ಕುಂದಾಪುರ: ಕುಂದಾಪುರ ತಾಲೂಕಿನ ಶಿರಿಯಾರ ಚರ್ಮದ ಚಪ್ಪಲಿ ಎನ್ನುವುದು ಕರ್ನಾಟಕದ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಶಿರಿಯಾರ ಭಾಗದಲ್ಲಿ ಸಾಂಪ್ರದಾಯಿಕವಾಗಿ ತಯಾರಿಸಲಾಗುವ ಪ್ರಸಿದ್ಧ ಕೈಯಿಂದ ಮಾಡಿದ ಚರ್ಮದ ಚಪ್ಪಲಿಗಳಾಗಿವೆ. ಈ ಬ್ರಾಂಡ್ ಇದೀಗ ನಿಧಾನಕ್ಕೆ ಫೇಮಸ್ ಆಗುತ್ತಿದೆ.
ಅಥಣಿ ಅಥವಾ ನಿಪ್ಪಾಣಿಯ ಕೊಲ್ಲಾಪುರಿ ಚಪ್ಪಲಿಗಳು ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದ ಒಣ ಹವೆಯ ನೆಲಕ್ಕೆ ಹೆಸರಾಗಿದ್ದರೆ, ಶಿರಿಯಾರದ ಚಪ್ಪಲಿಗಳು ಕರಾವಳಿ-ಮಲೆನಾಡಿನ ಅತಿಯಾದ ಮಳೆ, ಕೆಸರು ಮತ್ತು ಗುಡ್ಡಗಾಡು ಪ್ರದೇಶಗಳ ಕಠಿಣ ಬಳಕೆಗೆ ಹೇಳಿಮಾಡಿಸಿದ ವಿಶಿಷ್ಟ ವಿನ್ಯಾಸ ಹಾಗೂ ಬಾಳಿಕೆಗೆ ಪ್ರಸಿದ್ಧಿ ಪಡೆದಿವೆ.
ಪಾರಂಪರಿಕೆ ಕುಲ ಕಸುಬು…
ಶಿರಿಯಾರ ಗ್ರಾಮವು ಸಾಂಪ್ರದಾಯಿಕ ಕೈಯಿಂದ ಹೊಲಿಯುವ ಚರ್ಮದ ಚಪ್ಪಲಿಗಳಿಗೆ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ವಿಶೇಷವಾದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಶಿರಿಯಾರ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ತಲೆಮಾರುಗಳಿಂದ ಸಮಗಾರ (ಚಮ್ಮಾರ) ಸಮುದಾಯದ ಕುಟುಂಬಗಳು ಈ ಕರಕುಶಲತೆಯನ್ನು ಜೀವಂತವಾಗಿರಿಸಿಕೊಂಡು ಬಂದಿವೆ. ಈ ಕಸುಬು ಕುಟುಂಬ ಪರಂಪರೆಯಾಗಿ ತಂದೆಯಿಂದ ಮಗನಿಗೆ ಹರಿದುಬಂದಿದೆ.
ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಭಾರೀ ಡಿಮ್ಯಾಂಡ್
ಕರಾವಳಿಯ ಮಳೆಗಾಲದಲ್ಲಿ ಸುರಿಯುವ ಧಾರಾಕಾರ ಮಳೆ, ಅಡಿಕೆ-ತೆಂಗಿನ ತೋಟಗಳ ಕೆಸರುಮಣ್ಣು ಮತ್ತು ಪಶ್ಚಿಮ ಘಟ್ಟದ ತಪ್ಪಲಿನ ಕಲ್ಲು-ಮುಳ್ಳಿನ ಹಾದಿಗಳಲ್ಲಿ ನಡೆಯಲು ಸಾಮಾನ್ಯ ಪಾದರಕ್ಷೆಗಳು ಬಾಳಿಕೆ ಬರುತ್ತಿರಲಿಲ್ಲ. ಇದಕ್ಕೆ ಪರ್ಯಾಯವಾಗಿ ಅತ್ಯಂತ ಗಟ್ಟಿಯಾದ, ನೈಸರ್ಗಿಕವಾಗಿ ಹದಮಾಡಿದ ಚರ್ಮದಿಂದ ಮಾಡಿದ ಪಾದರಕ್ಷೆಗಳನ್ನು ಸ್ಥಳೀಯವಾಗಿ ರೂಪಿಸಲಾಯಿತು.
