ಮಂಗಳೂರು: ಮೊಬೈಲ್ ವಿಚಾರವಾಗಿ ಅಣ್ಣ ಮತ್ತು ತಂಗಿಯ ನಡುವೆ ಕಲಹ ಉಂಟಾಗಿದ್ದು, ಅದು ಕೊಲೆಯಲ್ಲಿ ಅಂತ್ಯ ಕಂಡಿರುವ ಘಟನೆ, ಕಂಬಳಪದವುನಲ್ಲಿ ನಡೆದಿದೆ. ಸ್ಯಾಮ್ಸನ್ ಫ್ಯಾನ್ಸಿಸ್ ಕುಟಿನ್ಹಾ ಮತ್ತು ಆತನ ಸಹೋದರಿಯ ನಡುವೆ 2019ರಲ್ಲಿ ಜಗಳ ನಡೆದಿದ್ದು, ಅದು ಮಿತಿಮೀರಿದ ಪರಿಣಾಮವಾಗಿ ಸ್ಯಾಮ್ಸನ್ ತನ್ನ ಸಹೋದರಿಯನ್ನು ಕೊಲೆ ಮಾಡಿದ್ದನು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರದಂದು ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ವಿಚಾರಣೆಯನ್ನು ನಡೆಸಿದ್ದು, ಆರೋಪಿಯಾದ ಸ್ಯಾಮ್ಸನ್ ಫ್ಯಾನ್ಸಿಸ್ ಕುಟಿನ್ಹಾ ಗೆ ಭಾರತೀಯ ದಂಡ ಸಂಹಿತೆಯ ಕಲಂ 3೦4ರ ಅಡಿಯಲ್ಲಿ ನಾಲ್ಕು ವರ್ಷಗಳ ಸಾದಾ ಜೈಲು ಶಿಕ್ಷೆ ಮತ್ತು 10.000 ದಂಡ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ನಾಶಕ್ಕಾಗಿ ಕಲಂ 201 ಐಪಿಸಿ ಅಡಿಯಲ್ಲಿ ಹೆಚ್ಚುವರಿಯಾಗಿ ಒಂದು ವರ್ಷ ಕಾಲ ಜೈಲುಶಿಕ್ಷೆ ಮತ್ತು 1000 ರೂಪಾಯಿ ದಂಡ ವಿಧಿಸುವಂತೆ ನ್ಯಾಯಾಲಯವು ಆದೇಶವನ್ನು ಹೊರಡಿಸಿದೆ.
•ಕುಂದಾಪುರ: ಮುಳುಗಿದ ಪರ್ಶಿನ್ ಹಡಗು; ಮೀನುಗಾರರ ರಕ್ಷಣೆ
ಕುಂದಾಪುರ: ಶ್ರೀಬಾಲಾಂಜನೇಯ ಹೆಸರಿನ ಪರ್ಶಿನ್ ಮೀನುಗಾರಿಕಾ ಹಡಗೊಂದು ಮುಳುಗಿರುವ ಘಟನೆ ಬುಧವಾರದಂದು ಗಂಗೊಳ್ಳಿಯಲ್ಲಿ ನಡೆದಿದೆ. ಇದನ್ನು ಗಮನಿಸಿದ ಸಮೀಪದಲ್ಲಿ ಹಡಗಿನಲ್ಲಿದ್ದ ಮೀನುಗಾರರು ಮತ್ತು ಕರಾವಳಿ ಕಾವಲು ಪಡೆಯ ಸಿಬ್ಬಂದಿಗಳು ಕಾರ್ಯಾಚರಣೆಯನ್ನು ನಡೆಸಿ ಹಡಗಿನಲ್ಲಿದ್ದ 27 ಜನ ಮೀನುಗಾರರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಡಗಿನ ತಳಭಾಗದಲ್ಲಿನ ಹಲಗೆಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿರುವುದೇ ಹಡಗು ಮುಳುಗಲು ಕಾರಣವಾಯಿತು ಎಂದು ಹೇಳಲಾಗಿದೆ. ಇದರ ಪರಿಣಾಮವಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎನ್ನುವ ಮಾಹಿತಿ ಲಭಿಸಿದೆ. ಆದರೆ, ಯಾವುದೇ ಪ್ರಾಣಾಪಾಯ ಸಂಭವಿಸದೆ ಎಲ್ಲರೂ ಸುರಕ್ಷಿತವಾಗಿರುವುದು ಸಮಾಧಾನಕರ ಸಂಗತಿಯಾಗಿದೆ.
