ಸಾಗರ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಒಂದು ಪಲ್ಟಿ ಹೊಡೆದ ಘಟನೆ, ಶುಕ್ರವಾರದಂದು ಹೊಸಕೊಪ್ಪ ಗ್ರಾಮದ ಬಳಿ ನಡೆದಿದೆ. ಕೊಲ್ಲೂರಿನಿಂದ ಸಿಗಂದೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಪರಿಣಾಮವಾಗಿ ಎರಡು ಮನೆಗಳು ಜಖಂಗೊಂಡಿದ್ದು, ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ದಾವಣಗೆರೆ ಮೂಲದ ಹಲವು ಗಾರ್ಮೆಂಟ್ಸ್ ನೌಕರರಿಗೆ ಗಾಯಗಳಾಗಿವೆ ಎನ್ನುವ ಮಾಹಿತಿ ಲಭಿಸಿದೆ. ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ಏಣಿಯನ್ನು ಬಳಸಿಕೊಂಡು ಗಾಯಾಳುಗಳನ್ನು ಬಸ್ ನಿಂದ ಇಳಿಸಿ, ರಕ್ಷಣೆ ಮಾಡಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆಯನ್ನು ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
•ಹೊಸನಗರ: ತಹಶೀಲ್ದಾರರಿಂದ ದಾಳಿ; 2 ಲಾರಿ ಜಪ್ತಿ
ಹೊಸನಗರ: ಅಕ್ರಮವಾಗಿ ಜಂಬಿಟ್ಟಿಗೆಗಳನ್ನು ರವಾನಿಸುತ್ತಿದ್ದ ಲಾರಿಗಳ ಮೇಲೆ ದಾಳಿ ನಡೆಸಿದ ಘಟನೆ, ಗುರುವಾರದಂದು ಬೆಳಗಿನ ಜಾವ ರಿಪ್ಪನ್ ಪೇಟೆ ಸಮೀಪದ ವೊಡಹೊಸಳ್ಳಿ ಗ್ರಾಮದಲ್ಲಿ ನಡೆದಿದೆ. ಖಚಿತವಾದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಹೊಸನಗರ ತಾಲ್ಲೂಕಿನ ತಹಶೀಲ್ದಾರ್ ಭರತ್ ರಾಜ್ ಅವರ ನೇತೃತ್ವದಲ್ಲಿ ಪ್ರಮುಖ ಅಧಿಕಾರಿಗಳು ಮತ್ತು ಕಂದಾಯ ಸಿಬ್ಬಂದಿಗಳಾದ ಗಣೇಶ್ ಮತ್ತು ಶಿವಪ್ಪ ಅವರು ಬೆಳಗಿನ ಜಾವ 5:30ರ ಸುಮಾರಿಗೆ ದಿಢೀರ್ ದಾಳಿ ನಡೆಸಿದ್ದಾರೆ. ಆನಂದಪುರ ಮಾರ್ಗವಾಗಿ ಆಗಮಿಸುತ್ತಿದ್ದ ಎರಡು ಲಾರಿಗಳನ್ನು ತಡೆಗಟ್ಟಿ ಪರಿಶೀಲನೆ ನಡೆಸಿದಾಗ, ಯಾವುದೇ ದಾಖಲೆಗಳಿಲ್ಲದೆ ಕಾನೂನುಬಾಹಿರವಾಗಿ ಜಂಬಿಟ್ಟಿಗೆಗಳನ್ನು ರವಾನಿಸುತ್ತಿರುವುದು ದೃಢಪಟ್ಟಿದೆ. ಈ ಸಂದರ್ಭದಲ್ಲಿ ಕೃತ್ಯಕ್ಕೆ ಬಳಸಿದ ಎರಡು ಲಾರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎನ್ನುವ ಮಾಹಿತಿ ಲಭಿಸಿದೆ. ವಶಪಡಿಸಿಕೊಂಡ ಲಾರಿಗಳನ್ನು ರಿಪ್ಪನ್ ಪೇಟೆ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
•ಸಾಗರ: ಬಾವಿಯಿಂದ ಮೇಲೆ ಬಂದ ಶವ
