
ಮಳೆಗಾಗಿ ಪ್ರಾರ್ಥಿಸಿ ಜೋಡಿ ತುಂಬಿನಕೆರೆಯಲ್ಲಿ ಕರಿಗಲ್ಲಿಗೆ ಗಂಗಾಭಿಷೇಕ!
– ಹೊಸದುರ್ಗ ತಾಲೂಕಿನ ಜೋಡಿ ಗ್ರಾಮದಲ್ಲಿ ಮಳೆಗಾಗಿ ಪೂಜೆ
– ಏನಿದು ಪೂಜೆ..? ಹೇಗೆ ನಡೆಯುತ್ತೆ…?
NAMMUR EXPRESS NEWS
ಹೊಸದುರ್ಗ: ಹೊಸದುರ್ಗ ತಾಲೂಕಿನ ಕಸಬಾ ಹೋಬಳಿ ಜೋಡಿ ಗ್ರಾಮದಲ್ಲಿ ಮಳೆಗಾಗಿ ಊರ ಮುಂದಿನ ಕರಿಗಲ್ಲಿಗೆ ನೂರೊಂದು ಬಿಂದಿಗೆ ಗಂಗಾಭಿಷೇಕ ಮಾಡುವುದರ ಮೂಲಕ ಮಳೆರಾಯನ ಬರವಿಗಾಗಿ ವಿಶಿಷ್ಟ ಪ್ರಾರ್ಥನೆ ಮಾಡಲಾಯಿತು.
ಬೆಳಿಗ್ಗೆಯಿಂದಲೇ ಗ್ರಾಮದ ಯುವಕರು ಮನೆ ಮನೆಗೆ ಹೋಗಿ ಪರವ ಮಾಡಲು ಅಕ್ಕಿ ಕಾಳು ಬೇಳೆ ದವಸ ಧಾನ್ಯಗಳನ್ನ ಸಂಗ್ರಹಿಸಿ ಗ್ರಾಮದ ಎಲ್ಲಾ ಮಹಿಳೆಯರು ಪುರುಷರಾಧಿಯಾಗಿ ಒಟ್ಟುಗೂಡಿ ಈ ಭಾಗದ ವಿಶೇಷ ಆಹಾರವಾದ ಮುದ್ದೆ ಅನ್ನ ಸಾಂಬಾರು ಹಾಗೂ ಪಾಯಸ ಮಾಡಿ ಶ್ರೀ ಆಂಜನೇಯ ಸ್ವಾಮಿ ಮತ್ತು ಈಶ್ವರ ದೇವರಿಗೆ ವಿಶೇಷ ಪೂಜೆ ಮಾಡಿಸಿ ಪ್ರಸಾದವನ್ನು ನೈವೇದ್ಯ ಮಾಡಿ ನಮ್ಮ ಊರಿಗೆ ಮಳೆ ಬಂದು ನಮ್ಮ ಊರಿನಿಂದ ಗಂಗೆ ನಾಡಿಗೆಲ್ಲಾ ಹರಿಯಲಿ ಎಂದು ವಿಶೇಷವಾಗಿ ಪ್ರಾರ್ಥಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ತಂಬಿನಕೆರೆ ಬಸವರಾಜ್, ಮಾಜಿ ಗ್ರಾ ಪಂ ಸದಸ್ಯ ರಾಜಪ್ಪ ರಮೇಶ್ ಗಿರೀಶ್ ರವಿಕುಮಾರ್, ಮಲ್ಲಿಕಾರ್ಜುನ್, ಲೋಕೇಶ್ ಟಿಸಿ ಮೂರ್ತಿ, ಬೀಸನಹಳ್ಳಿ ಪ್ರದೀಪ್, ಬಸವರಾಜ್, ಗೋವಿಂದಪ್ಪ ಟಿ ಕೆ ರಾಮಚಂದ್ರಚಾರ್, ಟಿ ಸಿ ಜಯಣ್ಣ ಹಾಗೂ ಗ್ರಾಮಸ್ಥರು ಹಾಜರಿದ್ದರು.
ರೈತರ ನೆಮ್ಮದಿ ಬದುಕಿಗೆ ಬೆಳಕಾಗಲಿ ಎಂದು ಪೂಜೆ
ನಾವು ಪ್ರತಿ ವರ್ಷ ಮಳೆ ಬರಲೆಂದು ದೇವರ ಮರೆಹೋಗಿ ನಮ್ಮ ಊರಿನ ಕರಿಗಲ್ಲಿಗೆ ನೂರೊಂದು ಬಿಂದಿಗೆ ಗಂಗಾಜಲವನ್ನ ಪ್ರೋಕ್ಷಣೆ ಮಾಡಿ ವಿಶೇಷ ಅಭಿಷೇಕ ಮಾಡುವುದರ ಮುಖಾಂತರ ಮಳೆರಾಯನ ಬರವಿಗಾಗಿ ಪ್ರಾರ್ಥಿಸುತ್ತೇವೆ. ಈ ಧಾರ್ಮಿಕ ಆಚರಣೆ ಮುಗಿದ ಬಳಿಕ ಮೂರು ದಿನದ ಒಳಗಾಗಿ ನಮ್ಮ ಊರಿಗೆ ಮಳೆ ಬಂದೇ ಬರುತ್ತದೆ, ಹಾಗೂ ನಾಡಿನ ತುಂಬೆಲ್ಲ ಮಳೆ ಬಂದು ರೈತರ ನೆಮ್ಮದಿ ಬದುಕಿಗೆ ಬೆಳಕಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದು ಶಿವಲೀಲಾ ರವಿಕುಮಾರ್, ಗೃಹಿಣಿ ಹೇಳಿದ್ದಾರೆ.
