ಉಡುಪಿ: ಫೇಸ್ ಬುಕ್ ನಲ್ಲಿ ಲಾಟರಿ ಟಿಕೆಟ್ ಗೆ ಸಂಬಂಧಿಸಿದಂತೆ ಜಾಹೀರಾತನ್ನು ನೋಡಿ ಹಣದ ಆಸೆಗೆ ಒಳಗಾಗಿ ಮಹಿಳೆಯೊಬ್ಬರು ಲಕ್ಷಾಂತರ ರೂಪಾಯಿ ಕಳೆದುಕೊಂಡ ಘಟನೆ ನಡೆದಿದೆ. ಜಾಹೀರಾತಿನಿಂದ ಪ್ರಭಾವಿತರಾದ ಜುಲಿಯಾನ ಎನ್ನುವ ಮಹಿಳೆಯು ಲಾಟರಿ ಟಿಕೆಟ್ ಅನ್ನು ಆನ್ ಲೈನ್ ನಲ್ಲಿ ಲಿಂಕ್ ಅನ್ನು ಒತ್ತುವ ಮೂಲಕ ಖರೀದಿಸಿದ್ದಾರೆ. ಇದಾದ ಬಳಿಕ ಅಪರಿಚಿತ ವ್ಯಕ್ತಿಯೊಬ್ಬ ಜುಲಿಯಾನ ಅವರಿಗೆ ಕರೆ ಮಾಡಿ “ನಿಮಗೆ ಭಾರಿ ಮೊಟ್ಟದ ಲಾಟರಿ ಬಹುಮಾನ ಬಂದಿದೆ” ಎಂದು ನಂಬಿಸಿದ್ದಾನೆ. ಜೊತೆಗೆ ಈ ಬಹುಮಾನದ ಹಣವನ್ನು ಖಾತೆಗೆ ಹಾಕಿಸಿಕೊಳ್ಳಬೇಕೆಂದರೆ ಪ್ರೋಸೆಸಿಂಗ್ ಚಾರ್ಜ್, ಶಿಫ್ಟಿಂಗ್ ಚಾರ್ಜ್, ಫೊರೆಕ್ಸ್ ಚಾರ್ಜ್ ಮತ್ತು ಹ್ಯಾಂಡಲಿಂಗ್ ಶುಲ್ಕವನ್ನು ಪಾವತಿಸಬೇಕೆಂದು ತಿಳಿಸಿದ್ದಾನೆ. ಇದನ್ನು ನಿಜವೆಂದು ಭಾವಿಸಿದ ಜುಲಿಯಾನ ಅಪರಿಚಿತ ವ್ಯಕ್ತಿಯು ಸೂಚಿಸಿದ ವಿವಿಧ ಬ್ಯಾಂಕ ಖಾತೆಗಳಿಗೆ ಏಪ್ರಿಲ್ ನಿಂದ ಜುಲೈ ತಿಂಗಳವರೆಗೆ ಹಂತಹಂತವಾಗಿ ಸುಮಾರು 27.06.862 ರೂಪಾಯಿಗಳಷ್ಟು ಹಣವನ್ನು ವರ್ಗಾಯಿಸಿದ್ದಾರೆ. ಇಷ್ಟಾದರೂ ಯಾವುದೇ ಬಹುಮಾನ ಬಂದು ತಲುಪದಿರುವುದರಿಂದ ಜುಲಿಯಾನ ತಾನು ವಂಚನೆಗೆ ಒಳಗಾಗಿದ್ದೇನೆ ಎನ್ನುವುದನ್ನು ಅರಿತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
•ಪುತ್ತೂರು: ಅಕ್ರಮ ಜಾನುವಾರು ಸಾಗಾಟ; ಆರೋಪಿ ಬಂಧನ
ಪುತ್ತೂರು: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ, ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ಲು ಎನ್ನುವಲ್ಲಿ ನಡೆದಿದೆ. ಆನ್ಕಡ ಕಡೆಯಿಂದ ಪಡೀಲ್ ಕಡೆಗೆ ಜಾನುವಾರು ಸಾಗಾಟ ಮಾಡುತ್ತಿರುವ ಖಚಿತವಾದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪುತ್ತೂರು ಠಾಣೆಯ ಪಿಎಸ್ಐ ಸುರೇಶ್ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯನ್ನು ಕೈಗೊಂಡರು ಎನ್ನಲಾಗಿದೆ. ಪಿಕ್ಅಪ್ ವಾಹನವನ್ನು ತಡೆದು ಪೊಲೀಸರು ಪರಿಶೀಲನೆಯನ್ನು ನಡೆಸಿದಾಗ ಮೂರು ಜಾನುವಾರುಗಳನ್ನು ಹಿಂಸಾತ್ಮಕವಾಗಿ ಕಟ್ಟಿ ಹಾಕಿರುವುದು ಕಂಡುಬಂದಿದೆ. ವಾಹನ ಚಾಲಕನನ್ನು ವಿಚಾರಿಸಿದಾಗ ಶಾಂತಿಗೋಡು ಗ್ರಾಮದ ಅಶೋಕ್ ಎನ್ನುವವರಿಂದ ಜಾನುವಾರುಗಳನ್ನು ಖರೀದಿಸಿ ಯಾವುದೇ ಪರವಾನಿಗೆಯನ್ನು ಪಡೆದುಕೊಳ್ಳದೆ ವಧೆ ಮಾಡುವ ಉದ್ದೇಶದಿಂದ ತೆಗೆದುಕೊಂಡು ಹೋಗುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನುವ ಮಾಹಿತಿ ಲಭಿಸಿದೆ. ಈ ಸಂದರ್ಭದಲ್ಲಿ ಪೊಲೀಸರು ಮೂರು ಜಾನುವಾರುಗಳನ್ನು ರಕ್ಷಿಸಿದ್ದು, ಅಕ್ರಮ ಸಾಗಾಟಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
