ನವರಾತ್ರಿ ಎಂದು ಮತ್ತೊಂದು ಹೆಸರಿನಿಂದ ಕರೆಯಲ್ಪಡುವ ದಸರಾ ಹಬ್ಬವು ಭಾರತದಾದ್ಯಂತ ಹಲವು ರೂಪಗಳಲ್ಲಿ ಆಚರಿಸಲಾಗುತ್ತದೆ. ನವರಾತ್ರಿ ಮತ್ತು ದಸರಾ ಎನ್ನುವುದು ಒಂದೇ ಅರ್ಥವನ್ನು ನೀಡುತ್ತದೆ. ನವರಾತ್ರಿ ಎಂದರೆ 9 ರಾತ್ರಿಗಳು ಮತ್ತು ದಸರಾ ಎಂದರೆ ದಶ+ಹರಾ ಅಂದರೆ 10 ರಾತ್ರಿಗಳು ಎನ್ನುವ ಅರ್ಥವನ್ನು ನೀಡುತ್ತದೆ.
ಈ ಬಾರಿಯ ದಸರಾ ಹಬ್ಬವು ಅಕ್ಟೋಬರ್ 11ರ ಭಾನುವಾರದಿಂದ ಪ್ರಾರಂಭಗೊಂಡು ಅಕ್ಟೋಬರ್ 20ರ ಮಂಗಳವಾರದವರೆಗೆ ಆಚರಿಸಲ್ಪಡುತ್ತಿದೆ. ಕಡೆಯ ಎರಡು ದಿನಗಳನ್ನು ಮಹಾನವಮಿ ಮತ್ತು ವಿಜಯದಶಮಿ ಎಂದು ಕರೆದು, ಒಂಭತ್ತನೇ ದಿನವಾದ ಮಹಾನವಮಿಯಂದು ಆಯುಧಗಳನ್ನು ಪೂಜಿಸಲಾಗುತ್ತದೆ. ಮತ್ತು ಹತ್ತನೇ ದಿನವಾದ ವಿಜಯದಶಮಿಯಂದು ವಿಜಯದ ಸಂಕೇತವಾಗಿ ವಿಶೇಷ ಪೂಜೆ ಪುನಸ್ಕಾರಗಳ ಮೂಲಕ ದೇವಿಯನ್ನು ಆರಾಧಿಸಲಾಗುತ್ತದೆ.
ಕರ್ನಾಟಕದಲ್ಲಿ ವಿಶೇಷ ಆಚರಣೆ
ನವರಾತ್ರಿ ಅಥವಾ ದಸರಾವನ್ನು ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಕೆಲವೆಡೆ ಆಚರಿಸಲಾಗುತ್ತದೆ.ಕರ್ನಾಟಕದ ಪಾಲಿಗೆ ಇದು ನಾಡಹಬ್ಬವೇ ಆಗಿದೆ. ಸಂಸ್ಕೃತಿ, ಸಂಪ್ರದಾಯ, ಪುರಾಣ, ಇತಿಹಾಸ ಎಲ್ಲವನ್ನು ಒಳಗೊಂಡ ಹಬ್ಬವಾಗಿ ನವರಾತ್ರಿ ಅಥವಾ ದಸರಾ ಅತ್ಯಂತ ವೈಭವದಿಂದ ಮತ್ತು ಸಡಗರದಿಂದ ಆಚರಿಸಲಾಗುತ್ತದೆ.
ದಸರಾ ಇತಿಹಾಸ ಏನು..?
