ಇಂದಿನ ಮಕ್ಕಳಿಗೆ, ಯುವ ಜನತೆಗೆ ಗುಕೇಶ್ ರಿಯಲ್ ಹೀರೋ!
ಅತೀ ಚಿಕ್ಕ ವಯಸ್ಸಲ್ಲೇ ಭಾರತದ ಕೀರ್ತಿ ಪತಾಕೆ ಹಾರಿಸಿದ ಗುಕೇಶ್ ವಿಶ್ವದ ಕಿರಿಯ ಚೆಸ್ ಚಾಂಪಿಯನ್..!
ಶಾಲೆಗೆ ಹೋಗುವ ಮಕ್ಕಳಿಗೆ ಇತರರು ನೀನು ದೊಡ್ಡವಳಾದ ಅಥವಾ ದೊಡ್ಡವನಾದ ಮೇಲೆ ಏನಾಗುತ್ತೀಯಾ ಎಂದು ಕೇಳುವುದು ಸಹಜ. ಎಲ್ಲರೂ ಟೀಚರ್, ಡಾಕ್ಟರ್, ರೈತ, ಇಂಜಿನಿಯರ್ ಹೀಗೆ ಇಚ್ಛಾನುಸಾರ ಮಕ್ಕಳು ತಮ್ಮ ಕನಸುಗಳನ್ನು ವ್ಯಕ್ತಪಡಿಸುತ್ತಾರೆ. ಆದರೆ ಇಲ್ಲೊಬ್ಬ ಹುಡುಗ ತನಗೆ ಎದುರಾದ ಇಂತಹದ್ದೇ ಪ್ರಶ್ನೆಗೆ ಮುಂದೆ ನಾನು ಜಗತ್ತಿನ ಅತಿ ಕಿರಿಯ ಚೆಸ್ ಚಾಂಪಿಯನ್ ಆಗುತ್ತೇನೆ ಎಂದು ಹೇಳಿಕೊಂಡ…! ಹೀಗೆ ಹೇಳಿದ ಆ ಏಳು ವರ್ಷದ ಬಾಲಕ ಬೇರೆ ಯಾರೂ ಅಲ್ಲ ಇತ್ತೀಚೆಗೆ ವಿಶ್ವ ಚಾಂಪಿಯನ್ ಪಟ್ಟಕ್ಕೆ ಏರಿದ ಚೆಸ್ ಮಾಸ್ಟರ್ ಗುಕೇಶ್.
ತಾನು ಹೇಳಿದ ಮಾತಿಗೆ ಗುಕೇಶ್ ಬದ್ಧನಾದ. ಈ ಮಾತಿಗಾಗಿ ಅವನು ಹಗಲು ರಾತ್ರಿ ಶ್ರಮಿಸಿದ. ಇದೆಲ್ಲದ್ದಕ್ಕಿಂತ ಹೆಚ್ಚಾಗಿ ಐದನೇ ತರಗತಿಗೇ ತನ್ನ ವಿದ್ಯಾಭ್ಯಾಸಕ್ಕೆ ತಿಲಾಂಜಲಿ ಇಟ್ಟ. ವಿದ್ಯಾಭ್ಯಾಸವೇ ಪ್ರಧಾನವಾದ ಇಂದಿನ ಕಾಲದಲ್ಲಿ ಇಂತಹ ಕಠಿಣ ತೀರ್ಮಾನವೊಂದನ್ನು ತೆಗೆದುಕೊಳ್ಳಲು ಎದೆಗಾರಿಕೆ ಬೇಕು.
ಗುಕೇಶ್ ಮೂಲತಃ ತೆಲುಗಿನವರು. ಆದರೆ ಹುಟ್ಟಿ ಬೆಳೆದದ್ದು ‘ಬ್ಯಾಂಕಿಂಗ್ ಕ್ಷೇತ್ರದ ತೊಟ್ಟಿಲು’ ಎಂದು ಕರೆಯಲ್ಪಡುವ ಚೆನ್ನೈನಲ್ಲಿ. 2015ರಲ್ಲಿ ಎಫ್ ಐ ಡಿ ಬಿರುದನ್ನು ತನ್ನದಾಗಿಸಿಕೊಂಡರು. ಬಳಿಕ ಅದೇ ವರ್ಷ ಒಂಭತ್ತು ವರ್ಷದೊಳಗಿನವರ ವಿಭಾಗದಲ್ಲಿ ಏಷಿಯನ್ ಸ್ಕೂಲ್ ಚೆಸ್ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡರು. 2017ರಲ್ಲಿ ಇಂಟರ್ ನ್ಯಾಷನಲ್ ಚೆಸ್ ಮಾಸ್ಟರ್ ಪಟ್ಟವನ್ನು ಗಿಟ್ಟಿಸಿಕೊಂಡರು. 2018ರಲ್ಲಿ ಏಷ್ಯನ್ ಯೂತ್ ಚೆಸ್ ಚಾಂಪಿಯನ್ ಶಿಪ್ ನಲ್ಲಿ ಹನ್ನೆರಡು ವರ್ಷದೊಳಗಿನವರ ವಿಭಾಗದಲ್ಲಿ ಐದು ಚಿನ್ನದ ಪದಕವನ್ನು ಪಡೆದುಕೊಂಡರು.
2019ರಲ್ಲಿ ತಮ್ಮ ಹನ್ನೆರಡನೇ ವಯಸ್ಸಿನಲ್ಲಿ ಗ್ರ್ಯಾಂಡ್ ಮಾಸ್ಟರ್ ಪಟ್ಟಕ್ಕೇರಿದರು. ಈ ಮೂಲಕ ಮೂರನೇ ಅತ್ಯಂತ ಕಿರಿಯ ಚೆಸ್ ಚಾಂಪಿಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇವರ ಗುರುಗಳಾದ ವಿಷ್ಣು ಪ್ರಸನ್ನ ಅವರು ಗುಕೇಶ್ ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ, ಆಟದ ಕೆಲವು ಟ್ರಿಕ್ಸ್ ಗಳನ್ನು ಹೇಳಿಕೊಟ್ಟರು. ಗುಕೇಶ್ ತಮ್ಮ ಗ್ರ್ಯಾಂಡ್ ಮಾಸ್ಟರ್ ಮಾನದಂಡಗಳನ್ನು ಪೂರೈಸಲು ಹದಿಮೂರು ದೇಶಗಳಿಗೆ ಪ್ರಯಾಣ ಬೆಳೆಸಿ, ಮೂವತ್ತು ಪಂದ್ಯಾವಳಿಗಳಲ್ಲಿ ಪಾಲ್ಗೊಂಡು, 276 ಆಟಗಳನ್ನು ಆಡಿ ಚದುರಂಗ ಕ್ಷೇತ್ರದಲ್ಲಿ ಮಿಂಚಿದರು.
ಭಾರತದ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವ
ಗುಕೇಶ್ ಅವರಿಗೆ ಪ್ರಶಸ್ತಿಗಳ ಸುರಿಮಳೆ, ಹಣದ ಹೊಳೆಯೇ ಹರಿದುಬರುತ್ತಿದೆ. ಇತ್ತಿಚೆಗೆ ಇವರಿಗೆ ಭಾರತ ಸರ್ಕಾರವು ಖೇಲ್ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಗುಕೇಶ್ ಅವರು ಪುಸ್ತಕ ಪ್ರಿಯರಾಗಿದ್ದು ಹೆಚ್ಚಾಗಿ ಕ್ರೀಡಾಪಟುಗಳಿಗೆ ಸಂಬAಧಿಸಿದ ಜೀವನಚರಿತ್ರೆ ಮತ್ತು ಆತ್ಮಕಥೆಗಳನ್ನು ಓದುತ್ತಾರೆ. ಇವರ ಮೆಚ್ಚಿನ ಪುಸ್ತಕಗಳು ಮಾರ್ಕೋಸ್ ಅವರ ‘ಅಂಡರ್ ದಿ ಸರ್ಪೇಸ್’ ಮತ್ತು ಅಫೆಕ್ ಅವರ ‘ಪ್ರಾಕ್ಟಿಕಲ್ ಚೆಸ್ ಬ್ಯೂಟಿ’ ಆಗಿದೆ.
ವಿಶ್ವನಾಥನ್ ಆನಂದ್ ಸ್ಪೂರ್ತಿ..!
