ತೀರ್ಥಹಳ್ಳಿ ಟಾಪ್ ನ್ಯೂಸ್
ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜೀನಾಮೆಗೆ ಪಟ್ಟು
* ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಮೇಲೆ ಲೋಕಾಯುಕ್ತ ದಾಳಿ
* ನಡು ರಸ್ತೆಯಲ್ಲೇ ಬಸ್ ಬ್ರೇಕ್ ಫೇಲ್: ವೇಗಕ್ಕೆ ಕಡಿವಾಣ ಯಾವಾಗ?
NAMMUR EXPRESS NEWS
ತೀರ್ಥಹಳ್ಳಿ: 2 ದಿನಗಳ ಹಿಂದೆ ದೇಶದಲ್ಲಿ ಉಗ್ರರ ದಾಳಿಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ಯುವ ಕಾಂಗ್ರೆಸ್ ಘಟಕವು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ತೀರ್ಥಹಳ್ಳಿ ತಾಲೂಕ ಆಫೀಸ್ ಮುಂಭಾಗದಲ್ಲಿ ನವೆಂಬರ್ 12ರಂದು ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್ ಮುಖಂಡರು, ದೇಶದ ರಾಜಧಾನಿ ನವದೆಹಲಿಯ ಕೆಂಪುಕೋಟೆಯ ಸಮೀಪ ನಡೆದ ಇತ್ತೀಚಿನ ಉಗ್ರ ದಾಳಿ ಕುರಿತು ಘಟಕದ ಸದಸ್ಯರು ಗಂಭೀರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯುವ ಕಾಂಗ್ರೆಸ್ನ ಘಟಕದಿಂದ ತಹಶೀಲ್ದಾರ್ ಮುಖಾಂತರ ರಾಷ್ಟ್ರಪತಿಗೆ ಸಲ್ಲಿಸಲಾದ ಮನವಿಯಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಾಗರೀಕರ ಸುರಕ್ಷತೆಗಾಗಿ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳದೆ ತಮ್ಮ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಲಾಗಿದೆ.
ಮನವಿಯಲ್ಲಿ 2019ರ ಪುಲ್ವಾಮಾ ದಾಳಿ, 2025ರ ಏಪ್ರಿಲ್ನಲ್ಲಿ ಕಾಶ್ಮೀರದ ಪಹಲ್ಯಾಮ್ನಲ್ಲಿ ನಡೆದ ಉಗ್ರ ದಾಳಿ ಮತ್ತು ಇತ್ತೀಚಿನ ದೆಹಲಿ ಘಟನೆಯನ್ನು ಉಲ್ಲೇಖಿಸಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಉಗ್ರ ಚಟುವಟಿಕೆಗಳು ಹೆಚ್ಚಾಗಿವೆ. ಚುನಾವಣಾ ಸಂದರ್ಭಗಳಲ್ಲಿ ಇಂತಹ ದಾಳಿಗಳು ನಡೆಯುತ್ತಿರುವುದು ಅನುಮಾನಾಸ್ಪದವಾಗಿದೆ ಎಂದು ತಿಳಿಸಲಾಗಿದೆ.ಘಟನೆಯ ಕುರಿತು ಪಾರದರ್ಶಕ ತನಿಖೆ ನಡೆಸಿ, ದೇಶದ ರಕ್ಷಣಾ ವ್ಯವಸ್ಥೆಯನ್ನು ಬಲಗೊಳಿಸಲು ಕೇಂದ್ರ ಸರ್ಕಾರಕ್ಕೆ ಕಟ್ಟುನಿಟ್ಟಿನ ಆದೇಶ ನೀಡಬೇಕೆಂದು ಯುವ ಕಾಂಗ್ರೆಸ್ ಒತ್ತಾಯಿಸಿದೆ.
