Categories
Uncategorized

•ಬೆಳ್ತಂಗಡಿ: ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳುವು •ಸುಳ್ಯ: ಗೋದಾಮಿಗೆ ಬೆಂಕಿ •ಬಂಟ್ವಾಳ: ಕೋಳಿ ಅಂಕದ ಮೇಲೆ ಪೊಲೀಸರ ದಾಳಿ •ಕಾರ್ಕಳ: ಲಾಡ್ಜ್ ನಲ್ಲಿ ವ್ಯಕ್ತಿ ಶವವಾಗಿ ಪತ್ತೆ; ಚುರುಕುಗೊಂಡ ತನಿಖೆ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ •ಬೆಳ್ತಂಗಡಿ: ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳುವು

ಬೆಳ್ತಂಗಡಿ: ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿಕೊಂಡು ಹೋಗಿರುವ ಘಟನೆ, ಕುವೆಟ್ಟು ಗ್ರಾಮದ ಆಲಂದಿಲ ಎನ್ನುವಲ್ಲಿ ನಡೆದಿದೆ. ನೌಫಾಲ್ ಎನ್ನುವವರ ಮನೆಯಲ್ಲಿ ಈ ಘಟನೆ ಸಂಭವಿಸಿದೆ. ಭಾನುವಾರದಂದು ನೌಫಾಲ್ ತಮ್ಮ ಸಹೋದರನಾದ ನೌಷಾದ್ ಮತ್ತು ಆತನ ಕುಟುಂಬಸ್ಥರನ್ನು ಸಂಬಂಧಿಕರ ಗೃಹಪ್ರವೇಶಕ್ಕೆಂದು ಗುರುವಾಯನಕೆರೆಗೆ ಕರೆದುಕೊಂಡು ಹೋಗಿದ್ದರು ಎನ್ನಲಾಗಿದೆ. ಮಧ್ಯಾಹ್ನದ ಹೊತ್ತಿಗೆ ನೌಫಾಲ್ ಅವರು ಮನೆಗೆ ಆಗಮಿಸಿದ್ದು, ಬಳಿಕ ಹೊರಗಿನಿಂದ ಚಿಲಕ ಹಾಕಿಕೊಂಡು ವ್ಯಾಪಾರದ ಕೆಲಸದ ನಿಮಿತ್ತವಾಗಿ ಬೆಳ್ತಂಗಡಿಗೆ ತೆರಳಿದ್ದರು. ಅಷ್ಟೇ ಅಲ್ಲದೆ ನೌಷಾದ್ ಕೂಡ ಮನೆಗೆ ಬಂದು ತೆರಳಿದ್ದರು‌. ಆದರೆ, ಸೋಮವಾರದಂದು ರಾತ್ರಿ ನೌಫಾಲ್ ಅವರ ಕುಟುಂಬಸ್ಥರು ಮನೆಗೆ ಹಿಂತಿರುಗಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ ಎನ್ನುವ ಮಾಹಿತಿ ಲಭಿಸಿದೆ. ಬಟ್ಟೆಯನ್ನು ಬದಲಾಯಿಸುವಾಗ ಕೋಣೆಯಲ್ಲಿದ್ದ ಬೀರುವನ್ನು ಪರಿಶೀಲಿಸಿದಾಗ ಚಿನ್ನಾಭರಣ ಕಳುವಾಗಿರುವುದು ಕಂಡುಬಂದಿದೆ. ಚಿನ್ನದ ಸರಗಳು, ಬ್ರಾಸ್ ಲೈಟ್, ಉಂಗುರಗಳು ಮತ್ತು ಕಿವಿಯೋಲೆಗಳು ಸೇರಿ ಒಟ್ಟು 113 ಗ್ರಾಂ ತೂಕದ 15.82.೦೦೦ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು 1.80.000 ರೂಪಾಯಿ ನಗದು ಹಣ ಕಳುವಾಗಿದೆ ಎಂದು ಹೇಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ನೌಫಾಲ್ ಅವರು ಪೊಲೀಸರಿಗೆ ದೂರು ನೀಡಿದ್ದು, ಫಾಲ್ ಸೀಲಿಂಗ್ ಕೆಲಸಕ್ಕಾಗಿ ಬಂದ ಕೆಲಸಗಾರರ ಮೇಲೆ ನೌಫಾಲ್ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ದೂರಿನ ಆಧಾರದ ಮೇಲೆ ಆರೋಪಿಗಳ ವಿರುದ್ಧ ಅಪರಾಧ ಕ್ರಮ 1೦5/2026, ಬಿಎನ್ಎಸ್ 2023ರ ಕಲಂ 331(3), 331(4) ಮತ್ತು 3೦5ರ ಅಡಿಯಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

•ಸುಳ್ಯ: ಗೋದಾಮಿಗೆ ಬೆಂಕಿ

ಸುಳ್ಯ: ಗೋದಾಮಿಗೆ ಇದ್ದಕ್ಕಿದ್ದ ಹಾಗೆ ಬೆಂಕಿ ತಗುಲಿದ ಘಟನೆ, ಸೋಮವಾರದಂದು ಬಾಳೆಮಕ್ಕಿಯ ಶ್ರೀಹರಿ ಕಂಪ್ಲೇಂಕ್ಸ್ ನಲ್ಲಿ ನಡೆದಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಗೋದಾಮಿನ ಮಾಲೀಕರು ಕಟ್ಟಡದ ಮಾಲೀಕರಿಗೆ ಮತ್ತು ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದರು ಎನ್ನಲಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಗೋದಾಮಿಗೆ ತಗುಲಿದ ಬೆಂಕಿಯನ್ನು ನಂದಿಸಲು ಸಾಹಸ ಪಡುವಂತಾಯಿತು. ಏಕಾಏಕಿ ಬೆಂಕಿ ಅವಘಡ ಸಂಭವಿಸಲು ಕಾರಣವೇನು ಎನ್ನುವುದು ಸ್ಪಷ್ಟವಾಗಿ ತಿಳಿದುಬಂದಿಲ್ಲ.

•ಬಂಟ್ವಾಳ: ಕೋಳಿ ಅಂಕದ ಮೇಲೆ ದಾಳಿ

ಬಂಟ್ವಾಳ: ಕೋಳಿ ಅಂಕ ನಡೆಯುತ್ತಿರುವ ಕುರಿತು ಖಚಿತವಾದ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಪೊಲೀಸರು ಸ್ಥಳಕ್ಕೆ ಆಗಮಿಸಿ ದಾಳಿ ನಡೆಸಿದ ಘಟನೆ, ಅಮ್ಟಾಡಿ ಗ್ರಾಮದ ಪಡೆಂಕಿಲ್ ಮಾರ್ ಎನ್ನುವಲ್ಲಿ ನಡೆದಿದೆ. ಪೊಲೀಸರ ಆಗಮನವಾಗುತ್ತಿದ್ದಂತೆ ಕೆಲವು ಆರೋಪಿಗಳು ಪರಾರಿಯಾಗಿದ್ದು ಶೇಖರ್, ಜಗದೀಶ್ ಮತ್ತು ರಾಜೇಶ್ ಎನ್ನುವವರನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಈ ಸಂದರ್ಭದಲ್ಲಿ ಕೋಳಿ ಅಂಕಕ್ಕೆ ಬಳಸಿದ 9 ಕೋಳಿಗಳು, ಕೋಳಿ ಬಾಲು, ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

