ಶಿವಮೊಗ್ಗ: ಗೋಡೆಗೆ ಬಣ್ಣ ಹಚ್ಚುವ(ವಾಲ್ ಕೇರ್ ಪುಟ್ಟಿ) ಮಿಷನ್ ಅನ್ನು ಪರೀಕ್ಷಿಸುವ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ, ಮಂಗಳವಾರದಂದು ಯಡೇಹಳ್ಳಿಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಪೈಂಟರ್ ಶಾರುಖ್ ಖಾನ್ ಎಂದು ಗುರುತಿಸಲಾಗಿದೆ. ಶಿವಮೊಗ್ಗದಲ್ಲಿ ಹೊಸದಾಗಿ ಖರೀದಿಸಿ ತಂದಿದ್ದ ಮಿಷನ್ ಅನ್ನು ತಮ್ಮ ಮನೆಯಲ್ಲಿ ಟ್ರಯಲ್ ನೋಡುತ್ತಿದ್ದಾಗ, ಆಕಸ್ಮಿಕವಾಗಿ ವಿದ್ಯುತ್ ಸಂಚಾರ ಉಂಟಾಗಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಪರಿಣಾಮವಾಗಿ ತೀವ್ರ ಅಸ್ವಸ್ಥರಾಗಿದ್ದ ಶಾರುಖ್ ಖಾನ್ ಅವರನ್ನು ತಕ್ಷಣ ಹೊಳೆಹೊನ್ನೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ, ಅವರನ್ನು ಪರೀಕ್ಷಿಸಿದ ವೈದ್ಯರು ಶಾರುಖ್ ಖಾನ್ ಆಗಲೇ ಮೃತಪಟ್ಟಿದ್ದಾರೆ
•ಸಾಗರ: ರಂಗಮಂದಿರದ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳು
ಸಾಗರ: ರಂಗಮಂದಿರದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ ಘಟನೆ, ಸೋಮವಾರದಂದು ತುಮರಿ ಗ್ರಾಮದಲ್ಲಿರುವ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ನಡೆದಿದೆ. ರಂಗಮಂದಿರದ ಮುಖ್ಯ ಬಾಗಿಲನ್ನು ಮುರಿದು ಒಳನುಗ್ಗಿದ ಖದೀಮರು, ರಂಗಮಂದಿರದ ಕುರ್ಚಿಗಳನ್ನು ಮುರಿದು, ಕಿಟಕಿಯ ಗಾಜುಗಳನ್ನು ಪುಡಿ ಮಾಡಿ, ರಂಗಮಂದಿರದ ನವೀಕರಣಕ್ಕಾಗಿ ತಂದಿರಿಸಿದ್ದ ಬಣ್ಣದ ಡಬ್ಬಿಗಳನ್ನು ಎಸೆದು, ಬಣ್ಣಗಳನ್ನು ಚೆಲ್ಲಿರುವುದಷ್ಟೇ ಅಲ್ಲದೆ, ಕಟ್ಟಡವನ್ನು ಹಾನಿಗೊಳಿಸಿ, ಬೆಂಕಿ ಹಚ್ಚಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಕಟ್ಟಡದ ಹೊರಭಾಗದಿಂದ ಬೆಂಕಿ ಹಚ್ಚಲು ಪ್ರಯತ್ನಿಸಿರುವುದಕ್ಕೆ ಅಲ್ಲಿ ಬಿದ್ದಿದ್ದ ಮರದ ತುಂಡುಗಳು, ಪ್ಲಾಸ್ಟಿಕ್ ಪೈಪ್ ಮತ್ತು ಇತರ ವಸ್ತುಗಳೇ ಸಾಕ್ಷಿಯಾಗಿವೆ. ಪರಿಣಾಮವಾಗಿ ಒಂದು ಲಕ್ಷಕ್ಕೂ ಹೆಚ್ಚಿನ ನಷ್ಟ ಸಂಭವಿಸಿದೆ ಎನ್ನುವ ಮಾಹಿತಿ ಲಭಿಸಿದೆ. ಸುಮಾರು 40 ವರ್ಷಗಳ ಇತಿಹಾಸವಿರುವ ಶಾಂತವೇರಿ ಗೋಪಾಲಗೌಡ ರಂಗಮಂದಿರವನ್ನು ನವೀಕರಣಗೊಳಿಸಲು ಸರ್ಕಾರದಿಂದ ಅನುದಾನ ದೊರೆತಿದ್ದು, ಇತ್ತೀಚಿನ ಕೆಲವು ದಿನಗಳಿಂದ ಕಾಮಗಾರಿ ನಡೆಯುತ್ತಿತ್ತು ಎನ್ನುವ ಸಂಗತಿ ತಿಳಿದುಬಂದಿದೆ. ಆದರೆ ದುರುಳರು ಈ ರೀತಿಯ ದುಷ್ಕೃತ್ಯವನ್ನು ಮಾಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಕೆಡಿಪಿ ಸದಸ್ಯರಾದ ಜಿ.