ಕರಾವಳಿ ಟಾಪ್ ನ್ಯೂಸ್
• ಕಡಬ: ಮಹಿಳೆಯ ಮೇಲೆ ಆ್ಯಸಿಡ್ ದಾಳಿ; ಆರೋಪಿಗೆ ಜಾಮೀನು
• ಕಾರ್ಕಳ: ಅಣ್ಣನನ್ನು ಕೊಲೆ ಮಾಡಿ ತಮ್ಮ ಪರಾರಿ
• ಬಂಟ್ವಾಳ: ಅಡಿಕೆ ತೋಟಕ್ಕೆ ಆಕಸ್ಮಿಕ ಬೆಂಕಿ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
• ಕಡಬ: ಮಹಿಳೆಯ ಮೇಲೆ ಆ್ಯಸಿಡ್ ದಾಳಿ; ಆರೋಪಿಗೆ ಜಾಮೀನು
ಕಡಬ: 2020ರಲ್ಲಿ ಮಹಿಳೆಯ ಮೇಲೆ ಆ್ಯಸಿಡ್ ದಾಳಿ ಮಾಡಿದ್ದ ಆರೋಪಿಗೆ ಆರು ವರ್ಷಗಳ ಬಳಿಕ ಜಾಮೀನು ದೊರೆತಿದೆ. ಕೋಡಿಂಬಾಳ ನಿವಾಸಿಯಾದ ಶ್ರೀಮತಿ ಸ್ವಪ್ನ ಎನ್ನುವವರ ಮೇಲೆ ಅವರ ಬಾವ ಅಂದರೆ ಗಂಡನ ಅಣ್ಣ ಆ್ಯಸಿಡ್ ದಾಳಿ ನಡೆಸಿದ್ದರು. 2020ರ ಜನವರಿ 23ರಂದು ಸಂಜೆಯ ಸುಮಾರಿಗೆ ಸ್ವಪ್ನ ಅವರ ಮನೆಗೆ ಅಕ್ರಮವಾಗಿ ಪ್ರವೇಶಿಸಿದ ಆರೋಪಿಯಾದ ಜಯಾನಂದ ಅವಾಚ್ಯ ಶಬ್ದಗಳಿಂದ ಬೈಯ್ಯಲಾರಂಭಿಸಿದ್ದರಿಂದ ಸ್ವಪ್ನ ಅವರು ಮನೆಯ ಬಾಗಿಲನ್ನು ಹಾಕಿಕೊಂಡು, ಕಿಟಕಿಯ ಮೂಲಕ ಮೊಬೈಲ್ ನಲ್ಲಿ ವಿಡಿಯೋ ಮಾಡಲು ಮುಂದಾದಾಗ, ಜಯಾನಂದ ಆತನ ಕೈಯಲ್ಲಿದ್ದ ಬಾಟಲಿಯ ಮುಚ್ಚಳವನ್ನು ತೆರೆದು ಅದರೊಳಗಿದ್ದ ಆ್ಯಸಿಡ್ ಅನ್ನು ಮನೆಯ ಹೊರಗಡೆಯಿಂದಲೇ ಕಿಟಕಿಯ ಮೂಲಕ ಎರಚಿದ್ದ ಎನ್ನಲಾಗಿದೆ. ಪರಿಣಾಮವಾಗಿ ಸ್ವಪ್ನ ಅವರ ಮುಖ, ಕುತ್ತಿಗೆಯ ಭಾಗ ಮತ್ತು ಕೈಗೆ ತೀವ್ರ ರೀತಿಯ ಗಾಯಗಳಾಗಿದ್ದವು.
ಬಳಿಕ ಸ್ವಪ್ನ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ವಪ್ನ ಅವರು ನೀಡಿದ ದೂರಿನ ಆಧಾರದ ಮೇಲೆ ಕಡಬ ಠಾಣೆಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು, ಆರೋಪಿಯಾದ ಜಯಾನಂದನನ್ನು ಬಂಧಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಯಾದ ಜಯಾನಂದ ಜಾಮಿನಿನ ಮೇಲೆ ಬಿಡುಗಡೆಗೊಳಿಸುವಂತೆ ಕೋರಿ, ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದನು. ನ್ಯಾಯಾಲಯದಲ್ಲಿ ಅರ್ಜಿಗೆ ಸಂಬಂಧಿಸಿದಂತೆ ವಿಚಾರಣೆ ನಡೆದ ಬಳಿಕ, ನ್ಯಾಯಾಧೀಶರಾದ ಶ್ರೀಮತಿ ಸರಿತಾ ಡಿ. ಅವರು ಆರೋಪಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡುವಂತೆ ಆದೇಶವನ್ನು ಹೊರಡಿಸಿದ್ದಾರೆ.
