ಬೆಂಗಳೂರು: ಸಾರಿಗೆ ನಿಗಮಗಳ ಬಸ್ ಪ್ರಯಾಣದ ದರವನ್ನು ಜನಸಾಮಾನ್ಯರಿಗೆ ತೊಂದರೆಯಾಗದ ರೀತಿಯಲ್ಲಿ ಹೆಚ್ಚಳಗೊಳಿಸುವ ಕುರಿತು ಇಲಾಖೆಯು ತೀರ್ಮಾನಿಸಿದೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಸಾರಿಗೆ ಸಚಿವರಾದ ಭೈರತಿ ಸುರೇಶ್ ಅವರು “ಎಂಟು ತಿಂಗಳಲ್ಲಿ ಕೇಂದ್ರ ಸರ್ಕಾರ ತೈಲೋತ್ಪನ್ನ ದರಗಳನ್ನು ಹಲವು ಬಾರಿ ಹೆಚ್ಚಿಸಿದೆ. ಆದರೂ ಕೂಡ ನಾವು ಬಸ್ ಪ್ರಯಾಣದ ದರವನ್ನು ಹೆಚ್ಚಳ ಮಾಡಿಲ್ಲ. ಪರಿಣಾಮವಾಗಿ ನಮ್ಮ ನಾಲ್ಕೂ ಸಾರಿಗೆ ನಿಗಮಗಳಿಗೆ ಸಾವಿರಾರು ಕೋಟಿ ರೂಪಾಯಿಗಳಷ್ಟು ನಷ್ಟ ಉಂಟಾಗಿದೆ. ನಿವೃತ್ತ ಹಿರಿಯ ಐಎಎಸ್ ಅಧಿಕಾರಿಯಾದ ಅತುಲ್ ತಿವಾರಿ ಅವರ ನೇತೃತ್ವದ ಸಮಿತಿಯು ಪ್ರಯಾಣ ದರದ ಪರಿಷ್ಕರಣೆಗೆ ಸಂಬಂಧಿಸಿದಂತೆ ಅಧ್ಯಯನವನ್ನು ನಡೆಸುತ್ತಿದ್ದು, ಅತಿ ಶೀಘ್ರದಲ್ಲೇ ಅಧ್ಯಯನದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ. ಬರದ ಪರಿಸ್ಥಿತಿಯಲ್ಲಿ ಜನಸಾಮಾನ್ಯರಿಗೆ ಹೆಚ್ಚಿನ ಹೊರೆಯಾಗದ ರೀತಿಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಪ್ರಯಾಣ ದರವನ್ನು ಪರಿಷ್ಕರಣೆ ಮಾಡಲಾಗುವುದು. ಇದರಿಂದ ಆಗುವ ಹೊರೆಯನ್ನು ಸರಿದೂಗಿಸಲು ಸರ್ಕಾರದಿಂದಲೂ ಕೂಡ ನೆರವನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆಯನ್ನು ನೀಡಿದ್ದಾರೆ” ಎಂದು ತಿಳಿಸಿದ್ದಾರೆ.
ಸಾಲ ಮನ್ನಾಕ್ಕೆ ನೆರವು ಕೇಳಿ ಕೇಂದ್ರಕ್ಕೆ ಸರ್ವ ಪಕ್ಷ ನಿಯೋಗ
ಬೆಂಗಳೂರು: ರೈತರ ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ ನೆರವು ಕೇಳುವ ಸಲುವಾಗಿ ಕೇಂದ್ರಕ್ಕೆ ರಾಜ್ಯದಿಂದ ಸರ್ವ ಪಕ್ಷವನ್ನು ನಿಯೋಜಿಸಲಾಗಿದೆ. ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ಬರಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆಯನ್ನು ನಡೆಸಿದ್ದು, ಬಳಿಕ ಬಾಗಲಕೋಟೆಯಲ್ಲಿನ ರೈತರ ಜಮೀನುಗಳಿಗೆ ತೆರಳಿ ಬೆಳೆ ವೀಕ್ಷಣೆಯನ್ನು ಸಹ ಮಾಡಿದ್ದಾರೆ. ಸಮೀಕ್ಷೆಗೆ ಹೊರಡುವ ಮೊದಲು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು “ರೈತರ 5 ಲಕ್ಷ ರೂಪಾಯಿವರೆಗಿನ ಸಾಲ ಮನ್ನಾ ಮಾಡಬೇಕು. ಸಾಲ ಮನ್ನಾ ಬೇಡಿಕೆಯು ಸರಿ ಇದೆ. ರೈತರ ಸಾಲ ಮನ್ನಾಗೆ ನೆರವು ಕೋರಿ ದೆಹಲಿಗೆ ಸರ್ವಪಕ್ಷ ನಿಯೋಗವನ್ನು ಕರೆದೊಯ್ಯುತ್ತಿದ್ದೇವೆ. ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಸೇರಿದಂತೆ ರಾಜ್ಯ ಬಿಜೆಪಿ ನಾಯಕರು ಕೇಂದ್ರ ಸರ್ಕಾರದಿಂದ ಸಾಲ ಮನ್ನಾ ಮಾಡಿಸುವ ಜವಾಬ್ದಾರಿಯನ್ನು ಹೊರಬೇಕಿದೆ. ಬರಗಾಲದ ಕುರಿತು ಪ್ರಧಾನಮಂತ್ರಿಗಳಿಗೆ ಈಗಾಗಲೇ ವಿಚಾರ ತಿಳಿಸಿದ್ದು, ಕೇಂದ್ರ ಸರ್ಕಾರವು ಸಾಲ ಮನ್ನಾ ಮಾಡಲು ಮನಸ್ಸು ಮಾಡಬೇಕಿದೆ. ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್ ಮತ್ತು ಇತರ ನಾಯಕರು ನಮ್ಮೊಂದಿಗೆ ದೆಹಲಿಗೆ ಆಗಮಿಸಿ, ಕೇಂದ್ರ ಸರ್ಕಾರದಿಂದ ಅನುದಾನವನ್ನು ಬಿಡುಗಡೆಗೊಳಿಸುವ ಮೂಲಕ, ರೈತರ ಸಾಲ ಮನ್ನಾಕ್ಕೆ ಆಗ್ರಹಿಸಬೇಕು” ಎಂದು ತಿಳಿಸಿದರು.