ಟಿ.ಸತ್ಯನಾರಾಯಣ, ಅಭಿವ್ಯಕ್ತಿ ಬಳಗದ ಅಧ್ಯಕ್ಷರಾದ ಲೋಕಪಾಲ್ ಜೈನ್ ಆಗ್ರಹಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
•ಕಳಸ: ಚಿರತೆ ಮರಿಗಳು ಪ್ರತ್ಯಕ್ಷ; ಆತಂಕದಲ್ಲಿ ಸ್ಥಳೀಯರು
ಕಳಸ: ಚಿರತೆ ಮರಿಗಳು ತೋಟವೊಂದರ ಪಕ್ಕದಲ್ಲಿ ಕಾಣಿಸಿಕೊಂಡ ಘಟನೆ, ಮರಸಣಿಗೆ ವ್ಯಾಪ್ತಿಯ ಗುಮ್ಮನ್ ಖಾನ್ ಎನ್ನುವಲ್ಲಿ ನಡೆದಿದೆ. ಚಿರತೆ ಮರಿಗಳ ಕುರಿತು ವಿಚಾರ ಹಬ್ಬುತ್ತಿದ್ದಂತೆ ಆತಂಕಗೊಂಡ ಸ್ಥಳೀಯರು ತಕ್ಷಣ ಅರಣ್ಯ ಇಲಾಖೆಗೆ ತಿಳಿಸಿದ್ದಾರೆ. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಕಳಸ ಅರಣ್ಯ ಇಲಾಖೆಯ ಸಿಬ್ಬಂದಿಗಳು ಪರಿಶೀಲನೆಯನ್ನು ನಡೆಸಿ, ಮರಿಗಳನ್ನು ತಾಯಿಯ ಮಡಿಲಿಗೆ ಸೇರಿಸಲು ಕ್ರಮವನ್ನು ಕೈಗೊಂಡರು. ಅಲ್ಲದೆ ಮರಿಗಳು ಇಲ್ಲಿ ಓಡಾಡಿಕೊಂಡಿರುವ ಹಿನ್ನೆಲೆಯಲ್ಲಿ ತಾಯಿ ಚಿರತೆಯು ಹುಡುಕಿಕೊಂಡು ಬರುವ ಸಾಧ್ಯತೆ ಇರುವುದರಿಂದ, ಸಾರ್ವಜನಿಕರು ಮತ್ತು ಕಾರ್ಮಿಕರು ಯಾವುದೇ ಕಾರಣಕ್ಕೂ ತೋಟದ ಸುತ್ತಮುತ್ತಲು ಸಂಚರಿಸದಂತೆ ಎಚ್ಚರಿಕೆಯನ್ನು ನೀಡಿದ್ದಾರೆ. ಚಿರತೆ ಮರಿಗಳನ್ನು ಸುರಕ್ಷಿತವಾಗಿ ತಾಯಿಯ ಮಡಿಲಿಗೆ ಸೇರಿಸಲು ಸಿಬ್ಬಂದಿಗಳೊಂದಿಗೆ ಗ್ರಾಮಸ್ಥರು ಕೈಜೋಡಿಸುವ ಮೂಲಕ ಸಹಕಾರ ನೀಡಬೇಕೆಂದು ಅರಣ್ಯ ಇಲಾಖೆಯು ಮನವಿ ಮಾಡಿಕೊಂಡಿರುವ ಸಂಗತಿ ತಿಳಿದುಬಂದಿದೆ.
•ಸೊರಬ: ಲಾರಿ ಮತ್ತು ಬೈಕ್ ನ ನಡುವೆ ಭೀಕರ ಅಪಘಾತ
ಸೊರಬ: ಲಾರಿ ಮತ್ತು ಆಟೋ ನಡುವೆ ಭೀಕರ ಅಪಘಾತ ಸಂಭವಿಸಿರುವ ಘಟನೆ ನಡೆದಿದೆ. ಪರಿಣಾಮವಾಗಿ ಆಟೋ ಚಾಲಕ ಮತ್ತು ಪ್ರಯಾಣಿಕರಿಗೆ ಗಂಭೀರ ರೀತಿಯ ಗಾಯಗಳಾಗಿವೆ ಎನ್ನಲಾಗಿದೆ. ಇದನ್ನು ನೋಡಿದ ತಕ್ಷಣ ಸ್ಥಳೀಯರು 112ಕ್ಕೆ ಕರೆ ಮಾಡಿ, ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಇಆರ್ ವಿ ಸಿಬ್ಬಂದಿಗಳು ಪರಿಶೀಲನೆಯನ್ನು ನಡೆಸಿ, ಗಾಯಾಳುಗಳನ್ನು ಸಾಗರದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಿ ಕೊಟ್ಟಿದ್ದಾರೆ.
