ಭಾರತದಲ್ಲಿ ಈಗ ಎಲೆಕ್ಟ್ರಿಕಲ್ ವಾಹನ ಹವಾ!
– ಕಾರು, ಬೈಕ್, ಆಟೋ, ಬಸ್, ಗೂಡ್ಸ್ ವಾಹನವೂ ಇವಿ
– ಪೆಟ್ರೋಲ್, ಡೀಸೆಲ್ ನಂಬೋದು ಕಷ್ಟ: ಇವಿ ಇಷ್ಟ..!
ಭಾರತದಲ್ಲಿ ಈಗ ಇವಿ ವಾಹನಗಳ ಹವಾ ಶುರುವಾಗಿದೆ. 2026ರ ಹೊತ್ತಿಗೆ ಭಾರತೀಯ ಎಲೆಕ್ಟ್ರಿಕ್ ವಾಹನ (EV) ಮಾರುಕಟ್ಟೆಯು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಪ್ರಮುಖ ಬ್ರ್ಯಾಂಡ್ಗಳು ತಮ್ಮ ಹೊಸ ಮಾದರಿಗಳನ್ನು ಬಿಡುಗಡೆ ಮಾಡಿವೆ. ಭಾರತೀಯರು ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಆಸಕ್ತಿ ತೋರಿದ್ದಾರೆ. ಕಳೆದ ಕೆಲವು ವರ್ಷಗಳಿಂದ ವಿದ್ಯುತ್ ಚಾಲಿತ ವಾಹನಗಳು ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದ್ದು, ಒಮ್ಮೆ ಚಾರ್ಜ್ ಮಾಡಿದರೆ ಅದಕ್ಕೆ ಅನುಗುಣವಾಗಿ ಕೆಲವು ಕಿಲೋಮೀಟರ್ ವರೆಗೂ ಪ್ರಯಾಣಿಸುವ ಅವಕಾಶವಿದೆ. ಅಂದರೆ ವಾಹನಗಳ ಬೆಲೆಗೆ ತಕ್ಕಂತೆ ಚಾರ್ಜ್ ಮತ್ತು ಚಲಾಯಿಸುವ ಅಂತರ ಹೆಚ್ಚು ಕಡಿಮೆಯಾಗುತ್ತದೆ. ಕೆಲವೊಮ್ಮೆ ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳಲ್ಲೂ ಚಾರ್ಜ್ ಮಾಡಿಕೊಂಡು ಮುಂದೆ ಪ್ರಯಾಣಿಸುವ ಅವಕಾಶ ಕೂಡ ಇದೆ.
ಎಲೆಕ್ಟ್ರಿಕ್ ಕಾರಿಗೆ ಡಿಮ್ಯಾಂಡ್ ಡಿಮ್ಯಾಂಡ್!
ಎಲೆಕ್ಟ್ರಿಕ್ ಕಾರುಗಳ ಬೆಲೆ 6.31 ಲಕ್ಷದಿಂದ 89.99 ಲಕ್ಷದವರೆಗೆ ಲಭ್ಯವಿದೆ. ಪರಿಸರ ಸ್ನೇಹಿಯಾಗಿರುವ ಇದನ್ನು ಈಗಾಗಲೇ ಭಾರತದಲ್ಲಿ ಸಾಕಷ್ಟು ಜನರು ಬಳಸುತ್ತಿದ್ದು, ಮುಂಬರುವ ದಿನಗಳಲ್ಲಿ ಈ ರೀತಿ ಪೆಟ್ರೋಲ್ ಮತ್ತು ಡೀಸೆಲ್ ಗಗನ ಕುಸುಮವಾದರೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಎಲೆಕ್ಟ್ರಿಕ್ ವಾಹನಗಳು ಬಳಕೆಗೆ ಬರಲಿದೆ ಎಂದು ಅಂದಾಜಿಸಲಾಗುತ್ತಿದೆ. ಭಾರತದಲ್ಲಿಯೂ ಕೂಡ ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆಯು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, 2024 ರಲ್ಲೇ ಸುಮಾರು ಎರಡು ದಶಲಕ್ಷಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳು ಮಾರಾಟ ಕಂಡಿದೆ. ಅದರಲ್ಲೂ ದ್ವಿಚಕ್ರ ಮತ್ತು ಮೂರು ಚಕ್ರದ ವಾಹನಗಳ ವಿಭಾಗದಲ್ಲಿ ಹೆಚ್ಚಿನ ಬೇಡಿಕೆ ಇದೆ ಎನ್ನಲಾಗಿದ್ದು, ಆಟೋಮೊಬೈಲ್ ಮಾರಾಟದಲ್ಲಿ ಎಲೆಕ್ಟ್ರಿಕ್ ವಾಹನಗಳ ಪಾಲು ಶೇಕಡ ಏಳರಿಂದ ಎಂಟರಷ್ಟಿದೆ.
ಸರ್ಕಾರದಿಂದಲೂ ಇವಿಗೆ ಬೆಂಬಲ!
ಫೇಮ್, ಇಎಂಪಿಎಸ್ ನಂತಹ ಸಬ್ಸಿಡಿಗಳು ಮತ್ತು ಚಾರ್ಜಿಂಗ್ ಸ್ಟೇಷನ್ ಗಳ ಹೆಚ್ಚಳ ಹಾಗೂ ಕಡಿಮೆ ನಿರ್ವಹಣಾ ವೆಚ್ಚದಿಂದಾಗಿ ಎಲೆಕ್ಟ್ರಾನಿಕ್ ವಾಹನಗಳ ಅಳವಡಿಕೆಯ ದರ ಕೂಡ ಹೆಚ್ಚಳವಾಗುತ್ತಿದೆ. ಈಗಾಗಲೇ ಸರ್ಕಾರವೂ ಕೂಡ 2030ರ ಒಳಗಾಗಿ ಮಾರಾಟವಾಗುವ ವಾಹನಗಳಲ್ಲಿ ಶೇಕಡ 30ರಷ್ಟು ಎಲೆಕ್ಟ್ರಾನಿಕ್ ವಾಹನಗಳು ಇರಬೇಕೆಂಬ ಗುರಿಯನ್ನು ಹೊಂದಿದೆ. ಕೇವಲ 2025 ಜುಲೈ ತಿಂಗಳೊಂದರಲ್ಲೇ 29.೦೦೦ಕ್ಕೂ ಹೆಚ್ಚಿನ ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳನ್ನು ತೆರೆದಿರುವುದು ಎಲೆಕ್ಟ್ರಿಕ್ ವಾಹನಗಳಿಗಿರುವ ಬೇಡಿಕೆಗೆ ಸಾಕ್ಷಿಯಾಗಿದೆ.
ಕರ್ನಾಟಕ ಮುಂಚೂಣಿಯಲ್ಲಿದೆ…!
ಕರ್ನಾಟಕ, ತಮಿಳುನಾಡು ದೆಹಲಿ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳು ಎಲೆಕ್ಟ್ರಾನಿಕ್ ವಾಹನಗಳ ಅಳವಡಿಕೆಯಲ್ಲಿ ಮುಂಚೂಣಿಯಲ್ಲಿದ್ದು, ಪೆಟ್ರೋಲ್ ಮತ್ತು ಡೀಸೆಲ್ ನ ಪೂರೈಕೆಯಲ್ಲಿನ ವ್ಯತ್ಯಯ, ಬೆಲೆ ಏರಿಕೆಯಿಂದಾಗಿ ಇನ್ನು ಹೆಚ್ಚಿನ ಜನರು ಎಲೆಕ್ಟ್ರಾನಿಕ್ ವಾಹನಗಳನ್ನು ಖರೀದಿಸಿ ಬಳಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದರಿಂದ ಪರಿಸರ ಮಾಲಿನ್ಯವನ್ನು ಕೂಡ ತಡೆಗಟ್ಟುವ ಒಂದು ಉತ್ತಮ ಕಾರ್ಯವನ್ನು ಕೂಡ ನಿರ್ವಹಿಸಿದಂತಾಗುತ್ತದೆ.
ಯಾವ ಯಾವ ಬ್ರಾಂಡ್ ಇವಿ ಇದೆ?
ದೇಶದ ಪ್ರತಿಷ್ಠಿತ ಕಾರು ಬ್ರಾಂಡ್ ಗಳಾದ ಟಾಟಾ, ಮಾರುತಿ, ಹೋಂಡಾಯಿ, ಕಿಯಾ, ಟೊಯೋಟಾ, ವೊಲ್ಸ್ ವಾಗನ್, ಎಂ ಜಿ, ಮಹೇಂದ್ರ, ರೇನಾಲ್ಟ್, ಬೆಂಜ್ ಸೇರಿ ಎಲ್ಲಾ ಕಂಪನಿಗಳು ಇವಿ ಕಾರು ಮಾರುಕಟ್ಟೆಯಲ್ಲಿ ಭಾರೀ ಪೈಪೋಟಿ ನೀಡುತ್ತಿವೆ. ಇವಿಗಳಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಪಾಲು ಅತಿ ಹೆಚ್ಚಿದೆ. ದ್ವಿಚಕ್ರ ವಾಹನಗಳು (e-2W) ಇವಿಗಳಲ್ಲಿ ಸುಮಾರು 55-60% ರಷ್ಟು ಪಾಲನ್ನು ಹೊಂದಿವೆ., ಓಲಾ, ಟಿವಿಎಸ್ ಮತ್ತು ಬಜಾಜ್ ಕಂಪನಿಗಳು ಇಲ್ಲಿ ಮುಂಚೂಣಿಯಲ್ಲಿವೆ. ತ್ರಿಚಕ್ರ ವಾಹನಗಳ ಸುಮಾರು 30-35% ಪಾಲು ಹೊಂದಿದ್ದು, ಸರಕು ಸಾಗಣೆ ಮತ್ತು ಆಟೋ ರಿಕ್ಷಾಗಳಲ್ಲಿ ಇವು ಅತಿ ಹೆಚ್ಚು ಬಳಕೆಯಲ್ಲಿವೆ. ಇವಿ ನಾಲ್ಕು ಚಕ್ರದ ವಾಹನಗಳು ಮಾರುಕಟ್ಟೆಯಲ್ಲಿ ಸುಮಾರು 5% ರಷ್ಟು ಪಾಲನ್ನು ಹೊಂದಿವೆ. ಟಾಟಾ ಮೋಟಾರ್ಸ್ ಈ ವಿಭಾಗದಲ್ಲಿ 43% ಕ್ಕಿಂತ ಹೆಚ್ಚು ಮಾರುಕಟ್ಟೆ ಪಾಲು ಹೊಂದಿದೆ. ಎಲೆಕ್ಟ್ರಿಕ್ ಬಸ್ಗಳು ಕೂಡ ಭಾರತದಲ್ಲಿವೆ. ಸಾರ್ವಜನಿಕ ಸಾರಿಗೆಯಲ್ಲಿ ಇವುಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದ್ದು, ಈಗ ಸಾವಿರಾರು ಸಂಖ್ಯೆಯಲ್ಲಿವೆ. ಸಾಗಾಣಿಕೆ ವಾಹನ ಕೂಡ ಎಲೆಕ್ಟ್ರಿಕ್ ಬರುತ್ತಿದೆ.








