ಕುಂದಾಪುರ: ಪತಿಯ ಕಿರುಕುಳಕ್ಕೆ ಬೇಸತ್ತು ಗೃಹಿಣಿಯೊಬ್ಬಳು ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ, ಗಂಗೊಳ್ಳಿಯಲ್ಲಿ ನಡೆದಿದೆ. ಆಲೂರಿನ ನಿವಾಸಿಯಾದ ಜಯಶ್ರೀ ಎನ್ನುವವರು 2024ರ ನವೆಂಬರ್ ತಿಂಗಳಿನಲ್ಲಿ ಅಮಾಸೆಬೈಲು ತಪ್ಲು ನಿವಾಸಿಯಾದ ಪ್ರಕಾಶ್ ಆಚಾರ್ಯ ಎನ್ನುವವರೊಡನೆ ವಿವಾಹವಾಗಿದ್ದರು. ಮದುವೆಯ ಬಳಿಕ ಪ್ರಕಾಶ್ ತನ್ನ ಸಹೋದರ ಪ್ರಭಾಕರ್ ಮತ್ತು ತಂಗಿ ಪ್ರಶಾಂತಿ ಅವರೊಂದಿಗೆ ಸೇರಿಕೊಂಡು ಜಯಶ್ರೀ ಅವರಿಗೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಅಲ್ಲದೆ ಪ್ರಕಾಶ್ ನಿನಗೆ ಮಕ್ಕಳಾದರೆ ನಾನು ನಿನ್ನನ್ನು ನೋಡುವುದಿಲ್ಲ ಎಂದು ಬೆದರಿಕೆ ಹಾಕಿದ್ದ. ಇದನ್ನು ಜಯಶ್ರೀ ತನ್ನ ತವರು ಮನೆಯವರಿಗೆ ಹೇಳಿದಾಗ ಪ್ರಕಾಶ್ ಜಯಶ್ರೀ ಅವರಿಂದ ಮೊಬೈಲ್ ಅನ್ನು ಕಸಿದುಕೊಂಡು ತನ್ನ ಬಳಿಯೇ ಇಟ್ಟುಕೊಂಡಿದ್ದ ಎನ್ನಲಾಗಿದೆ. ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಜಯಶ್ರೀ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು, ಪ್ರಕಾಶ್ ಆರು ತಿಂಗಳುಗಳ ಕಾಲ ಮನೆಗೆ ಬಾರದೆ ದೂರವಿದ್ದನು ಎನ್ನುವ ಮಾಹಿತಿ ಲಭಿಸಿದೆ. ದಾಂಪತ್ಯ ಕಲಹಕ್ಕೆ ಸಂಬಂಧಿಸಿದಂತೆ ಕಳೆದೆರಡು ದಿನಗಳ ಹಿಂದೆಯಷ್ಟೇ ಜಯಶ್ರೀ ಮತ್ತು ಪ್ರಕಾಶ್ ಆಚಾರ್ಯ ಅವರ ಕುಟುಂಬದ ನಡುವೆ ಮಾತುಕತೆ ನಡೆದಿದೆ ಎನ್ನುವ ಸಂಗತಿ ತಿಳಿದುಬಂದಿದೆ. ಈ ಸಂದರ್ಭದಲ್ಲಿ ಪ್ರಕಾಶ್ ತಾನು ಜಯಶ್ರೀ ಜೊತೆಗೆ ಸಂಸಾರ ಮಾಡುವುದಿಲ್ಲ ಎಂದು ತಿಳಿಸಿ ಆಕೆಗೆ ಮಾನಸಿಕ ಕಿರುಕುಳ ನೀಡಿದ್ದಾನೆ. ಈ ಹಿನ್ನೆಲೆಯಲ್ಲಿ ಜಯಶ್ರೀ ಅವರು ಫಿನಾಯಿಲ್ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ತಕ್ಷಣ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ, ಚಿಕಿತ್ಸೆ ನೀಡಿದರ ಪರಿಣಾಮವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಜಯಶ್ರೀ ಮನೆಯವರು ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ಲಭಿಸಿದೆ.
