ಯುವ ಸ್ಫೂರ್ತಿ ದರ್ಶನ್ ಗರ್ತಿಕೆರೆ
ಪ್ರಸಿದ್ಧ ಐಎಎಸ್ ತರಬೇತುದಾರ ಈ ಮಲೆನಾಡ ಹುಡುಗ
ಐಎಎಸ್ ದರ್ಶನ ಅಕಾಡೆಮಿ ಸ್ಥಾಪಿಸಿ ಅನೇಕರಿಗೆ ತರಬೇತಿ
ರಾಜಧಾನಿಯಲ್ಲಿ ಐಎಎಸ್ ದರ್ಶನ ಅಕಾಡೆಮಿ ಎಂಬ ಸ್ಪರ್ಧಾತ್ಮಕ ಪರೀಕ್ಷೆ ಕೇಂದ್ರ ಸ್ಥಾಪಿಸಿ ಅನೇಕರಿಗೆ ತರಬೇತಿ ನೀಡುತ್ತಿರುವ ದರ್ಶನ್ ಗರ್ತಿಕೆರೆ ಯುವಜನತೆಗೆ ಸ್ಫೂರ್ತಿ ಆಗಿದ್ದಾರೆ. ದರ್ಶನ್ ಗರ್ತಿಕೆರೆ ಅವರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಗರ್ತಿಕೆರೆ ಎಂಬ ಗ್ರಾಮದವರು. ತಂದೆ ಜಿ.ಎಂ.ಚಂದ್ರಶೇಖರ ತಾಯಿ ಆಶಾ. ದರ್ಶನ್ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕಮ್ಮಚ್ಚಿಯಲ್ಲು, ಪ್ರೌಢ ಶಿಕ್ಷಣವನ್ನು ಕೋಣಂದೂರಿನ ನ್ಯಾಷನಲ್ ಹೈಸ್ಕೂಲಿನಲ್ಲು, ವಿಜ್ಞಾನ ವಿಷಯದಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಗರ್ತಿಕೆರೆಯ ಅಮೃತ ಕಾಲೇಜಿನಲ್ಲು ಪಡೆದುಕೊಂಡರು.
ಬಿಎಸ್ ಸಿ (ಸಿಬಿಜಡ್)ಪದವಿಯನ್ನು ಉಡುಪಿಯ ಎಂಜಿಎಂ ಕಾಲೇಜಿನಿಂದ ಗಳಿಸಿದರು. ವಿನೀತ್ ಎಂಬ ಉಪನ್ಯಾಸಕರು ದರ್ಶನ್ ಅವರಿಗೆ ಐಎಎಸ್ ಪರೀಕ್ಷೆ ಕುರಿತು ಪರಿಚಯಿಸಿ, ಅದಕ್ಕೆ ಸಂಬಂಧಿಸಿದಂತೆ ಉತ್ತಮ ಮಾರ್ಗದರ್ಶನ ನೀಡಿದರು. ದರ್ಶನ್ ಅವರು ಯುಪಿಎಸ್ ಸಿ ಮುಗಿದ ಬಳಿಕ ಇಂದಿರಾಗಾAಧಿ ಮುಕ್ತ ವಿಶ್ವವಿದ್ಯಾನಿಲಯದ ಮೂಲಕ ಒಂದೇ ಬಾರಿಗೆ ಮಾನವಶಾಸ್ತ್ರ ಮತ್ತು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯುವ ನಿಟ್ಟಿನಲ್ಲ ಅಧ್ಯಯನಶೀಲರಾಗಿದ್ದಾರೆ.