ಹಿಂದಿನ ಕಾಲದಲ್ಲಿ ಕರಾವಳಿ ಮತ್ತು ಘಟ್ಟದ ಮೇಲಿನ ಊರುಗಳಾದ ತೀರ್ಥಹಳ್ಳಿ, ಸಾಗರ, ಹೊಸನಗರ, ಶೃಂಗೇರಿ ಮುಂತಾದ ಭಾಗದ ಜಮೀನ್ದಾರರು, ಕೃಷಿಕರು ಹಾಗೂ ಕಾಡು-ಮೇಡು ಅಲೆಯುವ ಜನರು ಶಿರಿಯಾರಕ್ಕೆ ಬಂದು ವಿಶೇಷವಾಗಿ ಅಳತೆ ಕೊಟ್ಟು ಚಪ್ಪಲಿ ಹೊಲಿಸಿಕೊಳ್ಳುತ್ತಿದ್ದರು.
ಶಿರಿಯಾರ ಚಪ್ಪಲಿಗಳ ವಿಶಿಷ್ಟತೆಗಳು ವಿಶೇಷತೆ ಏನು..?
ನೈಸರ್ಗಿಕ ಹದಗಾರಿಕೆ,ರಾಸಾಯನಿಕಗಳ ಬದಲಿಗೆ ಅಕೇಶಿಯಾ (ಬಾಬುಲ್/ಜಾಲಿ) ತೊಗಟೆ, ಆಲದ ಮರದ ತೊಗಟೆ, ಹೀರೇಕಾಯಿ/ನೆಲ್ಲಿಕಾಯಿ ಮುಂತಾದ ನೈಸರ್ಗಿಕ ಅಂಶಗಳನ್ನು ಬಳಸಿ ಚರ್ಮವನ್ನು ತಿಂಗಳುಗಟ್ಟಲೆ ನೀರಿನಲ್ಲಿ ನೆನೆಸಿ ಸಾಂಪ್ರದಾಯಿಕ ವಿಧಾನದಲ್ಲಿ ಹದಮಾಡಲಾಗುತ್ತಿತ್ತು. ಇದರಿಂದ ಚರ್ಮಕ್ಕೆ ನೈಸರ್ಗಿಕ ನಮ್ಯತೆ ಮತ್ತು ದೀರ್ಘಾಯುಷ್ಯ ದೊರೆಯುತ್ತಿತ್ತು,ಇವುಗಳನ್ನು ಯಾವುದೇ ಆಧುನಿಕ ಹೊಲಿಗೆ ಯಂತ್ರಗಳಿಲ್ಲದೆ, ಬಲವಾದ ನೂಲು ಅಥವಾ ಚರ್ಮದ ಪಟ್ಟಿಗಳಿಂದಲೇ ಕೈಯಿಂದ ಗಟ್ಟಿಯಾಗಿ ಹೆಣೆಯಲಾಗುತ್ತಿತ್ತು.
ಸೊಗಸಾದ ಮುಳ್ಳು-ವಿನ್ಯಾಸ ಹಾಗೂ ಗಟ್ಟಿ ಸೋಲ್ ಗಳು,
ಅತಿ ಹೆಚ್ಚು ಪದರಗಳ ದಪ್ಪನೆಯ ಚರ್ಮದ ತಳಭಾಗ ಇರುತ್ತಿದ್ದು, ಮಳೆಗಾಲದ ಕೆಸರಿನಲ್ಲಿ ಜಾರದಂತೆ ಕೆಳಭಾಗದಲ್ಲಿ ಸಣ್ಣ ಚರ್ಮದ ಗುಬುಟುಗಳು ಅಥವಾ ವಿಶಿಷ್ಟ ಹಿಡಿತದ ರಚನೆಗಳನ್ನು ಮಾಡುತ್ತಿದ್ದರು.
