ಪುತ್ತೂರು: ಕೌಟುಂಬಿಕ ಕಲಹಕ್ಕೆ ಬೇಸತ್ತು ಮಹಿಳೆಯೊಬ್ಬರು ಇಬ್ಬರು ಮಕ್ಕಳನ್ನು ಬಾವಿಗೆ ಎಸೆದ ಧಾರುಣ ಘಟನೆ ಶನಿವಾರದಂದು ಪೆರ್ನೆ ಎನ್ನುವಲ್ಲಿ ನಡೆದಿದೆ. ಸಿನಾನ್ ಮತ್ತು ಆತನ ಪತ್ನಿ ನೂರುನ್ನಿಸಾ ನಡುವೆ ಫೋನ್ ಕರೆಯಲ್ಲೇ ಕಲಹ ಏರ್ಪಟ್ಟಿದ್ದು, ಇದರಿಂದ ಉದ್ರೇಕಗೊಂಡ ನೂರುನ್ನಿಸಾ ತನ್ನ 3ವರೆ ವರ್ಷದ ಮಗು ಮತ್ತು ಸಿನಾನ್ ನ ಸಹೋದರಿಯ 3 ವರ್ಷದ ಮಗುವನ್ನು ಎತ್ತಿಕೊಂಡು ಹೋಗಿ, ಮನೆಯ ಸಮೀಪದಲ್ಲಿದ್ದ ಬಾವಿಗೆ ಎಸೆದಿದ್ದಾಳೆ ಎನ್ನಲಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳೀಯರು ತಕ್ಷಣ ಮಕ್ಕಳನ್ನು ಬಾವಿಯಿಂದ ಮೇಲಕ್ಕೆ ತಂದಿದ್ದು, ಸಿನಾನ್ ನ ಸಹೋದರಿಯ ಮೂರು ವರ್ಷದ ಮಗು ಮೃತಪಟ್ಟಿದೆ ಎನ್ನುವ ಮಾಹಿತಿ ಲಭಿಸಿದೆ. ಸಿನಾನ್ ಮತ್ತು ನೂರುನ್ನಿಸಾರ ಮಗು ಬದುಕಿದ್ದು, ಅದನ್ನು ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಚಿಕಿತ್ಸೆ ಕೊಡಿಸಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ನೂರುನ್ನಿಸಾ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
•ಬೆಳ್ತಂಗಡಿ: ವಿಡಿಯೋ ಮಾಡಲು ತೆರಳಿದ್ದ ಯುವಕರಿಗೆ ತರಾಟೆ
ಬೆಳ್ತಂಗಡಿ: ನೇತ್ರಾವತಿ ನದಿಯ ಬಳಿಯ ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಯೂಟ್ಯೂಬ್ ವಿಡಿಯೋ ಮಾಡಲು ತೆರಳಿದ್ದ ಯುವಕರನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಯೂಟ್ಯೂಬ್ ವಾಹಿನಿಗೆ ವಿಡಿಯೋಗಳನ್ನು ಅಪ್ ಲೋಡ್ ಮಾಡುವ ಸಲುವಾಗಿ ಧರ್ಮಸ್ಥಳದ ನೇತ್ರಾವತಿ ನದಿಯ ಸಮೀಪದಲ್ಲಿರುವ ಬಂಗ್ಲೆಗುಡ್ಡೆಯ ಒಳಭಾಗಕ್ಕೆ ತೆರಳಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ ಸ್ಥಳೀಯರು ವಿಡಿಯೋ ಮಾಡುವುದನ್ನು ತಡೆಗಟ್ಟಿ, ವಿಡಿಯೋ ಮಾಡದಂತೆ ತಿಳಿಸಿ ಯುವಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಯೂಟ್ಯೂಬರ್ ಗಳು ಮತ್ತು ಸ್ಥಳೀಯರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆದಿದೆ ಎನ್ನುವ ಮಾಹಿತಿ ಲಭಿಸಿದೆ. ಇದಕ್ಕೆ ಸಂಬಂಧಿಸಿದಂತೆ ಸ್ಥಳೀಯರ ಆಕ್ಷೇಪ ಹೆಚ್ಚಾಗುತ್ತಿದ್ದಂತೆ ಪೊಲೀಸರಿಗೆ ವಿಚಾರ ತಿಳಿಸಲಾಯಿತು. ಪ್ರಸ್ತುತ ಯೂಟ್ಯೂಬರ್ ಗಳನ್ನು ಧರ್ಮಸ್ಥಳ ಪೊಲೀಸ್ ಠಾಣೆಗೆ ಕರೆಸಿಕೊಂಡು ಮಾತುಕತೆ ನಡೆಸಿದರು ಎನ್ನುವ ಸಂಗತಿ ತಿಳಿದುಬಂದಿದೆ.
•ಕಾರ್ಕಳ: ಮಾಜಿ ಸಚಿವ ರಾಮನಾಥ ರೈ ಕಾರು ಅಪಘಾತ
ಕಾರ್ಕಳ: ಮಾಜಿ ಸಚಿವರಾದ ರಾಮನಾಥ ರೈ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೆ ಒಳಗಾದ ಘಟನೆ, ಸಾಣೂರಿನಲ್ಲಿ ನಡೆದಿದೆ. ಕಾರ್ಕಳದಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಒಂದು ರಾಮನಾಥ ರೈ ಅವರ ಕಾರಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಪರಿಣಾಮವಾಗಿ ಕಾರು ಚಾಲಕ ಮತ್ತು ರಾಮನಾಥ ರೈ ಅವರ ಪಿಎ ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ರಾಮನಾಥ ರೈ ಅವರು ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳಿಗೆ ಕಾರ್ಕಳದ ಟಿಎಂಎ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
•ಕಾಪು: ಸಮುದ್ರದಲ್ಲಿ ಮುಳುಗಿ ಮೀನುಗಾರ ಸಾವು
ಕಾಪು: ಮೀನು ಹಿಡಿಯಲು ತೆರಳಿದ್ದ ಮೀನುಗಾರರೊಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ, ಶನಿವಾರದಂದು ಹೆಜಮಾಡಿ ಕೋಡಿಯ ಯಾರ್ಡ್ ಬಳಿ ನಡೆದಿದೆ. ಬೀಸು ಬಲೆಯ ಸಹಾಯದಿಂದ ಮೀನು ಹಿಡಿಯುತ್ತಿದ್ದ ಸಂದರ್ಭದಲ್ಲಿ ಬಲೆಯು ದಾರದ ಸಮೇತ ಸಮುದ್ರಕ್ಕೆ ಬಿದ್ದಿದೆ. ಹೀಗಾಗಿ ಮೀನುಗಾರನು ಬಲೆಯನ್ನು ಹಿಡಿಯಲು ಸಮುದ್ರಕ್ಕೆ ಇಳಿದಾಗ, ಅಲೆಗಳ ರಭಸಕ್ಕೆ ಆಯಾತಪ್ಪಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಮೃತ ದುರ್ದೈವಿಯನ್ನು ಹೆಜಮಾಡಿ ಕೋಡಿ ನಿವಾಸಿ ಭಾಸ್ಕರ್ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







