ಮೇ 9ರವರೆಗೆ ಮಳೆ ಸಾಧ್ಯತೆ..!
– ರಾಜ್ಯದಲ್ಲಿ ಹೆಚ್ಚಿದ ತಾಪಮಾನ: ಸುಡು ಬಿಸಿಲು
– ಗುಡುಗು ಮಿಂಚು ಸಮೇತ ಮಳೆ ಎಚ್ಚರಿಕೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು: ರಾಜ್ಯಾದ್ಯಂತ ತಾಪಮಾನ ಹೆಚ್ಚಳವಾಗಿರುವ ಬೆನ್ನಲ್ಲೇ ಮಳೆಯ ಸಾಧ್ಯತೆ ಕೂಡ ಹೆಚ್ಚಾಗಲಿದೆ. ಹವಾಮಾನ ಇಲಾಖೆಯ ಪ್ರಕಾರ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಮೇ ಮೊದಲ ವಾರದಲ್ಲಿ ಮಳೆ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಅಧಿಕವಾಗಲಿದ್ದು, ಮತ್ತೆ ಕೆಲವೆಡೆ ಮಳೆಯೊಂದಿಗೆ ಗಾಳಿ ಮಿಂಚು ಕೂಡ ಎದುರಾಗುವ ಲಕ್ಷಣಗಳಿವೆ. ಈ ಹಿನ್ನೆಲೆಯಲ್ಲಿ ರೈತರು ಮತ್ತು ಸಾರ್ವಜನಿಕರು ಜಾಗೃತರಾಗಿರಬೇಕೆಂದು ಹವಾಮಾನ ಇಲಾಖೆಯು ಎಚ್ಚರಿಕೆ ನೀಡಿದೆ.
ಇನ್ನು ಉತ್ತರ ಕರ್ನಾಟಕದಲ್ಲಿ ಮೊದಲ ಎರಡು ದಿನ ಮಳೆಯ ಪ್ರಮಾಣ ಕಡಿಮೆ ಇದ್ದು, ಬಿಸಿಲಿನ ತೀವ್ರತೆ ಎಂದಿನಂತೆ ಮುಂದುವರಿಯುತ್ತದೆ ಎನ್ನುವ ಮಾಹಿತಿ ಲಭಿಸಿದೆ. ಮೇ 5ರ ಮಂಗಳವಾರದ ನಂತರ ಕೊಪ್ಪಳ, ರಾಯಚೂರು, ಯಾದಗಿರಿ ಮತ್ತು ಕಲಬುರ್ಗಿ ಜಿಲ್ಲೆಗಳಲ್ಲಿ ಕಡಿಮೆ ಪ್ರಮಾಣದೊಂದಿಗೆ ಮಳೆ ಚಟುವಟಿಕೆ ಪ್ರಾರಂಭಗೊಳ್ಳುವ ನಿರೀಕ್ಷೆ ಇದೆ. ಪರಿಣಾಮವಾಗಿ ಬಿಸಿಲಿನ ತೀವ್ರತೆ ಕಡಿಮೆಗೊಳ್ಳಲಿದೆ. ಒಟ್ಟಾರೆ ರಾಜ್ಯಾದ್ಯಂತ ಮುಂದಿನ ದಿನಗಳಲ್ಲಿ ಮಳೆಯ ಜೊತೆಗೆ ಒಣಹವೆ ಮಿಶ್ರಿತವಾಗಲಿದ್ದು, ಗುಡುಗು ಮತ್ತು ಮಿಂಚಿನ ಸಂದರ್ಭದಲ್ಲಿ ಸಾರ್ವಜನಿಕರು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಲಾಗಿದೆ.








