ಶ್ರಾವಣ ಮಾಸದಂದು ಬರುವ ಪ್ರಮುಖ ಹಬ್ಬಗಳಲ್ಲಿ ಕೃಷ್ಣಾಷ್ಟಮಿ ಕೂಡ ಒಂದು. ಇದು ಶ್ರೀಕೃಷ್ಣನು ಜನಿಸಿದ ದಿನವಾದ್ದರಿಂದ, ಪ್ರತಿ ವರ್ಷ ಶ್ರಾವಣ ಮಾಸದ ಕೃಷ್ಣಪಕ್ಷದ ಅಷ್ಟಮಿಯ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ.
ಕೃಷ್ಣಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿಯನ್ನು ಎರಡು ರೀತಿಯಲ್ಲಿ ಆಚರಿಸಲಾಗುತ್ತದೆ. ಅಂದರೆ ಚಾಂದ್ರಮಾನದ ಪ್ರಕಾರ ಈಗ ಆಚರಿಸುವಂತೆ ಶ್ರಾವಣ ಮಾಸದ ಕೃಷ್ಣಪಕ್ಷದ ಅಷ್ಟಮಿಯಂದು ಮತ್ತು ಸೌರಮಾನದಲ್ಲಿ ಸಿಂಹಮಾಸದ ರೋಹಿಣಿ ನಕ್ಷತ್ರದಂದು ಆಚರಿಸಲ್ಪಡುತ್ತದೆ. ಶ್ರೀಕೃಷ್ಣನು ಮಥುರಾದಲ್ಲಿನ ಕಾರಾಗೃಹವೊಂದರಲ್ಲಿ ದೇವಕಿ ಮತ್ತು ವಸುದೇವರ ಅಷ್ಟಮ ಪುತ್ರನಾಗಿ ಅಂದರೆ ಎಂಟನೇ ಮಗುವಾಗಿ ಮಧ್ಯರಾತ್ರಿಯಲ್ಲಿ ಜನಿಸಿದ ಹಿನ್ನೆಲೆಯಾಗಿ ಈ ಹಬ್ಬವನ್ನು ರಾತ್ರಿ ಸಮಯದಲ್ಲಿ ಆಚರಿಸುವುದು ಇತರ ಹಬ್ಬಗಳಿಗಿಂತ ಒಂದು ವಿಶಿಷ್ಟ ಮತ್ತು ವಿಭಿನ್ನ ರೀತಿಯ ಅನುಭವವನ್ನು ನೀಡುತ್ತದೆ.
ಪುರಾಣ ಏನು ಹೇಳುತ್ತೆ…?
ಇಂದಿನ ಉತ್ತರಪ್ರದೇಶ ರಾಜ್ಯದ ಮಥುರಾ ಹಿಂದೆ ಯಾದವ ಕುಲದ ರಾಜಧಾನಿಯಾಗಿತ್ತು. ಕಂಸನ ಅಟ್ಟಹಾಸದಿಂದ ಮತ್ತು ಸಹೋದರಿಯ ಮಗುವಿನಿಂದಲೇ ತನ್ನ ಸಾವು ಎಂದು ಕಂಸ ತಿಳಿದಿದ್ದರಿಂದ ಆತನ ಸ್ವಂತ ಸಹೋದರಿಯಾದ ತುಂಬು ಗರ್ಭಿಣಿ ದೇವಕಿ ಮತ್ತು ಆಕೆಯ ಪತಿ ವಸುದೇವರಿಗೆ ಕಾರಾಗೃಹದಲ್ಲಿ ಇರಿಸಿದುದರ ಪರಿಣಾಮವಾಗಿ ಶ್ರೀಕೃಷ್ಣನು ಸೆರೆಮನೆಯಲ್ಲಿ ಜನಿಸುವಂತಾಯಿತು. ಕೃಷ್ಣ ಎಂದರೆ ಕಪ್ಪು ಎಂದರ್ಥವಾದರೂ ಆತನ ಮೈಬಣ್ಣ ನೀಲಿವರ್ಣದಿಂದ ಕೂಡಿತ್ತು. ಇದಕ್ಕೆ ಹಲವಾರು ಕಾರಣಗಳಿವೆ ಪೌರಾಣಿಕವಾಗಿ ನೋಡುವುದಾದರೆ ರಾಕ್ಷಸಿಯಾದ ಪೂತನಿಯು ತನ್ನ ಎದೆ ಹಾಲನ್ನು ಉಣಿಸಿದುದರಿಂದ, ವಿಷಪೂರಿತವಾಗಿದ್ದ ಆ ಹಾಲನ್ನು ಸೇವಿಸಿ ಶ್ರೀಕೃಷ್ಣನ ದೇಹವು ನೀಲಿಯಾಯಿತು ಎನ್ನುವುದು ಒಂದು ಕಡೆಯಾದರೆ, ಯಮುನಾ ನದಿಯಲ್ಲಿ ಕಾಳಿಂಗ ಸರ್ಪವನ್ನು ಮರ್ದನ ಮಾಡಿದ ಸಮಯದಲ್ಲಿ ಅದರ ತೀವ್ರವಾದ ವಿಷದ ಜ್ವಾಲೆ ಶ್ರೀಕೃಷ್ಣನ ದೇಹಕ್ಕೆ ತಗುಲಿದ್ದರಿಂದ ಆತ ನೀಲದೇಹಿಯಾದನು. ಆಧ್ಯಾತ್ಮಿಕವಾಗಿ ನೋಡುವುದಾದರೆ ನೀಲಿಯು ಆಕಾಶ ಮತ್ತು ಸಮುದ್ರದ ಸಂಕೇತವಾಗಿದ್ದು, ಶ್ರೀಕೃಷ್ಣನು ಅದರ ಪ್ರತೀಕ ಮತ್ತು ಅಗಾಧತೆಯ ದ್ಯೋತಕವಾಗಿದ್ದಾನೆ. ನೀಲ ಮೇಘ ಶಾಮ ಎಂದರೆ ಮಳೆಗಾಲದ ಕಪ್ಪನೆಯ ಮೋಡ ಎನ್ನುವ ಅರ್ಥ ಕೂಡ ಇದೆ.
