ತೀರ್ಥಹಳ್ಳಿ: ಅರ್ಚಕ ವೃತ್ತಿ ಜತೆಗೆ ಸಮಾಜ ಸೇವೆ ಹಾಗೂ ಕೃಷಿ ಮೂಲಕ ಸಾವಿರಾರು ಜನರಿಗೆ ಪರೋಪಕಾರಿಯಾಗಿದ್ದ ತೀರ್ಥಹಳ್ಳಿ ತಾಲೂಕು ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲುಕೊಡಿಗೆ ಮುಸ್ಸಿನಕೊಪ್ಪ ಶ್ರೀ ರಾಮ ಭಟ್ ಅವರು ಅನಾರೋಗ್ಯದಿಂದ ಮಣಿಪಾಲ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.
ಶ್ರೀರಾಮ್ ಭಟ್ ಅವರಿಗೆ 42 ವರ್ಷ ವಯಸ್ಸಾಗಿದ್ದು. 2 ತಿಂಗಳ ಹಿಂದೆ ತಂದೆ ಚಿದಂಬರ್ ಭಟ್ ಅವರನ್ನ ಕಳೆದುಕೊಂಡ್ಡಿದರು. ಬಳಿಕ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದು ಇದೀಗ ಮಣಿಪಾಲ್ ಆಸ್ಪತ್ರೆಯಲ್ಲಿ ಒಂದು ತಿಂಗಳ ಚಿಕಿತ್ಸೆ ಫಲ ನೀಡದೆ ನಿಧನರಾಗಿದ್ದಾರೆ. ಶ್ರೀರಾಮ್ ಅವರ ಸಾವಿಗೆ ಇಡೀ ಊರಿಗೆ ಊರೇ ಅವರ ಸಾವಿಗೆ ಕಂಬನಿ ಮಿಡಿದಿದೆ.
ಶುಕ್ರವಾರ ಸಂಜೆ ಅವರ ಮನೆ ಕುಪ್ಪಳಿ ಸಮೀಪದ ಮುಸ್ಸಿನಕೊಪ್ಪಕ್ಕೆ ಪಾರ್ಥಿವ ಶರೀರ ತರಲಿದ್ದು ಶನಿವಾರ ಅಂತ್ಯ ಕ್ರಿಯೆ ನಡೆಯಲಿದೆ.
ಮೃತ ಶ್ರೀರಾಮ್ ಅವರ ಆರೋಗ್ಯ ವಿಚಾರದಲ್ಲಿ ಕೊಪ್ಪ ಹಾಗೂ ತೀರ್ಥಹಳ್ಳಿಯ ಕೆಲವು ಸ್ಥಳೀಯ ಆಸ್ಪತ್ರೆಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಆಂಜನೇಯ ದೇವಸ್ಥಾನದ ಪೂಜೆ ಮೂಲಕ ಸೇವೆ
ಗಡಿಕಲ್ ಆಂಜನೇಯ ದೇವಸ್ಥಾನದ ಅರ್ಚಕರಾಗಿದ್ದ ಶ್ರೀರಾಮ್ ಅಜಾತ ಶತ್ರುವಾಗಿದ್ದರು. ದೇವರ ಸೇವೆಯನ್ನು ಉಚಿತವಾಗಿ ಮಾಡುತ್ತಿದ್ದರು. ಸಾಮಾಜಿಕವಾಗಿ ಅನೇಕ ಶಿಕ್ಷಣ, ಧಾರ್ಮಿಕ ಸಾಮಾಜಿಕ ಸೇವೆಗಳಿಗೆ ಉದಾರವಾಗಿ ದಾನ ನೀಡುತ್ತಾ ಸಮಾಜ ಹಾಗೂ ಜನಪರ ಸೇವೆಗೆ ಹೆಸರಾಗಿದ್ದ ಶ್ರೀರಾಮ್ ಅವರ ಸಾವು ಇದೀಗ ಗ್ರಾಮದಲ್ಲಿ ಶೋಕ ಸಾಗರವನ್ನೇ ನಿರ್ಮಾಣ ಮಾಡಿದೆ. ಕುಟುಂಬದವರಾದ ಪತ್ನಿ, ಮಗು, ಅಕ್ಕ, ತಂಗಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಇವರ ಅಂತಿಮ ಕ್ರಿಯೆ ಶನಿವಾರ ಬೆಳಗ್ಗೆ ನಡೆಯುವ ಸಾಧ್ಯತೆ ಇದೆ.
…..
ಅವಿನಾಶ್ ಜಾದವ್ ಅಕಾಲಿಕ ನಿಧನ
ತೀರ್ಥಹಳ್ಳಿಯ ರಂಜದಕಟ್ಟೆಯ ಅವಿನಾಶ್ ಜಾದವ್ (36) ಶುಕ್ರವಾರ ನಿಧನರಾದರು. ಲವಲವಿಕೆ ವ್ಯಕ್ತಿತ್ವದ, ಜೀವನೋಪಾಯಕ್ಕಾಗಿ ಲಾರಿ ಚಲಾಯಿಸುತ್ತಿದ್ದ ಅಪಾರ ಶ್ರಮಜೀವಿಯಾಗಿದ್ದ ಅನಿನಾಶ್ ತಮ್ಮ ಅಜಾತಶತ್ರು ವ್ಯಕ್ತಿತ್ವದಿಂದ ಎಲ್ಲರಿಗೂ ಬೇಕಾದವರಾಗಿ ಜನಪ್ರಿಯರಾಗಿ ಅಪಾರ ಸ್ನೇಹ ಬಳಗವನ್ನು ಹೊಂದಿದ್ದರು. ಇತ್ತೀಚೆಗೆ ಅವರಿಗೆ ಜಿಬಿಎಸ್ ಎಂಬ ನರಮಂಡಲದ ಮೇಲೆ ತೀವ್ರ ದಾಳಿ ನಡೆಸುವ ಅತಿ ಅಪರೂಪದ ಕಾಯಿಲೆ ಪತ್ತೆಯಾಗಿತ್ತು. ಆರಂಭಿಕ ಹಂತದಲ್ಲಿ ಅವರ ಬಂಧು ಬಳಗ ಸ್ನೇಹಿತರೆಲ್ಲರೂ ಸೇರಿ ಹಣ ಒಗ್ಗೂಡಿಸಿ ಚಿಕಿತ್ಸೆಗೆ ನೆರವಾಗಿದ್ದರು. ಆದರೆ ಅತ್ಯಂತ ದುಬಾರಿ ವೆಚ್ಚದ ಹಾಗೂ ಚಿಕಿತ್ಸೆ ನೀಡಿದರು ಪೂರ್ತಿ ಗುಣಮುಖರಾಗುತ್ತಾರೆ ಎಂಬ ನಂಬಿಕೆ ಇರದ ಈ ಕಾಯಿಲೆಗೆ ಚಿಕಿತ್ಸೆ ಪಡೆಯಲು ಅಂತಿಮವಾಗಿ ಅವರು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿಯೇ ಅವರು ಶನಿವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಪತ್ನಿ, ಎರಡು ವರ್ಷದ ಪುಟ್ಟ ಮಗು ಹಾಗೂ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.
ಭಾವ ಪೂರ್ಣ ಶ್ರದ್ಧಾಂಜಲಿ: ಆತ್ಮಕ್ಕೆ ಶಾಂತಿ ಸಿಗಲಿ…







