
ನಕ್ಷತ್ರ ಆಮೆಗಳ ಕಳ್ಳತನ ಗ್ಯಾಂಗ್ ಅರೆಸ್ಟ್!
– ನಕ್ಷತ್ರ ಆಮೆ ಕಳ್ಳತನ ಮಾಡುತ್ತಿದ್ದ ನಾಲ್ಕು ಜನರ ಬಂಧನ
– 32 ನಕ್ಷತ್ರ ಆಮೆಗಳು ವಶ: ಹೊಸದುರ್ಗದಲ್ಲಿ ಘಟನೆ
NAMMUR EXPRESS NEWS
ಹೊಸದುರ್ಗ: ಅಳಿವಿನ ಅಂಚಿನಲ್ಲಿರುವ ಅಪರೂಪದ ಜೀವಿ ನಕ್ಷತ್ರ ಆಮೆಗಳ ಕಳ್ಳತನ ಪ್ರಕರಣ ಹೊಸದುರ್ಗ ತಾಲೂಕು ಶ್ರೀರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಹೊಸದುರ್ಗ ತಾಲೂಕು ಮತ್ತೋಡು ಹೋಬಳಿಯ ಕಂಚೀನಗರ ಸಮೀಪದ ಕುದುರೆ ಕಣಿವೆ ಗುಡ್ಡಗಾಡು ಪ್ರದೇಶದಲ್ಲಿ ನಕ್ಷತ್ರ ಆಮೆಗಳನ್ನು ಹಿಡಿಯುತ್ತಿದ್ದ ತಂಡದ ಮೇಲೆ ಶ್ರೀರಾಂಪುರ ಪೊಲೀಸರು ದಾಳಿ ನಡೆಸಿ, ಚೀಲದಲ್ಲಿ ತುಂಬಿಕೊಂಡಿದ್ದ 32 ನಕ್ಷತ್ರ ಆಮೆಗಳನ್ನು ವಶಪಡಿಸಿಕೊಂಡಿದ್ದಾರೆ.
ಶ್ರೀರಾಂಪುರ ಸಮೀಪದ ಕಂಚಿ ನಗರ ಗ್ರಾಮದ ಹೊರ ವಲಯದಲ್ಲಿ ಶನಿವಾರ ವಾಹನವನ್ನು ನಿಲ್ಲಿಸಿಕೊಂಡು ಅನುಮಾನಸ್ಪದವಾಗಿ ಓಡಾಡುತ್ತಿದ್ದ ಅಪರಿಚಿತರನ್ನು ಗಮನಿಸಿದ ಸ್ಥಳಿಯರು ಶ್ರೀರಾಂಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದಾಳಿ ನೆಡೆಸಿದ ಶ್ರೀರಾಂಪುರ ಪೊಲೀಸರು ನಕ್ಷತ್ರ ಆಮೆಗಳನ್ನು ಬೇಟೆಯಾಡುತ್ತಿದ್ದವರನ್ನು ಪತ್ತೆ ಹಚ್ಚಿದ್ದಾರೆ.
ಬೇಟೆಗಾರರಿಂದ 32 ನಕ್ಷತ್ರ ಆಮೆಗಳನ್ನು ವಶಪಡಿಸಿಕೊಂಡು ಚಿಕ್ಕಬಳ್ಳಾಪುರ ಮೂಲದ 3 ಜನ ಹಾಗೂ ಕೋಲಾರ ಮೂಲದ ಒಬ್ಬ ಒಟ್ಟು ನಾಲ್ಕು ಜನರನ್ನು ಬಂಧಿಸಲಾಗಿದೆ. ಘಟನೆ ಸಂಬಂಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ವಲಯ ಅರಣ್ಯಧಿಕಾರಿ ಸುನಿಲ್ಕುಮಾರ್ ಪ್ರತಿಕ್ರಿಯಿಸಿ, ಮಾರಿಕಣಿವೆ ಹಾಗೂ ಲಕ್ಕಿಹಳ್ಳಿ ಅರಣ್ಯ ಪ್ರದೇಶಗಳ ವ್ಯಾಪ್ತಿಯಲ್ಲಿ ನಕ್ಷತ್ರ ಆಮೆಗಳಿದ್ದು ಅಳಿವಿನ ಅಂಚಿನಲ್ಲಿವೆ. ಇವುಗಳನ್ನು ವಿಷ್ಣುವಿನ ವಾಹನಗಳು ಎಂಬ ನಂಬಿಕೆ ನಮ್ಮ ಜನರಲ್ಲಿದ್ದು ಅವುಗಳನ್ನು ಮನೆಯಲ್ಲಿ ಪೂಜಿಸಿದರೆ ಒಳ್ಳೆಯದಾಗುವುದೆಂಬ ನಂಬಿಕೆ ಇರುವುದರಿಂದ ಇವುಗಳಿಗೆ ಹೆಚ್ಚಿನ ಬೇಡಿಕೆ ಇದೆ ಹಾಗಾಗಿ. ಇವುಗಳನ್ನು ಹಿಡಿದು ಮಾರಾಟ ಮಾಡಲಾಗುತ್ತದೆ. ಇವುಗಳನ್ನು ಸಂರಕ್ಷಿಸುವುದು ಎಲ್ಲರ ಹೊಣೆಯಾಗಿದೆ ಎಂದು ಹೇಳಿದ್ದಾರೆ.