•ಸುಳ್ಯ: ಮೀನು ಹಿಡಿಯಲು ಹೋಗಿ ವಿದ್ಯುತ್ ಶಾಕ್ ಗೆ ಒಳಗಾದ ಇಬ್ಬರು ಯುವಕರ ಸಾವು
ಸುಳ್ಯ: ವಿದ್ಯುತ್ ಆಘಾತಕ್ಕೆ ಒಳಗಾಗಿ ಇಬ್ಬರು ಯುವಕರು ಧಾರುಣವಾಗಿ ಸಾವನ್ನಪ್ಪಿರುವ ಘಟನೆ, ಸೋಮವಾರದಂದು ಕಲ್ಮಡ್ಕದಲ್ಲಿ ನಡೆದಿದೆ. ಹೊಳಲ್ಕೆರೆ ಎನ್ನುವ ತೋಡಿನಲ್ಲಿ ತಡರಾತ್ರಿಯಲ್ಲಿ ಮೀನು ಹಿಡಿಯಲು ಹೋದ ಸಂದರ್ಭದಲ್ಲಿ, ಮಧುಸೂದನ್ ಭಟ್ ಎನ್ನುವವರ ತೋಟದಿಂದ ವಿದ್ಯುತ್ ಪ್ರವಹಿಸಿದ ಪರಿಣಾಮವಾಗಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಮೊದಲಿಗೆ ಮೂವರು ವಿದ್ಯುತ್ ಆಘಾತಕ್ಕೆ ಒಳಗಾಗಿದ್ದು, ತಕ್ಷಣ ಆಘಾತದಿಂದ ಎಚ್ಚೆತ್ತುಕೊಂಡ ಬಾಲಕ ತನ್ನ ಸಂಬಂಧಿಕರಿಗೆ ಈ ವಿಚಾರವನ್ನು ತಿಳಿಸಿದ್ದಾನೆ ಎನ್ನಲಾಗಿದೆ. ಮಾಹಿತಿ ದೊರೆಯುತಿದ್ದಂತೆ ಬಾಲಕನ ಸಂಬಂಧಿಕರು ಸ್ಥಳಕ್ಕೆ ಆಗಮಿಸಿ, ವಿದ್ಯುತ್ ಆಘಾತಕ್ಕೆ ತೀವ್ರವಾಗಿ ಒಳಗಾಗಿದ್ದ ಇಬ್ಬರು ಯುವಕರನ್ನು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಆದರೆ ಯುವಕರನ್ನು ಪರೀಕ್ಷಿಸಿದ ವೈದ್ಯರು, ಅವರು ಆಗಲೇ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಮೃತ ಯುವಕರನ್ನು ಕಲ್ಮಡ್ಕದ ಭರತ್ ಮತ್ತು ಗುರುವಾಯನಕೆರೆಯ ಗಣೇಶ್ ಎಂದು ಗುರುತಿಸಲಾಗಿದೆ. ಬಾಲಕ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎನ್ನುವ ಸಂಗತಿ ತಿಳಿದುಬಂದಿದೆ. ಅನಧಿಕೃತವಾಗಿ ತೋಟದಲ್ಲಿ ವಿದ್ಯುತ್ ಅಳವಡಿಸಿರುವ ಹಿನ್ನೆಲೆಯಲ್ಲಿ ಮಧುಸೂದನ್ ಭಟ್ ಅವರ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
•ಮಂಗಳೂರು: ಚೂರಿಯಿಂದ ಇರಿದು ಕೊಲ್ಲಲು ಯತ್ನ
