ಬೆಂಗಳೂರು: ಸರ್ಕಾರದ ಆರೋಗ್ಯ ಇಲಾಖೆಯು ರಾಜ್ಯಾದ್ಯಂತ ನಡೆಸುತ್ತಿರುವ ವಿಶೇಷ ತಪಾಸಣಾ ಅಭಿಯಾನದ ಸಂದರ್ಭದಲ್ಲಿ ಹಲವಾರು ಹೊಟೇಲ್ ಮತ್ತು ಆಹಾರ ಉದ್ಯಮದಲ್ಲಿ ಸ್ವಚ್ಛತೆ, ಆಹಾರ ಸುರಕ್ಷತೆ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದಂತಹ ಹಲವಾರು ಲೋಪದೋಷಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಆಯುಕ್ತಾಲಯವು ರಾಜ್ಯದ ಎಲ್ಲಾ ಆಹಾರ ಉದ್ದಿಮೆದಾರರಿಗೆ ಕಟ್ಟುನಿಟ್ಟಿನ ಮಾರ್ಗಸೂಚಿ ಮತ್ತು ಸಲಹೆಯನ್ನು ಹೊರಡಿಸಿದೆ.
ತಪಾಸಣೆಯ ಸಂದರ್ಭದಲ್ಲಿ ಪತ್ತೆಯಾಗಿರುವಂತಹ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ಹೊಟೇಲ್ ಸೇರಿದಂತೆ ಇತರೆ ಆಹಾರ ಉದ್ದಿಮೆದಾರರಿಗೆ ಕಾಲಾವಕಾಶವನ್ನು ನೀಡಲಾಗಿದ್ದು, ಈ ಅವಧಿಯಲ್ಲಿಯೇ ಅಗತ್ಯ ಕ್ರಮಗಳನ್ನು ಕೈಗೊಂಡು ಆಹಾರ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಲಾಗಿದೆ.
ಒಂದು ವೇಳೆ ನೀಡಿರುವಂತಹ ಅವಧಿಯ ಬಳಿಕವೂ ಮರುತಪಾಸಣೆಯ ಸಂದರ್ಭದಲ್ಲಿ ನಿಯಮವನ್ನು ಉಲ್ಲಂಘಿಸಿ ಲೋಪದೋಷಗಳು ಮುಂದುವರಿದದ್ದೇಯಾದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2026ರ ಅಡಿಯಲ್ಲಿ ಕಠಿಣ ಕಾನೂನು ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ಆಯುಕ್ತಾಲಯವು ಎಚ್ಚರಿಕೆಯನ್ನು ನೀಡಿದೆ.
ಹೋಟೆಲ್ ಅಲ್ಲಿ ಏನೇನು ಕಡ್ಡಾಯ?
ಆಹಾರ ಉದ್ದಿಮೆದಾರರು ಎಫ್ಎಸ್ಎಸ್ಎಐ ಪರವಾನಗಿ ಅಥವಾ ನೋಂದಣಿಯನ್ನು ಹೊಂದಿರಬೇಕಿದೆ. ಇದರೊಂದಿಗೆ ಪರವಾನಗಿ ಸಂಬಂಧಿತ ಷರತ್ತುಗಳು ಮತ್ತು ಆಹಾರ ಸುರಕ್ಷತಾ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ಅಲ್ಲದೆ ಸಾರ್ವಜನಿಕರ ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಆಹಾರದ ಗುಣಮಟ್ಟಕ್ಕೆ ಆದ್ಯತೆ, ಕಚ್ಚಾ ವಸ್ತುಗಳ ಖರೀದಿ ಮತ್ತು ಸಂಗ್ರಹಣೆ, ಅವಧಿ ಮೀರಿದ ಆಹಾರಗಳ ವಿಲೇವಾರಿ, ಅಡುಗೆಮನೆಯ ಸ್ವಚ್ಛತೆ, ಪಾತ್ರೆ ಮತ್ತು ಉಪಕರಣಗಳ ಸ್ವಚ್ಛತೆ, ಕೀಟ ನಿಯಂತ್ರಣ, ತಾಪಮಾನ ನಿಯಂತ್ರಣ, ಸಿಬ್ಬಂದಿಯ ವೈಯಕ್ತಿಕ ಸ್ವಚ್ಛತೆ, ಸುರಕ್ಷಿತ ನೀರು ಮತ್ತು ಐಸ್, ಲೇಬಲಿಂಗ್ ಮತ್ತು ಆಹಾರ ಪ್ರದರ್ಶನ, ಆಹಾರ ತ್ಯಾಜ್ಯ ನಿರ್ವಹಣೆಯಂತಹ ಅಂಶಗಳನ್ನು ಅಳವಡಿಸಿಕೊಳ್ಳಲು ಈ ಮೂಲಕ ತಿಳಿಸಲಾಗಿದೆ.







