ಕುಂದಾಪುರ: ಕುಂದಾಪುರ ತಾಲೂಕಿನ ಶಾನಾಡಿ ಮದಗದ ಕೊರಗ
ಕಾಲೋನಿಯಲ್ಲಿ ವಿಶೇಷ ಚೇತನ (ವಿಕಲಾಂಗ) ಮಗಳನ್ನು ಕೊಲೆ ಮಾಡಿದ ತಾಯಿಯೊಬ್ಬರು ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹತ್ಯೆಗೊಳಗಾದ ಬಾಲಕಿಯನ್ನು ಶಾನಾಡಿ ನಿವಾಸಿ ಸುಧಾಕರ ಕೊರಗ ಎಂಬುವರ ಪುತ್ರಿ ಸುಪ್ರತಿ (14) ಎಂದು ಗುರುತಿಸಲಾಗಿದೆ. ಮಗಳನ್ನು ಕೊಂದ ಬಳಿಕ ಜೀವ ತೆತ್ತ ತಾಯಿಯನ್ನು ನೇತ್ರಾವತಿ (40) ಎಂದು ಗುರುತಿಸಲಾಗಿದೆ. ಸುಧಾಕರ ಕೊರಗ ಅವರು ಕೂಲಿ ಕೆಲಸ ಮಾಡಿಕೊಂಡು ಕುಟುಂಬವನ್ನು ಪೋಷಿಸುತ್ತಿದ್ದರು. ದಂಪತಿಗೆ ಒಂದು ವರ್ಷದ ಗಂಡು ಮಗುವಿದ್ದು, 14 ವರ್ಷದ ಪುತ್ರಿ ಸುಪ್ರತಿ ಹುಟ್ಟಿನಿಂದಲೇ ತೀವ್ರ ಸ್ವರೂಪದ ವೈಕಲ್ಯದಿಂದ ಬಳಲುತ್ತಿದ್ದಳು. ನಡೆಯಲು ಹಾಗೂ ಕುಳಿತುಕೊಳ್ಳಲು ಸಾಧ್ಯವಾಗದ ಸ್ಥಿತಿಯಲ್ಲಿದ್ದ ಮಗಳನ್ನು ತಾಯಿ ನೇತ್ರಾವತಿಯವರೇ ಸಂಪೂರ್ಣ ಆರೈಕೆ ಮಾಡುತ್ತಿದ್ದರು. ಭಾನುವಾರ ಬೆಳಿಗ್ಗೆ ಸುಧಾಕರ ಅವರು ಕೆಲಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ನೇತ್ರಾವತಿಯವರು ಮನೆಯಲ್ಲಿದ್ದ ಕತ್ತಿಯಿಂದ ಮಗಳ ಕುತ್ತಿಗೆ ಸೀಳಿ ಕೊಲೆ ಮಾಡಿದ್ದು, ತದನಂತರ ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
•ಕುಂದಾಪುರ: ರಸ್ತೆ ಅಪಘಾತಕ್ಕೆ ಆರ್ ಎಸ್ ಎಸ್ ನಾಯಕ ಬಲಿ!
ಕುಂದಾಪುರ: ಭೀಕರ ರಸ್ತೆ ಅಪಘಾತದಲ್ಲಿ ಸೈಕಲ್ ಸವಾರ ಸಾವನ್ನಪ್ಪಿರುವ ಘಟನೆ, ಸೋಮವಾರದಂದು ರಾಷ್ಟ್ರೀಯ ಹೆದ್ದಾರಿ 66ರ ಕೋಟ ಜಂಕ್ಷನ್ ನಲ್ಲಿ ನಡೆದಿದೆ. ಕೋಟ ಜಂಕ್ಷನ್ ಬಳಿ ಸೈಕಲ್ ನಲ್ಲಿ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ, ಕುಂದಾಪುರದತ್ತ ಅತಿವೇಗವಾಗಿ ತೆರಳುತ್ತಿದ್ದ ಕಾರು ಸೈಕಲ್ ಗೆ ಢಿಕ್ಕಿ ಹೊಡೆದಿದೆ. ಪರಿಣಾಮವಾಗಿ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದ್ದು, ಸೈಕಲ್ ನಿಂದ ರಸ್ತೆಗೆ ಎಸೆಯಲ್ಪಟ್ಟ ವ್ಯಕ್ತಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಮೃತ ವ್ಯಕ್ತಿಯನ್ನು ಸ್ಥಳೀಯ ಆರ್ ಎಸ್ಎಸ್ ಮುಖಂಡ ಗುರುದಾಸ್ ಶೆಣೈ ಎಂದು ಗುರುತಿಸಲಾಗಿದೆ. ಕಾರು ಚಾಲಕ ಪ್ರದೀಪ್ ಕಾಂಚನ್ ಅವರು ಕೂಡ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಅವರನ್ನು ಆ್ಯಂಬುಲೆನ್ಸ್ ಮೂಲಕ ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ.
