ಬೆಂಗಳೂರು: ಗ್ರಾಮ ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸಲು ಕರ್ನಾಟಕ ಚುನಾವಣಾ ಆಯೋಗವು ಸಿದ್ಧತೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಆಯೋಗವು ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರರೊಂದಿಗೆ ಸಾಲುಸಾಲಾಗಿ ಸಭೆಗಳನ್ನು ನಡೆಸುತ್ತಿದೆ ಎನ್ನಲಾಗಿದೆ.
ರಾಜ್ಯದಲ್ಲಿ 5950 ಗ್ರಾಮ ಪಂಚಾಯಿತಿಗಳಿದ್ದು, 2020 ಡಿಸೆಂಬರ್ ತಿಂಗಳಿನಲ್ಲಿ, ಎರಡು ಹಂತಗಳಲ್ಲಿ ಗ್ರಾಮ ಪಂಚಾಯಿತಿಯ ಸಾರ್ವತ್ರಿಕ ಚುನಾವಣೆಗಳು ನಡೆದಿದ್ದವು. ನಂತರ ಕೋವಿಡ್, ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳ ಭರಾಟೆ, ಸಾವು, ಅತಿವೃಷ್ಟಿ ಅನಾವೃಷ್ಟಿ ಸೇರಿದಂತೆ ಹಲವಾರು ಕಾರಣಗಳಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸಲು ಸಾಧ್ಯವಾಗಲಿಲ್ಲ. ಪರಿಣಾಮವಾಗಿ ಇದೀಗ ಬಹುತೇಕ ಪಂಚಾಯಿತಿಗಳ ಅಧಿಕಾರಾವಧಿ ಮುಕ್ತಾಯಗೊಂಡು ಬಹಳ ದಿನಗಳೇ ಆಗಿವೆ.
ಕೇವಲ ಗ್ರಾಮ ಪಂಚಾಯಿತಿ ಅಷ್ಟೇ ಅಲ್ಲದೆ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳ ಚುನಾವಣೆಗಳು ಕೂಡ ಹಲವಾರು ವರ್ಷಗಳಿಂದ ಬಾಕಿ ಇದ್ದು, ಇದಕ್ಕೆ ಸಂಬಂಧಿಸಿದಂತಹ ಮೀಸಲಾತಿ ಹಂಚಿಕೆ ಮತ್ತು ವಾರ್ಡ್ ಮರುವಿಂಗಡಣೆಯನ್ನು ಸರ್ಕಾರವು ಪೂರ್ಣಗೊಳಿಸಿದೆ ಎನ್ನುವ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.
ಎಸ್ಐಆರ್ ಚಟುವಟಿಕೆಗಳು ಕೂಡ ಈಗಾಗಲೇ ಪೂರ್ಣಗೊಂಡಿದ್ದು, ಅಕ್ಟೋಬರ್ ತಿಂಗಳ ಅಂತ್ಯದೊಳಗೆ ಅಂತಿಮ ಮತದಾರರ ಪಟ್ಟಿ ಬಿಡುಗಡೆಗೊಳ್ಳಲಿದ್ದು, ಇದಾದ ಬಳಿಕ ಪಂಚಾಯಿತಿ ಚುನಾವಣೆಗಳನ್ನು ನಡೆಸಲು ಆಯೋಗವು ತೀರ್ಮಾನಿಸಿದೆ.
ಸೆ.29ಕ್ಕೆ ರಾಜ್ಯದ ಚುನಾವಣಾ ಆಯೋಗದ ಮಹತ್ವದ ಸಭೆ
ರಾಜ್ಯದ ಚುನಾವಣಾ ಆಯೋಗವು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಬಿರುಸಿನ ಚಟುವಟಿಕೆ ನಡೆಸಿದ್ದು, ಸಂಬಂಧಿತ ಅಧಿಕಾರಿಗಳಿಗೆ ಸುತ್ತೋಲೆ ಮತ್ತು ಸೂಚನಾ ಪತ್ರವನ್ನು ಹೊರಡಿಸಿದೆ. ಇದರೊಂದಿಗೆ ಆಯೋಗದ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 29ರ ಮಂಗಳವಾರದಂದು ಮಹತ್ವಪೂರ್ಣವಾದ ವಿಡಿಯೋ ಸಂವಾದ ಸಭೆಯನ್ನು ಕೂಡ ಏರ್ಪಡಿಸಿದೆ. ಇದಕ್ಕೆ ಬೆಳಗಾವಿ ವಿಭಾಗ, ಕಲಬುರಗಿ ವಿಭಾಗ ಸೇರಿದಂತೆ ರಾಜ್ಯದ ಆಯಾ ಜಿಲ್ಲಾಧಿಕಾರಿಗಳ ಕಛೇರಿಯಿಂದಲೇ ಸಭೆಗೆ ಹಾಜರಾಗುವಂತೆ ಆದೇಶಿಸಲಾಗಿದೆ.
ಮತಗಟ್ಟೆ ಸಿದ್ಧತೆಗೆ ಕ್ರಮ
ಚುನಾವಣೆಗೆ ಆಯೋಗವು ಮತಗಟ್ಟೆ ಮತ್ತು ಮತಪೆಟ್ಟಿಗೆಗಳ ಸಿದ್ಧತೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ನಮೂನೆ 1ರಿಂದ 4ರ ಪ್ರಕಾರ ಮತ ಪೆಟ್ಟಿಗೆಗಳ ವಿವರಗಳನ್ನು ಒದಗಿಸುವುದು, ಗ್ರಾಮೀಣ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವಂತಹ ಮತಗಟ್ಟೆಗಳ ನಿಖರ ಮಾಹಿತಿಯನ್ನು ಪರಿಶೀಲಿಸುವುದು, ಸಾರ್ವತ್ರಿಕ ಚುನಾವಣೆಯನ್ನು ಸುಗಮವಾಗಿ ನಡೆಸಲು ಜಿಲ್ಲಾವಾರು ಬೇಕಾಗುವಂತಹ ಒಟ್ಟು ಮತಪೆಟ್ಟಿಗೆಗಳ ಲೆಕ್ಕಚಾರ ಕೈಗೊಳ್ಳುವುದು, ದಾಸ್ತಾನಿನಲ್ಲಿರುವ ಮತಪೆಟ್ಟಿಗೆಗಳ ಹೊರತಾಗಿ ಇನ್ನೂ ಎಷ್ಟು ಮತಪೆಟ್ಟಿಗೆಗಳ ಕೊರತೆ ಇದೆ ಎನ್ನುವುದನ್ನು ಗಮನಿಸುವುದು, ಹಾಳಾಗಿರುವ ಅಥವಾ ದುರಸ್ತಿಗೆ ಬಂದಿರುವಂತಹ ಮತಪೆಟ್ಟಿಗೆಗಳನ್ನು ಸರಿಪಡಿಸಲು ಕ್ರಮಗಳನ್ನು ಕೈಗೊಳ್ಳುವುದು ಸೇರಿದಂತೆ ಹಲವಾರು ಬಗೆಯ ತಯಾರಿಗಳನ್ನು ಚುನಾವಣಾ ಆಯೋಗವು ಕೈಗೊಂಡಿದೆ.
ಅಕ್ಟೋಬರ್ ತಿಂಗಳ ಕೊನೆಯ ವಾರದಲ್ಲಿ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳ ಚುನಾವಣಾ ದಿನಾಂಕವನ್ನು ಆಯೋಗವು ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನುವ ಅಭಿಪ್ರಾಯಗಳು ಕೇಳಿಬರುತ್ತಿದೆ.







