ಬೆಳ್ತಂಗಡಿ: ಮರದ ಮೇಲೆ ಹತ್ತಿ ಅಡಿಕೆಗಳನ್ನು ಕೊಯ್ಯುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ವಿದ್ಯುತ್ ಆಘಾತಕ್ಕೆ ಒಳಗಾದ ಘಟನೆ, ಅಕ್ಟೋಬರ್ 4ರ ಭಾನುವಾರದಂದು ಧರ್ಮಸ್ಥಳದಲ್ಲಿ ನಡೆದಿತ್ತು. ದೋಟಿ ಮೂಲಕವೇ ಜಾಗರೂಕತೆಯಿಂದ ಅಡಿಕೆಗಳನ್ನು ಕೊಯ್ಯುತ್ತಿದ್ದರು ಎನ್ನಲಾಗಿದೆ. ಆದರೆ ಆಕಸ್ಮಿಕವಾಗಿ ದೋಟಿಯು ವಿದ್ಯುತ್ ತಂತಿಗೆ ತಗುಲಿ ವ್ಯಕ್ತಿಯು ಬಲವಾದ ವಿದ್ಯುತ್ ಆಘಾತಕ್ಕೆ ಒಳಗಾಗಿದ್ದಾರೆ. ವ್ಯಕ್ತಿಯನ್ನು ಧರ್ಮಸ್ಥಳದ ಅಜಿಕುರಿ ನಿವಾಸಿ ನಜೀರ್ ಎಂದು ಗುರುತಿಸಲಾಗಿದೆ. ತಕ್ಷಣ ನಜೀರ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಜೀರ್ ಅವರು ಗುರುವಾರದಂದು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಘಟನೆಗೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
•ಸುಳ್ಯ: ತೆರೆದ ಚರಂಡಿಯಲ್ಲಿ ಬಿದ್ದ ಮಗು; ರಕ್ಷಣೆ
ಸುಳ್ಯ: ಕುಡಿಯುವ ನೀರಿನ ಪೈಪ್ ಕಾಮಗಾರಿಯ ಸಲುವಾಗಿ ತೆಗೆದುಹಾಕಲಾಗಿದ್ದ ಚರಂಡಿಗೆ ಮಗುವೊಂದು ಆಕಸ್ಮಿಕವಾಗಿ ಬಿದ್ದಿರುವ ಘಟನೆ, ಶ್ರೀರಾಮ ಪೇಟೆಯ ಮುಳಿಯ ಜ್ಯುವೆಲ್ಲರ್ಸ್ ಮುಂಭಾಗದಲ್ಲಿ ನಡೆದಿದೆ. ಜೆಸಿಬಿ ಮೂಲಕ ಕುಡಿಯುವ ನೀರಿನ ಪೈಪ್ ಕಾಮಗಾರಿಯು ನಡೆಯುತ್ತಿದ್ದ ಹಿನ್ನೆಲೆಯಲ್ಲಿ, ಪಾದಚಾರಿ ಮಾರ್ಗದಲ್ಲಿದ್ದ ಚರಂಡಿಯ ಸ್ಪ್ಯಾಬ್ ಅನ್ನು ತೆರವುಗೊಳಿಸಲಾಗಿತ್ತು ಎನ್ನಲಾಗಿದೆ. ಆಗ ಮಗುವೊಂದು ತನ್ನ ಕುಟುಂಬದವರೊಂದಿಗೆ ನಡೆದುಕೊಂಡು ಬರುತ್ತಿದ್ದು, ಕಾಮಗಾರಿ ನಡೆಯುತ್ತಿರುವ ಸ್ಥಳವನ್ನು ವೀಕ್ಷಿಸುತ್ತಾ ಬರುತ್ತಿರುವಾಗ ಆಕಸ್ಮಿಕವಾಗಿ ಸ್ಪ್ಯಾಬ್ ಅನ್ನು ತೆರವುಗೊಳಿಸಿದ್ದ ಚರಂಡಿಗೆ ಬಿದ್ದಿದೆ ಎನ್ನುವ ಮಾಹಿತಿ ಲಭಿಸಿದೆ. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ಮಗುವಿನ ನೆರವಿಗೆ ಬಂದಿದ್ದು, ಅದನ್ನು ಕೂಡಲೇ ಚರಂಡಿಯಿಂದ ಮೇಲಕ್ಕೆತ್ತುವ ಮೂಲಕ ಪ್ರಾಣಾಪಾಯದಿಂದ ಪಾರುಗೊಳಿಸಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಸ್ಥಳೀಯರು ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ, ಸಾರ್ವಜನಿಕರಿಗೆ ಅಪಾಯವಾಗದ ರೀತಿಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
•ಮಂಗಳೂರು: ಮಾದಕ ವಸ್ತು ಸೇವನೆ; ಐವರ ಬಂಧನ