ಗುಕೇಶ್ ಅವರಿಗೆ ಚೆಸ್ ಆಟದ ಗೀಳು ಬೆಳೆಸಿಕೊಳ್ಳಲು ಅವರ ಊರಿನವರೇ ಆದ ವಿಶ್ವನಾಥನ್ ಆನಂದ್ ಸ್ಪೂರ್ತಿಯಾದರು.ಆದರೆ 2023ರಲ್ಲಿ ಗುಕೇಶ್ ವಿಶ್ವನಾಥನ್ ಆನಂದ್ ಅವರ ದಾಖಲೆಯನ್ನೇ ಮುರಿದದ್ದು ಅಚ್ಚರಿಯ ಸಂಗತಿ. 2022ರಲ್ಲಿ ಒಲಂಪಿಯಾಡ್ ನ ಮೊದಲ ಬೋರ್ಡ್ ನ ವೈಯುಕ್ತಿಕ ಚಿನ್ನದ ಪದಕ ಪಡೆದರು. 2024ರ ಸೆಪ್ಟೆಂಬರ್ ನಲ್ಲಿ ಕ್ಯಾಂಡಿಡೇಟ್ಸ್ ಟೂರ್ನಿಯಲ್ಲಿ ಚಾಂಪಿಯನ್, ಡಿಸೆಂಬರ್ ನಲ್ಲಿ ಸಿಂಗಾಪುರ್ ನಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್ ನಲ್ಲಿ ಚೀನಾದ ಡಿಂಕ್ ಲಿಂಕನ್ ಅವರನ್ನು ಸೋಲಿಸುವ ಮೂಲಕ ವಿಶ್ವ ಚಾಂಪಿಯನ್ ಆದರು.
ಈ ಮುಖಾಂತರ ಗುಕೇಶ್ ವಿಶ್ವನಾಥನ್ ಆನಂದ್ ತಮ್ಮ ಮುವತ್ತೊಂದನೇ ವಯಸ್ಸಿನಲ್ಲಿ ಮಾಡಿದ ದಾಖಲೆಯನ್ನು ಮುರಿದು ಭಾರತೀಯ ಚೆಸ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದರು. ಅಷ್ಟೇ ಅಲ್ಲದೆ ಚೆಸ್ ನ ದಂತಕಥೆಗಳಾದ ಗ್ಯಾರಿ ಗ್ಯಾಸ್ಟೋರ್ 1985ರಲ್ಲಿ ತಮ್ಮ ಇಪ್ಪತ್ತೆರಡನೇ ವಯಸ್ಸಿನಲ್ಲಿ ಮಾಡಿದ ಹಾಗೂ ಮ್ಯಾಗ್ನೆಸ್ ಕಾರ್ಲ್ ಸನ್ ಅವರು 2003ರಲ್ಲಿ ತಮ್ಮ ಇಪ್ಪತ್ತೆರಡನೇ ವಯಸ್ಸಿನಲ್ಲಿ ಮಾಡಿದ ದಾಖಲೆಯನ್ನು ಸಹ ಗುಕೇಶ್ ಮುರಿದಿದ್ದಾರೆ.
ಇಂದಿನ ಮಕ್ಕಳು, ಯುವ ಜನತೆಗೆ ಗುಕೇಶ್ ಮಾದರಿ
ಇಂದಿನ ಮಕ್ಕಳು, ಯುವ ಜನತೆಗೆ ಗುಕೇಶ್ ಮಾದರಿಯಾಗಿದ್ದಾರೆ. ತನ್ನ ಚಿಕ್ಕ ವಯಸ್ಸಿಗೆ ದೇಶ ಮೆಚ್ಚುವ ಕೆಲಸ ಮಾಡಿದ್ದಾನೆ. ಇಂದಿನ ಮಕ್ಕಳು ಸೋಶಿಯಲ್ ಮೀಡಿಯಾ ನೋಡಿ ಕಾಲಹರಣ ಮಾಡುವ ಹೊತ್ತಿಗೆ ಈತ ಇಡೀ ವಿಶ್ವವನ್ನೇ ಗೆದ್ದಿದ್ದ. ನಿಜವಾಗಲೂ ದೇಶದ ಹೀರೋ ಗುಕೇಶ್.








