ಮಲ್ನಾಡ್ ಟಾಪ್ ನ್ಯೂಸ್
ವೃದ್ದೆ ಮೃತ ದೇಹ ಬಾವಿಯಲ್ಲಿ ಪತ್ತೆ!
– ಕೊಪ್ಪ ತಾಲೂಕು ಹೊಕ್ಕಳಿಕೆ ಸಮೀಪದ ಕಾರ್ ಬೈಲ್ ಎಂಬಲ್ಲಿ ಘಟನೆ
– ಮನನೊಂದು ಬಾವಿಗೆ ಹಾರಿದರೇ?: ಹರಿಹರಪುರ ಠಾಣೆಯಲ್ಲಿ ಘಟನೆ
– ತೀರ್ಥಹಳ್ಳಿ ಬಂಡೆ ಸ್ಫೋಟ: ಟ್ರoಚ್ ಹೊಡೆದ ಅಧಿಕಾರಿಗಳು!
– ಎನ್.ಆರ್.ಪುರ: ಆಸ್ತಿಗಾಗಿ ಹೆತ್ತ ತಾಯಿಯನ್ನೇ ಕೊಂದ ಮಗಳು!
– ದೆಹಲಿ ಸ್ಫೋಟ ಖಂಡಿಸಿ ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ
NAMMUR EXPRESS NEWS
ತೀರ್ಥಹಳ್ಳಿ/ಕೊಪ್ಪ: ಕೊಪ್ಪ ತಾಲೂಕಿನ ಕವಡೆ ಕಟ್ಟೆ ಸಮೀಪದ ಕಾರ್ ಬೈಲ್ ಎಂಬಲ್ಲಿ ವೃದ್ದೆಯೊಬ್ಬರ ಮೃತ ದೇಹ ಬಾವಿಯಲ್ಲಿ ಪತ್ತೆಯಾಗಿದ್ದು ಹರಿಹರಪುರ ಠಾಣೆಯಲ್ಲಿ 306 ಕೇಸು ದಾಖಲಾಗಿದೆ.
ಹೊಕ್ಕಳಿಕೆ ಸಮೀಪದ ಕಾರ್ ಬೈಲ್ ಗ್ರಾಮದ ದಿ. ಪುಟ್ಟಪ್ಪ ಅವರ ಪತ್ನಿ ಲಕ್ಷ್ಮಿ ದೇವಿ (75) ಮೃತರು. ಶನಿವಾರ ಸಂಜೆ ಬಾವಿಯಲ್ಲಿ ಮೃತ ದೇಹ ಪತ್ತೆಯಾಗಿದ್ದು, ಹರಿಹರಪುರ ಠಾಣೆ ಪೊಲೀಸರು ಸ್ಥಳ ಮಹಜರು ಮಾಡಿದ್ದಾರೆ. ಮೃತರಿಗೆ ಓರ್ವ ಗಂಡು ಮಗ, ಸೊಸೆ, ಮಗಳು ಮತ್ತು ಕುಟುಂಬದವರು ಇದ್ದಾರೆ. ಕೊಪ್ಪ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದು, ಹರಿಹರಪುರ ಠಾಣೆ ಪೊಲೀಸರು ಮಗಳ ದೂರಿನ ಮೇರೆಗೆ ಆತ್ಮಹತ್ಯೆ ಪ್ರಚೋದನೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ತೀರ್ಥಹಳ್ಳಿ ಬಂಡೆ ಸ್ಫೋಟ: ಟ್ರoಚ್ ಹೊಡೆದ ಅಧಿಕಾರಿಗಳು!
ತೀರ್ಥಹಳ್ಳಿ: ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ತೀರ್ಥಹಳ್ಳಿ ತಹಸೀಲ್ದಾರ್ ಸಮರ ಸಾರಿದ್ದಾರೆ. ಮೇಲಿನ ಕುರುವಳ್ಳಿ ಬಂಡೆಯಲ್ಲಿ ರಾಜಸ್ವ ನಿರೀಕ್ಷಕರು ಕಸಬಾ ಹಾಗೂ ಪಿಡಿಓ ಸಿಬ್ಬಂದಿಯೊಂದಿಗೆ ಅಕ್ರಮ ಕಲ್ಲು ಗಣಿಗಾರಿಕೆ ತಡೆ ಹಿಡಿಯಲು ಜೆಸಿಬಿ ಮುಖಾಂತರ ಟ್ರಂಚ್ ಹೊಡಿಸಲಾಗಿದೆ. ಈ ಮುಖಾಂತರ ಅಕ್ರಮಕ್ಕೆ ಕಡಿವಾಣ ಹಾಕಲಾಗಿದೆ.
