ಬೆಂಗಳೂರು: ರೈತರಿಗೆ ಸಹಕಾರಿ ಸಂಘಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ ನೀಡಲಾಗುತ್ತಿರುವ ಸಾಲದ ಮಿತಿಯನ್ನು 5ಲಕ್ಷಕ್ಕೆ ಹೆಚ್ಚಿಸುವಂತೆ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ಸಂದೇಶವನ್ನು ನೀಡಿದ್ದು, ಬೆಂಗಳೂರಿನ ಸಹಕಾರ ಸಂಘಗಳ ನಿಬಂಧಕರ ಕಛೇರಿಯಿಂದ ಸುತ್ತೋಲೆಯನ್ನು ಸಹ ಹೊರಡಿಸಲಾಗಿದೆ. 2023-24ರಲ್ಲಿ ಶೂನ್ಯ ಬಡ್ಡಿ ದರದ ಬೆಳೆ ಸಾಲದ ಮಿತಿಯನ್ನು ಸಿದ್ಧರಾಮಯ್ಯ ಅವರ ನೇತೃತ್ವದ ಸರ್ಕಾರವು 3ರಿಂದ 5ಲಕ್ಷಕ್ಕೆ ಹೆಚ್ಚಿಸಿತ್ತು. ಆದರೆ ನಬಾರ್ಡ್ ಇದಕ್ಕೆ ಅಗತ್ಯವಾಗಿರುವಂತಹ ಮೊತ್ತವನ್ನು ಬಿಡುಗಡೆಗೊಳಿಸದ ಹಿನ್ನೆಲೆಯಲ್ಲಿ ಹಲವಾರು ರೈತರು ಈ ಉತ್ತಮ ಯೋಜನೆಯಿಂದ ವಂಚಿತರಾಗುವಂತಾಯಿತು. ಅಲ್ಲದೆ ರೈತರಿಗಾಗಿ ಕೆಲವು ಸಹಕಾರಿ ಸಂಘಗಳು ತಮ್ಮ ಸಂಘದ ಸ್ವಂತ ನಿಧಿಯಿಂದ ಸಾಲವನ್ನು ನೀಡುವ ಮೂಲಕ ಸಮಸ್ಯೆಗೆ ಸಿಲುಕಿಕೊಳ್ಳುವಂತಾಗಿತ್ತು. ನಬಾರ್ಡ್ ನಿಂದ ಹಣವು ಬಿಡುಗಡೆಗೊಳ್ಳದ ಕಾರಣದಿಂದ ಸಹಕಾರಿ ಸಂಘಗಳು ಸಾಲ ನೀಡಿದ ರೈತರಿಗೆ ಹಣದ ಮರುಪಾವತಿಯ ಸಂದರ್ಭದಲ್ಲಿ ಬಡ್ಡಿಯನ್ನು ಕಟ್ಟುವಂತೆ ತಿಳಿಸಿತ್ತು. ಆದರೆ ರೈತರು ಬಡ್ಡಿಯ ಹಣವನ್ನು ಪಾವತಿಸಲು ಹಿಂದೇಟು ಹಾಕಿದ್ದರು ಎನ್ನಲಾಗಿದೆ. ಈ ರೀತಿಯ ಸಮಸ್ಯೆಗಳು ಮತ್ತೊಮ್ಮೆ ತಲೆದೋರದಂತೆ ಮಾಡಲು ಸರ್ಕಾರವು ಸಹಕಾರಿ ಇಲಾಖೆಯಿಂದ ಸುತ್ತೋಲೆಯನ್ನು ಹೊರಡಿಸಿದ್ದು 2026-27ನೇ ಸಾಲಿನಲ್ಲಿ ರಾಜ್ಯದ ರೈತರಿಗಾಗಿ ಫ್ಯಾಕ್ಸ್ ಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ ನೀಡುವಂತಹ ಕೃಷಿ 5ಲಕ್ಷ ರೂಪಾಯಿವರೆಗಿನ ಕೃಷಿ ಸಾಲ ಹಾಗೂ ಪಶುಸಂಗೋಪನೆ ಮತ್ತು ಮೀನುಗಾರಿಕೆಗೆ ದುಡಿಯುವಂತಹ ಬಂಡವಾಳ ಸಾಲವನ್ನು ಶೇಕಡ 3ರಷ್ಟು ಬಡ್ಡಿ ದರದಲ್ಲಿ ನೀಡುವಂತಹ 15 ಲಕ್ಷ ರೂಪಾಯಿಗಳ ಮಧ್ಯಮಾವಧಿ ಸಾಲವನ್ನು ವಿತರಿಸುವಂತೆ ತಿಳಿಸಲಾಗಿದೆ.