ಚೆನ್ನಾಗಿ ಒಣಗಿದ ಮತ್ತು ಹದಮಾಡಿದ ಚರ್ಮದ ಪದರಗಳ ನಡುವೆ ನೈಸರ್ಗಿಕ ರಾಳ ಅಥವಾ ನಿರ್ದಿಷ್ಟ ಜೋಡಣೆಯಿರುತ್ತಿದ್ದು, ಧರಿಸಿ ನಡೆಯುವಾಗ ವಿಶಿಷ್ಟವಾದ ‘ಚುಟು-ಚುಟು’ ಅಥವಾ ‘ಕರಂ-ಕುರುಂ’ ನಾದ ಬರುವುದು ಈ ಚಪ್ಪಲಿಗಳ ಇನ್ನೊಂದು ಹೆಗ್ಗುರುತಾಗಿತ್ತು.
ಬ್ರಹ್ಮಾವರ, ಬಾರ್ಕೂರು, ಕೋಟ, ಕುಂದಾಪುರ ಹಾಗೂ ಮಲೆನಾಡಿನ ವಾರದ ಸಂತೆಗಳಲ್ಲಿ ಶಿರಿಯಾರದ ಚಪ್ಪಲಿಗಳಿಗೆ ಅಗ್ರಮಾನ್ಯ ಬೇಡಿಕೆಯಿತ್ತು.
ದಕ್ಷಿಣ ಕನ್ನಡ ಮತ್ತು ಮಲೆನಾಡಿನ ಸಂಪರ್ಕ, ಆಗುಂಬೆ, ಹೊಸಂಗಡಿ ಘಾಟಿಗಳ ಮೂಲಕ ಮಲೆನಾಡಿಗೆ ವ್ಯಾಪಾರ-ಸಂಪರ್ಕ ಬೆಳೆದಂತೆ, ಮಲೆನಾಡಿನ ತೋಟಗಾರಿಕೆ ರೈತರಿಗೆ ಈ ಚಪ್ಪಲಿಗಳು ಅನಿವಾರ್ಯ ರಕ್ಷಣಾ ಕವಚವಾದವು.
ಕಳೆದ ಕೆಲವು ದಶಕಗಳಲ್ಲಿ ಆಧುನಿಕ ರಬ್ಬರ್, ಪಿವಿಸಿ ಮತ್ತು ಸಿಂಥೆಟಿಕ್ ಪಾದರಕ್ಷೆಗಳ ಲಗ್ಗೆಯಿಂದಾಗಿ ಶಿರಿಯಾರದ ಸಾಂಪ್ರದಾಯಿಕ ಚರ್ಮದ ಚಪ್ಪಲಿಗಳಿಗೆ ಬೇಡಿಕೆ ಗಣನೀಯವಾಗಿ ಕಡಿಮೆಯಾಗಿದೆ.
ಗುಡಿ ಕೈಗಾರಿಕೆ, ಕರಕುಶಲ, ಸ್ಥಳೀಯ ಉದ್ಯಮ, ಸಣ್ಣ ಕೈಗಾರಿಕೆ, ಸ್ವದೇಸಿ ವಸ್ತುಗಳ ತಯಾರಿಕೆಗೆ ಸರ್ಕಾರಗಳು ಒತ್ತು ನೀಡಬೇಕಿದೆ.
ಇಂತಹ ಉತ್ಪನ್ನಗಳ ಮಾಹಿತಿ ಪಡೆದು ಅವುಗಳಿಗೆ ಬೆಂಬಲ ನೀಡಬೇಕು. ಆದರೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಲಕ್ಷ ಲಕ್ಷ ಸಂಬಳ, ಲಂಚ, ಎಸಿ ಸೌಲಭ್ಯ ಪಡೆದು ಏನೂ ಮಾಡುತ್ತಿಲ್ಲ ಎಂಬುದು ದೇಶಕ್ಕೆ ದೊಡ್ಡ ನಷ್ಟ.
ಮಾಹಿತಿ: ಅರುಣ್ ಪ್ರಸಾದ್