ಮೇಲಿನ ಕುರುವಳ್ಳಿ ರಾಷ್ಟ್ರೀಯ ಹೆದ್ದಾರಿ ಸಮೀಪವೇ ಅಕ್ರಮ ನಡೆಯುತ್ತಿದ್ದು, ಇದೀಗ ತಹಸೀಲ್ದಾರ್ ಫೀಲ್ಡ್ಗೆ ಇಳಿದು ಕ್ರಮ ತೆಗೆದುಕೊಂಡಿದ್ದಾರೆ. ಘಟನೆ ಹಿಂದೆ ಅನೇಕ ಅನುಮಾನ ಇದ್ದು ಲಕ್ಷ ಲಕ್ಷ ಡೀಲ್ ನಡೆಯುತ್ತಿದೆ ಎನ್ನಲಾಗಿದೆ.
ಎನ್.ಆರ್.ಪುರ: ಆಸ್ತಿಗಾಗಿ ಹೆತ್ತ ತಾಯಿಯನ್ನೇ ಕೊಂದ ಮಗಳು!
ನರಸಿಂಹ ರಾಜಪುರ: ಆಸ್ತಿಗಾಗಿ ಮಗಳೇ ತನ್ನ ಹೆತ್ತ ತಾಯಿಯನ್ನು ಕೊಂದಿರುವ ಆಘಾತಕಾರಿ ಘಟನೆಯೊಂದು ಎನ್.ಆರ್.ಪುರ ತಾಲೂಕಿನ ಬಂಡಿಮಠ ಗ್ರಾಮದಲ್ಲಿ ನ.10ರ ಸೋಮವಾರ ತಡರಾತ್ರಿ ನಡೆದಿದೆ. ಕುಸುಮ (62) ಮೃತ ತಾಯಿ, ಸುಧಾ (35) ಆಸ್ತಿಗಾಗಿ ಅಮ್ಮನನ್ನು ಕೊಂದ ಪಾಪಿ ಮಗಳು. ಕೂಲಿ ಕೆಲಸಕ್ಕಾಗಿ ಬೇರೆ ಊರಿನಿಂದ ಬಂದು ಬಂಡಿಮಠದಲ್ಲಿ ವಾಸವಿದ್ದ ಕುಟುಂಬವು, ಊರಿನಲ್ಲಿರೋ ಆಸ್ತಿ ಕೈತಪ್ಪುವುದು ಎಂದು ಸೋಮವಾರ ರಾತ್ರಿ ಊಟ ಮಾಡಿ ಮಲಗಿದ್ದ ತಾಯಿಯನ್ನು ಮಗಳೇ ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆಗೈದಿದ್ದಾಳೆ. ಘಟನೆ ಕುರಿತು ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೆಹಲಿ ಸ್ಫೋಟ ಖಂಡಿಸಿ ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ
ದೇಶದ ರಾಜಧಾನಿ ದೆಹಲಿಯಲ್ಲಿ ನಡೆದಂತಹ ಉಗ್ರರ ದಾಳಿಯನ್ನು ಖಂಡಿಸಿ ಹಾಗೂ ಪದೇ ಪದೇ ದೇಶದಲ್ಲಿ ಉಗ್ರರ ದಾಳಿಯಾಗುತ್ತಿದ್ದರೂ ಅದನ್ನು ತಡೆಯುವಲ್ಲಿ ವಿಫಲವಾಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಸಚಿವ ಸ್ಥಾನದಿಂದ ವಜಾಗೊಳಿಸಲು ಆಗ್ರಹಿಸುತ್ತಾ ತೀರ್ಥಹಳ್ಳಿ ಯುವ ಕಾಂಗ್ರೆಸ್ ವತಿಯಿಂದ ನಾಳೆ ಬೆಳಗ್ಗೆ 11.00 ಗಂಟೆಗೆ ಸರಿಯಾಗಿ ತೀರ್ಥಹಳ್ಳಿ ತಾಲೂಕು ಕಚೇರಿ ಮುಂಭಾಗ ಪ್ರತಿಭಟನಾ ಸಭೆ ಹಮ್ಮಿಕೊಂಡಿದೆ.








