ಈ ರೈಲು ನಿಲ್ದಾಣವೇ ವಸ್ತು ಸಂಗ್ರಹಾಲಯ!
ರಿಪ್ಪನ್ ಪೇಟೆ ಬಳಿ ಇದೆ ಮಾಲ್ಗುಡಿ ಡೇಸ್ ರೈಲ್ವೆ ನಿಲ್ದಾಣ
ಶಂಕರ್ ನಾಗ್ ಅವರು ನಿರ್ದೇಶಿಸಿದ ದೈನಂದಿನ ಧಾರಾವಾಹಿ ಸೆಟ್ ರೀತಿ ನಿರ್ಮಾಣ
ನೀವೊಮ್ಮೆ ನೋಡಲೇಬೇಕು ಈ ರೈಲು ನಿಲ್ದಾಣ
‘ಮಾಲ್ಗುಡಿ ಡೇಸ್’ ಹೆಸರು ಕೇಳದ ಕನ್ನಡಿಗರು ಇಲ್ಲ. ಆರ್.ಕೆ.ನಾರಾಯಣ್ ಅವರ ‘ಮಾಲ್ಗುಡಿ ದಿನಗಳು’ ಎಂಬ ಪುಸ್ತಕವನ್ನುಆಧರಿಸಿ ಶಂಕರ್ ನಾಗ್ ಅವರು ನಿರ್ದೇಶಿಸಿದ ದೈನಂದಿನ ಧಾರಾವಾಹಿ 1980ರಲ್ಲಿ ಕಿರುತೆರೆಯಲ್ಲಿ ಪ್ರಸಾರಗೊಂಡಿತ್ತು. ಈ ಧಾರಾವಾಹಿಯ ನೆನಪಿಗಾಗಿ ಇದೇ ಹೆಸರಿನ ವಸ್ತು ಸಂಗ್ರಹಾಲಯವು ಗ್ರಾಮ ಒಂದರಲ್ಲಿ ರೂಪಿತವಾಗಿದೆ. ಶಿವಮೊಗ್ಗ ಜಿಲ್ಲೆಯ ರಿಪ್ಪನ್ ಪೇಟೆ ಸಮೀಪದ ಅರಸಾಳು ಎಂಬ ಗ್ರಾಮದಲ್ಲಿ ಇದು ಸಿದ್ಧಗೊಂಡಿದೆ. ಧಾರಾವಾಹಿಯು ಶಿವಮೊಗ್ಗ ಜಿಲ್ಲೆಯ ಆಗುಂಬೆ, ತೀರ್ಥಹಳ್ಳಿ, ರಿಪ್ಪನ್ ಪೇಟೆ ಮತ್ತು ಅರಸಾಳುಗಳಲ್ಲಿ ಚಿತ್ರೀಕರಣಗೊಂಡ ಹಿನ್ನೆಲೆಯೇ ಈ ಕಾಲ್ಪನಿಕ ಸಂಗ್ರಹಾಲಯ ಮೂಡಿಬರಲು ಕಾರಣವಾಗಿದೆ.
ಅರಸಾಳು ರೈಲು ನಿಲ್ದಾಣವು ಮಾಲ್ಗುಡಿ ಡೇಸ್ ಧಾರಾವಾಹಿಯ ಹಲವಾರು ಕಂತುಗಳಲ್ಲಿ ಪ್ರೇಕ್ಷಕರಿಗೆ ಕಂಡುಬಂದ ಪರಿಣಾಮವಾಗಿ, ಆ ಧಾರಾವಾಹಿ,ಲೇಖಕರು ಮತ್ತು ನಿರ್ದೇಶಕರಿಗೆ ಗೌರವ ಸಲ್ಲಿಸುವ ಸಲುವಾಗಿ 2019-20ರಲ್ಲಿ ಮೈಸೂರು ರೈಲ್ವೇ ವಿಭಾಗವು ಆ ಧಾರಾವಾಹಿಯನ್ನು ನೆನಪಿಸುವ ರೀತಿಯಲ್ಲಿ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಲು ನಿರ್ಧರಿಸಿತು. ಈ ಒಂದು ನಿರ್ಧಾರದಿಂದ ಶಿಥಿಲಗೊಂಡಿದ್ದ ರೈಲ್ವೇ ನಿಲ್ದಾಣವು ಕೊಂಚ ಅಭಿವೃದ್ಧಿ ಕಂಡಿತು. ಬೆಂಗಳೂರಿನಿಂದ ಬರುವ ಮತ್ತು ಹೊಸನಗರ, ರಿಪ್ಪನ್ ಪೇಟೆ ಮೂಲಕ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸುವ ಜನರಿಗೆ ಆನಂದಪುರ, ಸಾಗರ, ಶಿವಮೊಗ್ಗಕ್ಕೆ ತೆರಳಿ ರೈಲನ್ನು ಹತ್ತಬೇಕಾಗುತ್ತಿತ್ತು. ಅರಸಾಳನ್ನು ಪರಿಗಣಿಸಿದರೆ ಈ ಮೇಲಿನ ರೈಲ್ವೆ ನಿಲ್ದಾಣಗಳು ಸ್ವಲ್ಪ ದೂರವೆಂದೇ ಹೇಳಬಹುದು. ಇಂದು ರೈಲ್ವೆ ವಿಭಾಗವು ಅರಸಾಳಿನಲ್ಲೂ ರೈಲು ನಿಲ್ಲಿಸಲು ಅವಕಾಶ ಮಾಡಿರುವುದರಿಂದ ಮತ್ತು ರೈಲು ಟಿಕೇಟನ್ನು ಖರೀದಿಸಲು ಅರಸಾಳನ್ನು ಒಂದು ಕೇಂದ್ರವನ್ನಾಗಿ ಮಾಡಿರುವುದರಿಂದ ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲವಾಗಿದೆ.
