ಮಲೆನಾಡು ಟಾಪ್ 3 ನ್ಯೂಸ್
ಕೆರೆಕಟ್ಟೆಯಲ್ಲಿ ಆನೆ ದಾಳಿಗೆ ಇಬ್ಬರ ಬಲಿ: ಆಕ್ರೋಶದ ಕಿಚ್ಚು!
– ಸ್ಥಳಕ್ಕೆ ಜೀವರಾಜ್ ಸೇರಿ ಅನೇಕ ನಾಯಕರ ಆಗಮನ
– ಭಾರೀ ಹೋರಾಟಕ್ಕೆ ಸಿದ್ಧತೆ: ಇಬ್ಬರ ಸಾವಿಗೆ ಯಾರು ಹೊಣೆ?
– ಕೋಣಂದೂರು ಮೂಲದ ಪೂಜಾ ಆತ್ಮಹತ್ಯೆ!
* ಆಸ್ಪತ್ರೆಯಲ್ಲೇ ಪತ್ನಿ ಶವ ಬಿಟ್ಟು ಪರಾರಿಯಾದ ಪತಿ
– ಮಳೆ ಮಳೆ: ಅಡಿಕೆ ಬೆಳೆಗಾರರ ಬದುಕು ಕಷ್ಟ ಕಷ್ಟ!
NAMMUR EXPRESS NEWS
ಶೃಂಗೇರಿ: ಶೃಂಗೇರಿಯ ಕೆರೆಕಟ್ಟೆಯಲ್ಲಿ ಆನೆ ದಾಳಿಯಿಂದ ಇಬ್ಬರ ಸಾವು ಇದೀಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಗ್ರಾಮಸ್ಥರಿಂದ ಅಧಿಕಾರಿಗಳ ವಿರುದ್ಧ ತೀವ್ರ ಪ್ರತಿಭಟನೆ ನಡೆಯುತ್ತಿದೆ.
ಶೃಂಗೇರಿ ತಾಲ್ಲೂಕಿನ ಕೆರೆಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆನೆ ದಾಳಿಗೆ ಇಬ್ಬರು ಗ್ರಾಮಸ್ಥರು ಜೀವ ತೆತ್ತಿದ್ದಾರೆ. ಕೊಟ್ಟಿಗೆಗೆ ಸೊಪ್ಪು ತರಲು ಹೋಗಿದ್ದ ಇಬ್ಬರು ವ್ಯಕ್ತಿಗಳ ಮೇಲೆ ಏಕಾಏಕಿ ಕಾಡಾನೆಯೊಂದು ದಾಳಿ ನಡೆಸಿ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ
ತಾಲೂಕಿನ ಕೆರೆಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಡುಬಾ ಎಲ್ಲಾರ ಸಮೀಪ ಈ ಘಟನೆ ನಡೆದಿದೆ. ಮೃತರನ್ನು ಉಮೇಶ್ ಮತ್ತು ಹರೀಶ್ ಎಂದು ಗುರುತಿಸಲಾಗಿದೆ.
ಹಸುವಿನ ಕೊಟ್ಟಿಗೆಗೆ ಸೊಪ್ಪು ತರುವುದಕ್ಕಾಗಿ ಸಮೀಪದ ಅರಣ್ಯ ಪ್ರದೇಶಕ್ಕೆ ಉಮೇಶ್ ಮತ್ತು ಹರೀಶ್ ತೆರಳಿದ್ದರು. ಆನೆ ಇರುವಿಕೆಯ ಅರಿವೇ ಇರದ ಇಬ್ಬರ ಮೇಲೆ ಎದುರಾದ ಕಾಡಾನೆ, ತೀವ್ರವಾಗಿ ದಾಳಿ ನಡೆಸಿದ ಪರಿಣಾಮ ಇಬ್ಬರೂ ಸಾವನ್ನಪ್ಪಿದ್ದಾರೆ.
ಘಟನೆಯಿಂದಾಗಿ ಸ್ಥಳೀಯರಲ್ಲಿ ತೀವ್ರ ಆಕ್ರೋಶ ಭುಗಿಲೆದ್ದಿದ್ದು, ಸ್ಥಳೀಯರು ಮತ್ತು ರೈತ ಸಮಿತಿಗಳು ಪ್ರತಿಭಟನೆಗೆ ಕರೆ ನೀಡಿವೆ. ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರರಿಗೆ ಮತ್ತು ಅರಣ್ಯ ಅಧಿಕಾರಿಗಳಿಗೆ ಗ್ರಾಮಸ್ಥರು ಫೇರಾವ್ ಹಾಕಿದ್ದಾರೆ. ಈ ದುರಂತಕ್ಕೆ ಅಧಿಕಾರಿಗಳೇ ಕಾರಣ ಎಂದು ಗ್ರಾಮಸ್ಥರು ಪ್ರತಿಭಟನೆಗೆ ಮುಂದಾಗಿದ್ದಾರೆ.
