ಚಿಕ್ಕಮಗಳೂರು: ಟ್ರೇಡಿಂಗ್ ನಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಭಾರಿ ಲಾಭ ನೀಡುವುದಾಗಿ ನಂಬಿಸಿ ಇಂಜಿನಿಯರಿಂಗ್ ವಿದ್ಯಾರ್ಥಿಯಿಂದ ಲಕ್ಷಾಂತರ ರೂಪಾಯಿ ಲಪಟಾಯಿಸಿರುವ ಘಟನೆ ನಡೆದಿದೆ. ವಿದ್ಯಾರ್ಥಿನಿಗೆ ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾದ ವಂಚಕರು ಮೊದಲಿಗೆ 750 ರೂಪಾಯಿ ಹೂಡಿಕೆ ಮಾಡಿದರೆ ಕೇವಲ 15 ನಿಮಿಷದಲ್ಲಿ 14.449 ರೂಪಾಯಿಗಳಷ್ಟು ಲಾಭವನ್ನು ನೀಡುವುದಾಗಿ ನಂಬಿಸಿದ್ದಾರೆ. ಬಳಿಕ ಕ್ಯೂಆರ್ ಕೋಡ್ ಸೇರಿದಂತೆ ವಿವಿಧ ಶುಲ್ಕಗಳ ನೆಪವೊಡ್ಡಿ ತಮ್ಮ ಬ್ಯಾಂಕ್ ಖಾತೆಗಳಿಗೆ ಆಗಸ್ಟ್ 27ರಿಂದ 31ರವರೆಗೆ ಹಂತಹಂತವಾಗಿ ಸುಮಾರು 4.77 ಲಕ್ಷ ರೂಪಾಯಿಗಳಷ್ಟು ಹಣವನ್ನು ವರ್ಗಾಯಿಸಿಕೊಂಡಿದ್ದಾರೆ ಎನ್ನಲಾಗಿದೆ. ಇಷ್ಟಾದರೂ ಸುಮ್ಮನಿರದ ವಂಚಕರು ಮತ್ತಷ್ಟು ಹಣದ ಬೇಡಿಕೆ ಇಟ್ಟಾಗ ವಿದ್ಯಾರ್ಥಿನಿಯು ಅನುಮಾನಗೊಂಡು ಕುಟುಂಬದವರಿಗೆ ವಿಚಾರ ತಿಳಿಸಿದ್ದಾರೆ. ನಂತರ ಸೈಬರ್ ಸಹಾಯವಾಣಿ 1930ಕ್ಕೆ ಕರೆ ಮಾಡಿ ದೂರು ನೀಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಘಟನೆಗೆ ಸಂಬಂಧಿಸಿದಂತೆ ಐಟಿ ಕಾಯ್ದೆ ಮತ್ತು ಬಿಎನ್ಎಸ್ ಅಡಿಯಲ್ಲಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
•ಸಾಗರ: ಬೃಹತ್ ಗಾಂಜಾ ಗಿಡ ಪತ್ತೆ
ಸಾಗರ: ಇತ್ತೀಚಿನ ದಿನಗಳಲ್ಲಿ ಸಾಗರದ ಸುತ್ತಮುತ್ತ ಗಾಂಜಾ ಹಾವಳಿ ಹೆಚ್ಚಾಗುತ್ತಿದ್ದು, ಇದಕ್ಕೆ ನಿದರ್ಶನ ಎನ್ನುವಂತೆ ಮತ್ತೊಂದು ಘಟನೆ ನಡೆದಿದೆ. ಇಲ್ಲಿನ ಬಿ ಎಚ್ ರಸ್ತೆಯಲ್ಲಿರುವ ಡಿವೈಎಸ್ ಪಿ ಕಛೇರಿಯಿಂದ ಕೆಲವೇ ಮೀಟರ್ ದೂರದಲ್ಲಿ ಬೃಹತ್ ಗಾತ್ರದ ಗಾಂಜಾ ಗಿಡವೊಂದು ಸೊಂಪಾಗಿ ಬೆಳೆದು ನಿಂತಿರುವುದು ಬೆಳಕಿಗೆ ಬಂದಿದೆ. ಇದನ್ನು ಕಂಡ ಸಾರ್ವಜನಿಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಡಿವೈಎಸ್ ಪಿ ಕಛೇರಿಯ ಮುಂಭಾಗದಲ್ಲಿರುವ ವಾಟರ್ ಸರ್ವಿಸ್ ಸ್ಟೇಷನ್ ಪಕ್ಕದ ಕನ್ಸರ್ವೆನ್ಸಿ ರಸ್ತೆಯಲ್ಲಿ ಈ ಗಿಡ ಕಂಡುಬಂದಿದೆ ಎನ್ನಲಾಗಿದೆ. ಇದು ನಿರ್ಜನ ಪ್ರದೇಶವಾಗಿರುವುದರಿಂದ ದುಷ್ಕರ್ಮಿಗಳು ತಮ್ಮ ಅಡ್ಡೆಯನ್ನಾಗಿಸಿಕೊಂಡು, ಗಾಂಜಾ ಗಿಡವನ್ನು ಬೆಳೆಸುತ್ತಿದ್ದಾರೆಯೇ ಎನ್ನುವ ಅನುಮಾನ ಕೂಡ ವ್ಯಕ್ತವಾಗಿದೆ.