ವೈದ್ಯಕೀಯ ಮತ್ತು ವೈಜ್ಞಾನಿಕವಾಗಿ ಶ್ರೀಕೃಷ್ಣನನ್ನು ಕಲ್ಪಿಸಿಕೊಂಡಿದ್ದೇ ಆದಲ್ಲಿ ನವಜಾತ ಶಿಶುಗಳ ರಕ್ತದಲ್ಲಿ ಆಮ್ಲಜನಕದ ಕೊರತೆ ಉಂಟಾದಾಗ ಚರ್ಮ, ತುಟಿ ಮತ್ತು ಉಗುರು ನೀಲಿ ಬಣ್ಣಕ್ಕೆ ತಿರುಗುತ್ತದೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು ಸೈನೋಸಿಸ್ ಅಥವಾ ಮೆಥೆಮೊಗ್ಲೋಬಿನೆಮಿಯಾ ಎಂದು ಕರೆಯುತ್ತಾರೆ. ಹೀಗೆ ನೋಡುವುದಾದರೆ ಪುರಾಣದ ಶ್ರೀಕೃಷ್ಣನಿಗೂ ಆಧುನಿಕ ವಿಜ್ಞಾನಕ್ಕೂ ಒಂದು ನಂಟಿರುವಂತೆ ತೋರುವುದು ಸಹಜ.
ಈಗ ಆಚರಣೆ ಹೇಗೆ..?
ಶ್ರೀಕೃಷ್ಣನ ಜನ್ಮದಿನವನ್ನು ದೇಶದ ಹಲವೆಡೆ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಅಂದು ಮುದ್ದುಕೃಷ್ಣನಿಗೆ ಶತನಾಮಾವಳಿ, ವಿಷ್ಣು ಸಹಸ್ರನಾಮದ ಉಚ್ಚಾರಣೆಯ ಮೂಲಕ ತುಳಸಿದಳಗಳನ್ನು ಅರ್ಪಿಸಿ, ಆತನಿಗೆ ಪ್ರಿಯವಾದ ಅವಲಕ್ಕಿ, ಬೆಣ್ಣೆಯೊಂದಿಗೆ ಹಣ್ಣುಗಳು, ಉಂಡೆ ಪಂಚಕಜ್ಜಾಯದಂತಹ ಸಿಹಿ ಪದಾರ್ಥಗಳನ್ನು ನೈವೇದ್ಯವಾಗಿ ಅರ್ಪಿಸಿ ಸಂತೃಪ್ತಿಪಡಿಸಿದರೆ, ಶ್ರೀಕೃಷ್ಣ ದೇವಾಲಯಗಳಲ್ಲಿ ವಿಶೇಷ ರೀತಿಯ ಪೂಜೆಗಳು, ಮಡಿಕೆ ಒಡೆಯುವುದು, ಓಕುಳಿಯಂತಹ ಆಟಗಳನ್ನು ನಡೆಸುವ ಮೂಲಕ ಅದ್ಧೂರಿಯಾಗಿ ಮತ್ತು ಸಡಗರದಿಂದ ಆಚರಿಸಲಾಗುತ್ತದೆ. ಉತ್ತರ ಭಾರತದ ಗೋಕುಲಾಷ್ಟಮಿಗೂ, ದಕ್ಷಿಣಭಾರತದ ಕೃಷ್ಣಜನ್ಮಾಷ್ಟಮಿಯ ಆಚರಣೆಗಳಲ್ಲಿ ಭಿನ್ನತೆ ಇದೆ.
ಎಲ್ಲಾ ಸ್ವಭಾವದ ಕೃಷ್ಣ ಎಲ್ಲರಿಗೂ ಇಷ್ಟ!
ಪ್ರೀತಿಯ ಸಂಕೇತ, ವಿರಹದ ಪ್ರತೀಕ, ಮಗುವಿನ ತುಂಟತನದ ಕುರುಹು, ಸ್ನೇಹಹಸ್ತಕ್ಕೆ ಮಾದರಿ, ಸಹೋದರತ್ವಕ್ಕೆ ದ್ಯೋತಕ ಕೊಂಚ ಪ್ರಮಾಣದ ಕಳ್ಳಬುದ್ಧಿ, ರಸಿಕತೆ ಎಲ್ಲಕ್ಕಿಂತ ಮುಖ್ಯವಾಗಿ ಸ್ನೇಹ, ಪ್ರೀತಿ ಮತ್ತು ಭಕ್ತಿಗೆ ಜಾತಿ, ಅಂತಸ್ತುಗಳು ಮುಖ್ಯವಲ್ಲ ಎನ್ನುವುದನ್ನು, ಆಡಂಬರದ ಭಕ್ತಿಗಿಂತ ನೈಜ ಭಕ್ತಿಗೆ ಒಲಿಯುವೆ ಎಂದು ಕನಕದಾಸರ ಮೂಲಕ ತೋರಿಸಿಕೊಟ್ಟ ಈ ಪರಮಾತ್ಮನ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸೋಣ.
ಸಮಸ್ತ ಜನತೆ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು







