ತೀರ್ಥಹಳ್ಳಿ: ರೈತರು, ಕೃಷಿ ಕಾರ್ಮಿಕರ ಬದುಕನ್ನೇ ದುರ್ಬರಗೊಳಿಸುವ ಕಸ್ತೂರಿ ರಂಗನ್ ವರದಿ ಜಾರಿಯನ್ನು ವಿರೋಧಿಸಿ ಪಾದಯಾತ್ರೆ ಮತ್ತು ಬಹಿರಂಗ ಸಭೆಗೆ ಸಿದ್ಧತೆ ಜೋರಾಗಿದೆ.
ತೀರ್ಥಹಳ್ಳಿಯಲ್ಲಿ ಪಕ್ಷಾತೀತವಾಗಿ ಈ ಹೋರಾಟ ಹಮ್ಮಿಕೊಂಡಿದ್ದು ಪಶ್ಚಿಮ ಘಟ್ಟ ರೈತ ಸಹಕಾರ ವೇದಿಕೆ ವತಿಯಿಂದ ದಿನಾಂಕ: 05-09-2026, ಶನಿವಾರ ಬೆಳಿಗ್ಗೆ 09 ಗಂಟೆಗೆ ಉಂಟೂರು ಕಟ್ಟೆ ಕೈಮರದಿಂದ ಪ್ರಾರಂಭಗೊಂಡು ತಾಲೂಕು ಕಚೇರಿಯ ಆವರಣದಲ್ಲಿ ಬೃಹತ್ ಪ್ರತಿಭಟನೆ ಸಭೆಯನ್ನು ನಡೆಸಿ ತಾಲೂಕು ದಂಡಾಧಿಕಾರಿಗೆ ಮನವಿ ನೀಡಲಾಗುತ್ತದೆ ಎಂದು ಪಶ್ಚಿಮ ಘಟ್ಟ ರೈತ ಸಹಕಾರ ವೇದಿಕೆ
ಅಧ್ಯಕ್ಷರಾದ ಡಾ. ಆರ್. ಎಂ.ಮಂಜುನಾಥ ಗೌಡ ಹೇಳಿದ್ದಾರೆ.
ಬಸವಾನಿ ವಿಜಯದೇವ್ ಸಭಾಂಗಣದಲ್ಲಿ ಡಾ.ಆರ್.ಎಂ.ಮಂಜುನಾಥ ಗೌಡ ಮಾತನಾಡಿ, ಎಲ್ಲಾ ಸಹಕಾರಿ ಸಂಸ್ಥೆ ಹಾಗೂ ಸಂಘ ಸಂಸ್ಥೆಗಳನ್ನು ಒಳಗೊಂಡು ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ.
ಕರ್ನಾಟಕ ರಾಜ್ಯದ 20,668 ಚದುರ ಕಿ.ಮೀ ಮಲೆನಾಡು ಪ್ರದೇಶದ 1449 ಗ್ರಾಮಗಳನ್ನು ಪರಿಸರ ಸೂಕ್ಷ್ಮವಲಯವೆಂದು ಘೋಷಿಸಲು ಕೇಂದ್ರ ಸರ್ಕಾರ 7ನೇ ಕರಡು ಅಧಿಸೂಚನೆ ಹೊರಡಿಸಿದೆ. ಇದರಲ್ಲಿ ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ, ತೀರ್ಥಹಳ್ಳಿ, ಹೊಸನಗರ, ಸಾಗರ, ಶಿಕಾರಿಪುರ ತಾಲ್ಲೂಕಿನ 473 ಗ್ರಾಮಗಳನ್ನು ಸೇರಿಸಲಾಗಿದೆ. ಈ ಅಧಿಸೂಚನೆ ಜಾರಿಗೊಂಡರೆ ಸೂಕ್ಷ್ಮ ವಲಯದ ಕಠೋರ ಕಾಯ್ದೆಗಳಿಂದ ಗ್ರಾಮ ಜೀವನ ಅಸ್ತವ್ಯಸ್ತವಾಗುವ ಆತಂಕ ಉಂಟಾಗಿದೆ. ಹಾಗಾಗಿ ಸರ್ಕಾರಗಳ ಗಮನ ಸೆಳೆಯಲು ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಮಲೆನಾಡು ಗ್ರಾಮಗಳ ವಸತಿ ಪ್ರದೇಶ, ಕೃಷಿಭೂಮಿ, ಪಟ್ಟಾಭೂಮಿ, ನೀರಿನ ಮೂಲ, ಗೋಮಾಳ, ಗ್ರಾಮದ ರಸ್ತೆ ಮತ್ತಿತರ ಮೂಲಸೌಕರ್ಯಗಳನ್ನು ಸೂಕ್ಷ್ಮವಲಯದಿಂದ ಹೊರಗಿಡದೇ, ಇಡೀ ಗ್ರಾಮವನ್ನೇ ಸೂಕ್ಷ್ಮವಲಯವೆಂದು ಘೋಷಿಸಲಾಗಿದೆ. ಇದು ಆತಂಕಕ್ಕೆ ಕಾರಣವಾಗಿದೆ. ಗ್ರಾಮಸಭೆಯಲ್ಲಿ ಚರ್ಚಿಸದೇ, ಗ್ರಾಮದ ಜನರ ವಿಶ್ವಾಸವನ್ನು ಅಲಕ್ಷಿಸಿ, ಅಧಿಸೂಚನೆ ಹೊರಡಿಸಿರುವುದು ಗ್ರಾಮವಾಸಿಗಳ ಆತಂಕವಾಗಿದೆ. ಗ್ರಾಮದ ಜನರೇ ಸೂಕ್ಷ್ಮವಲಯದ ಸರಹದ್ದುಗಳನ್ನು ಗುರುತಿಸಬೇಕು ಮತ್ತು ಸರ್ಕಾರ ಅದನ್ನು ಒಪ್ಪಬೇಕು
ಸೂಕ್ಷ್ಮ ಪ್ರದೇಶವೆಂದು ಗುರುತಿಸಲ್ಪಡುವ ಜಾಗಗಳಲ್ಲಿ ಹತ್ತಾರು ದಶಕಗಳಿಂದ ಕೃಷಿ ಮಾಡುತ್ತಿರುವ ಸಾವಿರಾರು ರೈತ ಕುಟುಂಬಗಳಿಗೆ ಹಕ್ಕುಪತ್ರ ಸಿಕ್ಕಿಲ್ಲ. ವಾಸವಿರುವ ಮನೆಗಳಿಗೂ ದಾಖಲೆಗಳನ್ನು ನೀಡಲಾಗಿಲ್ಲ. ಅರ್ಜಿ ನಮೂನೆ 50,53,57 ಮತ್ತು ಮನೆಗಳಿಗಾಗಿ 940 ರಲ್ಲಿ ಅರ್ಜಿ ಸಲ್ಲಿಸಿ ಮಂಜೂರಾತಿಗಾಗಿ ಕಾದಿರುವ ಕುಟುಂಬಗಳು ಸೂಕ್ಷ್ಮ ಪ್ರದೇಶ ಘೋಷಣೆಯಿಂದ ತಾವು ವಾಸವಿರುವ ಮತ್ತು ಕೃಷಿ ಮಾಡುತ್ತಿರುವ ಜಾಗದ ಮೇಲಿನ ಹಕ್ಕು ಕಳೆದು ಕೊಳ್ಳುವ ಆತಂಕದಲ್ಲಿದ್ದಾರೆ ಎಂದಿದ್ದಾರೆ.
ತೀರ್ಥಹಳ್ಳಿ ತಾಲ್ಲೂಕಿನ 146 ಗ್ರಾಮಗಳು, ಸಾಗರದ 126 ಗ್ರಾಮಗಳು, ಹೊಸನಗರದ 125 ಗ್ರಾಮಗಳು, ಶಿವಮೊಗ್ಗದ 64 ಗ್ರಾಮಗಳು, ಶಿಕಾರಿಪುರದ 12 ಗ್ರಾಮಗಳು ಭಾದಿತ ಗ್ರಾಮಗಳಾಗಿದ್ದು, ಸೂಕ್ಷ್ಮ ವಲಯದ ಗ್ರಾಮಗಳಲ್ಲಿ ಕೃಷಿ ತೋಟಗಾರಿಕೆ ಅಭಿವೃದ್ಧಿ, ರಸ್ತೆ ಮತ್ತಿತರ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಅಡೆತಡೆ ಉಂಟಾಗುವ ಆತಂಕವೂ ಇದೆ. ರೈತರ ಬದುಕಿನ ಮೇಲೆ ಪರಿಣಾಮ ಬೀರುವ ಯಾವುದೇ ನಿರ್ಧಾರ ಗ್ರಾಮದ ಜನರ ಬದುಕಿಗೆ ಮಾರಕವಾಗ ಕೂಡದು. ಆದ್ದರಿಂದ ಸೂಕ್ಷ್ಮ ವಲಯದ ಸರಹದ್ದು ಗಡಿ ಅಂತಿಮಗೊಳ್ಳುವ ಮೊದಲು ಗ್ರಾಮಸಭೆ, ರೈತರು, ಸಹಕಾರಿ ಸಂಸ್ಥೆಗಳು ಮತ್ತು ಸ್ಥಳೀಯ ತಜ್ಞರ ಭಾಗವಹಿಸುವಿಕೆಯನ್ನು ಸರ್ಕಾರ ಖಚಿತ ಪಡಿಸಬೇಕು, ಒಪ್ಪಬೇಕು. ಜನರ ಆತಂಕಗಳನ್ನು ಪರಿಹರಿಸಬೇಕು. ಅಲ್ಲಿಯವರೆಗೆ ಈ ಜನವಿರೋಧಿ ಅಧಿಸೂಚನೆಯನ್ನು ಒಪ್ಪಲಾಗದು ಎಂದು 25 ಸೆಪ್ಟೆಂಬರ್ 2026ರ ಒಳಗಾಗಿ ಕೇಂದ್ರ ಸರ್ಕಾರದ ಅರಣ್ಯ, ಪರಿಸರ ಮತ್ತು ಹವಾಮಾನ ಮಂತ್ರಾಲಯಕ್ಕೆ ಲಿಖಿತ ತಕರಾರುಗಳನ್ನು ವ್ಯಕ್ತಿ, ಸಂಸ್ಥೆಗಳು, ಗ್ರಾಮಗಳು ಸಲ್ಲಿಸಬೇಕೆಂದು ವಿನಂತಿಸುತ್ತೇವೆ ಎಂದು ಮನವಿ ಮಾಡಿದರು. ಜಿಲ್ಲೆಯ ರೈತ ಬಾಂಧವರು, ಸಹಕಾರಿಗಳು, ಕೃಷಿ ಕಾರ್ಮಿಕರು, ಸಾವಿರ ಸಾವಿರ ಸಂಖ್ಯೆಯಲ್ಲಿ ಭಾಗವಹಿಸಿ ಅತ್ಯಂತ ಯಶಸ್ವಿಗೊಳಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದರು.
ಸಹಕಾರ ನಾಯಕ ವಿಜಯದೇವ್, ಡಾ. ಸುಂದರೇಶ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ರತ್ನಾಕರ್ ಶೆಟ್ಟಿ , ಶಶಿಧರ್ ರೆಹಮತುಲ್ಲಾ ಅಸಾದಿ,ಶಶಾಂಕ್ ಹೆಗಡೆ, ನಾಬಳ ಸಚಿಂದ್ರ ಹೆಗಡೆ, ಜೀನ ವಿಕ್ಟರ್, ರಾಘವೇಂದ್ರ ಶೆಟ್ಟಿ,ಸುಶೀಲ ಶೆಟ್ಟಿ, ಕಟ್ಟೆಹಕ್ಕು ಕಿರಣ್, ಹಾರೋಗೋಳಿಗೆ ಪದ್ಮಾನಾಬ್, ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.