•ಸಾಗರ: ಜಿಂಕೆ ಮಾಂಸ ಪಾಲು ಮಾಡುವಾಗ ಖದೀಮರ ಸೆರೆ
ಸಾಗರ: ಜಿಂಕೆಯ ಮಾಂಸವನ್ನು ಪಾಲು ಮಾಡಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಆರೋಪಿಗಳು ಪೊಲೀಸರಿಗೆ ಸೆರೆಸಿಕ್ಕ ಘಟನೆ, ನಾಗವಳ್ಳಿ ಗ್ರಾಮದಲ್ಲಿ ನಡೆದಿದೆ. ಸರ್ವೇ ನಂಬರ್ 72ರಲ್ಲಿ ಷಾಜಿ ಎನ್ನುವವರಿಗೆ ಸೇರಿದ ಜಮೀನಿನ ಬೇಲಿಗೆ ಕರೆಂಟ್ ಕೊಡಲಾಗಿತ್ತು. ಚುಕ್ಕೆಗಳಿರುವ ಎರಡು ಗಂಡು ಜಿಂಕೆಗಳಿಗೆ ಈ ಬೇಲಿಯು ತಗುಲಿ ಸತ್ತು ಹೋಗಿದ್ದವು. ಈ ಹಿನ್ನೆಲೆಯಲ್ಲಿ ಅವುಗಳ ಮಾಂಸವನ್ನು ಜಮೀನಿನಲ್ಲಿಯೇ ಬೇಯಿಸಿ, ಪಾಲು ಮಾಡಿಕೊಳ್ಳುತ್ತಿದ್ದ ಸಮಯದಲ್ಲಿ, ಖಚಿತವಾದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಶರಾವತಿ ವನ್ಯಜೀವಿ ವಲಯದ ಕೋಗಾರ್ ವಲಯ ಅರಣ್ಯಾಧಿಕಾರಿ ಧನಂಜಯ ನಾಯ್ಕ, ಉಪವಲಯ ಅರಣ್ಯಾಧಿಕಾರಿ ಗುರುರಾಜ ತೋಳಬಂದಿ, ಕಿರಣ್ ಬಿದರಳ್ಳಿ, ಸಂಧ್ಯಾ ಎಸ್, ಅರಣ್ಯ ಪಾಲಕರಾದ ದೀಪಕ್ ಪ್ರಭು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ. ಆಗ ಮೂವರು ಆರೋಪಿಗಳು ಪರಾರಿಯಾಗಿದ್ದು, ಇನ್ನು ಮೂವರು ಆರೋಪಿಗಳು ಪೊಲೀಸರಿಗೆ ಸೆರೆ ಸಿಕ್ಕರು. ಕಾರ್ಯಾಚರಣೆಯ ಸಂದರ್ಭದಲ್ಲಿ ಅಕ್ರಮವಾಗಿ ಅಳವಡಿಸಲಾಗಿದ್ದ ವಿದ್ಯುತ್ ತಂತಿ, ಜಿಂಕೆಗಳ ಮಾಂಸ, ಬೇಯಿಸಲಾಗಿದ್ದ ಮಾಂಸದ ಅವಶೇಷಗಳು, ಸಾಂಬಾರು ತಯಾರಿಸಲು ಬಳಸಿದ ವಸ್ತುಗಳು ಮತ್ತು ಮಣ್ಣಿನಲ್ಲಿ ಹೂತಿದ್ದ ಜಿಂಕೆಗಳ ಕಳೆಬರಹದ ಕುರುಹುಗಳು ಪತ್ತೆಯಾಗಿದೆ.