ಮಂಗಳೂರು: ಪ್ರತ್ಯೇಕ ಪ್ರಕರಣಗಳಲ್ಲಿ ಮಾದಕ ವಸ್ತು ಸೇವನೆ ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ ಘಟನೆ, ನಂತೂರು ಮತ್ತು ಉಳ್ಳಾಲದಲ್ಲಿ ನಡೆದಿದೆ. ನಂತೂರು ಬಳಿ ಮಾದಕ ವಸ್ತು ಸೇವಿಸಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಬೋಳೂರಿನ ರಾಕೇಶ್, ಸುಲ್ತಾನ್ ಬತ್ತೇರಿಯ ಶಾಶ್ವತ್ ಎಸ್ ಮತ್ತು ಮೂಡುಶೆಡ್ಡೆಯ ಆದಿತ್ಯ ಜನಾರ್ದನ ಕೊಟ್ಯಾನ್ ಎನ್ನುವವರನ್ನು ಕದ್ರಿ ಪೊಲೀಸರು ಸೆರೆ ಹಿಡಿದಿದ್ದರೆ, ಸೋಮೇಶ್ವರ ಗ್ರಾಮದ ಕುಂಪಲ ಮೂರುಕಟ್ಟೆ ಬಸ್ ನಿಲ್ದಾಣದ ಬಳಿ ಮಾದಕ ವಸ್ತು ಸೇವಿಸಿ, ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸುತ್ತಿದ್ದ ಕುಂಪಲ ಮಯೂರ ಗ್ರೌಂಡ್ ಬಳಿಯ ನಿವಾಸಿ ಕಾರ್ಮೆಲ್ ಕಿರಣ್ ಡಿಸೋಜಾ ಮತ್ತು ಹನುಮಾನ್ ನಗರದ ನಿವಾಸಿ ಪ್ರತೀಕ್ ಎನ್ನುವ ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಮಾದಕ ವಸ್ತು ಸೇವನೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಐದು ಜನ ಆರೋಪಿಗಳನ್ನು ಬಂಧನಕ್ಕೆ ಒಳಪಡಿಸಲಾಗಿದೆ.
•ಮೂಡಬಿದರೆ: ಸ್ಕೂಟರ್ ಜಾರಿ ವಿದ್ಯಾರ್ಥಿ ಸಾವು
ಮೂಡಬಿದರೆ: ಸ್ಕೂಟರ್ ಒಂದು ಜಾರಿ ಬಿದ್ದು ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ, ಕೋಟೆಬಾಗಿಲು ವೀರ ಮಾರುತಿ ದೇವಸ್ಥಾನದ ಬಳಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಜೈನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಪ್ರಶ್ವಿತ್ ಎಂದು ಗುರುತಿಸಲಾಗಿದೆ. ಶಿರ್ತಾಡಿ ಕಡೆಯಿಂದ ಕೋಟೆಬಾಗಿಲು ಕಡೆಗೆ ಪ್ರಶ್ವಿತ್ ಮತ್ತು ಆತನ ಸ್ನೇಹಿತ ದೀಕ್ಷಿತ್ ಸ್ಕೂಟರ್ ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಬಿದ್ದ ರಭಸಕ್ಕೆ ಪ್ರಶ್ವಿತ್ ಅವರ ತಲೆಗೆ ಗಂಭೀರ ರೀತಿಯ ಗಾಯವಾಗಿದ್ದು, ದೀಕ್ಷಿತ್ ಅವರ ತಲೆಗೂ ಪೆಟ್ಟಾಗಿದೆ ಎನ್ನುವ ಮಾಹಿತಿ ಲಭಿಸಿದೆ. ತಕ್ಷಣ ಇಬ್ಬರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಪ್ರಶ್ವಿತ್ ಸಾವನ್ನಪ್ಪಿದನು ಎನ್ನುವ ಮಾಹಿತಿ ಲಭಿಸಿದೆ. ಘಟನೆಗೆ ಸಂಬಂಧಿಸಿದಂತೆ ಮೂಡಬಿದರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