ಪಾಂಡವರು ತಮ್ಮ ಅಜ್ಞಾತವಾಸದ ಸಂದರ್ಭದಲ್ಲಿ ಆಯುಧಗಳನ್ನು ಶಮಿವೃಕ್ಷದಲ್ಲಿ ಅಂದರೆ ಬನ್ನಿ ಮರದಲ್ಲಿ ಅಡಗಿಸಿಟ್ಟಿರುತ್ತಾರೆ. ಅವರು ಅಜ್ಞಾತವಾಸವನ್ನು ಮುಗಿಸಿಕೊಂಡು ಬಂದು ತಮ್ಮ ಆಯುಧಗಳನ್ನು ತೆಗೆದುಕೊಂಡ ದಿನವೇ ಮಹಾನವಮಿ ಮತ್ತು ವಿಜಯದಶಮಿ ಎಂದು ಹೇಳಲಾಗುತ್ತದೆ. ಮಹಾನವಮಿ ಮತ್ತು ವಿಜಯದಶಮಿಯಂದು ಪರಸ್ಪರ ಬನ್ನಿ ಎಲೆಗಳನ್ನು ಹಂಚಿಕೊಳ್ಳುವ ಮೂಲಕ ಬದುಕು ಬಂಗಾರವಾಗಲಿ ಎಂದು ಹಾರೈಸುವುದು ಇದೇ ಕಾರಣಕ್ಕಾಗಿ.
ಪೌರಾಣಿಕ ಹಿನ್ನೆಲೆ ಏನು..?
ಪೌರಾಣಿಕವಾಗಿ ಮತ್ತೊಂದು ಹಿನ್ನೆಲೆಯಲ್ಲಿ ನೋಡುವುದಾದರೆ ಚಾಮುಂಡೇಶ್ವರಿಯು ಎಂಟು ದಿನಗಳ ಕಾಲ ವಿವಿಧ ಅವತಾರಗಳನ್ನು ತಾಳಿ ಮಹಿಷಾಸುರನೊಂದಿಗೆ ಕಾದಾಡಿ, ಅಂತಿಮವಾಗಿ ಮಹಾನವಮಿಯಂದು ಆತನನ್ನು ವಧಿಸುತ್ತಾಳೆ. ಆಕೆಯ ಗೆಲುವನ್ನು ಸಂಭ್ರಮಿಸಿದ ದಿನವೇ ವಿಜಯದಶಮಿ ಎಂದು ಹೇಳಲಾಗುತ್ತದೆ.
ಹಾಗೆಯೇ ಐತಿಹಾಸಿಕವಾಗಿ ನೋಡುವುದಾದರೆ ಚಾಮುಂಡೇಶ್ವರಿಯು ಮೈಸೂರು ರಾಜಮನೆತನದ ಕುಲದೇವತೆಯಾಗಿದ್ದು, ತವರು ಮನೆಯಲ್ಲಿ ಹಬ್ಬವನ್ನು ಆಚರಿಸಲು, ಚಾಮುಂಡಿ ಬೆಟ್ಟದಿಂದ ಮೈಸೂರು ಅರಮನೆಗೆ ಆಗಮಿಸುತ್ತಾಳೆ.
ಮೈಸೂರಲ್ಲಿ ದಸರಾಗೆ ಚಾಲನೆ…ಲಕ್ಷ ಲಕ್ಷ ಜನ ಭೇಟಿ!
1610ರಲ್ಲಿ ಮೈಸೂರಿನ ಮೊದಲ ಒಡೆಯರ್ ಆದ ರಾಜ ಒಡೆಯರ್ ಅವರ ಆಡಳಿತದ ಅವಧಿಯಲ್ಲಿ ಶ್ರೀರಂಗಪಟ್ಟಣದ ಕಾವೇರಿ ನದಿಯ ಉತ್ತರ ದಿಕ್ಕಿನ ಗೌರಿಕಡುವೆ ಎನ್ನುವಲ್ಲಿ ಮೊದಲಿಗೆ ನವರಾತ್ರಿ ಅಥವಾ ದಸರಾ ಹಬ್ಬಕ್ಕೆ ಮೈಸೂರು ಪ್ರಾಂತ್ಯದಲ್ಲಿ ಚಾಲನೆ ನೀಡಲಾಯಿತು. ಇದು ಮೂಲತಃ ವಿಜಯನಗರ ಸಾಮ್ರಾಜ್ಯದಿಂದ ಆಚರಣೆಗೆ ಬಂದಂತಹ ಒಂದು ಪದ್ಧತಿಯಾಗಿದೆ. 1799 ರಿಂದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಯ ಸಮಯದಿಂದ ಈ ಹಬ್ಬವು ಶ್ರೀರಂಗಪಟ್ಟಣದಿಂದ ಮೈಸೂರಿಗೆ ವರ್ಗಾವಣೆಗೊಂಡಿತು.
