ಜೀರೋದಿಂದ ಬಾಲಿವುಡ್ ಹೀರೋ ಆದ ಯಶ್!
– ಧಾರಾವಾಹಿ ಮೂಲಕ ಬಣ್ಣದ ಜಗತ್ತಿಗೆ ಎಂಟ್ರಿ!
– ನಟನೆ ಕಲೆ ಜತೆಗೆ ಲಕ್ ಕೈ ಹಿಡಿಯಿತು
– ಭಾರತದ ದೊಡ್ಡ ಹೀರೋಗಳ ಸಾಲಿನಲ್ಲಿ ಈಗ ಯಶ್
ಕನ್ನಡ ಚಿತ್ರರಂಗದ ಖ್ಯಾತಿಯನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ದ ಕನ್ನಡದ ಹೆಮ್ಮೆಯ ಕಲಾವಿದ ಯಶ್. ಸಿನಿಮಾಕ್ಕೆ ಸಂಬಂಧಿಸಿದಂತೆ ಯಾವುದೇ ಹಿನ್ನೆಲೆಯಿಲ್ಲದೆ, ಮಧ್ಯಮ ವರ್ಗದ ಕುಟುಂಬದಲ್ಲಿ ಬೆಂಗಳೂರು ಮಹಾನಗರ ಸಾರಿಗೆಯ ಬಸ್ ಡ್ರೈವರ್ ಮತ್ತು ಸಾಮಾನ್ಯ ಗೃಹಿಣಿಯೊಬ್ಬರ ಮಗನಾಗಿದ್ದ ನವೀನ್ ಕುಮಾರ್ ಗೌಡ ಎನ್ನುವ ಹೆಸರಿನ ಯುವಕ ರಾಕಿಂಗ್ ಸ್ಟಾರ್ ಯಶ್ ಆಗಿದ್ದೇ ಒಂದು ಸಿನಿಮಾ ಕಥೆ ತರ ಇದೆ. ನವೀನ್ ಕುಮಾರ್ ರಾಕಿ ಭಾಯ್ ಆಗಿ ಪ್ರಪಂಚದಾದ್ಯಂತ ಗುರುತಿಸಿಕೊಳ್ಳುವುದರ ಹಿಂದಿದೆ ಅವರ ಕಠಿಣ ಪರಿಶ್ರಮ, ನೈಜ ಪ್ರತಿಭೆ ಮತ್ತು ಕಲೆಯ ಕುರಿತ ಅವರಲ್ಲಿದ್ದ ಅತಿಯಾದ ಶ್ರದ್ದೆ, ಕೆಲಸದ ಮೇಲಿನ ಗೌರವ.
ಬಾಲ್ಯದಿಂದಲೇ ನಟನೆಯ ಹುಚ್ಚು!
1986ರ ಜನವರಿ 8ರಂದು ಹಾಸನದಲ್ಲಿ ಜನಿಸಿದ ಯಶ್ ಅವರಿಗೆ ಬಾಲ್ಯದಿಂದಲೇ ನಟನೆಯ ಹುಚ್ಚು. ತಂದೆ ತಾಯಿಗಳಿಬ್ಬರೂ ಅಣ್ಣಾವ್ರ ಅಭಿಮಾನಿಗಳಾಗಿದ್ದು, ಅಭಿನಯದೆಡೆಗೆ ನವೀನ್ ಕುಮಾರ್ ಗೆ ಇದ್ದ ಸೆಳೆತಕ್ಕೆ ಮತ್ತಷ್ಟು ಸ್ಪೂರ್ತಿ ನೀಡಿತು.
ಪಿಯುಸಿಯಿಂದಲೇ ನಟನೆ, ನೃತ್ಯ ಆಸಕ್ತಿ!
ಅರುಣ್ ಕುಮಾರ್ ಮತ್ತು ಪುಷ್ಪಾ ದಂಪತಿಗಳು ಮಗನ ಕನಸಿಗೆ ಉತ್ತೇಜನ ನೀಡಿದರೆ, ತಂಗಿ ನಂದಿನಿ ಅಣ್ಣನ ಕಲಾ ಪ್ರತಿಭೆಗೆ ಸಂಪೂರ್ಣವಾಗಿ ಸಹಕಾರ ನೀಡಿದರು. ಶಾಲಾ ಕಾಲೇಜು ದಿನಗಳಲ್ಲೇ ಯಶ್ ಅವರು ರಂಗಭೂಮಿ, ನಟನೆ, ನೃತ್ಯಗಳಲ್ಲಿ ತೊಡಗಿಸಿಕೊಂಡರು. ಪಿಯುಸಿ ಬಳಿಕ ಬಿಎ ಪದವಿ ವೇಳೆ ಬಿ.ವಿ.ಕಾರಂತರ ಬೆನಕ ತಂಡವನ್ನು ಸೇರಿಕೊಂಡರು. ನಟನೆಯ ತರಬೇತಿಯ ಬಳಿಕ ಅವಕಾಶವನ್ನು ಅರಸಿ ಗಾಂಧಿನಗರಕ್ಕೆ ಬಂದರು.
ಧಾರಾವಾಹಿ ಮೂಲಕ ಬಣ್ಣದ ಜಗತ್ತಿಗೆ ಎಂಟ್ರಿ!
ನಂದಗೋಕುಲ, ಪ್ರೀತಿ ಇಲ್ಲದ ಮೇಲೆ ಮೊದಲಾದ ಧಾರಾವಾಹಿಗಳ ನಂತರ 2007ರಲ್ಲಿ ತೆರೆಕಂಡ ‘ಜಂಭದ ಹುಡುಗಿ’ ಚಿತ್ರದಲ್ಲಿನ ಸಣ್ಣದೊಂದು ಪಾತ್ರದ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದರು. ಪೂರ್ಣಪ್ರಮಾಣದ ನಾಯಕರಾಗಿ ಗುರುತಿಸಿಕೊಂಡಿದ್ದು, 2008ರಲ್ಲಿ ಬಿಡುಗಡೆಗೊಂಡ ‘ಮೊಗ್ಗಿನ ಮನಸು’ ಚಿತ್ರದ ಮೂಲಕ. ಆ ನಂತರ ಯಶ್ ಹಿಂತಿರುಗಿ ನೋಡಿದ್ದಿಲ್ಲ. ಅವರ ನಿಜವಾದ ಸಾಧನೆ ಈಗ ಎಲ್ಲರ ಮುಂದಿದೆ.
ನವೀನ್ ಕುಮಾರ್ ಯಶ್ ಆಗಿ ಬೆಳೆದ ಹಾದಿ ಸುಗಮವಾಗಿರಲಿಲ್ಲ!
ನವೀನ್ ಕುಮಾರ್ ಯಶ್ ಆಗಿ ಬೆಳೆದ ಹಾದಿ ಸುಗಮವಾಗಿರಲಿಲ್ಲ. ತಮ್ಮದೇ ಆದ ಕಲಾಪ್ರತಿಭೆ, ಅಭಿನಯದ ಶೈಲಿಯ ಮೂಲಕ ಕನ್ನಡಿಗರ ಪ್ರೀತಿ, ಹಾರೈಕೆ, ಆಶೀರ್ವಾದಕ್ಕೆ ಪಾತ್ರರಾದರು. ಫಲವಾಗಿ ಫಿಲಂ ಫೇರ್, ಸೈಮಾ, ಝಿ ಕನ್ನಡ ವಾಹಿನಿಯ ಹೆಮ್ಮೆಯ ಕನ್ನಡಿಗ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜರಾದರು. ನಂದಗೋಕುಲ ಧಾರಾವಾಹಿಯಲ್ಲಿ ಪಾತ್ರವನ್ನು ನಿರ್ವಹಿಸುತ್ತಿದ್ದಾಗ, ತಮ್ಮ ಸಹೋದರಿಯಾಗಿ ಪಾತ್ರ ಮಾಡುತ್ತಿದ್ದ ರಾಧಿಕಾ ಪಂಡಿತ್ ಅವರಲ್ಲಿ ಪ್ರೇಮಾಂಕುರವಾಯಿತು. ನಾಯಕ ನಟನಾಗಿ ಅಭಿನಯಿಸಿದ ಮೊದಲ ಚಿತ್ರ ‘ಮೊಗ್ಗಿನ ಮನಸು’ ಚಿತ್ರದ ನಾಯಕಿಯನ್ನು ತಮ್ಮ ನಿಜ ಜೀವನದ ನಾಯಕಿಯನ್ನಾಗಿಸಿಕೊಂಡರು. ಕನ್ನಡಿಗರೇ ಮೆಚ್ಚಿದ ಈ ಜೋಡಿಯು 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿತು. ಆರತಿಗೊಬ್ಬ ಮಗಳು, ಕೀರ್ತಿಗೊಬ್ಬ ಮಗ ಎಂಬ ಹಿರಿಯರ ಮಾತಿನಂತೆ ಐರಾ ಎಂಬ ಹೆಣ್ಣು ಮಗುವನ್ನು, ಯಥರ್ವ ಎಂಬ ಗಂಡು ಮಗುವನ್ನು ಪಡೆದ ಇವರದು ಸುಖಿ ಕುಟುಂಬ.
ಬಾಲಿವುಡ್ ಎಂಟ್ರಿ ಆದ ಯಶ್..!
ಕೆಜಿಎಫ್ ಮತ್ತು ಕೆಜಿಎಫ್ 1 ಇವರ ಸಿನಿಮಾ ಜರ್ನಿಯನ್ನು ಬಾಲಿವುಡ್ ಕಡೆಗೆ ತೆಗೆದುಕೊಂಡು ಹೋಯಿತು. ಯಶ್ ಅವರ ಬಹುನಿರೀಕ್ಷಿತ ಚಿತ್ರ ಟಾಕ್ಸಿಕ್ ಇದೇ ವರ್ಷ ಮಾರ್ಚ್ 19ರಂದು ಜಗತ್ತಿನಾದ್ಯಂತ ಬಿಡುಗಡೆಗೊಳ್ಳಲಿದೆ. ರಾಮಾಯಣ ಎಂಬ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಹತ್ತಾರು ದೊಡ್ಡ ಸಿನಿಮಾ ಕೈಯಲ್ಲಿವೆ. ಇದೆ ನೋಡಿ ಸಕ್ಸಸ್ ಅಂದ್ರೆ. ಕನಸು ಕಂಡವರೆಲ್ಲಾ ಕನಸು ಮಾತ್ರ ಕಾಣ್ತಾರೆ. ಆದರೆ ಅದನ್ನು ಸಾಧಿಸಿ ತೋರಿಸಿದವರಲ್ಲಿ ಯಶ್ ಕೂಡ ಒಬ್ಬರು. ಯಶ್ ಅವರ ಜೀವನ ಸ್ಟೋರಿ ಇವತ್ತಿನ ಯುವ ಜನತೆಗೆ ನಿಜಕ್ಕೂ ಮಾದರಿ.