•ಕಾರ್ಕಳ: ಲಾಡ್ಜ್ ನಲ್ಲಿ ವ್ಯಕ್ತಿ ಶವವಾಗಿ ಪತ್ತೆ; ಚುರುಕುಗೊಂಡ ತನಿಖೆ

ಕಾರ್ಕಳ: ವ್ಯಕ್ತಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ, ಉಡುಪಿಯ ಪುಲ್ಕೇರಿ ಬೈಪಾಸ್ ಸಮೀಪದ ಖಾಸಗಿ ಲಾಡ್ಜ್ ಒಂದರಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಕಾರ್ಕಳ ತಾಲ್ಲೂಕಿನ ಸಾಣೂರು ಗ್ರಾಮದ ದುರ್ಗಾ ನಿವಾಸಿ ಶಿವಾನಂದ್ ಎಂದು ಗುರುತಿಸಲಾಗಿದೆ. ಸೆಪ್ಟೆಂಬರ್ 11ರ ಶುಕ್ರವಾರದಂದು ಶಿವಾನಂದ್ ಅವರು ಕೆಲಸದ ನಿಮಿತ್ತ ಉಡುಪಿಗೆ ಹೋಗಿ ಬರುವುದಾಗಿ ಮನೆಯವರಿಗೆ ತಿಳಿಸಿ ತೆರಳಿದ್ದರು. ಬಳಿಕ ಶಿವಾನಂದ್ ಅವರು ನೆರೆಹೊರೆಯವರೊಂದಿಗೆ ಸಂಪರ್ಕದಲ್ಲಿದ್ದರೂ ಕೂಡ ಮನೆಗೆ ಮರಳಿ ಬಾರದಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿತ್ತು. ಮಾಹಿತಿಯ ಪ್ರಕಾರ ಸೆಪ್ಟೆಂಬರ್ 14ರ ಸೋಮವಾರದಂದು ಹೊಟೇಲ್ ನ ಸಿಬ್ಬಂದಿ ಮಧ್ಯಾಹ್ನ 2:30ರ ಸುಮಾರಿಗೆ ಶಿವಾನಂದ್ ಅವರು ತಂಗಿದ್ದ ಕೋಣೆಗೆ ಹೋಗಿ ಊಟವನ್ನು ನೀಡಿ ಬಂದಿದ್ದಾರೆ. ನಂತರ ಅವರ ಕೊಠಡಿಯಿಂದ ಯಾವುದೇ ಸದ್ದುಗದ್ದಲವಿರಲಿಲ್ಲ ಎನ್ನಲಾಗಿದೆ. ಅದೇ ದಿನ ರಾತ್ರಿ 8:೦೦ ಗಂಟೆಗೆ ಸಿಬ್ಬಂದಿಯೊಬ್ಬರು ಶಿವಾನಂದ್ ಅವರ ಕೋಣೆಗೆ ಹೋದಾಗ ಅವರು ಬಾತ್ ರೂಮಿನಲ್ಲಿ ಶವವಾಗಿ ಬಿದ್ದಿರುವುದು ಬೆಳಕಿಗೆ ಬಂದಿದೆ. ತಕ್ಷಣ ಮಂಜುನಾಥ್ ಎನ್ನುವವರು ಶಿವಾನಂದ್ ಅವರ ಸಹೋದರ ರತ್ನಾಕರ್ ಸುವರ್ಣ ಅವರಿಗೆ ಮಾಹಿತಿ ನೀಡಿದ್ದಾರೆ. ವಿಚಾರ ತಿಳಿದ ಕೂಡಲೇ ಶಿವಾನಂದ್ ಅವರ ಕುಟುಂಬಸ್ಥರು ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಹಠಾತ್ ಅನಾರೋಗ್ಯ ಅಥವಾ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಬಾತ್ ರೂಮಿನಲ್ಲಿಯೇ ಸಾವನ್ನಪ್ಪಿರಬಹುದು ಎನ್ನುವ ಸಂದೇಹ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿದಂತೆ ರತ್ನಾಕರ್ ಸುವರ್ಣ ಅವರು ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಪೊಲೀಸರು ಕಾರ್ಕಳ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಶಿವಾನಂದ್ ಅವರ ಸಾವಿಗೆ ಕಾರಣವೇನು ಎನ್ನುವುದನ್ನು ಪತ್ತೆ ಹಚ್ಚುವ ಸಲುವಾಗಿ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಅದರ ವರದಿ ಬಂದ ಬಳಿಕವೇ ಸಾವಿಗೆ ಕಾರಣ ಏನೆನ್ನುವುದು ಸ್ಪಷ್ಟವಾಗಿ ತಿಳಿದುಬರಬೇಕಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.