•ಬಂಟ್ವಾಳ: ಕ್ಯಾಂಟೀನ್ ನಲ್ಲಿ ವ್ಯಕ್ತಿ ಆತ್ಮಹತ್ಯೆ
ಬಂಟ್ವಾಳ: ತಮ್ಮ ಮಾಲೀಕತ್ವದ ಕ್ಯಾಂಟೀನ್ ನಲ್ಲೇ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮಲ್ ಕಟ್ಟೆ ಎನ್ನುವಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಅರ್ಬನಗುಡ್ಡೆ ನಿವಾಸಿ ನಾರಾಯಣ ಪೂಜಾರಿ ಎಂದು ಗುರುತಿಸಲಾಗಿದೆ. ಕ್ಯಾಂಟೀನ್ ಗೆ ಹೋಗಿ ಬರುವುದಾಗಿ ಮನೆಯಿಂದ ತೆರಳಿದ ನಾರಾಯಣ ಪೂಜಾರಿ ಅವರು, ಎಷ್ಟೇ ಹೊತ್ತಾದರೂ ಮನೆಗೆ ಹಿಂತಿರುಗಿ ಬಾರದಿದ್ದುದನ್ನು ಕಂಡು ಮನೆಯವರು ಆತಂಕಗೊಂಡು ಕ್ಯಾಂಟೀನ್ ನತ್ತ ಹೋಗಿ ನೋಡಿದಾಗ, ಕ್ಯಾಂಟೀನ್ ನಲ್ಲಿಯೇ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ.
•ಮಂಗಳೂರು: ಫುಟ್ ಬಾಲ್ ತೆಗೆಯಲು ಹೋಗಿ ಯುವಕ ಸಾವು
ಮಂಗಳೂರು: ಫುಟ್ ಬಾಲ್ ತೆಗೆಯಲು ಹೋಗಿ ನದಿಯ ನೀರಿಗೆ ಬಿದ್ದು ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಭಾನುವಾರದಂದು ಕಸಬಾ ಬೆಂಗ್ರೆ ಫೆರಿಪಾಯಿಂಟ್ ಬಳಿ ನಡೆದಿದೆ. ಮೃತ ದುರ್ದೈವಿಯನ್ನು ಮೊಹಮ್ಮದ್ ಸನಾವುಲ್ಲ ಎಂದು ಗುರುತಿಸಲಾಗಿದೆ. ಮಕ್ಕಳು ಫುಟ್ ಬಾಲ್ ಆಡುತ್ತಿದ್ದಾಗ ಚೆಂಡು ಆಕಸ್ಮಿಕವಾಗಿ ನದಿಯ ನೀರಿಗೆ ಬಿದ್ದಿದೆ. ಈ ಸಂದರ್ಭದಲ್ಲಿ ಸನಾವುಲ್ಲ ಮಕ್ಕಳಿಗೆ ಚೆಂಡನ್ನು ತೆಗೆಯಲು ನೆರವಾಗಲೆಂದು ಮುಂದಾಗಿದ್ದಾನೆ. ಆಗ ನದಿಯ ಬಳಿಯಲ್ಲಿದ್ದ ಕೆಸರಿನಲ್ಲಿ ಸನಾವುಲ್ಲನ ಕಾಲು ಹೂತು ಹೋಗಿದ್ದು, ತಕ್ಷಣ ಮೇಲಕ್ಕೆ ಬರಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ. ಬಳಿಕ ಸನಾವುಲ್ಲ ನದಿಯ ಆಳವಾದ ನೀರಿನಲ್ಲಿ ಮುಳುಗಿದ್ದಾನೆ. ಇದನ್ನು ಗಮನಿಸಿದ ಮಕ್ಕಳು ಸ್ಥಳೀಯರಿಗೆ ವಿಚಾರ ತಿಳಿಸಿದ್ದು, ಕೂಡಲೇ ಕೆಲ ಸ್ಥಳೀಯರು ನದಿಗೆ ಹಾರಿ ಸನಾವುಲ್ಲನನ್ನು ದಡಕ್ಕೆ ಕರೆತಂದು, ಪ್ರಥಮ ಚಿಕಿತ್ಸೆಯನ್ನು ನೀಡಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ ಆದರೆ ಅಷ್ಟರೊಳಗೆ ಸಾವನ್ನಪ್ಪಿದ್ದಾನೆ.







