ಸ್ವಂತ ಉದ್ಯಮ ತೆರೆದು ಯಶಸ್ವಿಯಾದ ಪ್ರಜ್ಞಾ ಭಟ್!
– ಸೀರಿಯಲ್, ಸಿನಿಮಾ, ಮಾಡೆಲಿಂಗ್ ಅಲ್ಲಿ ಸಾಧನೆ
– ಶೃಂಗೇರಿ ಮೂಲದ ನಟಿಯ ಉದ್ಯಮ ಪಯಣ ಸೂಪರ್
ರೂಪದರ್ಶಿ, ನಟಿ, ಕಲಾವಿದೆ ಪ್ರಜ್ಞಾ ಭಟ್ ನಟನೆ ಜತೆ ಜತೆಗೆ ಸ್ವಂತ ಉದ್ಯಮ ತೆರೆದು ಹತ್ತಾರು ಮಂದಿಗೆ ಉದ್ಯೋಗ ಕೊಡುವ ಮೂಲಕ ಮಾದರಿ ಆಗಿದ್ದಾರೆ. ಈಕೆ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ಪ್ರತಿಭೆ. ಬಾಲ್ಯದಲ್ಲಿ ಶಿಕ್ಷಕಿಯಾಗಬೇಕೆಂದು ಬಯಸಿದ್ದವರು, ಅಭಿನಯ ಕ್ಷೇತ್ರಕ್ಕೆ ಪ್ರವೇಶ ಪಡೆದಿದ್ದು ಆಕಸ್ಮಿಕ ಎನ್ನುತ್ತಾರೆ ಪ್ರಜ್ಞಾ ಭಟ್.
ಕಾಲೇಜು ದಿನಗಳಲ್ಲೇ ಮಾಡೆಲಿಂಗ್ ಎಂಟ್ರಿ!
ಕಾಲೇಜು ವಿದ್ಯಾರ್ಥಿನಿಯಾಗಿರುವಾಗಲೇ ರೂಪದರ್ಶಿಯಾಗಿದ್ದ ಇವರು, 2015ರಲ್ಲಿ ಮಿಸ್ ಚಿಕ್ಕಮಗಳೂರು ರನ್ನರ್ ಅಪ್ ಹಾಗೂ 2016ರ ಮಿಸ್ ಕ್ವೀನ್ ಕರ್ನಾಟಕ ಎನ್ನುವ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡರು. ಸ್ನೇಹಿತರಾದ ವಿದ್ಯಾಭೂಷಣ್, ಅಮರ್ ಮತ್ತು ಕೌಶಿಕ್ ಅವರು ತಮ್ಮ ಫೋಟೋಶೂಟ್ ಗೆ ಪ್ರಜ್ಞಾ ಭಟ್ ಅವರನ್ನು ರೂಪದರ್ಶಿಯಾಗಿ ಕರೆಯುತ್ತಿದ್ದರು. ಬಳಿಕ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದರು. ಪ್ರಜ್ಞಾ ಭಟ್ ಅವರ ಫೋಟೋವನ್ನು ಗುರುತಿಸಿದ ರಘು ಚರಣ್ ತಿಪಟೂರು ಅವರು ಧಾರಾವಾಹಿಯಲ್ಲಿ ಅಭಿನಯಿಸಲು ಆಡಿಶನ್ ಗೆ ಅವಕಾಶ ಮಾಡಿಕೊಟ್ಟರು.
ಪ್ರಾರಂಭದಲ್ಲಿ ತಂದೆತಾಯಿಗಳು ಮಗಳು ಅಭಿನಯ ಮಾಡುವುದನ್ನು ನಿರಾಕರಿಸಿದರು. ಬಾಳೆಹೊನ್ನೂರಿನಲ್ಲಿ ಪ್ರಜ್ಞಾಭಟ್ ಅವರು ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಮದುವೆಯಾಗುವ ತನಕ ಅದನ್ನೇ ಮುಂದುವರಿಸಲಿ ಎನ್ನುವುದು ಅವರ ಬಯಕೆಯಾಗಿತ್ತು. ಆದರೆ ಪ್ರಜ್ಞಾ ಭಟ್ ಅವರು ಒಮ್ಮೆ ಪ್ರಯತ್ನಿಸುವ ನೋಡುವ ಸಲುವಾಗಿ ಆಡಿಷನ್ ನೀಡಲು ಬೆಂಗಳೂರಿಗೆ ತೆರಳಿದರು. ಸಾಮಾನ್ಯವಾಗಿ ಆಡಿಶನ್ ನೀಡುವುದು ವಾಹಿನಿಯ ಕಛೇರಿಯಲ್ಲಿ ಅಥವಾ ಚಿತ್ರೀಕರಣದ ಸ್ಥಳದಲ್ಲಿ. ಆದರೆ ಪ್ರಜ್ಞಾ ಭಟ್ ಆಡಿಷನ್ ನೀಡಿದ ಸ್ಥಳ ಕನ್ನಡಿಗರ ಕಣ್ಮಣಿ, ವರನಟ ಡಾ.ರಾಜಕುಮಾರ್ ಅವರ ಪುಣ್ಯಭೂಮಿಯಲ್ಲಿ. ಧಾರಾವಾಹಿಗೆ ಸಂಬಂಧಿಸಿದ ಸ್ಕ್ರಿಪ್ಟ್ ಕೂಡ ಅಲ್ಲಿಯೇ ಲಭ್ಯವಾಯಿತು. ಸರಳ ಉಡುಗೆ, ಪ್ರಸಾಧನರಹಿತವಾಗಿ ಆಡಿಶನ್ ನೀಡಿದರೂ ಕೂಡ ಪ್ರಜ್ಞಾ ಭಟ್ ತಮ್ಮ ಪ್ರತಿಭೆಯ ಮೂಲಕ ಆಯ್ಕೆಯಾದರು.
ಧಾರಾವಾಹಿ ಮೂಲಕ ಕಿರುತೆರೆ ನಾಯಕಿ
ಪ್ರಜ್ಞಾ ನಟನಾ ಶಾಲೆಗೆ ಹೋಗಿ ತರಬೇತಿ ಪಡೆದುಕೊಂಡವರಲ್ಲ. ಗುರುಗಳಾದ ಸುಧೀಂದ್ರ ಭಾರದ್ವಾಜ್ ಮತ್ತು ಕೆಲ ನಿರ್ದೇಶಕರ ಮಾರ್ಗದರ್ಶನದಿಂದ ಅಭಿನಯ, ಮಾತುಗಾರಿಕೆಯಲ್ಲಿ ಆತ್ಮಸ್ಥೈರ್ಯವನ್ನು ಕಂಡುಕೊಂಡರು. ಹೀಗೆ ಕಿರುತೆರೆಯನ್ನು ಪ್ರವೇಶಿಸಿದ ಪ್ರಜ್ಞಾ ಭಟ್ ಅಭಿನಯಿಸಿದ ಮೊದಲ ಧಾರಾವಾಹಿ ಕಲರ್ಸ್ ಕನ್ನಡ ವಾಹಿನಿಯ ‘ಮಾಂಗಲ್ಯಂ ತಂತುನಾನೇನಾ’. ಇದರಲ್ಲಿ ನಾಯಕಿಯ ತಂಗಿಯ ಪಾತ್ರವನ್ನು ನಿರ್ವಹಿಸಿದರು. ಬಳಿಕ ಸುವರ್ಣ ವಾಹಿನಿಯ ಪ್ರೇಮಲೋಕ ಮೊದಲಾದ ಧಾರಾವಾಹಿಗಳಲ್ಲಿ ಅಭಿನಯಿಸಿರುವ ಪ್ರಜ್ಞಾ ಭಟ್ ಅವರು ಪ್ರಸ್ತುತ ಝೀ ಕನ್ನಡ ವಾಹಿನಿಯ ಶ್ರಾವಣಿ ಸುಬ್ರಹ್ಮಣ್ಯ ಧಾರವಾಹಿಯಲ್ಲಿ ಸುಬ್ಬುವಿನ ತಂಗಿ ವರಲಕ್ಷ್ಮೀ ಪಾತ್ರದ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ. ಇದರಿಂದಾಗಿ ಅಭಿಮಾನಿಗಳ ಸಂಖ್ಯೆ ಕೂಡ ಹೆಚ್ಚಳವಾಗಿದೆ.
