೆ ಶ್ರೀರಾಮಚಂದ್ರನು ರಾವಣನಿಂದ ಅಪಹರಣಕ್ಕೊಳಗಾದ ಸೀತೆಯನ್ನು ಅರಸುತ್ತ ಈ ಸ್ಥಳಕ್ಕೆ ಭೇಟಿ ನೀಡಿದನು. ಇಲ್ಲಿ ಅಗಸ್ತ್ಯ ಮುನಿಗಳನ್ನು ಸಂಧಿಸಿ ಸೀತಾಪಹರಣದ ವಿಷಯವನ್ನು ಹೇಳಿದನು. ಆಗ ಮುನಿಗಳು ಈ ಸಿದ್ಧಿ ವಿನಾಯಕನನ್ನು ಪೂಜಿಸು ಎಲ್ಲ ಒಳ್ಳೆಯದಾಗುತ್ತದೆ. ಸೀತೆಯೊಂದಿಗೆ ಹಿಂತಿರುಗುವಾಗ ಪುನಃ ಇಲ್ಲಿಗೆ ಬಂದು ದಂಪತಿ ಸಮೇತರಾಗಿ ಪೂಜೆ ಸಲ್ಲಿಸಿ ಅಯೋಧ್ಯೆಗೆ ತೆರಳಿ ಎಂದು ಸಲಹೆ ನೀಡಿದರು. ಶ್ರೀರಾಮಚಂದ್ರನು ಪೂಜೆಯನ್ನು ಸಲ್ಲಿಸಿ, ಪ್ರಯಾಣ ಮುಂದುವರಿಸಿದ.
ರಾವಣನನ್ನು ಸಂಹರಿಸಿ ಸೀತೆಯೊಂದಿಗೆ ಪುಷ್ಕಕವಿಮಾನದಲ್ಲಿ ಅಯೋಧ್ಯೆಗೆ ತೆರಳುತ್ತಿದ್ದಾಗ ಅವರ ಪುಷ್ಪಕ ವಿಮಾನಕ್ಕೆ ಸಹ್ಯಾದ್ರಿ ಸಾಲಿನ ಬೆಟ್ಟವೊಂದು ಅಡ್ಡ ಬಂದು ಪ್ರಯಾಣಕ್ಕೆ ಅಡ್ಡಿಪಡಿಸಿತು. ಆಗ ಶ್ರೀರಾಮನು ಲಕ್ಷ್ಮಣನನ್ನು ಕುರಿತು ‘ಕಿಂ ಕಾರಣಂಗಿರಿಹಿಃ’(ಈ ಬೆಟ್ಟ ಅಡ್ಡ ಬರಲು ಕಾರಣವೇನು) ಎಂದು ಕೇಳಿದ. ಶ್ರೀರಾಮ ಹೇಳಿದ ವಾಕ್ಯವೇ ಊರಿಗೆ ಕಾರಣಗಿರಿ ಎಂಬ ಹೆಸರು ಬರಲು ಕಾರಣವಾಯಿತು. ಆಗ ಲಕ್ಷ್ಮಣ ಅಗಸ್ತ್ಯ ಮುನಿಗಳ ಮಾತನ್ನು ರಾಮನಿಗೆ ನೆನಪಿಸುತ್ತಾನೆ. ಬಳಿಕ ಎಲ್ಲರೂ ಪರಿವಾರ ಸಮೇತರಾಗಿ ಬಂದು ಸಿದ್ಧಿ ವಿನಾಯಕನಿಗೆ ಪೂಜೆ ಸಲ್ಲಿಸಿ, ಅಯೋಧ್ಯೆಗೆ ತೆರಳುತ್ತಾರೆ. ಶ್ರೀರಾಮನು ರಾವಣನ ವಿರುದ್ಧ ಜಯ ಸಾಧಿಸಲು ಈ ಸಿದ್ಧಿ ವಿನಾಯಕನೇ ಕಾರಣ ಎಂಬ ಪ್ರತೀತಿ ಇದೆ. ಅಲ್ಲದೆ ರಾಮನ ಕೋರಿಕೆಯನ್ನು ಈಡೇರಿಸಿದ ಸಿದ್ಧಿ ವಿನಾಯಕ ನಮ್ಮ ಬೇಡಿಕೆಗಳನ್ನೂ ಈಡೇರಿಸುತ್ತಾನೆ ಎಂಬುದು ಜನರ ನಂಬಿಕೆ. ಇಲ್ಲಿಗೆ ಉಡುಪಿ ಜಿಲ್ಲೆಯಿಂದಲೂ ಭಕ್ತಾದಿಗಳು ಆಗಮಿಸುತ್ತಾರೆ.
1 ಕೋಟಿ ವೆಚ್ಚದ ರಾಜಗೋಪುರ
ಕರ್ನಾಟಕದಲ್ಲಿ ಅತ್ಯುನ್ನತ ರಾಜಗೋಪುರ ಹೊಂದಿರುವ ದೇವಾಲಯಗಳಲ್ಲಿ ಇದೂ ಒಂದು. ಕೆಲವು ವರ್ಷಗಳ ಹಿಂದೆ ಭಕ್ತರೊಬ್ಬರು ಸಿದ್ಧಿ ವಿನಾಯಕನಿಗೆ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಎಂಬತ್ತೊಂದು ಅಡಿ ಎತ್ತರದ ರಾಜಗೋಪುರ ನಿರ್ಮಿಸಿ ಹರಕೆಯನ್ನು ತೀರಿಸಿದ್ದಾರೆ.
ಪ್ರತಿ ದಿನ ಅನ್ನ ದಾಸೋಹ
ಕಾರಣಗಿರಿ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಪ್ರತಿದಿನ ಮಧ್ಯಾಹ್ನ ಅನ್ನದಾಸೋಹವಿರುತ್ತದೆ. ಈ ಸ್ಥಳವು ಶಿವಮೊಗ್ಗದಿಂದ ಕೊಲ್ಲೂರು ಮಾರ್ಗವಾಗಿ ಹೋಗುವಾಗ ಹೊಸನಗರದ ಸಮೀಪದ ಕಾರಣಗಿರಿ ಎಂಬ ಸಣ್ಣ ಊರಿನಲ್ಲಿ ಮುಖ್ಯ ರಸ್ತೆಯಲ್ಲೇ ಕಾಣಬರುತ್ತದೆ. ಶಿವಮೊಗ್ಗದಿಂದ ಎಪ್ಪತ್ತು ಕಿಮೀ ದೂರದಲ್ಲಿದೆ.








