ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆಯು ಅಂತಿಮ ಹಂತವನ್ನು ತಲುಪಿದ್ದು, ಒಟ್ಟು 43.82 ಲಕ್ಷ ನೊಟೀಸ್ ಗಳ ಪೈಕಿಯಲ್ಲಿ 19.365 ನೊಟೀಸ್ ಗಳ ಪರಿಶೀಲನೆ ಮಾತ್ರ ಬಾಕಿ ಉಳಿದಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳ ಕಛೇರಿಯಿಂದ ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಇತ್ಯರ್ಥಪಡಿಸುವ ನೊಟೀಸ್ ಪ್ರಕ್ರಿಯೆಗೆ ಅಕ್ಟೋಬರ್ 22ರ ಗುರುವಾರ ಅಂತಿಮ ದಿನವಾಗಿದ್ದು, ಮತದಾರರ ಅಂತಿಮ ಪಟ್ಟಿಯನ್ನು ಅಕ್ಟೋಬರ್ 27ರ ಮಂಗಳವಾರ ಪ್ರಕಟಗೊಳ್ಳಲಿದೆ ಎನ್ನಲಾಗಿದೆ. ಈಗಾಗಲೇ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯ ಅಡಿಯಲ್ಲಿ ಒಟ್ಟು 24.46.803 ಅರ್ಜಿ ನಮೂನೆಗಳು ಸ್ವೀಕೃತವಾಗಿದ್ದು, ನಮೂನೆ-6ರಲ್ಲಿ 10.07.392 ಅರ್ಜಿಗಳು, ನಮೂನೆ-6ಎ ನಲ್ಲಿ 4777 ಅರ್ಜಿಗಳು, ನಮೂನೆ-7ರಲ್ಲಿ 1.55.109 ಅರ್ಜಿಗಳು, ನಮೂನೆ-8ರಲ್ಲಿ 12.79.525 ಅರ್ಜಿಗಳು ಬಂದಿದ್ದು, ನಮೂನೆ-8ರಲ್ಲಿ ಅತಿ ಹೆಚ್ಚಿನ ಅರ್ಜಿಗಳು ಬಂದಿವೆ ಎನ್ನಲಾಗಿದೆ.
ಮತದಾರರ ಹೆಸರುಗಳನ್ನು ಸಾಮೂಹಿಕವಾಗಿ ಅಳಿಸಲು ನಮೂನೆ-7ರಲ್ಲಿ ಅರ್ಜಿ ಸಲ್ಲಿಕೆಯ ಪ್ರಮಾಣ ಅಧಿಕವಾಗಿರುವ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗವು ಅರ್ಜಿ ಸಲ್ಲಿಕೆಯ ನಿಯಮಗಳ ಕುರಿತು ಸ್ಪಷ್ಟನೆ ನೀಡಿದೆ. ಅಲ್ಲದೆ ಈ ಕ್ರಮವು ಆಧಾರರಹಿತ ಅಥವಾ ಪುನರಾವರ್ತಿತ ಆಕ್ಷೇಪಣೆಗಳನ್ನು ನಿಯಂತ್ರಿಸುವ ಉದ್ದೇಶವನ್ನು ಹೊಂದಿದ್ದರೂ ಕೂಡ, ನಿಜವಾದ ದೂರುಗಳನ್ನು ಸಲ್ಲಿಸಲು ಬಯಸುವ ಅರ್ಹ ಮತದಾರರ ಹಕ್ಕುಗಳಿಗೆ ಯಾವುದೇ ಧಕ್ಕೆಯಾಗದಂತೆ ಅನುಷ್ಠಾನಗೊಳಿಸುವುದು ಮುಖ್ಯವಾಗಿದೆ.
ಮತದಾರರ ನೋಂದಣಿ ನಿಯಮಗಳು, 1960ರ ಪ್ರಕಾರ ನಮೂನೆ-7ರಲ್ಲಿ ಸಲ್ಲಿಸಲಾದ ಆಕ್ಷೇಪಣೆಗಳನ್ನು ಪರಿಶೀಲಿಸುವ ಜವಾಬ್ದಾರಿಯನ್ನು ಚುನಾವಣಾ ನೋಂದಣಿ ಅಧಿಕಾರಿಗಳು ಹೊಂದಿದ್ದಾರೆ. ಇದರ ಪ್ರಕಾರ ಅರ್ಜಿಯಲ್ಲಿ ಮುಖ್ಯವಾಗಿ ಬೇಕಾಗಿರುವಂತಹ ವಿವರಗಳಿವೆಯೇ, ಆಕ್ಷೇಪಣೆ ಸಲ್ಲಿಸಿದ ವ್ಯಕ್ತಿಯ ಸಹಿ ಇದೆಯೇ ಮತ್ತು ನೀಡಿರುವ ಮಾಹಿತಿಯು ಮತದಾರರ ಪಟ್ಟಿಯಲ್ಲಿರುವ ಮಾಹಿತಿಗೆ ಹೊಂದಾಣಿಕೆಯಾಗುತ್ತದೆಯೆ ಎನ್ನುವುದನ್ನು ಅಧಿಕಾರಿಗಳು ಪರಿಶೀಲಿಸಲಿದ್ದಾರೆ. ಹಾಗೆಯೇ ಇತ್ಯರ್ಥಪಡಿಸಲಾಗಿರುವಂತಹ ಪ್ರಕರಣಗಳಲ್ಲಿ ಸಂಬಂಧಪಟ್ಟ ವ್ಯಕ್ತಿಗಳಿಗೆ ನೊಟೀಸ್ ಅನ್ನು ನೀಡುವ ಮೂಲಕ, ಅವರಿಂದ ಹೇಳಿಕೆಗಳನ್ನು ಪಡೆದುಕೊಂಡು ಅವುಗಳನ್ನು ದಾಖಲಿಸಿಕೊಂಡು ವಿಚಾರಣೆ ನಡೆಸಬೇಕಿದೆ. ಇದಕ್ಕೆ ಸಂಬಂಧಿಸಿದಂತೆ ದೇಶದ ವಿವಿಧ ಭಾಗಗಳಲ್ಲಿ ಇರುವಂತಹ ಮತದಾರರ ಹಕ್ಕುಗಳು, ದಾಖಲೆಗಳ ಪರಿಶೀಲನೆ, ಹೆಸರುಗಳ ಸೇರ್ಪಡೆ ಮತ್ತು ಅಳಿಸುವಿಕೆ, ಚುನಾವಣಾ ಪಟ್ಟಿಗಳ ವಿಶ್ವಾಸಾರ್ಹತೆಯ ಕುರಿತು ಸಾಕಷ್ಟು ಚರ್ಚೆಗಳು ನಡೆದಿದ್ದು, ಕರ್ನಾಟಕದ ವಿಚಾರದಲ್ಲಿ ಅಂತಿಮ ಮತದಾರರ ಪಟ್ಟಿ ಎನ್ನುವುದು ಕೇವಲ ಆಡಳಿತಾತ್ಮಕ ದಾಖಲೆಯಾಗಿರದೆ ಅರ್ಹ ನಾಗರಿಕರ ಮತದಾನದ ಹಕ್ಕನ್ನು ಖಚಿತಪಡಿಸುವ ಪ್ರಮುಖ ಆಧಾರವಾಗಿದೆ ಎಂದು ತಿಳಿಸಲಾಗಿದೆ.