• ಕಾರ್ಕಳ: ಅಣ್ಣನನ್ನು ಕೊಲೆ ಮಾಡಿ ತಮ್ಮ ಪರಾರಿ
ಕಾರ್ಕಳ: ಜಾಗದ ತಕರಾರಿಗೆ ಸಂಬಂಧಿಸಿದಂತೆ ಸಹೋದರರ ನಡುವೆ ಕಲಹ ಏರ್ಪಟ್ಟು, ಅಣ್ಣನನ್ನು ಕೊಲೆ ಮಾಡಿ ತಮ್ಮ ಪರಾರಿಯಾಗಿರುವ ಘಟನೆ, ಕಸಬ ಗ್ರಾಮದಲ್ಲಿ ನಡೆದಿದೆ. ರಿಚರ್ಡ್ ಡಿಸೋಜಾ ಮತ್ತು ಹೆರಾಲ್ಡ್ ಡಿಸೋಜಾ ಅವರಿಗೆ ಮಿತ್ತಬೆಟ್ಟು ಹಿರಿಯಂಗಡಿ ಎನ್ನುವಲ್ಲಿ ಇರುವ ವಾಸದ ಮನೆ ಮತ್ತು ಜಾಗಕ್ಕೆ ಸಂಬಂಧಿಸಿದಂತೆ ತಕರಾರು ಇದ್ದು, ಈ ಹಿನ್ನೆಲೆಯಲ್ಲಿ ಸಹೋದರರ ನಡುವೆ ಶನಿವಾರದಂದು ಮಧ್ಯಾಹ್ನ ಕಲಹ ಏರ್ಪಟ್ಟಿದೆ. ಈ ಸಂದರ್ಭದಲ್ಲಿ ಹೆರಾಲ್ಡ್ ಡಿಸೋಜಾ ಅಣ್ಣನಾದ ರಿಚರ್ಡ್ ಡಿಸೋಜಾಗೆ ಮರದ ರೀಪಿನಿಂದ ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ ಅಪರಾಧಕ್ಕೆ ಬೆದರಿ ಹೆರಾಲ್ಡ್ ಡಿಸೋಜಾ ಪರಾರಿಯಾಗಿದ್ದಾನೆ ಎನ್ನುವ ಸಂಗತಿ ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
•ಬಂಟ್ವಾಳ: ಅಡಿಕೆ ತೋಟಕ್ಕೆ ಆಕಸ್ಮಿಕ ಬೆಂಕಿ
ಬಂಟ್ವಾಳ: ಅಡಿಕೆ ತೋಟವೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ, ಮೇ 3ರ ಭಾನುವಾರದಂದು ನಡುರಾತ್ರಿಯ 1ಗಂಟೆಯ ಸುಮಾರಿಗೆ ಸಜೀಪ ಮೂಡದ ಪೆರ್ವ ಸಮೀಪದ ಕೊಯಿಲ ಎನ್ನುವಲ್ಲಿ ನಡೆದಿದೆ. ರಸ್ತೆಯ ಬದಿಯಲ್ಲಿದ್ದ ಗಿಡಗಂಟಿಗಳಿಗೆ ಆಕಸ್ಮಿಕವಾಗಿ ಹತ್ತಿಕೊಂಡ ಬೆಂಕಿಯು ಉರಿಯುತ್ತಾ ಹತ್ತಿರದ ಅಡಿಕೆ ತೋಟಕ್ಕೂ ತನ್ನ ಕೆನ್ನಾಲಿಗೆಯನ್ನು ಚಾಚಿದೆ. ಇದನ್ನು ಕಂಡ ಸ್ಥಳೀಯರು ಬೆಂಕಿಯನ್ನು ನಂದಿಸುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ರಾತ್ರಿಯ ಪಾಳಿಯಲ್ಲಿ ಕರ್ತವ್ಯ ನಿರತರಾಗಿದ್ದ ಟ್ರಾಫಿಕ್ ಎಸ್ಐ ಆದರ್ಶ್ ಅವರು ತಕ್ಷಣ ಅಗ್ನಿಶಾಮಕ ದಳದವರಿಗೆ ಕರೆ ಮಾಡಿ ಕರೆಸಿದ್ದಾರೆ. ಸಮಯಕ್ಕೆ ಸರಿಯಾಗಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿದ್ದರಿಂದ ಅಡಿಕೆ ಮರಗಳಿಗೆ ಯಾವುದೇ ರೀತಿಯ ಹಾನಿ ಸಂಭವಿಸಿಲ್ಲ ಎನ್ನುವ ಮಾಹಿತಿ ಲಭಿಸಿದೆ.







