ಬೆಂಗಳೂರು: ನಾಡಹಬ್ಬವಾದ ದಸರಾದ ಪ್ರಯುಕ್ತ ಕರ್ನಾಟಕದ ಶಾಲೆಗಳ ಮಕ್ಕಳಿಗೆ ರಜೆ ನೀಡುವುದು ಹಿಂದಿನಿಂದ ಬಂದ ಪದ್ಧತಿಯಾಗಿದೆ. ಸೆಪ್ಟೆಂಬರ್ ಅಂತ್ಯದ ವೇಳೆಗೆ ಅರ್ಧವಾರ್ಷಿಕ ಪರೀಕ್ಷೆಯನ್ನು ಮುಗಿಸಿ, ಅಕ್ಟೋಬರ್ ತಿಂಗಳ ಪ್ರಾರಂಭದಿಂದ ದಸರಾ ಹಬ್ಬ ಮುಗಿಯುವವರೆಗೂ ರಾಜ್ಯ ಸರ್ಕಾರವು ರಜೆಯನ್ನು ಘೋಷಿಸುತ್ತದೆ.
ಶೈಕ್ಷಣಿಕ ವೇಳಾಪಟ್ಟಿ 2026ರ ಪ್ರಕಾರ ಈ ಬಾರಿಯ ದಸರಾ ರಜೆಯು 19 ದಿನಗಳ ಕಾಲ ಲಭಿಸಲಿದೆ. ಅಕ್ಟೋಬರ್ 2ರ ಶುಕ್ರವಾರದಂದು ಗಾಂಧಿ ಜಯಂತಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿ ಜಯಂತಿಯನ್ನು ಆಚರಿಸಿದ ಬಳಿಕ, ಅಕ್ಟೋಬರ್ 3ರ ಶನಿವಾರದಿಂದ ಅಕ್ಟೋಬರ್ 20ರ ಮಂಗಳವಾರದವರೆಗೆ ರಜೆಯನ್ನು ಘೋಷಿಸಲಾಗಿದೆ.
ಅಕ್ಟೋಬರ್ 11ರ ಭಾನುವಾರದಿಂದ ನವರಾತ್ರಿ ಅಥವಾ ದಸರಾ ಹಬ್ಬ ಪ್ರಾರಂಭಗೊಳ್ಳಲಿದ್ದು, ಅಕ್ಟೋಬರ್ 19ರ ಸೋಮವಾರದಂದು ಮಹಾನವಮಿ ಮತ್ತು ಅಕ್ಟೋಬರ್ 20ರಂದು ವಿಜಯದಶಮಿ ಹಬ್ಬ ಮುಗಿದ ಬಳಿಕ, ಅಕ್ಟೋಬರ್ 21ರ ಬುಧವಾರದಿಂದ ಎಂದಿನಂತೆ ಶಾಲೆಗಳ ತರಗತಿಗಳು ಪ್ರಾರಂಭಗೊಳ್ಳಲಿವೆ ಎನ್ನುವ ಮಾಹಿತಿ ಮೂಲಗಳಿಂದ ಲಭಿಸಿದೆ.







