ಉಡುಪಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬಸ್ ವ್ಯಕ್ತಿಯೊಬ್ಬರಿಗೆ ಢಿಕ್ಕಿ ಹೊಡೆದಿರುವ ಘಟನೆ, ಗುರುವಾರದಂದು ನಿಟ್ಟೂರಿನ ಸಮೀಪದಲ್ಲಿ ನಡೆದಿದೆ. ವ್ಯಕ್ತಿಯು ತಮ್ಮ ಬೈಕ್ ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ, ವೇಗವಾಗಿ ಬಂದ ವೋಲ್ವೋ ಬಸ್ ಅವರಿಗೆ ಢಿಕ್ಕಿ ಹೊಡೆದಿರುವುದಷ್ಟೇ ಅಲ್ಲದೆ, ಅಪಘಾತದ ಬಳಿಕ ನಿಲ್ಲಿಸದೆ ಮುಂದೆ ಸಾಗಿದೆ ಎನ್ನಲಾಗಿದೆ. ಅಪಘಾತಕ್ಕೆ ಒಳಗಾದ ವ್ಯಕ್ತಿಯನ್ನು ಉಡುಪಿಯ ಸಮಾಜ ಸೇವಕರಾದ ವಿಶು ಶೆಟ್ಟಿ ಅಂಬಲಪಾಡಿ ಎಂದು ಗುರುತಿಸಲಾಗಿದೆ. ಅಪಘಾತದ ಪರಿಣಾಮವಾಗಿ ವಿಶು ಶೆಟ್ಟಿ ಅವರಿಗೆ ಕೈ ಮತ್ತು ಕಾಲುಗಳಿಗೆ ಪೆಟ್ಟಾಗಿದ್ದು, ಇದನ್ನು ಗಮನಿಸಿದ ಅಂಬಲಪಾಡಿ ಸುರೇಶ್ ಅವರು ತಕ್ಷಣ ವಿಶು ಶೆಟ್ಟಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಚಿಕಿತ್ಸೆಯನ್ನು ನೀಡಿದ ವೈದ್ಯರು ಅವರಿಗೆ 20 ದಿನಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿದ್ದಾರೆ.
•ಮಂಗಳೂರು: ಒರಿಸ್ಸಾದಿಂದ ಕರಾವಳಿಗೆ ಗಾಂಜಾ!
ಮಂಗಳೂರು: ಒರಿಸ್ಸಾ ರಾಜ್ಯದಿಂದ ಗಾಂಜಾವನ್ನು ಆಮದು ಮಾಡಿಕೊಂಡು, ನಗರದಲ್ಲಿ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ, ಬುಧವಾರದಂದು ನಡೆದಿದೆ. ಗಂಜಿಮಠ ಕೈಗಾರಿಕಾ ಪ್ರದೇಶದಲ್ಲಿದ್ದ ಆರೋಪಿಯು ಪೊಲೀಸರನ್ನು ಕಂಡೊಡನೆ ಪರಾರಿಯಾಗಲು ಯತ್ನಿಸಿದ್ದಾನೆ. ಇದನ್ನು ಗಮನಿಸಿದ ಪೊಲೀಸರು ಆತನನ್ನು ಸೆರೆಹಿಡಿದು ವಿಚಾರಣೆಗೆ ಒಳಪಡಿಸಿದಾಗ ಒರಿಸ್ಸಾದಿಂದ ಕಡಿಮೆ ಬೆಲೆಗೆ ಗಾಂಜಾ ಸಿಗುತ್ತಿದ್ದು, ಅದನ್ನು ಖರೀದಿಸಿ ಇಲ್ಲಿಗೆ ತಂದು ಮಾರಾಟ ಮಾಡಲು ಗ್ರಾಹಕರಿಗಾಗಿ ಕಾಯುತ್ತಿದ್ದೇನೆ ಎನ್ನುವ ಸತ್ಯ ಸಂಗತಿಯನ್ನು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಆರೋಪಿಯನ್ನು ಒರಿಸ್ಸಾದ ಬಾಲೇಶ್ವರ್ ಜಿಲ್ಲೆಯ ಅಂಬಪೂಂಜ ಫಿಶ್ ಲೇಕ್ ನಿವಾಸಿ, ಪ್ರಸ್ತುತ ತೆಂಕ ಎಡಪದವು ಗ್ರಾಮದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿರುವ ಸೂರ್ಯಕಾಂತ ಜೇನಾ ಎಂದು ಗುರುತಿಸಲಾಗಿದೆ. ತಕ್ಷಣ ಅವನನ್ನು ಬಂಧಿಸಿದ ಪೊಲೀಸರು, ಆತನ ಬಳಿಯಿದ್ದ 257 ಗ್ರಾಂ ತೂಕದ ಸುಮಾರು 10.000 ರೂಪಾಯಿಗಳಷ್ಟು ಬೆಲೆಬಾಳುವ ಗಾಂಜಾವನ್ನು, 1500ರೂಪಾಯಿ ನಗದು ಹಣವನ್ನು, ಮೊಬೈಲ್ ಮತ್ತು ಗಾಂಜಾ ಮಾರಾಟ ಮಾಡಲು ಬಳಸಿದ 300 ರೂಪಾಯಿ ಮೌಲ್ಯದ ಬ್ಯಾಗ್ ಅನ್ನು ವಶಪಡಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಘಟನೆಗೆ ಸಂಬಂಧಿಸಿದಂತೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
•ಬೆಳ್ತಂಗಡಿ: ಆಟೋ ಮತ್ತು ಬೈಕ್ ನಡುವೆ ಅಪಘಾತ; ಸವಾರ ಸಾವು
ಬೆಳ್ತಂಗಡಿ: ಬೈಕ್ ಮತ್ತು ಆಟೋ ನಡುವೆ ಭೀಕರ ಅಪಘಾತ ಸಂಭವಿಸಿ ಯುವಕನೊಬ್ಬ ಮೃತಪಟ್ಟಿರುವ ಘಟನೆ, ಮೂಡುಕೋಡಿ ಪಂಜಲಬೈಲು ಸಮೀಪದಲ್ಲಿ ನಡೆದಿದೆ. ಯುವಕನು ವೇಣೂರಿನ ಚಿನ್ನಾಭರಣ ಮಳಿಗೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕೆಲಸ ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಎದುರಿನಿಂದ ಬಂದ ಆಟೋ ಏಕಾಏಕಿ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಢಿಕ್ಕಿಯ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ಯುವಕನಿಗೆ ತಲೆ ಸೇರಿದಂತೆ ದೇಹದ ಹಲವಾರು ಭಾಗಗಳಲ್ಲಿ ಗಂಭೀರ ರೀತಿಯ ಗಾಯಗಳಾಗಿದ್ದವು ಎನ್ನುವ ಮಾಹಿತಿ ಲಭಿಸಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವಕನನ್ನು ಸ್ಥಳೀಯರು ತಕ್ಷಣ ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲು ಪ್ರಯತ್ನಿಸಿದರಾದರೂ, ಅದು ಫಲಕಾರಿಯಾಗದೆ ಆಸ್ಪತ್ರೆ ತಲುಪುವುದರ ಒಳಗಾಗಿ ಯುವಕ ಮೃತಪಟ್ಟಿದ್ದನು ಎನ್ನುವ ಸಂಗತಿ ತಿಳಿದುಬಂದಿದೆ. ಮೃತ ದುರ್ದೈವಿ ಯುವಕನನ್ನು ಪೆರಾಡಿ ಗ್ರಾಮದ ಸ್ವಸ್ತಿಕ್ ಎಂದು ಗುರುತಿಸಲಾಗಿದೆ. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆಯನ್ನು ನಡೆಸಿ, ಅಪಘಾತಕ್ಕೆ ಒಳಗಾದ ಎರಡೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅತಿವೇಗ ಮತ್ತು ನಿರ್ಲಕ್ಷ್ಯ ಚಾಲನೆ ಅಡಿಯಲ್ಲಿ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
•ಬೈಂದೂರು: ತಲವಾರಿನಿಂದ ಕೊಲೆಗೆ ಯತ್ನ; ಕೇಸ್!
