ಬೆಂಗಳೂರು: ರಾಜ್ಯ ಸರ್ಕಾರವು ಸರ್ಕಾರಿ ಶಾಲಾ-ಕಾಲೇಜು ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಿಹಿ ಸುದ್ಧಿಯೊಂದನ್ನು ನೀಡಿದೆ. ವೃತ್ತಿಪರ ಕೋರ್ಸ್ ಗಳ ಪ್ರವೇಶಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯು ಮಹತ್ವದ ಆದೇಶವನ್ನು ಹೊರಡಿಸಿದ್ದು, ಇದರಲ್ಲಿ ಗ್ರಾಮೀಣ ಭಾಗದ ಹಾಗೂ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಶೇಕಡ 7.5ರಷ್ಟು ವಿಶೇಷ ಸಮತಲ ಮೀಸಲಾತಿಯನ್ನು ಕಲ್ಪಿಸುವಂತೆ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ಹಿಂದೆ ಸರ್ಕಾರವು ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಸರ್ಕಾರಿ ಸೀಟುಗಳ ಪ್ರವೇಶಕ್ಕಾಗಿ ಅಭ್ಯರ್ಥಿಗಳ ಆಯ್ಕೆ ನಿಯಮಗಳು-2026ರ ಅನ್ವಯ ರೂಪಿಸಿ, 17 ಸೆಪ್ಟೆಂಬರ್ 2026ರ ಗುರುವಾರದಂದು ಕರಡು ಅಧಿಸೂಚನೆ ಹೊರಡಿಸಿ, ಇದಕ್ಕೆ ಸಾರ್ವಜನಿಕರಿಂದ ಆಕ್ಷೇಪಣೆ ಮತ್ತು ಸಲಹೆಗಳಿಗೆ ಆಹ್ವಾನವನ್ನು ನೀಡಲಾಗಿತ್ತು. ಇದೀಗ ಸಲ್ಲಿಕೆಯಾಗಿರುವಂತಹ ಆಕ್ಷೇಪಣೆ ಮತ್ತು ಸಲಹೆಗಳನ್ನು ರಾಜ್ಯ ಸರ್ಕಾರವು ಪರಿಶೀಲಿಸಿದ್ದು, 8 ಅಕ್ಟೋಬರ್ 2026ರ ಗುರುವಾರದಂದು ನಿಯಮ 9ರಲ್ಲಿ ತಿದ್ದುಪಡಿಯನ್ನು ತಂದು, ಅಂತಿಮ ಅಧಿಸೂಚನೆಯನ್ನು ಹೊರಡಿಸಿದೆ. ಇದೀಗ ರಾಜ್ಯಪತ್ರದಲ್ಲಿ ಅಧಿಕೃತವಾಗಿ ಅದು ಪ್ರಕಟಗೊಂಡಿದೆ. ಈ ಅಧಿಸೂಚನೆ ಪ್ರಕಾರ ಶಾಲಾ ಶಿಕ್ಷಣ ಮತ್ತು ಸುರಕ್ಷತಾ ಇಲಾಖೆಯ ವ್ಯಾಪ್ತಿಯಲ್ಲಿರುವಂತಹ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿಯವರೆಗೆ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿದ ಅರ್ಹ ಗ್ರಾಮೀಣ ಅಭ್ಯರ್ಥಿಗಳಿಗೆ ವೃತ್ತಿಪರ ಕೋರ್ಸ್ ಗಳ ಸೀಟಿನಲ್ಲಿ ಶೇಕಡ 7.5ರಷ್ಟು ಸೀಟುಗಳನ್ನು ಮೀಸಲಿರಿಸಬೇಕಿದೆ.
ರಾಜ್ಯ ಸರ್ಕಾರದ ಈ ನಿರ್ಣಯದಿಂದಾಗಿ ಗ್ರಾಮೀಣ ಭಾಗದ ಬಡ ಮತ್ತು ಮಧ್ಯಮ ವರ್ಗದ ಪ್ರತಿಭಾವಂತ ಸರ್ಕಾರಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್, ವೈದ್ಯಕೀಯ ಮುಂತಾದ ಉನ್ನತ ವೃತ್ತಿಪರ ಕೋರ್ಸ್ ಗಳನ್ನು ಪಡೆಯಲು ಒಳ್ಳೆಯ ಪ್ರೋತ್ಸಾಹ ಮತ್ತು ಸಮಾನ ಅವಕಾಶ ದೊರಕಿದಂತಾಗಿದೆ ಎನ್ನುವ ಅಭಿಪ್ರಾಯಗಳು ಸಾರ್ವಜನಿಕರಿಂದ ವ್ಯಕ್ತವಾಗಿದೆ.