ನಮ್ಮೂರ್ ಎಕ್ಸ್ಪ್ರೆಸ್ ಮಲ್ನಾಡ್ ಐಕಾನ್ ಪ್ರಶಸ್ತಿ-2024
ದರ್ಶನ್ ಅವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ ಮತ್ತು ಆಳ್ವಾಸ್ ಶಿಕ್ಷಣ ಸಮಿತಿಯಿಂದ ಸನ್ಮಾನ ಲಭಿಸಿದೆ. ಶಿಕ್ಷಣ ಕ್ಷೇತ್ರದಲ್ಲಿನ ಇವರ ಸಾಧನೆಯನ್ನು ಗುರುತಿಸಿ ನಮ್ಮೂರ್ ಎಕ್ಸ್ ಪ್ರೆಸ್ ದಶಮಾನೋತ್ಸವ ಸಂಭ್ರಮದಲ್ಲಿ ಆಯೋಜಿಸಿದ್ದ ಮಲೆನಾಡೋತ್ಸವ-2025ರಲ್ಲಿ ಮಲ್ನಾಡ್ ಐಕಾನ್ ಪ್ರಶಸ್ತಿ-2024 ನೀಡಿ ಗೌರವಿಸಲಾಗಿದೆ
ಬಡ ವಿದ್ಯಾರ್ಥಿಗಳಿಗೆ ಕಡಿಮೆ ದರದಲ್ಲಿ ತರಬೇತಿ
ದರ್ಶನ್ ಅವರು ಐಎಎಸ್ ಪರೀಕ್ಷೆಗೆ ತಜ್ಞ ತರಬೇತುದಾರರಾಗಿ ದೇಶದ ಅನೇಕ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದು, ಪ್ರಸ್ತುತ ಐಎಎಸ್ ದರ್ಶನ ಎಂಬ ಸಂಸ್ಥೆಯಲ್ಲಿ ಕರ್ತವ್ಯ ನಿರತರಾಗಿದ್ದಾರೆ. ಹಾಗೆಯೇ ಪುತ್ತೂರಿನ ವಿವೇಕಾನಂದ ಐಎಎಸ್ ಅಧ್ಯಯನ ಕೇಂದ್ರ ಸೇರಿದಂತೆ, ವಿವಿಧ ಐಎಎಸ್ ಅಧ್ಯಯನ ಕೇಂದ್ರಗಳಿಗೆ ತೆರಳಿ ತರಗತಿಗಳನ್ನು ತೆಗೆದುಕೊಳ್ಳುವುದಿದೆ. ಇವರ ಐಎಎಸ್ ದರ್ಶನ ಸಂಸ್ಥೆಯಲ್ಲಿ 300ಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳು ವರ್ಷಕ್ಕೆ ಕೇವಲ ಹತ್ತು ಸಾವಿರ ರೂಪಾಯಿ ಮಾತ್ರ ಶುಲ್ಕವನ್ನು ಪಾವತಿಸಿ, ಅಧ್ಯಯನ ನಡೆಸುತ್ತಿದ್ದಾರೆ. ಇನ್ನೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಉಚಿತವಾಗಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಪುತ್ತೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಯುಟ್ಯೂಬ್ ವಾಹಿನಿಯಲ್ಲಿ ಉಚಿತವಾಗಿ ಪರೀಕ್ಷೆಗೆ ಸಂಬಂಧಿಸಿದ ಮಾಹಿತಿಗಳನ್ನು ನೀಡುತ್ತಿದ್ದು, ತರಗತಿಗಳನ್ನು ಕೂಡ ನಡೆಸುತ್ತಿದ್ದಾರೆ.
ಕನ್ನಡದಲ್ಲಿ ಐಎಎಸ್ ಜಾಗೃತಿ ಮೂಡಿಸುವ ಕಾಯಕ!
ಐಎಎಸ್ ನಲ್ಲಿ ಕನ್ನಡಿಗರು ಸ್ಥಾನಗಳನ್ನು ಪಡೆಯಬೇಕು ಎಂಬ ಹಂಬಲದಿಂದ ಪರೀಕ್ಷೆಗಳ ಕುರಿತು ಅನೇಕ ಉಪನ್ಯಾಸಗಳನ್ನು ನೀಡುವ ಮೂಲಕ, ಅದರ ಮಹತ್ವದ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಇವರು ಐಎಎಸ್ ದರ್ಶನ ಎಂಬ ತಮ್ಮದೇ ತರಬೇತಿ ಸಂಸ್ಥೆಯ ಮೂಲಕ, 250ಕ್ಕೂ ಹೆಚ್ಚಿನ ಬೇರೆ ಬೇರೆ ಅವಧಿಗಳಲ್ಲಿ ಐಎಎಸ್ ಅಷ್ಟೇ ಅಲ್ಲದೆ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನು ನೀಡುತ್ತಿದ್ದಾರೆ. ಇದರಿಂದ 40.000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಲಾಭವಾಗಿದೆ.








