ಪುತ್ತೂರು: ವ್ಯಕ್ತಿಯೊಬ್ಬ ಪೊಲೀಸ್ ಕಥೆ ಹೇಳಿ, ಗಾಂಜಾ ಪತ್ತೆ ಹಚ್ಚಲು ಬಂದಿರುವುದಾಗಿ ನಂಬಿಸಿ ಯುವತಿಯನ್ನು ವಂಚಿಸಿದ ಘಟನೆ, ಭಾನುವಾರದಂದು ಕುಂಬ್ರದ ಜ್ಯೂಸ್ ಆ್ಯಂಡ್ ಚಾಟ್ಸ್ ಅಂಗಡಿಯಲ್ಲಿ ನಡೆದಿದೆ. ಅಂಗಡಿಗೆ ಭೇಟಿ ನೀಡಿದ ಅಪರಿಚಿತ ವ್ಯಕ್ತಿ ಜ್ಯೂಸ್ ಆ್ಯಂಡ್ ಚಾಟ್ಸ್ ಅಂಗಡಿಯಲ್ಲಿದ್ದ ಯುವತಿಯನ್ನು ಉದ್ದೇಶಿಸಿ “ಕುಂಬ್ರಕಟ್ಟೆಯ ಬಳಿ ನಮ್ಮ ಪೊಲೀಸ್ ಜೀಪ್ ನಿಂತಿದೆ. ನಾವಿಲ್ಲಿ ಗಾಂಜಾ ದಂಧೆಕೋರರನ್ನು ಹಿಡಿಯಲು ಬಂದಿದ್ದೇವೆ. ಈ ಕಾರ್ಯಾಚರಣೆಯಲ್ಲಿ ಗಾಂಜಾ ಸಿಕ್ಕರೆ ನಮಗೆ ಭಾರಿ ಹಣ ಮತ್ತು ಆಕರ್ಷಕ ಐಫೋನ್ ಸಿಗುತ್ತದೆ. ನಮಗೆ ಕಾರ್ಯಾಚರಣೆಯಲ್ಲಿ ಸಹಕಾರ ನೀಡಿದರೆ ನಮ್ಮಲ್ಲಿರುವ ಐಫೋನ್ ನಿಮಗೂ ಕೊಡುವುದಾಗಿ ನಂಬಿಸಿದ್ದಾರೆ”. ಬಳಿಕ ಅವರು ಯುವತಿಯ ಊರು ಮನೆಯ ವಿಳಾಸವನ್ನು ಕೇಳಿ, ನಿಮ್ಮ ತಂದೆ ಎಲ್ಲ ನನಗೆ ಚೆನ್ನಾಗಿ ಗೊತ್ತಿದ್ದಾರೆ ಎಂದು ಪರಿಚಯಸ್ಥನಂತೆ ನಟಿಸಿದ್ದಾನೆ. ಈ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯು ನನಗೆ ತುರ್ತಾಗಿ 3500ರೂಪಾಯಿ ಬೇಕೆಂದು ಯುವತಿಯ ಬಳಿ ಕೇಳಿದ್ದಾನೆ. ಅದಕ್ಕೆ ಯುವತಿಯು ಗೂಗಲ್ ಪೇ ಮಾಡುವುದಾಗಿ ಹೇಳಿದಾಗ ವ್ಯಕ್ತಿಯು ನನಗೆ ನಗದು ಹಣದ ಅವಶ್ಯಕತೆ ಇದೆ ಎಂದು ತಿಳಿಸಿ, ಯುವತಿಯ ಬಳಿಯಿಂದ 3500ರೂಪಾಯಿಗಳನ್ನು ಪಡೆದುಕೊಂಡಿದ್ದಾನೆ. ನಂತರ ಅಪರಿಚಿತ ವ್ಯಕ್ತಿಯು ಬೈಕ್ ಏರಿ ಪರಾರಿಯಾಗಿದ್ದಾನೆ ಎನ್ನುವ ಮಾಹಿತಿ ಲಭಿಸಿದೆ. ಹಣ ಪಡೆದುಕೊಂಡು ಹೋದ ಪೊಲೀಸ್ ಎಷ್ಟು ಹೊತ್ತಾದರೂ ಬಾರದಿರುವುದನ್ನು ಕಂಡು ಯುವತಿಯು ಕುಂಬ್ರಕಟ್ಟೆಯ ಬಳಿ ಹೋಗಿ ನೋಡಿದಾಗ ನಿಜವಾದ ಸಂಗತಿ ಬೆಳಕಿಗೆ ಬಂದಿದೆ. ಅಲ್ಲಿ ಆ ವ್ಯಕ್ತಿಯಾಗಲಿ, ಪೊಲೀಸ್ ಜೀಪ್ ಆಗಲಿ ಏನೂ ಇರಲಿಲ್ಲ. ಆಗ ಯುವತಿಗೆ ತಾನು ವಂಚನೆಗೆ ಒಳಗಾಗಿರುವುದರ ಅರಿವಾಗಿದೆ.
•ಬಂಟ್ವಾಳ: ದನದ ಮಾಂಸ ವಶ
ಬಂಟ್ವಾಳ: ಅಕ್ರಮವಾಗಿ ಮಾರಾಟ ಮಾಡಲು ಸಂಗ್ರಹಿಸಿಟ್ಟಿದ್ದ 11ಕೆಜಿ ದನದ ಮಾಂಸವನ್ನು ಪೊಲೀಸರು ವಶಪಡಿಸಿಕೊಂಡ ಘಟನೆ, ಕಾವಳಪಡೂರು ಗ್ರಾಮದ ಗುಂಪುಕಲ್ಲು ಎನ್ನುವಲ್ಲಿ ನಡೆದಿದೆ. ಖಚಿತವಾದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಗುಂಪುಕಲ್ಲು ನಿವಾಸಿಯಾದ ಸಿರಾಜ್ ಅವರ ಮನೆಯ ಹಿಂಬದಿಯ ಶೆಡ್ ಗೆ ತೆರಳಿ ಪರಿಶೀಲನೆಯನ್ನು ನಡೆಸಿದಾಗ, ಫ್ರಿಡ್ಜ್ ನ ಮೇಲ್ಭಾಗದಲ್ಲಿ ಪ್ಲಾಸ್ಟಿಕ್ ಕವರ್ ನಲ್ಲಿ ಮಾಂಸ ಪತ್ತೆಯಾಗಿದೆ ಎನ್ನುವ ಮಾಹಿತಿ ಲಭಿಸಿದೆ. ಒಂದು ಕೆಜಿಯಂತೆ ಪಾರದರ್ಶಕ ಕವರ್ ಗಳಲ್ಲಿ 10 ಕೆಜಿ ಮತ್ತು ಕಪ್ಪು ಕವರ್ ಒಂದರಲ್ಲಿ ಒಂದು ಕೆಜಿ ಸೇರಿದಂತೆ ಒಟ್ಟು 2200 ರೂಪಾಯಿ ಬೆಲೆ ಬಾಳುವ ಸುಮಾರು 11ಕೆಜಿ ದನದ ಮಾಂಸವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಯಾದ ಸಿರಾಜ್ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾನೂನು ಕ್ರಮವನ್ನು ಕೈಗೊಳ್ಳಲಾಗಿದೆ ಎನ್ನುವ ಸಂಗತಿ ತಿಳಿದುಬಂದಿದೆ.
