ಚಿಕ್ಕಮಗಳೂರು: ಆಟವಾಡುತ್ತಿದ್ದ ಬಾಲಕನನ್ನು ಕಾಡಾನೆಯೊಂದು ಬೆನ್ನಟ್ಟಿದ ಘಟನೆ, ಹರವಿನಗುಂಡಿ ಗ್ರಾಮದಲ್ಲಿ ನಡೆದಿದೆ. ಕಾಫಿ ತೋಟದ ಲೇಬರ್ ಲೈನ್ ಮುಂಭಾಗದಲ್ಲಿ ಬಾಲಕ ಆಟವಾಡುತ್ತಿದ್ದ ಸಂದರ್ಭದಲ್ಲಿ ಒಂಟಿ ಸಲಗವೊಂದು ಏಕಾಏಕಿ ಪ್ರತ್ಯಕ್ಷಗೊಂಡು, ಬಾಲಕನತ್ತ ಧಾವಿಸಿ ಬಂದಿದೆ. ಬಳಿಕ ಕಾಡಾನೆಯು ಕೂಡಲೇ ರಸ್ತೆಯಲ್ಲಿ ಮುನ್ನುಗ್ಗಿದ್ದರಿಂದ ಬಾಲಕನು ಅದೃಷ್ಟದಿಂದಾಗಿ ಕೂದಲೆಳೆಯ ಅಂತರದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎನ್ನುವ ಮಾಹಿತಿ ಲಭಿಸಿದೆ. ಇತ್ತೀಚಿನ ಕೆಲವು ದಿನಗಳಿಂದ ಕಾಡಂಚಿನ ಪ್ರದೇಶಗಳು ಮತ್ತು ಕಾಫಿತೋಟಗಳ ನಡುವೆ ಪುಂಡಾನೆಗಳು ಬೀಡುಬಿಟ್ಟಿದ್ದು, ಸುತ್ತಮುತ್ತಲಿನ ಪ್ರದೇಶಗಳ ಜನರಲ್ಲಿ ತೀವ್ರ ರೀತಿಯ ಆತಂಕವನ್ನು ಸೃಷ್ಟಿಸಿದೆ. ಪರಿಣಾಮವಾಗಿ ಸ್ಥಳೀಯರು ಮತ್ತು ತೋಟದ ಕಾರ್ಮಿಕರು ಕೆಲಸಕ್ಕೆ ತೆರಳಲು ಭಯಪಡುವಂತಹ ಪರಿಸ್ಥಿತಿ ಎದುರಾಗಿದೆ. ಮಾಹಿತಿ ಲಭಿಸುತ್ತಿದ್ದಂತೆ ಅರಣ್ಯ ಇಲಾಖೆಯವರು ಸಾರ್ವಜನಿಕರಿಗೆ ಮತ್ತು ಗ್ರಾಮಸ್ಥರಿಗೆ ಅನಗತ್ಯವಾಗಿ ಮತ್ತು ಒಂಟಿಯಾಗಿ ಸಂಚಾರ ನಡೆಸದೆ ಎಚ್ಚರಿಕೆಯಿಂದಿರುವಂತೆ ಸೂಚನೆಯನ್ನು ನೀಡಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.
