ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ರಾಜ್ಯ ಸರ್ಕಾರದಿಂದ ದೀಪಾವಳಿ ಹಬ್ಬಕ್ಕೆ ಬಂಪರ್ ಗುಡ್ ನ್ಯೂಸ್ ಸಿಕ್ಕಿದೆ. ಗೃಹಲಕ್ಷ್ಮಿ ಯೋಜನೆಯ 34, 35 ಮತ್ತು 36ನೇ ಕಂತುಗಳನ್ನು ಸರ್ಕಾರ ಒಟ್ಟಿಗೆ ಬಿಡುಗಡೆ ಮಾಡಲಿದೆ. ಇದಕ್ಕಾಗಿ ಒಟ್ಟು ₹7,405.86 ಕೋಟಿ ಹಣವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಒಮ್ಮೆಲೆ ಬಿಡುಗಡೆ ಮಾಡಲಿದ್ದಾರೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ತಿಳಿಸಿದ್ದಾರೆ. ಗೃಹಲಕ್ಷ್ಮಿಯರಿಗೆ ದೀಪಾವಳಿ ಧಮಾಕಾ
ಸರ್ಕಾರದ 5 ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದಾಗಿದೆ. ಪ್ರತಿ ತಿಂಗಳು ರಾಜ್ಯದ ಪ್ರತಿ ಮನೆಯ ಮಹಿಳೆಯರ ಅಕೌಂಟ್ಗೆ 2000 ರೂಪಾಯಿ ಜಮೆ ಮಾಡಲಾಗ್ತಿದೆ. ಗೃಹಲಕ್ಷ್ಮಿ ಮರುಪರಿಶೀಲನೆ ಘೋಷಣೆ ಬಳಿಕ ಗೃಹಲಕ್ಷ್ಮಿ ಹಣ ಬರುತ್ತೋ ಇಲ್ವೋ ಅನ್ನೋ ಗೊಂದಲ ಮಹಿಳೆಯರಲ್ಲಿ ಮನೆ ಮಾಡಿತ್ತು. ಇದೀಗ ಮೂರು ಕಂತಿನ ಹಣವನ್ನ ಒಟ್ಟಿಗೆ ನೀಡಲು ಸರ್ಕಾರ ಮುಂದಾಗಿದೆ.
ಗೃಹಲಕ್ಷ್ಮೀ ಯೋಜನೆಯಡಿ ಈಗಾಗಲೇ 33 ಕಂತುಗಳ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗಿದೆ. ಇದೀಗ 34ನೇ ಕಂತಿನ 2,500 ಕೋಟಿ ರೂ, 35ನೇ ಕಂತಿನ 2,452.93 ಕೋಟಿ ರೂ ಹಾಗೂ 36ನೇ ಕಂತಿನ 2,452.93 ಕೋಟಿ ರೂ ಹಣವನ್ನು ಒಟ್ಟಿಗೆ ಬಿಡುಗಡೆ ಮಾಡಲು ಡಿಕೆ ಶಿವಕುಮಾರ್ ಆದೇಶ ಮಾಡಿದ್ದಾರೆ.
– ಹೈಕೋರ್ಟ್ಗೆ ಮಾಹಿತಿ ನೀಡಿದ ರಾಜ್ಯ ಸರ್ಕಾರ
ಇದಕ್ಕೂ ಮೊದಲು ತೀವ್ರ ಆರ್ಥಿಕ ಕೊರತೆಯಿಂದಾಗಿ 2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ‘ಗೃಹಲಕ್ಷ್ಮಿ’ ಯೋಜನೆಯ ಅಂದಾಜು 4,000 ಕೋಟಿ ರೂ. ಹಣ ಬಾಕಿ ಉಳಿಸಿಕೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್ಗೆ ತಿಳಿಸಿದೆ. ಬಜೆಟ್ ಲಭ್ಯತೆ ಆಧರಿಸಿದ ಈ ನೆರವನ್ನು ಕಾನೂನುಬದ್ಧ ಹಕ್ಕಾಗಿ ಕೇಳಲಾಗದು ಎಂದಿರುವ ಸರ್ಕಾರ, ಮೃತಪಟ್ಟ 1.08 ಲಕ್ಷ ಫಲಾನುಭವಿಗಳಿಗೆ 115 ಕೋಟಿ ರೂ. ಜಮೆಯಾಗಿದ್ದನ್ನು ಒಪ್ಪಿಕೊಂಡಿದ್ದು, ಈಗಾಗಲೇ 15.24 ಕೋಟಿ ರೂ. ವಸೂಲಿ ಮಾಡಿರುವುದಾಗಿ ಹೇಳಿದೆ.







