ಮಂಡ್ಯ: ಭಿಕ್ಷಾಟನೆ ಮಾಡಿಕೊಂಡಿದ್ದ ನೂರ್ ಎನ್ನುವ ವೃದ್ಧೆಯೊಬ್ಬರು ವಯೋಸಹಜ ಕಾಯಿಲೆಯಿಂದ ಮೃತಪಟ್ಟ ಘಟನೆ ಮಂಡ್ಯದ ಭಾನುವಾರದಂದು ಗುತ್ತಲು ಬಡಾವಣೆಯಲ್ಲಿ ನಡೆದಿದೆ. ಆದರೆ ಅಚ್ಚರಿಯ ಸಂಗತಿ ಎಂದರೆ ನೂರ್ ಳ ಮನೆಯನ್ನು ಪರಿಶೀಲಿಸಿದಾಗ ಮೂಟೆಗಟ್ಟಲೆ ಹಣ ಬೆಳಕಿಗೆ ಬಂದಿರುವುದು ಆಶ್ಚರ್ಯವನ್ನುಂಟು ಮಾಡಿದೆ. ನೂರ್ ಅಂತ್ಯಸಂಸ್ಕಾರವನ್ನು ಆಕೆಯ ಸಂಬಂಧಿಕರು ಮತ್ತು ಅಕ್ಕಪಕ್ಕದ ಮನೆಯವರು ಸೇರಿ ನೆರವೇರಿಸಿದ್ದಾರೆ. ಬಳಿಕ ಅವರು ನೂರ್ ಳ ಮನೆಗೆ ಬಂದು ಆಕೆಗೆ ಸಂಬಂಧಿಸಿದ ವಸ್ತುಗಳನ್ನು ವಿಲೇವರಿ ಮಾಡುವ ಸಲುವಾಗಿ ಮನೆಯನ್ನು ತಡಕಾಡಿದಾಗ ಮೂಟೆಗಟ್ಟಲೆ ಹಣ ಪತ್ತೆಯಾಗಿದೆ. ಇದರಿಂದಾಗಿ ಎಲ್ಲರೂ ದಿಗ್ಬ್ರಮೆಗೊಂಡಿದ್ದಾರೆ. ಚಿಲ್ಲರೆ ಮತ್ತು ನೋಟುಗಳನ್ನು ಲೆಕ್ಕ ಹಾಕಿದಾಗ ಸುಮಾರು 8 ಲಕ್ಷ ರೂಪಾಯಿಗಳಷ್ಟು ಹಣ ಸಂಗ್ರಹವಾಗಿರುವ ಕುರಿತು ಮಾಹಿತಿ ಲಭಿಸಿದೆ.
ಟಿಪ್ಪು ಸುಲ್ತಾನ್ ಕಟೌಟ್ ವಿವಾದ: ಸಿಟಿ ರವಿ ಸಿಟ್ಟು!
ಚಿಕ್ಕಮಗಳೂರು: ನಗರದಲ್ಲಿ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಟಿಪ್ಪುಸುಲ್ತಾನ್ ಕಟೌಟ್ ಅಳವಡಿಕೆ ಮತ್ತು ವಿವಾದಾತ್ಮಕ ಹಾಡು ಪ್ರಸಾರವಾಗುತ್ತಿರುವ ಕುರಿತು ಬಿಜೆಪಿ ನಾಯಕ ಸಿ.ಟಿ.ರವಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅವರು “ಚಿಕ್ಕಮಗಳೂರು ನಗರದ ಟಿಪ್ಪು ನಗರದಲ್ಲಿ ಟಿಪ್ಪುಸುಲ್ತಾನನ 40 ಅಡಿ ಎತ್ತರದ ಕಟೌಟ್ ನಿಲ್ಲಿಸಿ, ಅದರ ಜೊತೆಗೆ ಹಾಡೊಂದನ್ನು ಪ್ರಸಾರ ಮಾಡಲಾಗುತ್ತಿದೆ. ಇಲ್ಲಿಯೇ ವಾಸವಾಗಿರುವ ನಿಮಗೆ ‘ಪಾಕಿಸ್ತಾನದ ಮುಜಾಹಿದ್ದೀನ್’ ಎಂದು ಕರೆದುಕೊಳ್ಳುವ ಧೈರ್ಯ ಎಲ್ಲಿಂದ ಬಂತು ಎಂದು ಕೇಳಲು ನಾನು ಬಯಸುತ್ತೇನೆ. ಇದು ದೇಶದ್ರೋಹವಲ್ಲವೇ? ನೀವು ಯಾರನ್ನು ಗುರಿಯಾಗಿಸಲು ಅಥವಾ ಕೊಲ್ಲಲು ಬಯಸುತ್ತಿದ್ದೀರಿ? ನೀವು ಯಾರಿಗೆ ಸವಾಲು ಹಾಕುತ್ತಿದ್ದೀರಿ? ಇಲ್ಲಿಯೇ ವಾಸಿಸುತ್ತಾ, ಈ ಮಣ್ಣಿನ ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತಾ, ನಿಮ್ಮನ್ನು ‘ಪಾಕಿಸ್ತಾನದ ಮುಜಾಹಿದ್ದೀನ್ ‘ ಎಂದು ಹೇಳಿಕೊಳ್ಳುತ್ತೀರಿ. ಈ ರೀತಿ ಮಾತನಾಡುವವರಿಗೆ ಇಲ್ಲಿ ವಾಸಿಸುವ ಯಾವುದೇ ಹಕ್ಕಿಲ್ಲ. ಅವರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು. ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
ಕರಾವಳಿಯಲ್ಲಿ ಆಹಾರ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯ!
