ಕಾರ್ಕಳ: ಕಾಂಗ್ರೆಸ್ ನ ಯುವ ನಾಯಕನಿಗೆ ಸಾಮಾಜಿಕ ಜಾಲತಾಣದಲ್ಲಿ ಜೀವ ಬೆದರಿಕೆ ಹಾಕಿರುವ ಆರೋಪಿಯನ್ನು ಬಂಧಿಸಿರುವ ಘಟನೆ, ಭಾನುವಾರದಂದು ತಡರಾತ್ರಿ ನಡೆದಿದೆ. ಯೋಗೀಶ್ ಆಚಾರ್ಯ ಎನ್ನುವವರಿಗೆ ಹೆಬ್ರಿ ತಾಲ್ಲೂಕಿನ ಚಾರ ಗ್ರಾಮದ ಕೃಷ್ಣ ನಾಯ್ಕ ಎನ್ನುವಾತ ಜೀವ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಅಲ್ಲದೆ ಕಳೆದ ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ “ಕಾಂಗ್ರೆಸ್ಸಿಗರು ಮುಸ್ಲಿಮರಿಗೆ ಹುಟ್ಟಿದವರು” ಎಂದು ಪೋಸ್ಟ್ ಮಾಡಿದ್ದ ಎನ್ನಲಾಗಿದೆ. ಈ ಎರಡೂ ಪ್ರಕರಣಗಳ ಹಿನ್ನೆಲೆಯಲ್ಲಿ ಪೊಲೀಸರು ಕೃಷ್ಣ ನಾಯ್ಕನನ್ನು ಬಂಧಿಸಿದರು . ಘಟನೆಗೆ ಸಂಬಂಧಿಸಿದಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧನಕ್ಕೆ ಒಳಪಡುತ್ತಿದ್ದಂತೆ ಅನಾರೋಗ್ಯದ ನೆಪವೊಡ್ಡಿ ಕೃಷ್ಣ ನಾಯ್ಕ ಉಡುಪಿಯ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾನೆ ಎನ್ನುವ ಸಂಗತಿ ತಿಳಿದುಬಂದಿದೆ
•ಪುತ್ತೂರು: ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವಂಚನೆ
ಪುತ್ತೂರು: ವ್ಯಕ್ತಿಯೊಬ್ಬರಿಗೆ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಘಟನೆ ನಡೆದಿದೆ. ತಮ್ಮನ್ನು ಮುಂಬೈ ಪೊಲೀಸರು ಹಾಗೂ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿಕೊಂಡ ಅಪರಿಚಿತ ವ್ಯಕ್ತಿಗಳು ವ್ಯಕ್ತಿಯು ಪೆಹಲ್ಲಾಮ್ ಹತ್ಯಾಕಾಂಡದ ಆರೋಪಿಗಳಿಗೆ ಹಣವನ್ನು ವರ್ಗಾವಣೆ ಮಾಡಿರುವುದಾಗಿ ಆರೋಪಿಸಿ, ಭಯವನ್ನು ಹುಟ್ಟು ಹಾಕಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ಆರೋಪಿಗಳು ವ್ಯಕ್ತಿಗೆ ವಾಟ್ಸಾಪ್ ವಿಡಿಯೋ ಕರೆಗಳನ್ನು ಮಾಡಿ, ನಿರಂತರವಾಗಿ ಬೆದರಿಕೆ ಹಾಕಿರುವುದಷ್ಟೇ ಅಲ್ಲದೆ, ಅವರ ಬ್ಯಾಂಕ್ ಖಾತೆಗಳ ಪರಿಶೀಲನೆ ಹಾಗೂ ಹಣದ ದೃಢೀಕರಣದ ನೆಪದಲ್ಲಿ ವಿವಿಧ ಬ್ಯಾಂಕ್ ಖಾತೆಗಳಿಗೆ ಆರ್ ಟಿಜಿಎಸ್ ಮೂಲಕ ಹಣವನ್ನು ವರ್ಗಾಯಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಇದನ್ನು ನಿಜವೆಂದು ನಂಬಿದ ವ್ಯಕ್ತಿಯು ಸೆಪ್ಟೆಂಬರ್ 2ರಿಂದ ಅಕ್ಟೋಬರ್ 6ರವರೆಗೆ ಹಂತಹಂತವಾಗಿ 1.31.50.000 ರೂಪಾಯಿಗಳನ್ನು ಆರೋಪಿಗಳು ಸೂಚಿಸಿರುವಂತಹ ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಬಳಿಕ ವ್ಯಕ್ತಿಗೆ ತಾನು ಸೈಬರ್ ವಂಚನೆಗೆ ಒಳಗಾಗಿರುವುದರ ಅರಿವಾಗಿ, ಸೈಬರ್ ಅಪರಾಧ ಸಹಾಯವಾಣಿಯಾದ 1930ಕ್ಕೆ ಕರೆ ಮಾಡಿ ದೂರು ನೀಡಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ವ್ಯಕ್ತಿಯು ನೀಡಿದ ದೂರಿನ ಆಧಾರದ ಮೇಲೆ ಸೈಬರ್ ವಂಚಕರ ವಿರುದ್ಧ ಅಪರಾಧ ಕ್ರಮ 42/2026ರ ಅನ್ವಯ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕಲಂ 66(ಸಿ), 66(ಡಿ), ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳ ಅಡಿಯಲ್ಲಿ ದಕ್ಷಿಣ ಕನ್ನಡ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.