•ಮಂಗಳೂರು: ಅಣ್ಣನ ಕೊಲೆ; ತಮ್ಮನ ಬಂಧನ
ಮಂಗಳೂರು: ಮೊಬೈಲ್ ವಿಚಾರವಾಗಿ ಅಣ್ಣತಮ್ಮರ ನಡುವೆ ಕಲಹ ಏರ್ಪಟ್ಟಿದ್ದು, ಅದು ಕೊಲೆಯೊಂದಿಗೆ ಅಂತ್ಯ ಕಂಡಿರುವ ಘಟನೆ, ಭಾನುವಾರದಂದು ಬಿಜೈ ಕೊಟ್ಟಾರ್ ತಿರುವಿನ ಬಳಿ ನಡೆದಿದೆ. ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲದವರಾದ ಅಣ್ಣತಮ್ಮಂದಿರು ಕೊಟ್ಟಾರ್ ತಿರುವಿನ ಸಮೀಪದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದು ಕೂಲಿ ಕೆಲಸ ಮಾಡಿಕೊಂಡಿದ್ದರು. ತಾಯಿ ಗೂಡಂಗಡಿ ನಡೆಸುತ್ತಿದ್ದರು ಎನ್ನುವ ಮಾಹಿತಿ ಲಭಿಸಿದೆ. ಇಬ್ಬರಿಗೂ ಕುಡಿತದ ಚಟವಿದ್ದು, ಇಬ್ಬರ ನಡುವೆ ಮೊಬೈಲ್ ವಿಚಾರವಾಗಿ ಕಲಹ ತಾರಕಕ್ಕೇರಿದೆ. ಈ ಸಂದರ್ಭದಲ್ಲಿ ತಮ್ಮ ಕುಡಿದ ಮತ್ತಿನಲ್ಲಿ ಅಣ್ಣನಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ತಾಯಿ ಅಂಗಡಿ ಕೆಲಸ ಮುಗಿಸಿ ಮನೆಗೆ ಬಂದು ನೋಡಿದಾಗ ಹಿರಿಮಗ ರಕ್ತದ ಮಡುವಿನಲ್ಲಿ ಬಿದ್ದಿದ್ದಾನೆ. ತಕ್ಷಣ ಅವನನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಲಾಯಿತಾದರೂ ಮಾರ್ಗಮಧ್ಯದಲ್ಲೇ ಆತ ಸಾವನ್ನಪ್ಪಿದ್ದ ಎನ್ನುವ ಸಂಗತಿ ತಿಳಿದುಬಂದಿದೆ. ಕೊಲೆಯಾದ ವ್ಯಕ್ತಿಯನ್ನು ಅಡಿಯಪ್ಪ ಎಂದು, ಆರೋಪಿಯನ್ನು ರಾಜು ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
•ಬೆಳ್ತಂಗಡಿ: ಎಸ್ಐಟಿ ಸಬ್ ಇನ್ಸ್ಪೆಕ್ಟರ್ ವಿನೋದ್ ರೆಡ್ಡಿ ಅಮಾನತು
ಬೆಳ್ತಂಗಡಿ: ಧರ್ಮಸ್ಥಳ ಬುರುಡೆ ಪ್ರಕರಣದ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಬ್ ಇನ್ಸ್ಪೆಕ್ಟರ್ ವಿನೋದ್ ರೆಡ್ಡಿ ಅವರನ್ನು ಅಮಾನತು ಮಾಡಿರುವ ಘಟನೆ, ಸೋಮವಾರದಂದು ನಡೆದಿದೆ. ಬುರುಡೆ ಪ್ರಕರಣದ ಹಿನ್ನೆಲೆಯಲ್ಲಿ ವಿಶೇಷ ತನಿಖಾ ದಳವು ಕಳೆದ ಒಂದು ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪೊಲೀಸ್ ಇನ್ಸ್ಪೆಕ್ಟರ್ ಆಗಿ, ಬಳಿಕ ಮುಂಡಗೋಡು ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದ ವಿನೋದ್ ರೆಡ್ಡಿ ವರ್ಗಾವಣೆ ವಿಚಾರವಾಗಿ ಡೀಲಿಂಗ್ ಹಾಗೂ ತಿಂಗಳ ಮಾಮೂಲಿ ವಿಚಾರವಾಗಿ ಮಾತನಾಡಿದ ಆಡಿಯೋ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲಾ ಎಸ್ ಪಿ ದೀಪನ್, ಪಿಎಸ್ಐ ಕಿರಣ್ ಪಾಟೀಲ್ ಮತ್ತು ಪಿಎಸ್ಐ ಕೃಷ್ಣ ಮತ್ತು ವಿನೋದ್ ರೆಡ್ಡಿ ಸೇರಿ ವಿಶೇಷ ತನಿಖಾ ದಳದ ಪ್ರಾಥಮಿಕ ತನಿಖೆಯ ಬಳಿಕ ಅಮಾನತುಗೊಳಿಸಲಾಗಿದೆ ಎನ್ನುವ ಸಂಗತಿ ತಿಳಿದುಬಂದಿದೆ.







