ಸೆಪ್ಟೆಂಬರ್ 14ರ ಸೋಮವಾರದಿಂದ ಪ್ರಾರಂಭಗೊಳ್ಳಲಿರುವ ಗಣೇಶೋತ್ಸವದ ಪ್ರಯುಕ್ತ ಎಲ್ಲೆಡೆ ಭಾರೀ ಸಿದ್ಧತೆ ನಡೆದಿದೆ.
ಸಂಘ ಸಂಸ್ಥೆಗಳು ಗಣೇಶನ ಕೂರಿಸಲು ಎಲ್ಲಾ ಸಿದ್ಧತೆ ಆಗಿದ್ದು ತಾಲೂಕು ಆಡಳಿತ, ಪೊಲೀಸ್ ಇಲಾಖೆ ಈ ಬಗ್ಗೆ ಅನೇಕ ನಿಯಮಗಳನ್ನು ಬಿಗಿ ಗೊಳಿಸಿದೆ.
ಗಣೇಶೋತ್ಸವ ಯಾವ ರೀತಿ ನಡೆಯಬೇಕು, ಡಿಜೆ ಬಳಕೆ, ಗಣಪತಿ ವಿಸರ್ಜನಾ ಮೆರವಣಿಗೆ, ಗಣೇಶೋತ್ಸವದ ಅನುಮತಿಗೆ ಸಂಬಂಧಿಸಿದಂತೆ ಹಲವಾರು ವಿಚಾರಗಳ ಕುರಿತು ಈಗಾಗಲೇ ಪೊಲೀಸ್ ಇಲಾಖೆ ಆಯೋಜಕರನ್ನು ಕರೆಸಿ ಸಭೆ ನಡೆಸಿದೆ. ಪ್ರತಿಯೊಬ್ಬ ಗಣಪತಿ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರು ಹೇಗೆ ಆಚರಣೆ ಮಾಡಬೇಕು ಎಂದು ನಿಯಮ ಹೊರಡಿಸಲಾಗಿದೆ.
ಪ್ರತಿ ತಾಲ್ಲೂಕು ಕಛೇರಿಯಲ್ಲಿ ಏಕಗವಾಕ್ಷಿಯ ಸೇವೆಯನ್ನು ತೆರೆದಿದ್ದು, ಗಣೇಶೋತ್ಸವಕ್ಕೆ ಸಂಬಂಧಿಸಿದಂತೆ ಅನುಮತಿಯನ್ನು ಪಡೆಯಬಹುದಾಗಿದೆ.
ಗಣೇಶೋತ್ಸವಕ್ಕೆ ಕಟ್ಟುನಿಟ್ಟಿನ ನಿಯಮ ಏನೇನು?
ಗಣೇಶೋತ್ಸವ ಆಚರಣೆ ವೇಳೆ ಗಣೇಶ ಕೂರಿಸಲು ವಿವಿಧ ಇಲಾಖೆಗಳ ಅನುಮತಿ ಪಡೆಯಲು ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲೇ ‘ಏಕಗವಾಕ್ಷಿ ವ್ಯವಸ್ಥೆ’ ಮಾಡಲಾಗಿದೆ. ಪಿಒಪಿ ಗಣಪತಿ ಬಳಕೆಗೆ ಸಂಪೂರ್ಣ ನಿಷೇಧ ಹೇರಲಾಗಿದ್ದು, ಪರಿಸರಸ್ನೇಹಿ ಮೂರ್ತಿಗಳನ್ನಷ್ಟೇ ಬಳಸಬೇಕು.
ರಾತ್ರಿ 10ರ ನಂತರ ಡಿಜೆ, ಮೈಕ್ ನಿಷೇಧ
ಡಿಜೆ ಹಾಗೂ ಮೈಕ್ಗಳಿಗೆ ನಿಗದಿತ ಡೆಸಿಬಲ್ ಮಿತಿ ಕಡ್ಡಾಯವಾಗಿದ್ದು, ರಾತ್ರಿ 10 ಗಂಟೆಯ ನಂತರ ಧ್ವನಿವರ್ಧಕ ಬಳಕೆಗೆ ಕಟ್ಟುನಿಟ್ಟಿನ ನಿಷೇಧವಿದೆ. ಅಧಿಕೃತ ಮಳಿಗೆಗಳಲ್ಲಿ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅನುಮತಿ ನೀಡಲಾಗಿದ್ದು, ಜಲಮೂಲಗಳಲ್ಲಿ ಮೂರ್ತಿ ವಿಸರ್ಜನೆಗೆ ಈಜುಗಾರರು, ಜೆಸಿಬಿ ಹಾಗೂ ಅಗ್ನಿಶಾಮಕ ದಳದ ಬಿಗಿ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ.