ಯುವ ಕಾಂಗ್ರೆಸ್ ಅಧ್ಯಕ್ಷರಾದ ಪೂರ್ಣೇಶ್ ಕೆಳಕೆರೆ, ಯುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಆದರ್ಶ ಹುಂಚದಕಟ್ಟೆ, ಕಾಂಗ್ರೆಸ್ ಅಧ್ಯಕ್ಷರಾದ ಮಂಜುನಾಥ್ ಕೆಸ್ತೂರು, ಅಮರಾನಾಥ ಶೆಟ್ಟಿ, ಶ್ರೇಯಸ್, ಅಶ್ವಲ್, ಡಾ. ಸುಂದರೇಶ್, ಶ್ರೀಕಾಂತ್ ಬೆಟ್ಟಮಕ್ಕಿ, ಗೀತಾ ರಮೇಶ್, ರವಿಕುಮಾರ್, ಕುರುವಳ್ಳಿ ನಾಗರಾಜ್, ಆಸೀಫ್ ಸೀಬಿನಕೆರೆ, ವರಲಕ್ಷ್ಮಿ, ಮಂಜುಳಾ ನಾಗೇಂದ್ರ ಇತರರು ಇದ್ದರು.
ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಮೇಲೆ ಲೋಕಾಯುಕ್ತ ದಾಳಿ
ತೀರ್ಥಹಳ್ಳಿ : ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಮೇಲೆ ಲೋಕಾಯುಕ್ತ ಎಸ್ಪಿ ದಾಳಿ ನಡೆಸಿದ್ದಾರೆ. ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಜೊತೆ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ. ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಮೇಲೆ ಬುಧವಾರ ಲೋಕಾಯುಕ್ತ ದಾಳಿಯಾಗಿದೆ. ಬೆಳಿಗ್ಗೆಯಿಂದ ಪಟ್ಟಣ ಪಂಚಾಯಿತಿಯ ಲೆಕ್ಕಪರಿಶೋಧನೆ, ಇ-ಸ್ವತ್ತು ವಿಭಾಗ ಸೇರಿದಂತೆ ಹಲವು ವಿಭಾಗಗಳಲ್ಲಿ ಶೋಧ ಕಾರ್ಯ ನಡೆದಿದೆ.
ನಡು ರಸ್ತೆಯಲ್ಲೇ ಬಸ್ ಬ್ರೇಕ್ ಫೇಲ್: ವೇಗಕ್ಕೆ ಕಡಿವಾಣ ಯಾವಾಗ?ತೀರ್ಥಹಳ್ಳಿ -ಸಾಗರಕ್ಕೆ
ತೆರಳುತ್ತಿದ್ದ ಖಾಸಗಿ ಬಸ್ ಕೊಪ್ಪ ಸರ್ಕಸ್ ಸಂಗೀತಾ ಮೊಬೈಲ್ಸ್ ಎದುರು ಬ್ರೇಕ್ ಫೇಲ್ ಆದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಬ್ಯಾರಿಕೆಡ್ ಗೆ ಡಿಕ್ಕಿ ಹೊಡೆದು ಪಕ್ಕದಲ್ಲಿ ನಿಲ್ಲಿಸಿದ್ದ ಎರಡು ಬೈಕ್ ಗಳು ಜಖಂಗೊಂಡ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿತ್ತು. ಘಟನೆಯಲ್ಲಿ ಅದೃಷ್ಟವಶಾತ್ ಯಾರಿಗೂ ಏನೂ ಆಗಿಲ್ಲ. ಆದರೆ ಪಟ್ಟಣದಲ್ಲಿ ಕೆಲವು ಖಾಸಗಿ ಬಸ್ ಹಾಗೂ ವಾಹನಗಳ ಮಿತಿ ಮೀರಿದ ವೇಗ ಮುಂದೆ ದೊಡ್ಡ ಅನಾಹುತಕ್ಕೆ ಕಾರಣ ಆಗಬಹುದು. ಪೋಲಿಸ್ ಇಲಾಖೆ ಪಟ್ಟಣದ ಒಳಗೆ ವೇಗ ಮಿತಿ ಹಾಕಬೇಕು ಎಂಬ ಒತ್ತಾಯ ಜನರಿಂದ ಕೇಳಿ ಬಂದಿದೆ