ಸಾಗರ: ಸರ್ಕಾರಿ ಬಾವಿಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿರುವ ಘಟನೆ ಗಣಪತಿ ದೇವಸ್ಥಾನದ ಸಮೀಪದಲ್ಲಿ ನಡೆದಿದೆ. ಇಲ್ಲಿ ಕೆಲವು ದಿನಗಳಿಂದ ಹೆಣದ ವಾಸನೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು, ಹುಡುಕಾಟ ನಡೆಸಿದಾಗ ಸರ್ಕಾರಿ ಬಾವಿಯ ಬಳಿ ಹೆಚ್ಚಿನ ಪ್ರಮಾಣದಲ್ಲಿ ವಾಸನೆ ಬರುತ್ತಿರುವುದರಿಂದ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ. ಆಗ ಸುಮಾರು 40 – 45 ವರ್ಷದ ವ್ಯಕ್ತಿಯೊಬ್ಬರ ಶವ ಬಾವಿಯಲ್ಲಿ ಪತ್ತೆಯಾಗಿದೆ. ತಕ್ಷಣ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಶವವನ್ನು ಬಾವಿಯಿಂದ ಮೇಲಕ್ಕೆ ತಂದಿದ್ದಾರೆ. ಬಳಿಕ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಮೃತದೇಹ ಅರೆನಗ್ನ ಸ್ಥಿತಿಯಲ್ಲಿದ್ದು, ಕೈಗಳನ್ನು ಹಿಂಬದಿಗೆ ಕಟ್ಟಿ ಹಾಕಿದ ಭಂಗಿಯಲ್ಲಿ ಕಂಡುಬಂದಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಇದು ಆಕಸ್ಮಿಕ ಸಾವೇ ಅಥವಾ ಕೊಲೆಯೇ ಎನ್ನುವುದು ಪೊಲೀಸರ ಸಂಪೂರ್ಣ ತನಿಖೆಯ ಬಳಿಕವಷ್ಟೇ ಸ್ಪಷ್ಟವಾಗಿ ತಿಳಿದುಬರಬೇಕಿದೆ.
•ಶಿವಮೊಗ್ಗ: ಗಣಪತಿ ವಿಸರ್ಜನೆ ಮುಗಿಸಿ ತೆರಳುವ ವೇಳೆ ಅಪಘಾತ
ಶಿವಮೊಗ್ಗ: ಯುವಕನೊಬ್ಬ ಅಪಘಾತಕ್ಕೆ ಒಳಗಾದ ಘಟನೆ, ಸವಳಂಗ ರಸ್ತೆಯ ಮೂಲಾ ವೈನ್ಸ್ ಎದುರಿನಲ್ಲಿ ನಡೆದಿದೆ. ಗಣಪತಿ ವಿಸರ್ಜನೆ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ, ಬೈಕ್ ಡಿವೈಡರ್ ಗೆ ಢಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಪರಿಣಾಮವಾಗಿ ಯುವಕನ ತಲೆಗೆ ಗಂಭೀರ ಗಾಯವಾಗಿದ್ದು, ಬಲಗಾಲು ಮುರಿದಿದ್ದು, ಹಿಂಬದಿಯಲ್ಲಿದ್ದ ಸವಾರರಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎನ್ನುವ ಮಾಹಿತಿ ಲಭಿಸಿದೆ. ಘಟನೆಗೆ ಸಂಬಂಧಿಸಿದಂತೆ ಶಿವಮೊಗ್ಗ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
•ಶಿವಮೊಗ್ಗ: ಚಲಿಸುತ್ತಿದ್ದ ಬಸ್ ನಲ್ಲಿ ಬೆಂಕಿ; ತಪ್ಪಿದ ಅನಾಹುತ
ಶಿವಮೊಗ್ಗ: ಚಲಿಸುತ್ತಿದ್ದ ಬಸ್ ನಲ್ಲಿ ಇದ್ದಕ್ಕಿದ್ದ ಹಾಗೆ ಬೆಂಕಿ ಕಾಣಿಸಿಕೊಂಡ ಘಟನೆ, ಶುಕ್ರವಾರ ರಾತ್ರಿ ಪೆಸಿಟ್ ಕಾಲೇಜಿನ ಬಳಿ ನಡೆದಿದೆ. ಶಿವಮೊಗ್ಗದಿಂದ ರಿಪ್ಪನ್ ಪೇಟೆಯ ಕಡೆಗೆ ತೆರಳುತ್ತಿದ್ದ ಗುರುಶಕ್ತಿ ಎನ್ನುವ ಹೆಸರಿನ ಖಾಸಗಿ ಬಸ್ ನಲ್ಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಬಸ್ ನ ಮುಂಭಾಗದಿಂದ ಹೊಗೆ ಮತ್ತು ಬೆಂಕಿ ಬರುತ್ತಿರುವುದನ್ನು ಗಮನಿಸಿದ ಚಾಲಕರು, ತಕ್ಷಣ ಬಸ್ ಅನ್ನು ರಸ್ತೆ ಬದಿಗೆ ನಿಲ್ಲಿಸಿ, ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿದ್ದಾರೆ ಎನ್ನಲಾಗಿದೆ. ನಂತರ ಸ್ಥಳೀಯರು ಮತ್ತು ಸಾರ್ವಜನಿಕರ ನೆರವಿನಿಂದ ಬಸ್ ಚಾಲಕ ಮತ್ತು ನಿರ್ವಾಹಕರು ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ರಿಪ್ಪನ್ ಪೇಟೆ ಮಾರ್ಗವಾಗಿ ಕೋಣಂದೂರು ಮತ್ತು ತೀರ್ಥಹಳ್ಳಿಯ ಕಡೆಗೆ ತೆರಳಬೇಕಿದ್ದ ಪ್ರಯಾಣಿಕರಿಗೆ ಅದೇ ಸಂಸ್ಥೆಯ ಮತ್ತೊಂದು ಬಸ್ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ, ಪ್ರಯಾಣವನ್ನು ಮುಂದುವರಿಸಲು ಅವಕಾಶ ಮಾಡಿಕೊಟ್ಟರು ಎನ್ನುವ ಸಂಗತಿ ತಿಳಿದುಬಂದಿದೆ. ಚಾಲಕ ಮತ್ತು ನಿರ್ವಾಹಕರ ಸಮಯಪ್ರಜ್ಞೆಯಿಂದ ಎದುರಾಗಬಹುದಾಗಿದ್ದ ಭಾರಿ ಪ್ರಮಾಣದ ಅನಾಹುತ ತಪ್ಪಿಸಿದಂತಾಗಿದೆ.
ಶಿವಮೊಗ್ಗ: ಸಕ್ರೆಬೈಲಲ್ಲಿ ಶೌರ್ಯ ಆನೆ ಸಾವು: ನಿರ್ಲಕ್ಷ್ಯ
ತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲು ಆನೆ ಬಿಡಾರದಲ್ಲಿ ‘ಶೌರ್ಯ’ ಆನೆ ಮೃತಪಟ್ಟಿರುವ ಘಟನೆಗೆ ತೀವ್ರ ದುಃಖ ಹಾಗೂ ಆಕ್ರೋಶ ವ್ಯಕ್ತಪಡಿಸಿರುವ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ, ಆನೆಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಅಥವಾ ಲೋಪ ಕಂಡುಬಂದಿದ್ದರೆ ಅದನ್ನು ಯಾವುದೇ ಕಾರಣಕ್ಕೂ ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ಸಕ್ರೆಬೈಲು ಆನೆ ಬಿಡಾರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಲವು ಆನೆಗಳು ಮೃತಪಟ್ಟಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಇದೀಗ ಶೌರ್ಯ ಆನೆಯ ಸಾವಿನ ಘಟನೆ ಮತ್ತೊಮ್ಮೆ ಬಿಡಾರದ ನಿರ್ವಹಣಾ ವ್ಯವಸ್ಥೆಯತ್ತ ಗಂಭೀರ ಪ್ರಶ್ನೆಗಳನ್ನು ಎತ್ತುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಬಿಡಾರದಲ್ಲಿ ಆನೆಗಳಿಗೆ ನೀಡಲಾಗುತ್ತಿರುವ ಆಹಾರ, ಆರೋಗ್ಯ ತಪಾಸಣೆ, ಗಾಯಗಳಿಗೆ ನೀಡುವ ಚಿಕಿತ್ಸೆ ಹಾಗೂ ಸಿಬ್ಬಂದಿಯ ಕರ್ತವ್ಯ ನಿರ್ವಹಣೆ ಕುರಿತು ಸಮಗ್ರ ಪರಿಶೀಲನೆ ನಡೆಸುವ ಅಗತ್ಯವಿದೆ ಲ್. ಬಿಡಾರದಲ್ಲಿರುವ ಇನ್ನೂ ಕೆಲವು ಆನೆಗಳ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂಬ ಆತಂಕಕಾರಿ ಮಾಹಿತಿ ಇದೆ ಎಂದು ಜ್ಞಾನೇಂದ್ರ ತಿಳಿಸಿದ್ದಾರೆ.







