ಬೆಂಗಳೂರು: ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರು ಹಲವಾರು ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ನೂತನ ರಾಜ್ಯಪಾಲರಾಗಿ ಬಿಜೆಪಿ ಪಕ್ಷದ ಹಿರಿಯ ನಾಯಕಿ ಹಾಗೂ ಮಾಜಿ ಸಂಸದರಾದ ಡಾ.ಸುಧಾ ಯಾದವ್ ಅವರು ನೇಮಕಗೊಂಡಿದ್ದಾರೆ. ಕರ್ನಾಟಕದ ಪ್ರಸ್ತುತ ರಾಜ್ಯಪಾಲರಾಗಿರುವ ಥಾವರ್ ಸಿಂಗ್ ಗೆಹ್ಲೋಟ್ ಅವರ ಅಧಿಕಾರಾವಧಿ ಮುಕ್ತಾಯಗೊಂಡಿರುವ ಕಾರಣದಿಂದಾಗಿ, ಅವರ ಸ್ಥಾನಕ್ಕೆ ಸುಧಾ ಯಾದವ್ ಅವರನ್ನು ಅವರ ಶೈಕ್ಷಣಿಕ ಅರ್ಹತೆ, ಆಡಳಿತಾತ್ಮಕ ಅನುಭವ ಮತ್ತು ಸಂಘಟನಾ ಚಾಕಚಕ್ಯತೆಯ ಆಧಾರದ ಮೇಲೆ ನೇಮಿಸಲಾಗಿದೆ. ಅತಿ ಶೀಘ್ರದಲ್ಲೇ ಡಾ.ಸುಧಾ ಯಾದವ್ ಅವರು ಬೆಂಗಳೂರಿನಲ್ಲಿ ನೂತನ ರಾಜ್ಯಪಾಲರಾಗಿ ಪ್ರಮಾಣವಚನವನ್ನು ಸ್ವೀಕರಿಸಲಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ಲಭಿಸಿದೆ.
ಡಾ.ಸುಧಾ ಯಾದವ್ ಅವರು ಮೂಲತಃ ಹರಿಯಾಣ ರಾಜ್ಯದವರಾಗಿದ್ದು, ಬಿಜೆಪಿ ಪಕ್ಷದ ಪ್ರಮುಖ ನಾಯಕಿ, ಮಾಜಿ ಸಂಸದೆಯಾಗಿ ಅಷ್ಟೇ ಅಲ್ಲದೆ, ಪ್ರಸ್ತುತ ಭಾರತೀಯ ಜನತಾ ಪಕ್ಷದ ಅತ್ಯುನ್ನತ ನಿರ್ಧಾರವನ್ನು ಕೈಗೊಳ್ಳುವಂತಹ ಸಂಸ್ಥೆಯಾಗಿರುವ ಬಿಜೆಪಿ ಸಂಸದೀಯ ಮಂಡಳಿಯ ಹಾಗೂ ಕೇಂದ್ರ ಚುನಾವಣೆ ಸಮಿತಿಯ ಸದಸ್ಯರು ಕೂಡ ಆಗಿದ್ದಾರೆ. ಮಾಹಿತಿಯ ಪ್ರಕಾರ ಸುಷ್ಮಾ ಸ್ವರಾಜ್ ಅವರ ನಂತರ ಭಾರತೀಯ ಜನತಾ ಪಕ್ಷದ ಸಂಸದೀಯ ಮಂಡಳಿಗೆ ನೇಮಕಗೊಂಡ ಎರಡನೇ ಮಹಿಳೆ ಇವರಾಗಿದ್ದಾರೆ.