ಈ ದುರಂತದಿಂದಾಗಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಕೋಣಂದೂರು ಮೂಲದ ಪೂಜಾ ಆತ್ಮಹತ್ಯೆ: ಆಕ್ರೋಶ
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಸಮೀಪದ ಶಂಕರಳ್ಳಿ ಗ್ರಾಮದಲ್ಲಿ ಅಕ್ಟೋಬರ್ 30 ರಂದು ಈಶ್ವರಪ್ಪ ಅವರ ಪುತ್ರಿ ಪೂಜಾ ಕೌಟುಂಬಿಕ ಕಲಹದಿಂದ ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದುಃಖದ ಘಟನೆ ನಡೆದಿದೆ.
ಪತಿಯ ಕುಟುಂಬದವರು ಆಸ್ಪತ್ರೆಯಲ್ಲಿಯೇ ಶವ ಬಿಟ್ಟು ಪರಾರಿಯಾಗಿದ್ದಾರೆ. ಮೂರು ವರ್ಷಗಳ ಹಿಂದೆ ಎನ್.ಆರ್.ಪುರ ತಾಲೂಕಿನ ಮಾವಿನಕೆರೆ ಶೆಟ್ಟಿಕೊಪ್ಪದ ಶರತ್ ಎಂಬುವವನೊಂದಿಗೆ ಪೂಜಾಳ ವಿವಾಹ ನೆರವೇರಿತ್ತು. ಆರಂಭದಲ್ಲಿ ನೆಮ್ಮದಿಯ ಜೀವನ ಕಂಡಿದ್ದರೂ, ಕಾಲ ಕಳೆದಂತೆ ಶರತ್ನ ತಂದೆ ತಾಯಿ ಮತ್ತು ಸಹೋದರಿ ಸೇರಿ ಪೂಜಾಳಿಗೆ ನಿರಂತರ ಕಿರುಕುಳ ನೀಡುತ್ತಿದ್ದರೆಂಬ ಆರೋಪಗಳು ಬೆಳಕಿಗೆ ಬಂದಿವೆ. ಪೂಜಾ ಅನೇಕ ಬಾರಿ ತವರು ಮನೆಗೆ ಬಂದು ತನ್ನ ದುಃಖ ಹಂಚಿಕೊಂಡಿದ್ದಳು. ತವರು ಮನೆಯವರು ಸಮಾಧಾನಪಡಿಸಿ ಮರಳಿ ಕಳುಹಿಸಿದರೂ, ಪತಿಯ ಮನೆಯ ಕಿರುಕುಳ ನಿಲ್ಲದೆ, ದಿನದಿಂದ ದಿನಕ್ಕೆ ಮಾನಸಿಕ ಒತ್ತಡ ಹೆಚ್ಚಾಗುತ್ತಿದ್ದಿತು. ಕೊನೆಗೆ ಗಂಡನ ಮನೆಯವರ ಹಿಂಸೆ ತಾಳಲಾಗದೇ ಪೂಜಾ ಕಳೆನಾಶಕ ಸೇವಿಸಿದ್ದಾಳೆ. ತಕ್ಷಣ ಶಿವಮೊಗ್ಗದ ನಾರಾಯಣ ಹೃದಯಾಲಯಕ್ಕೆ ದಾಖಲಿಸಲ್ಪಟ್ಟರೂ, ಚಿಕಿತ್ಸೆ ಫಲಕಾರಿಯಾಗದೆ ಆತ್ಮಹತ್ಯೆಗೆ ಶರಣಾದಳು. ಪತಿ ಶರತ್, ಆತನ ತಂದೆ ತಾಯಿ ಹಾಗೂ ಸಹೋದರಿ ಶವ ಮತ್ತು ಎರಡೂವರೆ ವರ್ಷದ ಪುಟ್ಟ ಮಗನನ್ನು ಆಸ್ಪತ್ರೆಯಲ್ಲೇ ಬಿಟ್ಟು ಪರಾರಿಯಾಗಿದ್ದಾರೆ ಎಂಬುದು ಈಗ ಬೆಳಕಿಗೆ ಬಂದಿದೆ.
ಬೆಳಿಗ್ಗೆಯಿಂದಲೇ ಮಳೆ: ಜನರಿಗೆ ತಲೆ ಬಿಸಿ!
ಮಲೆನಾಡು ಭಾಗದ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಭಾರೀ ಮಳೆ ಆಗುತ್ತಿದೆ. ಇದೀಗ ಮಳೆ ರೈತರ ಬದುಕನ್ನು ಬಲಿ ಪಡೆಯುತ್ತಿದೆ. ತೋಟದಲ್ಲೇ ಅಡಿಕೆ ಕೊಳೆಯುತ್ತಿದೆ. ಆದರೆ ಅಡಿಕೆ ಕೊಯ್ಲು ಮಾಡಲಾಗುತ್ತಿಲ್ಲ. ಇದರಿಂದ ರೈತರು ಕಂಗಾಲಾಗಿದ್ದಾರೆ.