– ಆಹಾರ ಇಲಾಖೆ ಅಧಿಕಾರಿಗಳೊಡನೆ ಚರ್ಚೆ: ಸರ್ಕಾರದ ಚಿಂತನೆ
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಆಹಾರದಲ್ಲಿನ ಗುಣಮಟ್ಟವನ್ನು ಪರೀಕ್ಷಿಸುವ ಚಟುವಟಿಕೆಗಳು, ಸರ್ಕಾರದ ವತಿಯಿಂದ ಆರೋಗ್ಯ ಸಚಿವರಾದ ಯು.ಟಿ.ಖಾದರ್ ಅವರ ನೇತೃತ್ವದಲ್ಲಿ ಬಿರುಸುನಿಂದ ನಡೆಯುತ್ತಿದೆ. ಇದೀಗ ಆಹಾರ ಗುಣಮಟ್ಟದ ಪರೀಕ್ಷೆಯ ವಿಚಾರವಾಗಿ ಸರ್ಕಾರವು ಮತ್ತೊಂದು ರೀತಿಯ ಚಿಂತನೆಯನ್ನು ನಡೆಸಿದೆ. ಇದರ ಪ್ರಕಾರ ಆಹಾರೋದ್ಯಮ ವೇಗವಾಗಿ ಬೆಳೆಯುತ್ತಿರುವ ಮಂಗಳೂರಿನಲ್ಲಿ ಆಹಾರದ ಗುಣಮಟ್ಟವನ್ನು ಪರೀಕ್ಷಿಸಲು ಸರ್ಕಾರಿ ಪ್ರಯೋಗಾಲಯವನ್ನು ಸ್ಥಾಪಿಸುವ ನಿರ್ಣಯ ಕೈಗೊಳ್ಳಲಾಗಿದೆ. ಆಹಾರ ವಸ್ತುಗಳ ಗುಣಮಟ್ಟದ ಪರೀಕ್ಷೆಗಾಗಿ ಪ್ರಸ್ತುತ ಅವುಗಳನ್ನು ಮೈಸೂರಿಗೆ ಕಳುಹಿಸಲಾಗುತ್ತಿದೆ. ಪರಿಣಾಮವಾಗಿ ಫಲಿತಾಂಶದ ಲಭ್ಯತೆ ವಿಳಂಬವಾಗುತ್ತಿದ್ದು, ಕಳಪೆ ಆಹಾರಗಳನ್ನು ಮಾರಾಟ ಮಾಡುತ್ತಿರುವ ಅಪರಾಧಿಗಳಿಗೆ ಶಿಕ್ಷೆಯನ್ನು ವಿಧಿಸುವುದು ಕೂಡ ಇದರಿಂದಾಗಿ ತಡವಾಗುತ್ತಿದೆ. ಹೀಗಾಗಿ ತಪ್ಪಿಸ್ಥರ ವಿರುದ್ಧ ಶೀಘ್ರ ಕ್ರಮವನ್ನು ಕೈಗೊಳ್ಳುವ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಆಹಾರ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯವನ್ನು ಸ್ಥಾಪಿಸಲು ಸರ್ಕಾರವು ಸಂಬಂಧಿತ ಇಲಾಖೆ ಅಧಿಕಾರಿಗಳೊಡನೆ ಚರ್ಚೆ ನಡೆಸಿದೆ ಎನ್ನುವ ಮಾಹಿತಿ ಮೂಲಗಳಿಂದ ಲಭಿಸಿದೆ