ಏನೇನಿದೆ ಇಲ್ಲಿ?
ಮಾಲ್ಗುಡಿ ಡೇಸ್ ವಸ್ತು ಸಂಗ್ರಹಾಲಯವನ್ನು ಪ್ರವೇಶಿಸಿದಾಗ ಮೊದಲಿಗೆ ಸಿಗುವುದು ರೈಲು ಬೋಗಿ ಮಾದರಿಯ ‘ಮಾಲ್ಗುಡಿ ಚಾಯ್’ ಎಂಬ ಫಲಕ ಹೊಂದಿರುವ ಕೆಫೆ. ಇದು ಗ್ರಾಮೀಣ ಭಾಗದಲ್ಲಿನ ಕೆಫೆ ಯಾವ ರೀತಿ ಇರುತ್ತದೆ ಎನ್ನುವುದನ್ನು ಸೂಚಿಸುತ್ತದೆ. ವಸ್ತುಸಂಗ್ರಹಾಲಯ ಪ್ರಧಾನ ಪಾತ್ರ ವಹಿಸಿದ ಬಾಲ ಕಲಾವಿದರ ಪ್ರತಿಮೆಯೊಂದಿಗೆ ಅದಕ್ಕೆ ಸಂಬಂಧಿಸಿದ ಪಾತ್ರೆಗಳು, ಕಲಾಕೃತಿಗಳು, ಛಾಯಾಚಿತ್ರಗಳು ಮತ್ತು ಗೋಡೆಗಳ ಮೇಲೆ ಹಸ್ತಪ್ರತಿಗಳಂತಹ ವಿವಿಧ ವಸ್ತುಗಳನ್ನು ಒಳಗೊಂಡಿದೆ. ಜೊತೆಗೆ ಮಾಲ್ಗುಡಿ ಡೇಸ್ ಧಾರಾವಾಹಿಯ ಹಿನ್ನೆಲೆ ಸಂಗೀತ ಕೇಳಿಬರುತ್ತದೆ.
ನೋಡಲು ಬರುವುದು ಹೇಗೆ?
ಬೆಂಗಳೂರಿನಿಂದ ಬಸ್ಸಿನ ಮೂಲಕ ಶಿವಮೊಗ್ಗ, ರಿಪ್ಪನ್ ಪೇಟೆ, ಹೊಸನಗರ ಮಾರ್ಗವಾಗಿ ಬರುವವರಿಗೆ ಅರಸಾಳಿನ ಮುಖ್ಯ ರಸ್ತೆಯಲ್ಲೇ ಇದು ಕಾಣಸಿಗುತ್ತದೆ. ಅರಸಾಳು ಶಿವಮೊಗ್ಗದಿಂದ ಮೂವತ್ತ ನಾಲ್ಕು ಕಿಮೀ ದೂರದಲ್ಲಿದೆ. ರೈಲು ಮಾರ್ಗದ ಮೂಲಕ ಬರುವವರು ನೇರವಾಗಿ ಅರಸಾಳಿಗೆ ಟಿಕೇಟನ್ನು ಮಾಡಿಸಬೇಕಾಗುತ್ತದೆ. ತೀರ್ಥಹಳ್ಳಿ ಮೂಲಕ ಬರುವವರು ರಿಪ್ಪನ್ ಪೇಟೆಗೆ ಬಂದು ಶಿವಮೊಗ್ಗ ರಸ್ತೆಯಲ್ಲಿ ಕ್ರಮಿಸಿದರೆ, ಸಾಗರದ ಕಡೆಯಿಂದ ಬರುವವರು ಆಯನೂರು ಬಸ್ ನಿಲ್ದಾಣದಿಂದ ಬಲಕ್ಕೆ ತಿರುಗಿ ರಿಪ್ಪನ್ ಪೇಟೆ, ಹೊಸನಗರ ಮಾರ್ಗವನ್ನು ಹಿಡಿಯಬೇಕು. ವಸ್ತುಸಂಗ್ರಹಾಲಯವು ಬೆಳಿಗ್ಗೆ ಹತ್ತರಿಂದ, ಸಂಜೆ ಆರರ ವರೆಗೆ ತೆರೆದಿರುತ್ತದೆ. ಮಂಗಳವಾರದಂದು ಇರುವುದಿಲ್ಲ. ಐದು ವರ್ಷ ಮೇಲ್ಪಟ್ಟ ಪ್ರತಿವ್ಯಕ್ತಿಗೂ ಐದು ರೂಪಾಯಿ ಪ್ರವೇಶ ಶುಲ್ಕವಿರುತ್ತದೆ. ಟಿಕೇಟನ್ನು ಕಾಯ್ದಿರಿಸುವ ಅಗತ್ಯವಿಲ್ಲ. ಸ್ಥಳಕ್ಕೆ ಭೇಟಿ ನೀಡಿದಾಗಲೇ ಪಡೆಯಬಹುದಾಗಿದೆ.