•ಪುತ್ತೂರು: ವಿದ್ಯಾರ್ಥಿನಿ ನಾಪತ್ತೆ
ಪುತ್ತೂರು: ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿರುವ ಘಟನೆ ನಡೆದಿದೆ. ವಿದ್ಯಾರ್ಥಿಯನ್ನು ಕೊಂಬೆಟ್ಟು ಜೂನಿಯರ್ ಕಾಲೇಜಿನಲ್ಲಿ, ವಾಣಿಜ್ಯ ವಿಭಾಗದಲ್ಲಿ ಪ್ರಥಮ ವರ್ಷದ ಪಿಯುಸಿಯನ್ನು ವ್ಯಾಸಂಗ ಮಾಡುತ್ತಿರುವ ಹಾಗೂ ವಿನಾಯಕ ಸ್ಟೋರ್ಸ್ ಎನ್ನುವ ಅಂಗಡಿಯನ್ನು ನಡೆಸುತ್ತಿರುವ ವ್ಯಕ್ತಿಯ ಮಗ ಶ್ರೀವತ್ಸ ಎಂದು ಗುರುತಿಸಲಾಗಿದೆ. ಮಾಹಿತಿಯ ಪ್ರಕಾರ ಅಕ್ಟೋಬರ್ 22ರ ಬೆಳಿಗ್ಗೆ ಬಸ್ ನ ಮೂಲಕ ಕಾಲೇಜಿಗೆ ತೆರಳುವುದಾಗಿ ಮನೆಯವರಿಗೆ ತಿಳಿಸಿ, ಸಮವಸ್ತ್ರ ಧರಿಸಿ ಹೊರಟ ಶ್ರೀವತ್ಸ ಮರಳಿ ಮನೆಗೆ ಬಂದಿಲ್ಲ. ಆತನ ಪೋಷಕರು ಮಗ ಸ್ನೇಹಿತರ ಮನೆಗೆ ತೆರಳಿರಬಹುದು ಎಂದು ಭಾವಿಸಿ ಕಾಯುತ್ತಿದ್ದರೆ ಶ್ರೀವತ್ಸ ಮನೆಗೆ ಬಂದಿಲ್ಲ ಎನ್ನಲಾಗಿದೆ. ಅಲ್ಲದೆ ಕಳೆದ 15 ದಿನಗಳ ಹಿಂದೆ ಅಜ್ಜಿ ಕಮಲ ಅವರ ಖಾತೆಯಿಂದ ಶ್ರೀವತ್ಸ ಹಣ ತೆಗೆದಿದ್ದು, ಈ ಕುರಿತು ವಿಚಾರಿಸಿದಾಗ ಶ್ರೀವತ್ಸ ಬೇಸರಗೊಂಡ ಎನ್ನುವ ಸಂಗತಿ ತಿಳಿದುಬಂದಿದೆ. ನಾಪತ್ತೆಗೆ ಸಂಬಂಧಿಸಿದಂತೆ ಶ್ರೀವತ್ಸ ಅವರ ತಂದೆ ಎಡಮಂಗಲ ಪೊಯ್ಯತ್ತೂರು ನಿವಾಸಿ ನಾರಾಯಣ ಪೂಜಾರಿ ಅವರು ಪೊಲೀಸರಿಗೆ ದೂರು ನೀಡಿದ್ದು, ಮಗನನ್ನು ಹುಡುಕಿ ಕೊಡುವಂತೆ ಕೇಳಿಕೊಂಡಿದ್ದಾರೆ ಎನ್ನಲಾಗಿದೆ.
•ಬಂಟ್ವಾಳ: ಹೆರಿಗೆಗೆ ತೆರಳಿದ್ದ ಪತ್ನಿಯನ್ನು ಕರೆಸಿಕೊಂಡು ಕೊಲೆ!