•ಮಂಗಳೂರು: ಅನೈತಿಕ ಸಂಬಂಧದ ಶಂಕೆ; ಪತ್ನಿಯನ್ನು ಕೊಂದ ಪತಿ
ಮಂಗಳೂರು: ಪತ್ನಿಯು ಅನೈತಿಕ ಸಂಬಂಧವನ್ನು ಹೊಂದಿರುವ ಕುರಿತು ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ, ಪತಿಯು ಆಕೆಯನ್ನು ಕೊಂದ ಘಟನೆ, ಭಾನುವಾರದಂದು ಕಾವೂರು ಉರುಂದಾಡಿ ಗುಡ್ಡೆ ಎನ್ನುವಲ್ಲಿ ನಡೆದಿದೆ. ಶಿವಲಿಂಗಪ್ಪ ಮಾದರ ಎನ್ನುವ ವ್ಯಕ್ತಿಯು ಮೂಲತಃ ವಿಜಯಪುರ ಜಿಲ್ಲೆಯವರಾಗಿದ್ದು, ಪತ್ನಿ ಸೋನಾಲಿ ಅವರೊಂದಿಗೆ ಕಾವೂರು ಉರುಂದಾಡಿ ಗುಡ್ಡೆಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ತನ್ನ ಪತ್ನಿ ಸೋನಾಲಿಗೆ ಮತ್ತೊಬ್ಬರೊಂದಿಗೆ ಅನೈತಿಕ ಸಂಬಂಧ ಇರುವುದಾಗಿ ಶಿವಲಿಂಗಪ್ಪ ಅನುಮಾನಗೊಂಡಿದ್ದು, ಈ ವಿಚಾರವಾಗಿ ಅವರ ನಡುವೆ ಹಲವಾರು ಬಾರಿ ಜಗಳ ನಡೆದಿತ್ತು ಎನ್ನುವ ಮಾಹಿತಿ ಲಭಿಸಿದೆ. ಅದೇ ರೀತಿ ಭಾನುವಾರ ಕೂಡ ಶಿವಲಿಂಗಪ್ಪ ಮತ್ತು ಸೋನಾಲಿ ನಡುವೆ ಕಲಹ ಏರ್ಪಟ್ಟಿದ್ದು, ಅದು ಮಿತಿಮೀರಿ ಶಿವಲಿಂಗಪ್ಪ ಚಾಕುವಿನಿಂದ ಸೋನಾಲಿ ಅವರ ಕುತ್ತಿಗೆಗೆ ಇರಿದಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಗಂಭೀರವಾಗಿ ಗಾಯಗೊಂಡಿದ್ದ ಸೋನಾಲಿ ಅವರು ತೀವ್ರ ರಕ್ತಸ್ರಾವದಿಂದ ಮೃತಪಟ್ಟರು ಎನ್ನುವ ಮಾಹಿತಿ ಮೂಲಗಳಿಂದ ಲಭಿಸಿದೆ. ಘಟನೆಗೆ ಸಂಬಂಧಿಸಿದಂತೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಶಿವಲಿಂಗಪ್ಪನನ್ನು ಬಂಧಿಸಿ, ತನಿಖೆಯನ್ನು ಕೈಗೊಂಡಿದ್ದಾರೆ.







