ತೀರ್ಥಹಳ್ಳಿ/ ಹೊಸನಗರ: ಮಲೆನಾಡಿನ ಕುಗ್ರಾಮದ ಸರ್ಕಾರಿ ಶಾಲೆಯೊಂದರಲ್ಲಿ ಸದ್ದಿಲ್ಲದೆ ಶಿಕ್ಷಣ ಕ್ರಾಂತಿ ಮಾಡುತ್ತಿದ್ದ ಶಿಕ್ಷಕಿಗೆ ಇದೀಗ ದೇಶದ ಅತ್ಯುನ್ನತ ಗೌರವ ಹುಡುಕಿಕೊಂಡು ಬಂದಿದೆ.
2026ನೇ ಸಾಲಿನ ಪ್ರತಿಷ್ಠಿತ ‘ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ’ಗೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಸಮಟಗಾರು ಶಾಲೆಯ ಮುಖ್ಯಶಿಕ್ಷಕಿ ರತ್ನಕುಮಾರಿ ಎಸ್. ಆಯ್ಕೆಯಾಗಿದ್ದಾರೆ. ವಿಶೇಷ ಅಂದರೆ, ಈ ಬಾರಿ ಇಡೀ ಕರ್ನಾಟಕದಿಂದ ಆಯ್ಕೆಯಾದ ಏಕೈಕ ಶಿಕ್ಷಕಿ ಇವರಾಗಿದ್ದಾರೆ.
ಕುಗ್ರಾಮದಲ್ಲಿ ಅಕ್ಷರ ಕ್ರಾಂತಿ ಮಾಡಿದ ಟೀಚರ್!
ಕನಿಷ್ಠ ಬಸ್ ಸೌಲಭ್ಯವೂ ಇಲ್ಲದ, ಸೌಕರ್ಯಗಳ ವಂಚಿತ ಮಲೆನಾಡಿನ ಹೊಸನಗರ ತಾಲೂಕಿನ ಸಮಟಗಾರು ಗ್ರಾಮ. ಈ ಕುಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದೆರಡು ದಶಕಗಳಿಂದ ಅಕ್ಷರ ದಾಸೋಹ ನಡೆಸುತ್ತಿರುವವರು ಮುಖ್ಯಶಿಕ್ಷಕಿ ರತ್ನಕುಮಾರಿ.
24 ವರ್ಷಗಳಿಂದ ಅದೇ ಶಾಲೆಯಲ್ಲಿ ಸೇವೆ
ಪ್ರತಿದಿನ ತೀರ್ಥಹಳ್ಳಿ ಪಟ್ಟಣದಿಂದ ಬಸ್ ಹಿಡಿದು ಶಾಲೆಗೆ ತಲುಪುವ ರತ್ನಕುಮಾರಿ ಅವರು, ಕಳೆದ 24 ವರ್ಷಗಳಿಂದ ಇದೇ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 15 ವರ್ಷಗಳಿಂದ ಪ್ರಭಾರಿ ಮುಖ್ಯಶಿಕ್ಷಕಿಯಾಗಿ ಶಾಲೆಯನ್ನು ಮಾದರಿಯಾಗಿ ಮುನ್ನಡೆಸುತ್ತಿದ್ದಾರೆ.
ನಾಲ್ಕು ಗೋಡೆಗಳ ಮಧ್ಯೆ ಪಾಠ ಮಾಡುವ ಸಾಂಪ್ರದಾಯಿಕ ಶೈಲಿಯನ್ನು ಬಿಟ್ಟು, ಪ್ರಕೃತಿಯ ಮಡಿಲಲ್ಲಿ ಮಕ್ಕಳಿಗೆ ವಿದ್ಯಾದಾನ ಮಾಡುತ್ತಿರುವುದು ಈ ಶಾಲೆಯ ವಿಶೇಷ. ಶಾಲಾ ಆವರಣದಲ್ಲೇ ಸುಂದರ ಉದ್ಯಾನವನ ಹಾಗೂ ಔಷಧೀಯ ಸಸ್ಯವನ ನಿರ್ಮಿಸಲಾಗಿದ್ದು, ಪರಿಸರದೊಂದಿಗೆ ಬೆರೆಯುತ್ತಾ ಮಕ್ಕಳು ವಿಭಿನ್ನವಾಗಿ ಕಲಿಯುತ್ತಿದ್ದಾರೆ. ಶಾಲೆಯ ಉತ್ತಮ ಶಿಕ್ಷಣಕ್ಕೆ ಮಾರುಹೋದ ಸುತ್ತಮುತ್ತಲಿನ ಗ್ರಾಮೀಣ ಪೋಷಕರು, ಸ್ವತಃ ವಾಹನ ವ್ಯವಸ್ಥೆ ಮಾಡಿಕೊಂಡು 42ಕ್ಕೂ ಹೆಚ್ಚು ಮಕ್ಕಳನ್ನು ಈ ಶಾಲೆಗೆ ಕಳುಹಿಸುತ್ತಿದ್ದಾರೆ.
ಕರ್ನಾಟಕದ ಏಕೈಕ ಹಳ್ಳಿ ಶಿಕ್ಷಕಿ…!
ರಾಷ್ಟ್ರ ಪ್ರಶಸ್ತಿ ಪಡೆದ ಕರ್ನಾಟಕದ ಏಕೈಕ ಶಿಕ್ಷಕಿ, ತೀರ್ಥಹಳ್ಳಿಯ ಶ್ರೀಮತಿ ರತ್ನಕುಮಾರಿಯವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರೀಯ ಅತ್ಯುತ್ತಮ ಶಿಕ್ಷಕಯನ್ನು ವಿತರಣೆ ಮಾಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗೂ ವಿಶೇಷ ಸಂವಾದದಲ್ಲಿ ಹೊಸನಗರದ ಹುಂಚದ ಸಮಟಗಾರು ಶಾಲೆಯ ಶಿಕ್ಷಕಿಯಾಗಿರುವ ರತ್ನಕುಮಾರಿಯವರು ಭಾಗಿಯಾಗಿದ್ದಾರೆ.







