ಮಲೆನಾಡು, ಕರಾವಳಿ, ಮಧ್ಯ ಕರ್ನಾಟಕ ಭಾಗದಲ್ಲಿ ಹಲವು ಕಡೆ ರೈತರು ಭೂಮಿ ಹುಣ್ಣಿಮೆ ( ಸೀಗೆ ಹುಣ್ಣಿಮೆ ) ಹಬ್ಬವನ್ನು ಇಂದು ಸಡಗರ ಸಂಭ್ರಮದಿಂದ ಆಚರಿಸಿದರು.
ಭೂ ತಾಯಿ ಈ ಸಮಯದಲ್ಲಿ ಗರ್ಭಿಣಿಯಂತೆ ಬೆಳೆಗಳಿಂದ ಮೈ ತುಂಬಿಕೊಂಡಿರುತ್ತಾಳೆ. ಹೀಗಾಗಿ ರೈತರು ಭೂ ತಾಯಿಗೆ ಗರ್ಭಿಣಿಯ ಸ್ಥಾನದಲ್ಲಿಟ್ಟು ಆಕೆಗೆ ಸೀಮಂತ ಸಂಭ್ರಮದಂತೆ ಪೂಜೆ ಸಲ್ಲಿಸುತ್ತಾರೆ.
ಭೂ ತಾಯಿಯ ಬಯಕೆಗಳನ್ನು ಈಡೇರಿಸುವ ಸೀಮಂತದ ಸಂಭ್ರಮ, ಭೂಮಿಯಲ್ಲಿ ಉತ್ತಿ ಬಿತ್ತಿದ ಬೆಳೆಗಳು ಕಾಳು ಕಟ್ಟುವ ಸಮಯ ಇದಾಗಿದ್ದು, ಭೂ ತಾಯಿ ಗರ್ಭಿಣಿಯೆಂಬ ನಂಬಿಕೆಯಿಂದ ಅವಳ ಬಯಕೆಗೆ ಅನುಗುಣವಾಗಿ 101 ಸೊಪ್ಪಿನ ಕುಡಿ ಪಲ್ಯ ಮಾಡಿ ಅನ್ನ ಮಿಶ್ರಿತ ಬಯಕೆ ಹಾಕುತ್ತಾರೆ.
ಭೂಮಿ ಹುಣ್ಣಿಮೆ ಮಲೆನಾಡಿನ ರೈತರ ಪಾಲಿಗೆ ಸಂಭ್ರಮದ ಹಬ್ಬ. ಮಲೆನಾಡಿನ ಸುತ್ತಮುತ್ತಲು ಭೂಮಿ ಹುಣ್ಣಿಮೆ ಹಬ್ಬ ಹೆಚ್ಚು ಆಚರಣೆಯಲ್ಲಿದೆ. ಅದರಲ್ಲೂ ಕೆಲವು ಭಾಗದಲ್ಲಿ ಈ ಹಬ್ಬ ಸಂಪ್ರದಾಯ ವಿಶಿಷ್ಟವಾಗಿದೆ.
ರಾತ್ರಿಯಿಂದ ಮುಂಜಾನೆವರೆಗೆ ಅಡುಗೆ… ಪೂಜೆ..!
ಭೂಮಿ ಹುಣ್ಣಿಮೆಯಲ್ಲಿ ಹಳ್ಳಿಯ ಭಾಗದ ಮಹಿಳೆಯರು ರಾತ್ರಿ ಸಮಯದಲ್ಲಿ ಅಡುಗೆ ಮಾಡುತ್ತಾರೆ. ವಿಶೇಷ ಖಾದ್ಯಗಳನ್ನು ತಯಾರಿಸುತ್ತಾರೆ. ಹಲವು ತರಕಾರಿಗಳು, ಸೊಪ್ಪುಗಳನ್ನು ಹಾಕಿ ಬೇಯಿಸಿ ಹಚ್ಚಂಬಲಿ ತಯಾರಿ ಮಾಡುತ್ತಾರೆ. ಹಚ್ಚಂಬಲಿಯನ್ನು ಬುಟ್ಟಿಯಲ್ಲಿ ಇರಿಸಿಕೊಂಡು, ಪೂಜೆಯಾದ ಬಳಿಕ ಗದ್ದೆಯ ತುಂಬೆಲ್ಲ ಬೀರಲಾಗುತ್ತದೆ. ಆ ಸಂದರ್ಭದಲ್ಲಿ ‘ಹಚ್ಚಂಬಲಿ.. ಹಾಲಂಬಲಿ…ಬೇಲಿ ಮೇಲೆ ಇರುವ ದಾರ ಹಿರೇಕಾಯಿ ಭೂಮಿ ತಾಯಿ ಊಟ ಮಾಡೇ” ಎಂದು ಹಾಡುತ್ತ ಹಚ್ಚಂಬಲಿಯನ್ನು ಬೀರಲಾಗುತ್ತದೆ. ಈ ಸಂಪ್ರದಾಯ ಹಿಂದಿನ ಕಾಲದಿಂದಲೂ ಬಂದಿರುವುದರಿಂದ ಎಲ್ಲಾ ಆಚರಣೆಗಿಂತ ವಿಭಿನ್ನವಾಗಿದೆ.
ಎಲ್ಲೆಡೆ ಶ್ರದ್ದಾ ಭಕ್ತಿಯಿಂದ ಹಬ್ಬದ ಆಚರಣೆ
ಆಧುನಿಕತೆಯಿಂದಾಗಿ ನಮ್ಮ ಅನೇಕ ಸಾಂಪ್ರದಾಯಿಕ ಆಚರಣೆಗಳು ಮೂಲೆಗೆ ಸರಿಯುತ್ತಿದ್ದರೂ ಭೂಮಿ ಹುಣ್ಣಿಮೆ ಹಬ್ಬದ ಆಚರಣೆಗಳು ಇಂದಿಗೂ ಚಾಲ್ತಿಯಲ್ಲಿವೆ. ಈ ಹಬ್ಬದ ಆಚರಣೆಗಳು ನಿಸರ್ಗಕ್ಕೆ ಹತ್ತಿರವಾಗಿದೆ. ಕರಾವಳಿ, ಮಧ್ಯ ಕರ್ನಾಟಕ ಸೇರಿ ವಿವಿಧ ಭಾಗಗಳಲ್ಲಿ ಈ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡಲಾಗುತ್ತದೆ.







