ಮೇ 25ರಂದು ಮುಂಗಾರಿನ ಆಗಮನ..!
– ಈ ವರ್ಷ ಭಾರೀ ಮಳೆ ನಿರೀಕ್ಷೆ: ವರದಿ ಏನು..?
– ಮೇ ಮೊದಲ ವಾರದಲ್ಲೇ ಮಳೆ ಸಾಧ್ಯತೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕೇರಳ: ಕಳೆದ ವರ್ಷದಂತೆ ಈ ಬಾರಿಯೂ ಮುಂಗಾರು ಮಳೆ ಅವಧಿಗೂ ಮೊದಲೇ ಪ್ರಾರಂಭಗೊಳ್ಳುವ ಸಾಧ್ಯತೆ ಇದೆ. ಸಾಮಾನ್ಯವಾಗಿ ನೈರುತ್ಯ ಮುಂಗಾರು ಮಾರುತಗಳು ಕೇರಳ ಕರಾವಳಿಗೆ ಜೂನ್ ಒಂದಕ್ಕೆ ಆಗಮಿಸುವುದು ವಾಡಿಕೆ. ಆದರೆ, ಈ ಬಾರಿ ಮೇ ತಿಂಗಳ ಅಂತ್ಯದಲ್ಲಿ ಅಂದರೆ 25ನೇ ತಾರೀಖಿನ ಸುಮಾರಿಗೆ ಇದರ ಆಗಮನವಾಗುವ ನಿರೀಕ್ಷೆ ಇದೆ ಎಂದು ವಿದೇಶಿ ಹವಾಮಾನ ಮುನ್ಸೂಚನಾ ಸಂಸ್ಥೆಗಳು ವರದಿ ಮಾಡಿವೆ.
ಪ್ರಬಲ ಮುಂಗಾರು ಮಾರುತಗಳು ಅರಬ್ಬಿ ಸಮುದ್ರದ ದಕ್ಷಿಣ ಭಾಗದಲ್ಲಿ ರೂಪುಗೊಳ್ಳುವುದರಿಂದ ಕೇರಳ ರಾಜ್ಯ ಮತ್ತು ತಮಿಳುನಾಡಿನ ದಕ್ಷಿಣ ಭಾಗಗಳಿಗೆ ಹೆಚ್ಚಿನ ತೇವಾಂಶ ಉಂಟಾಗಲಿದೆ ಎನ್ನುವ ಮಾಹಿತಿ ಲಭಿಸಿದೆ. ಇದರ ಪರಿಣಾಮವಾಗಿ ಮುಂಗಾರಿನ ಕೇರಳ ಪ್ರವೇಶ ಮೇ 25ರ ವೇಳೆಗಾಗಲೇ ನಡೆಯುವ ಅವಕಾಶವಿದೆ ಎಂದು ಇಸಿಎಂಡಬ್ಲ್ಯೂಎಫ್ ಹವಾಮಾನ ಮುನ್ಸೂಚನೆ ವರದಿಯನ್ನು ಪ್ರಕಟಿಸಿದೆ ಎನ್ನುವ ಸಂಗತಿ ತಿಳಿದುಬಂದಿದೆ. ಎಲ್ ನಿನೊ ಅಥವಾ ಸೂಪರ್ ಎಲ್ ನಿನೊ ಪ್ರಭಾವದಿಂದಾಗಿ ಈ ವರ್ಷ ಮುಂಗಾರಿನ ಅವಧಿಯಲ್ಲಿ ಶೇಕಡ 92ರಷ್ಟು ಸರಾಸರಿ ಮಳೆಯನ್ನು ನಿರೀಕ್ಷಿಸಬಹುದಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಸಹ ಅಭಿಪ್ರಾಯ ವ್ಯಕ್ತಪಡಿಸಿದೆ.
ಏಪ್ರಿಲ್ 13ರ ಮುನ್ನೋಟದ ಪ್ರಕಾರ ಮೇ ತಿಂಗಳಿನಿಂದ ಜುಲೈ ತಿಂಗಳವರೆಗೆ ಎಲ್ ನಿನೊ ಶೇಕಡ 61ರಷ್ಟು ಎದುರಾಗುವ ಸಾಧ್ಯತೆಗಳಿವೆ. ಕಳೆದ ವರ್ಷ ಅಂದರೆ 2025ರಲ್ಲಿ ಕೂಡ ಇದೇ ತೆರನಾಗಿ ಮುಂಗಾರು ಮಾರುತಗಳ ಆಗಮನದ ಕುರಿತು ಮುನ್ಸೂಚನಾ ವರದಿ ಪ್ರಕಟವಾಗಿತ್ತು. ಆದರೆ, ಹೇಳಿದ್ದಕ್ಕಿಂತ ಇನ್ನೂ ಮುಂಚಿತವಾಗಿಯೇ ಆಗಮನವಾಯಿತು. ಈ ವರ್ಷವೂ ಕೂಡ ಅದೇ ರೀತಿಯಾಗುವ ಸಾಧ್ಯತೆ ಇದೆ ಎಂದು ಮೌಸಮ್ ತಕ್ ನ ಸಂಸ್ಥಾಪಕರು ಹಾಗೂ ಹೆಸರಾಂತ ಹವಾಮಾನ ತಜ್ಞರಾದ ದೇವೇಂದ್ರ ತ್ರಿಪಾಠಿಯವರು ತಿಳಿಸಿದ್ದಾರೆ.