ಮಂಗಳೂರು: ವ್ಯಕ್ತಿಯೊಬ್ಬನಿಗೆ ಚೂರಿಯಿಂದ ಇರಿದು ಕೊಲ್ಲಲು ಯತ್ನಿಸಿದ ಘಟನೆ, ಕಳೆದೆರಡು ದಿನಗಳ ಹಿಂದೆ ಲೇಡಿಗೋಷನ್ ಬಳಿಯ ಬಸ್ ನಿಲ್ದಾಣದಲ್ಲಿ ನಡೆದಿದೆ. ನೆಕ್ರಾಜೆಯ ಸಿರಾಜ್ ಎನ್ನುವವರು ಲೇಡಿಗೋಷನ್ ಆಸ್ಪತ್ರೆಯ ಬಳಿಯ ಬಸ್ ನಿಲ್ದಾಣದಲ್ಲಿ ಮೊಬೈಲ್ ನೋಡುತ್ತಾ ಕುಳಿತಿದ್ದ ಸಂದರ್ಭದಲ್ಲಿ, ಅಲ್ಲಿಗೆ ಆಗಮಿಸಿದ ಅಪರಿಚಿತ ವ್ಯಕ್ತಿ ಮಲೆಯಾಳಿ ಭಾಷೆಯಲ್ಲಿ ಸಿರಾಜ್ ನನ್ನು “ಏನು ಮಾಡುತ್ತಿದ್ದೀಯಾ?” ಎಂದು ಪ್ರಶ್ನಿಸಿದ್ದಾನೆ. ಅದಕ್ಕೆ ಪ್ರತಿಯಾಗಿ ಸಿರಾಜ್ ಮೊಬೈಲ್ ನೋಡುತ್ತಾ ಕುಳಿತಿರುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ. ಆಗ ಅಪರಿಚಿತ ವ್ಯಕ್ತಿ ಸ್ವಲ್ಪ ಮೊಬೈಲ್ ಕೊಡು ಎಂದು ಕೇಳಿದ್ದಾನೆ. ಸಿರಾಜ್ ಇಲ್ಲ ಎಂದು ನಿರಾಕರಿಸಿದಕ್ಕೆ ಅಪರಿಚಿತ ವ್ಯಕ್ತಿ ಸಿರಾಜ್ ನಿಗೆ ಮೊಬೈಲ್ ಕೊಡದಿದ್ದರೆ ನಿನ್ನನ್ನು ಜೀವಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ ಎನ್ನುವ ಮಾಹಿತಿ ಲಭಿಸಿದೆ. ಸಿರಾಜ್ ಫೋನ್ ಕೊಡದೇ ಇದ್ದುದರಿಂದ ಅಪರಿಚಿತ ವ್ಯಕ್ತಿ ತನ್ನ ಬಳಿಯಿದ್ದ ಚೂರಿಯಿಂದ ಸಿರಾಜ್ ನನ್ನು ಇರಿದು ಕೊಲ್ಲಲು ಯತ್ನಿಸಿದ್ದಾನೆ. ಸಿರಾಜ್ ಅಲ್ಲಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದರೂ ಕೂಡ ಚಾಕು ಸಿರಾಜ್ ಅವರ ಎಡಬದಿಗೆ ತಾಗಿ ಮೂಗು ಹರಿದಿದೆ ಎನ್ನುವ ಸಂಗತಿ ತಿಳಿದುಬಂದಿದೆ. ಅಪರಿಚಿತ ವ್ಯಕ್ತಿ ಮತ್ತೊಮ್ಮೆ ಚೂರಿಯಿಂದ ಇರಿಯಲು ಯತ್ನಿಸಿದಾಗ ಸಿರಾಜ್ ಅವರ ಬಲಗೈಗೆ ಚೂರಿ ತಾಗಿ ಗಾಯವಾಗಿದೆ. ಇದನ್ನು ಗಮನಿಸಿದ ಜನರು ತಕ್ಷಣ ಸಿರಾಜ್ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ಲಭಿಸಿದೆ. ಕೊಲೆ ಮಾಡಲು ಯತ್ನಿಸಿದ ಆರೋಪಿಯನ್ನು ಇರ್ಷಾದ್ ಅಲೆಮಾರಿ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮಂಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯಾದ ಇರ್ಷಾದ್ ನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದು, ನ್ಯಾಯಾಲಯವು ವಿಚಾರಣೆ ನಡೆಸಿ ಆರೋಪಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿದೆ.