•ಶಿವಮೊಗ್ಗ: ಎಸ್ಎಸ್ಎಲ್ ಸಿ ವಿದ್ಯಾರ್ಥಿ ನೀರು ಪಾಲು
ಶಿವಮೊಗ್ಗ: ಈಜಲು ತೆರಳಿದ್ದ ಎಸ್ಎಸ್ಎಲ್ ಸಿ ವಿದ್ಯಾರ್ಥಿಯೊಬ್ಬ ನೀರು ಪಾಲಾಗಿರುವ ಘಟನೆ, ಬುಧವಾರದಂದು ಅಬ್ಬಲಗೆರೆ ಸಮೀಪದ ಈಶ್ವರವನದ ತುಂಗಾ ಚಾನೆಲ್ ನಲ್ಲಿ ನಡೆದಿದೆ. ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಾಲೆಗೆ ರಜೆ ಇರುವ ಕಾರಣದಿಂದಾಗಿ ಗೋಪಾಳದ ಖಾಸಗಿ ಶಾಲೆಯೊಂದರಲ್ಲಿ ಓದುತ್ತಿದ್ದ ಆರು ಜನ ವಿದ್ಯಾರ್ಥಿಗಳು ಬೊಮ್ಮನಕಟ್ಟೆಯಿಂದ ಅಬ್ಬಲಗೆರೆ ಸಮೀಪದಲ್ಲಿ ಹರಿಯುವ ತುಂಗಾ ಚಾನೆಲ್ ಗೆ ಈಜಲೆಂದು ಬಂದಿದ್ದಾರೆ. ಈ ಸಂದರ್ಭದಲ್ಲಿ ಆರು ವಿದ್ಯಾರ್ಥಿಗಳಲ್ಲಿ ಇಬ್ಬರು ವಿದ್ಯಾರ್ಥಿಗಳು ನೀರಿನ ಪಾಲಾಗಿದ್ದಾರೆ. ಇದನ್ನು ಗಮನಿಸಿದ ಎತ್ತಿಗೆ ಮೈತೊಳೆಯುತ್ತಿದ್ದ ಜನರು ವಿದ್ಯಾರ್ಥಿಗಳತ್ತ ಎತ್ತಿಗೆ ಕಟ್ಟಿದ ಹಗ್ಗವನ್ನೇ ಎಸೆದಿದ್ದು, ಇದನ್ನು ಹಿಡಿದುಕೊಂಡ ಓರ್ವ ವಿದ್ಯಾರ್ಥಿಯನ್ನು ಅಲ್ಲಿದ್ದವರು ಎಳೆದು ದಡಕ್ಕೆ ತಂದಿದ್ದಾರೆ. ಬೊಮ್ಮನಕಟ್ಟೆಯ ನಿವಾಸಿಯಾದ ಕೃಷ್ಣ ಎನ್ನುವವನು ಕರೆಂಟ್ ಕಂಬವನ್ನು ಹಿಡಿದುಕೊಳ್ಳಲು ಮುಂದಾಗಿದ್ದು, ಅದಕ್ಕೆ ಸುತ್ತಿದ ಹೂವಿನ ದಾರ ಸಿಕ್ಕಿದೆಯಾದರೂ ನೀರಿನ ರಭಸಕ್ಕೆ ಆತನು ಕೊಚ್ಚಿಕೊಂಡು ಹೋಗಿದ್ದಾನೆ ಎನ್ನುವ ಮಾಹಿತಿ ಲಭಿಸಿದೆ. ಸುಮಾರು 100-150 ಅಡಿ ದೂರ ಹೋಗುವವರೆಗೂ ಸ್ಥಳೀಯರು ಕೃಷ್ಣನನ್ನು ಕಾಪಾಡುವ ಪ್ರಯತ್ನ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ ಎನ್ನಲಾಗಿದೆ. ಬಳಿಕ ಅಗ್ನಿಶಾಮಕ ದಳಕ್ಕೆ ಮಾಹಿತಿಯನ್ನು ನೀಡಿದ್ದು, ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿಗಳು ಕೃಷ್ಣನ ಹುಡುಕಾಟಕ್ಕಾಗಿ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.