ಬಂಟ್ವಾಳ: ಪತ್ನಿಯನ್ನು ಕೊಂದು, ವಿಷಯವನ್ನು ಮುಚ್ಚಿಟ್ಟ ಬೆಳಗಾವಿ ಮೂಲದ ಆರೋಪಿಯನ್ನು ಬಂಟ್ವಾಳ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಸುನೀತಾ ದೇಸಂಗಿ ಎನ್ನುವ ಯುವತಿಯು ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಿವಾಸಿಯಾದ ಸಂಜೀವ್ ಕುಮಾರ್ ಎನ್ನುವವರೊಂದಿಗೆ ವಿವಾಹವಾಗಿದ್ದರು. ಸಂಜೀವ್ ಕುಮಾರ್ ಅವರು ಬಂಟ್ವಾಳದ ವಗ್ಗ ಎನ್ನುವಲ್ಲಿ ನೆಲೆಸಿದ್ದರಿಂದ ಸುನೀತಾ ದೇಸಂಗಿ ಕೂಡ ಅಲ್ಲಿಯೇ ವಾಸವಾಗಿದ್ದರು ಎನ್ನಲಾಗಿದೆ. ದಂಪತಿಗಳ ನಡುವೆ ಹಲವು ಬಾರಿ ಕಲಹ ಏರ್ಪಟ್ಟಿದ್ದು, ಸಂಬಂಧಿಕರು ಸಂಧಾನ ಮಾಡಿಸಿದ್ದರು ಎನ್ನುವ ಮಾಹಿತಿ ಲಭಿಸಿದೆ. ಇತ್ತೀಚಿಗೆ ಸುನೀತಾ ದೇಸಂಗಿಯವರು ಹೆರಿಗೆಯ ನಿಮಿತ್ತ ತವರುಮನೆಗೆ ತೆರಳಿದ್ದು, ಅಕ್ಟೋಬರ್ 4ರಂದು ಸಂಜೀವ್ ಕುಮಾರ್ ಆಕೆಯನ್ನು ಪುನಃ ತನ್ನ ಮನೆಗೆ ಕರೆದುಕೊಂಡು ಬಂದಿದ್ದ. ಅಕ್ಟೋಬರ್ 22ರ ಗುರುವಾರದಂದು ಸುನೀತಾ ದೇಸಂಗಿ ಅವರು ತನ್ನ ಅಣ್ಣ ಅರುಣ್ ಅವರಿಗೆ ಕರೆ ಮಾಡಿ ಪತಿ ಮಾನಸಿಕ ಕಿರುಕುಳ ನೀಡುತ್ತಿದ್ದು, ಹಲ್ಲೆಯನ್ನು ಕೂಡ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದರು. ಮರುದಿನ ಸಂಜೀವ್ ಕುಮಾರ್ ಅರುಣ್ ಅವರಿಗೆ ಕರೆ ಮಾಡಿ, ಸುನೀತಾ ಅವರ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ತಿಳಿಸಿದ್ದಾರೆ. ಅರುಣ್ ಅವರು ಆಸ್ಪತ್ರೆಗೆ ಬಂದು ನೋಡಿದಾಗ ಸುನಿತಾ ದೇಸಂಗಿ ಅವರು ಮೃತಪಟ್ಟಿದ್ದು, ಅವರ ದೇಹದ ಮೇಲೆ ಹಲ್ಲೆ ನಡೆಸಿದ ಗಾಯಗಳು ಕಂಡುಬಂದಿವೆ.
•ಸುಳ್ಯ: ಭೀಕರ ರಸ್ತೆ ಅಪಘಾತ; ಬಾಲಕ ಸಾವು
ಸುಳ್ಯ: ಲಾರಿ ಮತ್ತು ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿರುವ ಘಟನೆ, ಭಾನುವಾರದಂದು ಮಾಣಿ-ಮೈಸೂರು ಹೆದ್ದಾರಿಯ ಗೂನಡ್ಕ ಶಾಲೆಯ ಬಳಿ ನಡೆದಿದೆ. ಮಡಿಕೇರಿ ಕಡೆಯಿಂದ ಸುಳ್ಯದತ್ತ ಆಗಮಿಸುತ್ತಿದ್ದ ಲಾರಿಗೆ ಸ್ಥಳಾವಕಾಶವನ್ನು ನೀಡಲು ಕಾರನ್ನು ಬದಿಗೆ ಸರಿಸಲು ಹೋದ ಸಂದರ್ಭದಲ್ಲಿ, ಚಾಲಕನ ನಿಯಂತ್ರಣ ತಪ್ಪಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಕಾರಿನಲ್ಲಿ ಒಟ್ಟು ಐದು ಜನರು ಪ್ರಯಾಣಿಸುತ್ತಿದ್ದು, ಅಪಘಾತದ ಪರಿಣಾಮವಾಗಿ ತನುಷ್ ಎನ್ನುವ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎನ್ನುವ ಮಾಹಿತಿ ಲಭಿಸಿದೆ. ಗಂಭೀರವಾಗಿ ಗಾಯಗೊಂಡಿದ್ದ ವಿನುತ್ತಾಶ್ರೀ ಮತ್ತು ರತ್ನ ಅವರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಚಾಲಕ ನಾರಾಯಣ ಮತ್ತು ನಾಲ್ಕು ವರ್ಷದ ಹೆಣ್ಣು ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎನ್ನುವ ಸಂಗತಿ ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