ಪ್ರಜ್ಞಾ ಮೇಕಪ್ ಮತ್ತು ಹೇರ್ ಅಕಾಡೆಮಿ ಸ್ಥಾಪನೆ
ಇತ್ತೀಚೆಗೆ ಉದ್ಯಮ ಕ್ಷೇತ್ರಕ್ಕೂ ಕಾಲಿರಿಸಿರುವ ಪ್ರಜ್ಞಾ ಭಟ್ ಅವರು ತಮ್ಮ ಹುಟ್ಟೂರಾದ ಶೃಂಗೇರಿಯಲ್ಲಿ ಪ್ರಜ್ಞಾ ಮೇಕಪ್ ಮತ್ತು ಹೇರ್ ಅಕಾಡೆಮಿ ಸ್ಥಾಪಿಸಿ ಸ್ಥಳೀಯರಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿ ಕೊಡುತ್ತಿದ್ದಾರೆ. ಉದ್ಯಮವನ್ನು ಪ್ರಾರಂಭಿಸಲು ತಂದೆ ತಾಯಿಯೇ ಪ್ರೇರಣೆ ಎನ್ನುವ ಪ್ರಜ್ಞಾ ಭಟ್ ಅವರು “ಜಯಪುರದಲ್ಲಿ ನಮ್ಮದು ಪ್ರಜ್ಞಾ ಹೋಟೆಲ್ ಇದ್ದು, ಅಪ್ಪ ಅಮ್ಮ ಅದನ್ನು ನಡೆಸಿಕೊಂಡು ಬರುತ್ತಿರುವುದನ್ನು ಕಂಡು ಉದ್ಯಮವನ್ನು ಕೈಗೊಳ್ಳಲು ಧೈರ್ಯ ನೀಡಿದೆ” ಎಂದು ಹೇಳಿಕೊಂಡಿದ್ದಾರೆ.
ಜೊತೆಗೆ ಪತಿ ನಾಗಶ್ರಿತ್ ಅವರು ನೀಡಿದ ಆರ್ಥಿಕ ಮತ್ತು ಮಾನಸಿಕ ಸಹಕಾರ ಅವರಿಗೆ ಮತ್ತಷ್ಟು ಉತ್ತೇಜನವನ್ನು ನೀಡಿತು. ಸ್ಥಳೀಯರು ಬೆಂಗಳೂರಿನಂತಹ ಮಹಾನಗರಗಳಿಗೆ ಹೋಗಿ ದುಪ್ಪಟ್ಟು ಬೆಲೆತೆತ್ತು ಇದಕ್ಕೆ ಸಂಬಂಧಿಸಿದಂತೆ ತರಬೇತಿಯನ್ನು ಪಡೆಯುತ್ತಾರೆ. ಬೆಂಗಳೂರಿನಲ್ಲಿ ಹೆಚ್ಚಿನ ಅಕಾಡೆಮಿಗಳಿರುವುದರಿಂದ ಕಲಿತವರು ಕೂಡ ಸುಮ್ಮನೆ ಕೂರಬೇಕಾಗಿದೆ. ಬದಲಿಗೆ ಕಡಿಮೆ ಶುಲ್ಕದಲ್ಲಿ ಸುಲಭವಾಗಿ ಕಲಿತು ಅವಶ್ಯಕತೆ ಇರುವ ಸ್ಥಳದಲ್ಲೇ ತಮ್ಮದೇ ಆದ ಉದ್ಯಮವನ್ನು ಕೈಗೊಳ್ಳುವಂತಾಗಲಿ ಎನ್ನುವುದು ಉದ್ಯಮದ ಹಿಂದಿನ ಉದ್ದೇಶವಾಗಿದೆ. ಪ್ರಜ್ಞಾ ಭಟ್ ಕೇವಲ ಧಾರಾವಾಹಿಗಳಲ್ಲಿ ಮಾತ್ರವಲ್ಲದೆ ಒಲವೇ ಮಂದಾರ-2 ಚಿತ್ರದಲ್ಲಿ ನಾಯಕಿಯಾಗಿ, ಮನದರಸಿ ಎನ್ನುವ ಚಿತ್ರದಲ್ಲೂ ಕೂಡ ಅಭಿನಯಿಸಿದ್ದಾರೆ.