ಮೈಸೂರು ದಸರಾವನ್ನು ನೋಡಲು ಕೇವಲ ರಾಜ್ಯದ ವಿವಿಧ ಭಾಗಗಳಿಂದ ಅಷ್ಟೇ ಅಲ್ಲದೆ ವಿದೇಶಗಳಿಂದಲೂ ಪ್ರವಾಸಿಗರು ಆಗಮಿಸುತ್ತಾರೆ. ಈ ದಸರಾ ಅಥವಾ ನವರಾತ್ರಿ ಹಬ್ಬವು ಕರ್ನಾಟಕದಲ್ಲಿ ಸರ್ಕಾರ ಮತ್ತು ರಾಜಮನೆತನದ ಸಮ್ಮಿಶ್ರ ಹಬ್ಬವಾಗಿ ಆಚರಿಸಲ್ಪಡುತ್ತದೆ. ಅಂದರೆ 9 ದಿನಗಳ ಕಾಲ ಅರಮನೆಯಲ್ಲಿ ಖಾಸಗಿ ದರ್ಬಾರ್, ರಾಜಮನೆತನದ ಪದ್ಧತಿಯಂತೆ ಧಾರ್ಮಿಕ ಆಚರಣೆಗಳು ಪೂಜೆ ಪುನಸ್ಕಾರಗಳು ನಡೆದರೆ, ಅರಮನೆಯ ಹೊರಭಾಗದಲ್ಲಿ ಸರ್ಕಾರದ ಅಧಿಪತ್ಯದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತವೆ. ವಿಜಯದಶಮಿಯಂದು 750ಕೆಜಿ ತೂಕದ ಚಿನ್ನದ ಮಂಟಪದಲ್ಲಿ ನಾಡದೇವತೆಯಾದ ಚಾಮುಂಡೇಶ್ವರಿಯನ್ನು ಕುಳ್ಳಿರಿಸಿ, ಆನೆಯ ಮೇಲೆ ಇರಿಸಿ, ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ಮೆರವಣಿಗೆ ಮಾಡಲಾಗುತ್ತದೆ. ಆಗ ನಾಡದೇವಿ ಚಾಮುಂಡೇಶ್ವರಿಗೆ ಕುಶಾಲ ತೋಪು ಮತ್ತು ಸರ್ಕಾರದ ಅಧಿಕಾರಿಗಳಿಂದ ಪುಷ್ಪಾರ್ಚನೆಯ ಮೂಲಕ ವಂದನೆಗಳನ್ನು ಸಲ್ಲಿಸಲಾಗುತ್ತದೆ.
ದಸರಾ ಅಥವಾ ನವರಾತ್ರಿ ಭಾರತದಾದ್ಯಂತ ತಮ್ಮ ಪರಂಪರೆಗೆ ಅನುಸಾರವಾಗಿ ಆಚರಿಸುವ ಸಂಗೀತ, ಸಾಹಿತ್ಯ, ಸಂಸ್ಕೃತಿ, ಕಲೆ, ಆಯುಧಗಳ ರೂಪಕವಾಗಿ, ಎರಡು ವಿಭಿನ್ನ ಭಾವಗಳ ಅಂದರೆ ಒಂದೆಡೆ ಶಾಂತಿ ಮತ್ತೊಂದೆಡೆ ಕ್ರಾಂತಿ ಎರಡನ್ನೂ ಒಳಗೊಂಡ ಅತ್ಯಂತ ವಿಶಿಷ್ಟ ಶೈಲಿಯ ಹಬ್ಬವಾಗಿ ಇದು ಪರಿಣಮಿಸಿದೆ. ರಾಜ್ಯದ ಪ್ರತಿ ಊರಲ್ಲಿ ದಸರಾ ರಂಗು ಶುರುವಾಗಿದೆ.
ಸಮಸ್ತ ಜನತೆಗೆ ದಸರಾ ಶುಭಾಶಯಗಳು







