ಪುತ್ತೂರು: ಕಾರೊಂದು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿರುವ ಘಟನೆ, ಶುಕ್ರವಾರದಂದು ಕೋಡಿಂಬಾಡಿಯಲ್ಲಿ ನಡೆದಿದೆ. ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ರಸ್ತೆಯ ಬದಿಯಲ್ಲಿದ್ದ ಕಲ್ಲಿಗೆ ತಾಗಿದ ಪರಿಣಾಮವಾಗಿ ಕಾರು ಚಾಲಕನ ನಿಯಂತ್ರಣ ತಪ್ಪಿ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಢಿಕ್ಕಿಯ ರಭಸಕ್ಕೆ ಕಾರು ಜಖಂಗೊಂಡಿದ್ದು, ಚಾಲಕ ಅಪಾಯದಿಂದ ಪಾರಾಗಿದ್ದಾನೆ ಎನ್ನುವ ಸಂಗತಿ ತಿಳಿದುಬಂದಿದೆ. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆಯನ್ನು ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
•ಬಂಟ್ವಾಳ: ಯುವಕನ ಆತ್ಮಹತ್ಯೆ
ಬಂಟ್ವಾಳ: ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ಶುಕ್ರವಾರದಂದು ಬೊಳ್ಳೆಯಿ ಎನ್ನುವಲ್ಲಿ ನಡೆದಿದೆ. ಮೃತ ಯುವಕನನ್ನು 32ವರ್ಷದ ರಜಿತ್ ಶೆಟ್ಟಿ ಎಂದು ಗುರುತಿಸಲಾಗಿದೆ. ರಜಿತ್ ಆತ್ಮಹತ್ಯೆಗೆ ಕಾರಣವೇನು ಎನ್ನುವುದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
•ಮಂಗಳೂರು: 1.58ಕೋಟಿ ಮೌಲ್ಯದ ಎಂಡಿಎಂಎ ವಶ; ಮೂವರ ಬಂಧನ
ಮಂಗಳೂರು: ನಿಷೇಧಿತ ಮಾದಕ ವಸ್ತು ಎಂಡಿಎಂಎ ಅನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿರುವ ಘಟನೆ ನಡೆದಿದೆ. ಸಾರ್ವಜನಿಕರನ್ನು ಗುರಿಯಾಗಿಸಿಕೊಂಡು ಎಂಡಿಎಂಎ ಅನ್ನು ಮಾರಾಟ ಮಾಡುತ್ತಿದ್ದಾರೆ ಎನ್ನುವ ಖಚಿತವಾದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಉಳ್ಳಾಲ ತಾಲ್ಲೂಕಿನ ಕುಂಪಲದ ಡಿಮಾರ್ಟ್ ಬಳಿ ಕಾರ್ಯಾಚರಣೆ ನಡೆಸಿದಾಗ ಅಕ್ರಮ ಚಟುವಟಿಕೆ ನಡೆಯುತ್ತಿರುವುದು ದೃಢಪಟ್ಟಿದೆ. ಆರೋಪಿಗಳನ್ನು ಮಂಗಳ್ಪಾಡಿ ಬೈದಲಾದ ಅನೀಸಾ ಮಂಜಿಲ್ ನಿವಾಸಿ ಅಬ್ದುಲ್ ಹಾಪೀಲ್, ಮಂಗಳೂರಿನ ಕಸಬಾ ಬೆಂಗ್ರೆ ನಿವಾಸಿ ಜಿಯಾವುಲ್ ಹಕ್ ಮತ್ತು ಮಂಗಳೂರಿನ ಪಾಂಡೇಶ್ವರದ ಆಯಿಷಾ ಅಪಾರ್ಟ್ ಮೆಂಟ್ ನಿವಾಸಿ ಅಲ್ತಾಫ್ ಎಂದು ಗುರುತಿಸಲಾಗಿದೆ. ಈ ಸಂದರ್ಭದಲ್ಲಿ 1ಕೆಜಿ 796.96ಗ್ರಾಂ ತೂಕದ ಎಂಡಿಎಂಎ, 3 ಮೊಬೈಲ್ ಫೋನ್ ಗಳು, ಮಾದಕ ವಸ್ತು ಸಾಗಾಟಕ್ಕೆ ಬಳಸಿದ ಮಾರುತಿ ಸುಜುಕಿ ಸ್ವಿಫ್ಟ್ ಕಾರು, ಆಟೋ, ಕೋರಿಯರ್ ರಟ್ಟಿನ ಬಾಕ್ಸ್, ವಾಟರ್ ಪ್ಯೂರಿಪಾಯರ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ವಶಪಡಿಸಿಕೊಂಡ ಸ್ವತ್ತುಗಳ ಬೆಲೆ ಸುಮಾರು 1.63.84.000 ಎಂದು ಅಂದಾಜಿಸಲಾಗಿದೆ. ವಿಚಾರಣೆಯ ಸಂದರ್ಭದಲ್ಲಿ ಆರೋಪಿಗಳು ಪಂಜಾಬ್ ರಾಜ್ಯದ ಅಮೃತಸರದಿಂದ ಎಂಡಿಎಂಎ ಮಾದಕ ವಸ್ತುವನ್ನು ಖರೀದಿಸಿ, ಅದನ್ನು ವಾಟರ್ ಪ್ಯೂರಿಪಾಯರ್ ನ ನೀರು ಸಂಗ್ರಹವಾಗುವ ಸ್ಥಳದಲ್ಲಿ ಭದ್ರವಾಗಿ ಇರಿಸಿ, ಬಳಿಕ ಕೋರಿಯರ್ ಮೂಲಕ ಮಂಗಳೂರಿಗೆ ಕಳುಹಿಸಿ, ಅಲ್ಲಿಂದ ಕೇರಳ ಮತ್ತು ಮಂಗಳೂರು ನಗರದ ವಿವಿಧ ಪ್ರದೇಶಗಳಿಗೆ ಪೂರೈಕೆ ಮಾಡಿ ಮಾರಾಟ ಮಾಡಲು ಸಂಚು ರೂಪಿಸಿದ್ದರು ಎನ್ನುವುದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