ಹೊಸ ನಿಯಮಗಳು ಏನೇನು?
ಹೊಸ ಸುತ್ತೋಲೆಯ ಪ್ರಕಾರ ಒಂದು ವರ್ಷ ಅವಧಿಯ ಶೂನ್ಯ ಬಡ್ಡಿ ದರದ ಸಾಲದ ಹೆಚ್ಚುವರಿ ಮೊತ್ತವನ್ನು ಸಾಲಗಾರರು ಸಾಲ ನವೀಕರಣ ಅವಧಿಯ ಬಳಿಕ ಮತ್ತೆ ಪಡೆಯುವ ವೇಳೆ ಫ್ಯಾಕ್ಸ್ ಗಳಿಂದ ನೀಡಬಹುದಾಗಿದೆ ಎಂದು ತಿಳಿಸಲಾಗಿದೆ. ಸರ್ಕಾರ ನಿಗದಿಪಡಿಸಿರುವ ಗುರಿಯನ್ನು ಯಾವುದೇ ಫ್ಯಾಕ್ಸ್ ಹಾಗೂ ತಾಲ್ಲೂಕುಗಳಿಗೆ ತಾರತಮ್ಯ ಮಾಡದೆ ಹಂಚಿಕೆ ಮಾಡಬೇಕು. ಕನಿಷ್ಠ ಶೇಕಡ 10ರಷ್ಟು ಹೊಸ ಸದಸ್ಯರಿಗೆ, ಶೇಕಡ 24.10ರಷ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸದಸ್ಯರಿಗೆ ಸಾಲವನ್ನು ವಿತರಿಸುವಂತೆ ನಿರ್ದೇಶನವನ್ನು ನೀಡಲಾಗಿದೆ. ಇದರೊಂದಿಗೆ ನಬಾರ್ಡ್ ನಿಂದ ಆದ್ಯತಾ ಕೃಷಿ ಮತ್ತು ಕೃಷಿ ಸಂಬಂಧಿತ ದೀರ್ಘಾವಧಿ ಸಾಲಗಳಿಗೆ ಕಡಿಮೆ ದರದಲ್ಲಿ ದೊರೆಯುವ ಪುನರ್ಧನ ಸೌಲಭ್ಯ ಬಳಕೆ ಮಾಡಿಕೊಳ್ಳುವಂತೆ ಬ್ಯಾಂಕ್ ಗಳಿಗೆ ಸೂಚಿಸಲಾಗಿದೆ. ಕೆಲವೊಂದು ಸಹಕಾರಿ ಸಂಘಗಳು ಈ ಯೋಜನೆಯನ್ನು ಅನುಷ್ಠಾನಕ್ಕೆ ತರುವ ಕುರಿತು ತಿಳಿಸಿದ್ದರೆ, ಮತ್ತೆ ಕೆಲವು ಸಹಕಾರಿ ಸಂಘಗಳು ನಬಾರ್ಡ್ ನಿಂದ ಮೊತ್ತವು ಬಿಡುಗಡೆಗೊಂಡ ಬಳಿಕ ಸಾಲವನ್ನು ವಿತರಿಸುವುದಾಗಿ ಮಾಹಿತಿ ನೀಡಿದೆ







