ಬೆಂಗಳೂರು: ಬರದ ಛಾಯೆ ನಡುವೆ ಕಳೆದೊಂದು ವಾರದಿಂದ ರಾಜ್ಯದ ಹಲವೆಡೆ ಮಳೆ ಆಗುತ್ತಿದೆ. ಆದರೆ ಬಿಸಿಲಿನ ಧಗೆಗೆ ಆ ಮಳೆ ಲೆಕ್ಕಕ್ಕೆ ಬರುತ್ತಿಲ್ಲ. ಭೂಮಿ ಕಾದ ಬಾಣಲೆಯಂತಾಗಿದೆ.
ದಕ್ಷಿಣ ಒಳನಾಡು ಸೇರಿದಂತೆ ರಾಜ್ಯದ ಹಲವಾರು ಭಾಗಗಳಲ್ಲಿ ಬುಧವಾರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯು ತಿಳಿಸಿದೆ. ಕಳೆದ ವಾರದಿಂದ ಕೆಲವು ಕಡೆ ಸಣ್ಣ ಮಳೆ ಆಗಿದೆ.
ದಕ್ಷಿಣ ಒಳನಾಡಿನ ಭಾಗಗಳಾದ ಶಿವಮೊಗ್ಗ, ಕೊಡಗು, ಮೈಸೂರು, ಚಾಮರಾಜನಗರ ಚಿಕ್ಕಮಗಳೂರು, ಹಾಸನ, ಮಂಡ್ಯ, ರಾಮನಗರ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಇನ್ನೊಂದು ವಾರ ಅಲ್ಲಲ್ಲಿ ಮಳೆ ಸಂಭವಿಸಲಿದೆ. ಹೀಗಾಗಿ ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಅನ್ನು ಘೋಷಿಸಲಾಗಿದೆ. ಅಲ್ಲದೆ ಜಿಲ್ಲೆಗಳ ಕೆಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದ್ದು, ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರಿಯಲಿದೆ. ಅಲ್ಲದೆ ಕರಾವಳಿ ಭಾಗದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಕೆಲವೆಡೆ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.
ಬಿಸಿಲಿಗೆ ಅನಾರೋಗ್ಯ ಹೆಚ್ಚಳ: ಆಸ್ಪತ್ರೆಗಳು ಫುಲ್
ಬಿಸಿಲಿಗೆ ಅನೇಕ ಕಡೆ ಅನಾರೋಗ್ಯ ಹೆಚ್ಚಳವಾಗಿದೆ. ಜನ ಆರೋಗ್ಯದ ಬಗ್ಗೆ ಗಮನ ಕೊಡೋದು ಒಳ್ಳೆಯದು. ಇನ್ನು ಆಸ್ಪತ್ರೆಗಳು ಎಲ್ಲಾ ಕಡೆ ಜನರಿಂದ ತುಂಬಿ ಹೋಗಿವೆ.