•ಶಿವಮೊಗ್ಗ: ಸಿಎ ವಿದ್ಯಾರ್ಥಿ ಸಾವು
ಶಿವಮೊಗ್ಗ: ಸಿಎ ತರಬೇತಿಯನ್ನು ಪಡೆಯುತ್ತಿದ್ದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ, ಬೊಮ್ಮನಕಟ್ಟೆಯಲ್ಲಿ ನಡೆದಿದೆ. ಮೃತ ಯುವಕನನ್ನು ಶ್ರೀನಿಧಿ ಎಂದು ಗುರುತಿಸಲಾಗಿದೆ. ಕಳೆದ ಒಂದು ವರ್ಷದಿಂದ ಪ್ರಸಿದ್ಧ ಚಾರ್ಟೆಡ್ ಅಕೌಂಟೆಂಟ್ ಒಬ್ಬರ ಬಳಿ ಶ್ರೀನಿಧಿ ಸಿಎ ತರಬೇತಿಯನ್ನು ಪಡೆದುಕೊಳ್ಳುತ್ತಿದ್ದು, ಕಲ್ಪವೃಕ್ಷ ಲೇಔಟ್ ನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದನು ಎನ್ನಲಾಗಿದೆ. ಎಂದಿನಂತೆ ತನ್ನ ಕೆಲಸವನ್ನು ಮುಗಿಸಿಕೊಂಡು ಮನೆಗೆ ತೆರಳಿದ ಶ್ರೀನಿಧಿ, ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಅಕ್ಕಪಕ್ಕದ ಮನೆಯವರಿಂದ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆಯನ್ನು ನಡೆಸಿ, ಮಹಜರನ್ನು ಮಾಡಿಕೊಂಡರು ಎನ್ನುವ ಮಾಹಿತಿ ಲಭಿಸಿದೆ. ಬಳಿಕ ಮರಣೋತ್ತರ ಪರೀಕ್ಷೆಗಾಗಿ ಶ್ರೀನಿಧಿ ಅವರ ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಗೆ ಕಾರಣವೇನು ಎನ್ನುವುದು ಸ್ಪಷ್ಟವಾಗಿ ತಿಳಿದುಬಂದಿಲ್ಲ.
•ಕಡೂರು: ಎರಡು ಬೈಕ್ ಗಳ ನಡುವೆ ಅಪಘಾತ; ಹಿಂಬದಿ ಸವಾರ ದುರ್ಮರಣ
ಕಡೂರು: ಎರಡು ಬೈಕ್ ಗಳ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ, ಸೋಮವಾರದಂದು ಬೀರೂರಿನ ತರಳಬಾಳು ಕಲ್ಯಾಣ ಮಂಟಪದ ಮುಂಭಾಗದಲ್ಲಿ ನಡೆದಿದೆ. ಅಪಘಾತದ ರಭಸಕ್ಕೆ ಬೈಕ್ ನಲ್ಲಿ ಹಿಂಬದಿಯಲ್ಲಿದ್ದ ಸಹಸವಾರ ತೀವ್ರವಾಗಿ ಗಾಯಗೊಂಡು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ದುರ್ದೈವಿಯನ್ನು ಎಂ.ಕೋಡಿಹಳ್ಳಿ ಗ್ರಾಮದ ಬಾಲಾಜಿನಾಯ್ಕ ಎಂದು ಗುರುತಿಸಲಾಗಿದೆ. ಬಾಲಾಜಿನಾಯ್ಕ ಅವರು ತಮ್ಮ ಕೆಲಸವನ್ನು ಮುಗಿಸಿಕೊಂಡು, ತಮ್ಮದೇ ಗ್ರಾಮದವರಾದ ಪ್ರಕಾಶ್ ನಾಯ್ಕ ಅವರೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಬಾಲಾಜಿ ನಾಯ್ಕ ಅವರು ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಬೀರೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
•ಹೊಸನಗರ: ಗುರುವಾಯನಕೆರೆ ಬಸ್ ನಿಲ್ದಾಣದಲ್ಲಿ ಸಾವು
ಹೊಸನಗರ: ವೃದ್ಧರೊಬ್ಬರ ಮೃತದೇಹ ಪತ್ತೆಯಾಗಿರುವ ಘಟನೆ, ಮಂಗಳವಾರದಂದು ಕುವೆಟ್ಟು ಗ್ರಾಮದ ಗುರುವಾಯನಕೆರೆ ಬಳಿಯ ಬಾರ್ ವೊಂದರ ಎದುರುಗಡೆ ನಡೆದಿದೆ. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಬೆಳ್ತಂಗಡಿ ಠಾಣೆಯ ಪೊಲೀಸರು ಪರಿಶೀಲನೆಯನ್ನು ನಡೆಸಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿ ಕುಸಿದು ಬಿದ್ದು ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಮೃತವ್ಯಕ್ತಿಯನ್ನು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಕೆಂಚಾಳ ನಿವಾಸಿ, 70ವರ್ಷದ ಮರಿಯಪ್ಪ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿಕಾರಿಪುರ: ಬಂದ್ ಯಶಸ್ವಿ: ಹಿಂದೂಗಳ ಹೋರಾಟ!
ಶಿಕಾರಿಪುರ: ಬಜರಂಗದಳ ಕಾರ್ಯಕರ್ತರ ಮೇಲಿನ ಹಲ್ಲೆ ಖಂಡಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಸಂಘಟನೆಗಳು ಬುಧವಾರ ಶಿಕಾರಿಪುರ ಬಂದ್ಗೆ ಯಶಸ್ವಿಯಾಗಿದೆ. ಬಂದ್ ಹಿನ್ನೆಲೆಯಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಂಗಡಿ-ಮುಂಗಟ್ಟುಗಳು ಬಂದ್ ಆಗಿದ್ದು, ವಾಹನ ಸಂಚಾರ ಮಾತ್ರ ಎಂದಿನಂತೆ ಮುಂದುವರಿದಿತ್ತು. ಬೆಳಿಗ್ಗೆ ಕ್ಯಾಂಟೀನ್, ಟೀ ಶಾಪ್ಗಳು ಸೇರಿದಂತೆ ಕೆಲವು ಅಂಗಡಿಗಳು ಎಂದಿನಂತೆ ತೆರೆದಿದ್ದವು. ಗ್ರಾಹಕರು ಕೂಡ ಬಂದು ಹೋಗುತ್ತಿದ್ದರು. ಸರ್ಕಾರಿ ಹಾಗೂ ಖಾಸಗಿ ಬಸ್ಗಳು, ಶಾಲಾ-ಕಾಲೇಜು ವಾಹನಗಳು ಸೇರಿದಂತೆ ವಾಹನ ಸಂಚಾರದಲ್ಲಿ ಯಾವುದೇ ವ್ಯತ್ಯಯ ಕಂಡುಬಂದಿಲ್ಲ.
ಹೊಸನಗರ ತಾಲೂಕಿನ ಹರತಾಳು ಗ್ರಾಮದಲ್ಲಿ ಆಗಸ್ಟ್ 16ರ ರಾತ್ರಿ ಕಳ್ಳರು ಕೊಟ್ಟಿಗೆಯಲ್ಲಿ ಕಟ್ಟಿದ್ದ ಜಾನುವಾರುಗಳನ್ನು ವಾಹನಕ್ಕೆ ತುಂಬಿಕೊಂಡು ಪರಾರಿಯಾಗಿದ್ದರು ಎನ್ನಲಾಗಿದೆ. ವಿಷಯ ತಿಳಿದ ಬಜರಂಗದಳ ಕಾರ್ಯಕರ್ತರು ಕಾರಿನಲ್ಲಿ ಕಳ್ಳರ ವಾಹನವನ್ನು ಹಿಂಬಾಲಿಸಿದ್ದರು. ಈ ವೇಳೆ ಮಾರ್ಗಮಧ್ಯೆ ಮತ್ತೊಂದು ವಾಹನದಿಂದ ಕಾರ್ಯಕರ್ತರ ಕಾರಿಗೆ ಡಿಕ್ಕಿ ಹೊಡೆಸಿದ ಆರೋಪಿತರು, ಬಳಿಕ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಸಾಗರ: ಭೀಕರ ಅಪಘಾತ: ಯುವಕ ಸಾವು
ಸಾಗರ: ತಾಲ್ಲೂಕಿನ ಬಳಸಗೋಡು ಸಮೀಪ ಬುಧವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 19 ವರ್ಷದ ಯುವಕ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಮೃತ ಯುವಕನನ್ನು ಚಿಪ್ಪಿ ಗ್ರಾಮದ ಅರ್ಜುನ್ (19) ಎಂದು ಗುರುತಿಸಲಾಗಿದೆ. ಅರ್ಜುನ್ ಅವರು ಸಾಗರದಿಂದ ಆನಂದಪುರ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ, ಶಿವಮೊಗ್ಗ ಕಡೆಯಿಂದ ಸಾಗರದತ್ತ ಬರುತ್ತಿದ್ದ ಕಾರು ಬಳಸಗೋಡು ಸಮೀಪ ಎದುರಾಗಿದೆ. ಈ ವೇಳೆ ಬೈಕ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಅರ್ಜುನ್ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.