ಹರಿಯಾಣ ರಾಜ್ಯದ ರೇವಾರಿ ಜಿಲ್ಲೆಯ ಮೋತ್ಲಾ ಕಲಾನ್ ಗ್ರಾಮದಲ್ಲಿ ಜನಿಸಿದ ಸುಧಾ ಯಾದವ್ ಅವರು, ರೂರ್ಕಿ ವಿಶ್ವವಿದ್ಯಾನಿಲಯದಿಂದ ರಸಾಯನಶಾಸ್ತ್ರ ವಿಷಯದಲ್ಲಿ ಚಿನ್ನದ ಪದಕದೊಂದಿಗೆ ಸ್ನಾತಕೋತ್ತರ ಪದವಿಯನ್ನು ಗಳಿಸಿದವರಾಗಿದ್ದು, 1992ರಲ್ಲಿ ಅದೇ ಸಂಸ್ಥೆಯಿಂದ ರಸಾಯನಶಾಸ್ತ್ರ ವಿಷಯದಲ್ಲೇ ಪಿಎಚ್ ಡಿ ಪದವಿಯನ್ನು ಪಡೆದಿರುವಂತಹ ವಿದ್ವಾಂಸರಾಗಿದ್ದಾರೆ. ರಾಜಕೀಯ ಕ್ಷೇತ್ರವನ್ನು ಪ್ರವೇಶಿಸುವ ಮೊದಲು ಇವರು ಕಾಲೇಜಿನ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದರು ಎನ್ನುವ ಸಂಗತಿ ತಿಳಿದುಬಂದಿದೆ. ಗಡಿ ಭದ್ರತಾ ಪಡೆಯ ಡೆಪ್ಯೂಟಿ ಕಮಾಂಡೆಂಟ್ ಆಗಿದ್ದಂತಹ ಮತ್ತು 1999ರಲ್ಲಿ ನಡೆದಂತಹ ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದಂತಹ ಸುಖ್ ಬೀರ್ ಸಿಂಗ್ ಯಾದವ್ ಅವರು ಡಾ.ಸುಧಾ ಯಾದವ್ ಅವರ ಪತಿಯಾಗಿದ್ದಾರೆ. ಸುಖ್ ಬೀರ್ ಸಿಂಗ್ ಯಾದವ್ ಅವರ ವೀರಮರಣದ ಬಳಿಕ ಸುಧಾ ಯಾದವ್ ಅವರನ್ನು ರಾಜಕೀಯಕ್ಕೆ ಕರೆತರುವಲ್ಲಿ ಅಂದಿನ ಹರಿಯಾಣ ಬಿಜೆಪಿ ಪಕ್ಷದ ಉಸ್ತುವಾರಿಗಳಾಗಿದ್ದ ಹಾಗೂ ಭಾರತದ ಈಗಿನ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ಮಹತ್ವದ ಪಾತ್ರವನ್ನು ವಹಿಸಿದರು ಎನ್ನಲಾಗಿದೆ. ಬಳಿಕ ಸುಧಾ ಯಾದವ್ ಅವರ ಸೇವೆಯನ್ನು, ಕರ್ತವ್ಯನಿಷ್ಠೆಯನ್ನು ಅಪಾರವಾಗಿ ಮೆಚ್ಚಿಕೊಂಡ ಪಕ್ಷವು, 1999ರಲ್ಲಿ ಅವರಿಗೆ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವನ್ನು ಕಲ್ಪಿಸಿಕೊಟ್ಟಿತು. ಚುನಾವಣೆಯಲ್ಲಿ ಗೆದ್ದ ಸುಧಾ ಯಾದವ್ ಅವರು ಸಂಸತ್ ಅನ್ನು ಪ್ರವೇಶಿಸಿದರು, ಬಳಿಕ ರಾಜಕೀಯ ಕ್ಷೇತ್ರದಲ್ಲಿ ಹಂತಹಂತವಾಗಿ ಬೆಳೆದ ಅವರು ಕೇಂದ್ರ ಸರ್ಕಾರದ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾಗಿ, 2015ರಲ್ಲಿ ಬಿಜೆಪಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಉಸ್ತುವಾರಿಯಾಗಿ ಸೇವೆಯನ್ನು ಸಲ್ಲಿಸಿದರು. 2022ರಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರು ಪಕ್ಷದ ಅತ್ಯುನ್ನತ ನೀತಿ ನಿರೂಪಣಾ ಸಮಿತಿಯಾದ ಸಂಸದೀಯ ಮಂಡಳಿಗೆ ಡಾ.ಸುಧಾ ಯಾದವ್ ಅವರನ್ನು ಸೇರ್ಪಡೆಗೊಳಿಸಿದರು. ಇದೀಗ ಡಾ. ಸುಧಾ ಯಾದವ್ ಅವರ ರಾಜಕೀಯ ಸೇವೆಯನ್ನು ಗುರುತಿಸಿ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರು ಕರ್ನಾಟಕ ರಾಜ್ಯದ ರಾಜ್ಯಪಾಲರಾಗಿ ನೇಮಕ ಮಾಡುವ ಮೂಲಕ, ಅವರಿಗೆ ಮತ್ತೊಂದು ಅತ್ಯುನ್ನತ ಸ್ಥಾನವನ್ನು ಕಲ್ಪಿಸಿ ಕೊಟ್ಟಂತಾಗಿದೆ.