•ಕಳಸ: ಚರಂಡಿ ಸ್ಲ್ಯಾಬ್ ಮುರಿದು ವ್ಯಾಪಾರಿಗೆ ಗಂಭೀರ ಗಾಯ
ಕಳಸ: ಚರಂಡಿಯ ಮೇಲೆ ಹಾಕಿರುವ ಸ್ಲ್ಯಾಬ್ ಮೇಲೆ ವ್ಯಕ್ತಿಯೊಬ್ಬ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ, ಆಕಸ್ಮಿಕವಾಗಿ ಸ್ಲ್ಯಾಬ್ ಮುರಿದು ಬಿದ್ದಿರುವ ಘಟನೆ, ಮುಖ್ಯ ರಸ್ತೆಯಲ್ಲಿ ನಡೆದಿದೆ. ಪರಿಣಾಮವಾಗಿ ಕ್ಯಾಂಟೀನ್ ವ್ಯಾಪಾರಿ ಆದ ಮಂಜುನಾಥ್ ಅವರು ಗಂಭೀರವಾಗಿ ಗಾಯಗೊಂಡಿದ್ದು, ತಲೆಗೆ 10 ಹೊಲಿಗೆಗಳನ್ನು ಹಾಕಲಾಗಿದ್ದು, ಮಂಜುನಾಥ್ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ರಸ್ತೆ ಬದಿಯ ಚರಂಡಿಯ ಸ್ಲ್ಯಾಬ್ ಮುರಿದು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದರೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಗಮನಹರಿಸದೆ ನಿರ್ಲಕ್ಷ್ಯ ವಹಿಸುತ್ತಿರುವುದೇ ಇಂತಹ ಅನಾಹುತಗಳಿಗೆ ಕಾರಣವಾಗಿದೆ ಎಂದು ಸ್ಥಳೀಯ ವರ್ತಕರು ಆಡಳಿತ ವ್ಯವಸ್ಥೆ ಮತ್ತು ಶಾಸಕಿ ಮೋಟಮ್ಮ ಅವರ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ ಜನಪ್ರತಿನಿಧಿಗಳಿಗೆ ಅಭಿವೃದ್ಧಿ ಮತ್ತು ಮೂಲ ಸೌಕರ್ಯಗಳ ಕುರಿತು ಕಿಂಚಿತ್ತು ಕಾಳಜಿ ಇಲ್ಲ ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
•ಸಾಗರ: ಆತ್ಮಹತ್ಯೆಗೆ ಯತ್ನಿಸಿದ ಯುವತಿಯನ್ನು ರಕ್ಷಿಸಿದ ಪೊಲೀಸರು
ಸಾಗರ: ಆತ್ಮಹತ್ಯೆಗೆ ಪ್ರಯತ್ನಿಸಿದ ಯುವತಿಯನ್ನು ಪೊಲೀಸರು ರಕ್ಷಿಸಿರುವ ಘಟನೆ, ಬುಧವಾರದಂದು ಬಿದರೂರು ಚಾನೆಲ್ ಬಳಿ ನಡೆದಿದೆ. ತುಮಕೂರು ಮೂಲದ ಯುವತಿಯು ತನ್ನ ಸ್ನೇಹಿತೆಯೊಂದಿಗೆ ಜಗತ್ಪ್ರಸಿದ್ಧ ಜೋಗ ಜಲಪಾತವನ್ನು ವೀಕ್ಷಿಸಲು ಬಂದ ಸಂದರ್ಭದಲ್ಲಿ ಈ ಪ್ರಯತ್ನ ನಡೆಸಿದ್ದಾಳೆ ಎನ್ನಲಾಗಿದೆ. ಯುವತಿಯು ಅನುಮಾನಾಸ್ಪದವಾಗಿ ಓಡಾಡುತ್ತಿರುವುದನ್ನು ಅಲ್ಲಿ ಮೀನು ಹಿಡಿಯಲು ಬಂದಿದ್ದವರು ಗಮನಿಸಿದ್ದು, ಕೂಡಲೇ 112ಕ್ಕೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಇಆರ್ ವಿ ಅಧಿಕಾರಿ ಅಣ್ಣಪ್ಪ, ಪೊಲೀಸ್ ಸಿಬ್ಬಂದಿಗಳಾದ ಸಂದೀಪ್, ಪುರುಷೋತ್ತಮ್ ಮತ್ತು ಚಾಲಕ ರಾಘವೇಂದ್ರ ಅವರು ಯುವತಿಯನ್ನು ಕೂಡಲೇ ರಕ್ಷಿಸಿ, ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಆಗ ಯುವತಿಯು ಪ್ರೇಮ ವೈಫಲ್ಯದಿಂದಾಗಿ ಮಾನಸಿಕವಾಗಿ ನೊಂದು ಈ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಹೇಳಿದ್ದಾಳೆ ಎನ್ನುವ ಸಂಗತಿ ತಿಳಿದುಬಂದಿದೆ. ವಿಚಾರಣೆಯ ಬಳಿಕ ಪೊಲೀಸರು ಯುವತಿಯ ಪೋಷಕರನ್ನು ಸಂಪರ್ಕಿಸಿ, ಮಾಹಿತಿ ನೀಡಿ ಬಳಿಕ ಆಕೆಯನ್ನು ಸುರಕ್ಷಿತವಾಗಿ ಕಳುಹಿಸಿಕೊಟ್ಟಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಲಾಗಿದೆ.