•ಕಡಬ: ಬಾಲಕಿ ನಾಪತ್ತೆ; ಪ್ರಕರಣದಲ್ಲಿ ಟ್ವಿಸ್ಟ್
ಕಡಬ: ಬಾಲಕಿಯೊಬ್ಬಳು ಶಾಲಾ ಪ್ರವಾಸಕ್ಕೆ ಹೋಗಿ ಬರುವುದಾಗಿ ತಿಳಿಸಿ, ಮನೆಯಿಂದ ತೆರಳಿದವಳು ನಾಪತ್ತೆಯಾಗಿದ್ದ ಘಟನೆ, ಆಗಸ್ಟ್ 20ರ ಗುರುವಾರದಂದು ನಡೆದಿತ್ತು. ಈ ಹಿನ್ನೆಲೆಯಲ್ಲಿ ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ವಿಶೇಷ ತಂಡವನ್ನು ರಚಿಸಿ, ಕಾರ್ಯಾಚರಣೆಯನ್ನು ಕೈಗೊಂಡಿದ್ದು, ಬಾಲಕಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಮೊಬೈಲ್ ಲೊಕೇಶನ್ ಮತ್ತು ಖಚಿತವಾಗಿ ದೊರೆತ ಸುಳಿವುಗಳನ್ನು ಆಧಾರವಾಗಿಟ್ಟುಕೊಂಡು ಪೊಲೀಸರು ಆಗಸ್ಟ್ 23ರ ಭಾನುವಾರದಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ವಳಗೆ ಸೋಮನಹಳ್ಳಿಗೆ ತೆರಳಿದಾಗ ಬಾಲಕಿ ಸಿಕ್ಕಿದ್ದಾಳೆ ಎನ್ನಲಾಗಿದೆ. ಸುರಕ್ಷಿತವಾಗಿ ಕಡಬ ಠಾಣೆಗೆ ಕರೆತಂದ ಪೊಲೀಸರು ಬಾಲಕಿಯನ್ನು ವಿಚಾರಣೆಗೆ ಒಳಪಡಿಸಿದಾಗ ಪರಿಚಿತ ಯುವಕನೊಬ್ಬ ಕರೆದಿದ್ದರಿಂದ ಮೊದಲು ಬೆಂಗಳೂರಿಗೆ ತೆರಳಿದ್ದು, ಬಳಿಕ ಚನ್ನರಾಯಪಟ್ಟಣಕ್ಕೆ ಬಂದಿರುವುದಾಗಿ ತಿಳಿಸಿದ್ದಾಳೆ ಎನ್ನುವ ಮಾಹಿತಿ ಲಭಿಸಿದೆ. ನಂತರ ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದರು ಎಂದು ಹೇಳಲಾಗಿದೆ. ಬಾಲಕಿಯು ನೀಡಿರುವ ಹೇಳಿಕೆಯ ಆಧಾರದ ಮೇಲೆ ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಕಲಂಗಳು ಮತ್ತು ಪೋಕ್ಸೋ ಕಾಯ್ದೆಯಡಿಯಲ್ಲಿ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
•ಬೆಳ್ತಂಗಡಿ: ಮತ್ತೆ ಕಾಡಾನೆ ದಾಳಿ: ಶಾಶ್ವತ ಪರಿಹಾರಕ್ಕೆ ಪಟ್ಟು!