ಬೈಂದೂರು: ವ್ಯಕ್ತಿಯನ್ನು ಅಡ್ಡಗಟ್ಟಿ ತಲವಾರು ಬೀಸಿ ಕೊಲೆ ಮಾಡಲು ಯತ್ನಿಸಿದ ಘಟನೆ, ನಾವುಂದದಲ್ಲಿ ನಡೆದಿದೆ. ಜಿ.ಎಂ.ಸತ್ತಾರ್ ಎನ್ನುವ ವ್ಯಕ್ತಿಯು ಸ್ಕೂಟರ್ ನಲ್ಲಿ ಕೋಯನಗರದಲ್ಲಿರುವ ತಮ್ಮ ಮನೆಯಿಂದ ನಾವುಂದ ಕಡೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ತಂಗಿ ಖತೀಜಾ ಅವರ ಮನೆಯ ಮುಂಭಾಗಕ್ಕೆ ಬರುತ್ತಿದ್ದಂತೆ ಸ್ಕೂಟರ್ ನಲ್ಲಿ ಆಗಮಿಸಿದ ಮೂವರು ವ್ಯಕ್ತಿಗಳು ಸತ್ತಾರ್ ಅವರ ಸ್ಕೂಟರ್ ಗೆ ತಮ್ಮ ಬೈಕ್ ಅನ್ನು ಅಡ್ಡ ತಂದು ನಿಲ್ಲಿಸಿದ್ದಾರೆ. ಬಳಿಕ ಬೈಕ್ ನಲ್ಲಿದ್ದ ತಲವಾರು ತೆಗೆದುಕೊಂಡು “ನಿನ್ನನ್ನು ಇಲ್ಲಿಯೇ ಕಡಿದು ಕೊಂದು ಮುಗಿಸುತ್ತೇವೆ” ಎಂದು ಹೇಳಿ ಸತ್ತಾರ್ ಅವರ ಕಡೆಗೆ ತಲವಾರನ್ನು ಬೀಸಿದ್ದಾರೆ ಎನ್ನಲಾಗಿದೆ. ಸತ್ತಾರ್ ಅವರು ಇದರಿಂದ ತಪ್ಪಿಸಿಕೊಳ್ಳಲು ತಂಗಿ ಖತೀಜಾ ಅವರ ಮನೆಯೊಳಗಡೆ ಓಡಿ ಹೋಗಿದ್ದಾರೆ. ಅವರನ್ನು ಬೆನ್ನಟ್ಟಲು ಮೂವರು ಆರೋಪಿಗಳು ಖತೀಜ ಅವರ ಮನೆಯ ಕಾಂಪೌಂಡ್ ಅನ್ನು ಅತಿಕ್ರಮವಾಗಿ ಪ್ರವೇಶಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ನಂತರ ಆರೋಪಿಗಳು “ಈಗ ತಪ್ಪಿಸಿಕೊಂಡಿದ್ದೀಯಾ ರಾತ್ರಿ ನಿನ್ನನ್ನು ಕೊಲೆ ಮಾಡಿ ಮುಗಿಸುತ್ತೇವೆ” ಎಂದು ಬೆದರಿಕೆ ಹಾಕಿ ಅಲ್ಲಿಂದ ತೆರಳಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಆರೋಪಿಗಳನ್ನು ಸವದ್ ಮತ್ತು ಅವನ ಸಹಚರರು ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.