ಬೆಳ್ತಂಗಡಿ: ಕಾಡಾನೆಗಳು ದಾಳಿ ನಡೆಸಿ, ಕೃಷಿ ಬೆಳೆಗಳನ್ನು ಹಾನಿಗೊಳಿಸಿರುವ ಘಟನೆ, ಬುಧವಾರದಂದು ನಿಡ್ಲೆ ಗ್ರಾಮದ ಬುಡುಜಾಲು ಎನ್ನುವಲ್ಲಿ ನಡೆದಿದೆ. ಹರಿಕೃಷ್ಣರಾವ್ ಎನ್ನುವವರ ತೋಟಕ್ಕೆ ನುಗ್ಗಿದ ಕಾಡಾನೆಗಳು ಅಲ್ಲಿ ಬೆಳೆಸಲಾಗಿದ್ದ ಬಾಳೆ, ತೆಂಗು ಮತ್ತು ಅಡಿಕೆ ಮರಗಳನ್ನು ತಿಂದು, ತುಳಿದು ಹಾಕಿ ನಾಶಪಡಿಸಿ ಬಳಿಕ ನಿಡ್ಲೆ ಮೀಸಲು ಅರಣ್ಯದತ್ತ ತೆರಳಿದೆ ಎನ್ನಲಾಗಿದೆ. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಮತ್ತು ಇಟಿಎಫ್ ಸಿಬ್ಬಂದಿಗಳು ಪರಿಶೀಲನೆಯನ್ನು ನಡೆಸಿದ್ದಾರೆ. ಈ ಸಂದರ್ಭದಲ್ಲಿ ಎರಡು ಕಾಡಾನೆಗಳ ಹೆಜ್ಜೆಯ ಗುರುತುಗಳು ಮತ್ತು ಲದ್ದಿಗಳು ಕಂಡುಬಂದಿದೆ. ತಾಲ್ಲೂಕಿನ ಭಾಗದಲ್ಲಿ ಕಾಡಾನೆಗಳು ನಿರಂತರವಾಗಿ ಸಂಚಾರ ನಡೆಸುತ್ತಿದ್ದು ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಬೆಳೆಗಳಿಗೆ ಉಂಟಾಗುತ್ತಿರುವ ನಷ್ಟಕ್ಕೆ ಸೂಕ್ತ ಪರಿಹಾರವನ್ನು ಮತ್ತು ಕಾಡಾನೆಗಳ ನಿಯಂತ್ರಣಕ್ಕೆ ಶಾಶ್ವತ ಕ್ರಮವನ್ನು ಕೈಗೊಳ್ಳಬೇಕೆಂದು ಸ್ಥಳೀಯರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
•ಸುಳ್ಯ:ಟೆಂಪೊ ಟ್ರಾವೆಲ್ ಮೇಲೆ ಉರುಳಿ ಬಿದ್ದ ಲಾರಿ
ಸುಳ್ಯ: ಲಾರಿಯೊಂದು ಟೆಂಪೊ ಟ್ರಾವೆಲ್ ಮೇಲೆ ಉರುಳಿ ಬಿದ್ದಿರುವ ಘಟನೆ, ಬುಧವಾರದಂದು ದೇವರಕೊಲ್ಲಿ ಸಮೀಪ ಹಬ್ಬಿಕೊಲ್ಲಿ ತಿರುವಿನ ಬಳಿ ನಡೆದಿದೆ. ಪರಿಣಾಮವಾಗಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಆ್ಯಂಬುಲೆನ್ಸ್ ಚಾಲಕರ ಮಾಲೀಕರ ಸಂಘದ ಸದಸ್ಯರು ಮತ್ತು ಸ್ಥಳೀಯರು ಕಾರ್ಯಾಚರಣೆಯನ್ನು ನಡೆಸಿ, ಗಾಯಾಳುಗಳನ್ನು ರಕ್ಷಿಸಿ ತಕ್ಷಣ ಅವರನ್ನು ಆ್ಯಂಬುಲೆನ್ಸ್ ಮೂಲಕ ಸುಳ್ಯದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.







